ಬಸವ ದರ್ಶನ ಮಾಲೆ -೧೯ : ಭವರೋಗ್ಯವೈದ್ಯ ಶಿವನನ್ನು ನೆನೆದು ಭವಮುಕ್ತರಾಗಬಹುದು – ಮುಕ್ಕಣ್ಣ ಕರಿಗಾರ

ಭವರೋಗ್ಯವೈದ್ಯ ಶಿವನನ್ನು ನೆನೆದು ಭವಮುಕ್ತರಾಗಬಹುದು

ಮುಕ್ಕಣ್ಣ ಕರಿಗಾರ

ಭವಭವದಲ್ಲೆನ್ನ ಮನವು ನೀವಲ್ಲದೆ —
ಭವವದಲ್ಲೆನ್ನ ಮನವು ಸಿಲುಕದೆ ?
ಭವರಾಟದೊಳು ತುಂಬದೆ ? ಕೆಡಹದೆ ?
ಭವರೋಗವೈದ್ಯ ನೀನು,ಭವವಿರಹಿತ ನೀನು —
ಅವಧಾರು,ಕರುಣಿಸುವುದು,ಕೂಡಲ ಸಂಗಮದೇವಾ.

ಬಸವಣ್ಣನವರು ಈ ವಚನದಲ್ಲಿ ಹುಟ್ಟು ಸಾವುಗಳ ಈ ಪ್ರಪಂಚದಲ್ಲಿ ಭವರೋಗವೈದ್ಯನಾದ ಪರಶಿವನನ್ನು ಆಶ್ರಯಿಸಿ ಭವಮುಕ್ತರಾಗಬಹುದು,ಅಭವಶಿವನನ್ನು ಸೇವಿಸಿ ಭವದಬಳ್ಳಿಯನ್ನು ಸುಟ್ಟುರುಹಿಕೊಂಡು ನಿತ್ಯಮುಕ್ತರಾಗಬಹುದು ಎಂದು ಸಾರಿದ್ದಾರೆ.ಪ್ರತಿಬಾರಿಯೂ ಹುಟ್ಟಿದಾಗ ಶಿವಭಕ್ತನಾಗಿ ಹುಟ್ಟಬೇಕು,ಶಿವನಾಮ ಸ್ಮರಣೆ ಮಾಡಬೇಕು ಎಂದುಕೊಂಡರೂ ಭವದ ಪರಿಭವಕ್ಕೆ ಸಿಕ್ಕಮನಸ್ಸು ದಿಕ್ಕುಗೆಟ್ಟು ಶಿವಪಥದಿಂದ ದೂರವಾಗುತ್ತದೆ.’ಪುನರಪಿ ಜನನಂ,ಪುನರಪಿ ಮರಣಂ’ ಎನ್ನುವ ಸಂಸಾರ ಚಕ್ರದ ಪರಿಭ್ರಮಣೆಗೆ ಸಿಕ್ಕು ಹೊರಬರಲರಿಯದೆ ಒದ್ದಾಡುತ್ತದೆ.ಹುಟ್ಟುಸಾವುಗಳ ಈ‌ ಪ್ರಪಂಚ ಚಕ್ರಕ್ಕೆ ಸಿಕ್ಕು ಹೊರಬರಲರಿಯದೆ ಒದ್ದಾಡುವ ಜೀವಕ್ಕೆ ಶಿವನೇ ಆಸರೆ.ಭವರೋಗವೈದ್ಯನಾದ ಶಿವನು,ಭವವಿಲ್ಲದ ಶಿವನು ಇವನು ನನ್ನ ಭಕ್ತನು ಎಂದು ಕರುಣೆತೋರಿ ತನ್ನತ್ತ ಲಕ್ಷಿಸೆ ಉರಿದುಹೋಗುವುದು ಭಕ್ತನ ಭವದ ಬಳ್ಳಿ.ಆದ್ದರಿಂದ ಭಕ್ತರು ಶಿವನನ್ನು ಪರಿಪರಿಯಾಗಿ ಪ್ರಾರ್ಥಿಸಿ,ಪೂಜಿಸಿ,ಸೇವಿಸಿ ಭವಮುಕ್ತರಾಗಬೇಕು ಎನ್ನುತ್ತಾರೆ ಬಸವಣ್ಣನವರು.

ಭವಕ್ಕೆ ಬಂದಾಗಲೊಮ್ಮೆ ಶಿವಭಕ್ತಿಯನ್ನು ಸಾಧಿಸಲೆಳಸಿ ವಿಫಲವಾಗುವ ಮನಸ್ಸು ಭವದ ಬಂಧನಕ್ಕೆ ಸಿಲುಕುತ್ತದೆ.ಶಿವಮಾಯೆಯು ಭಕ್ತರನ್ನು ಸಂಸಾರಚಕ್ರದಲ್ಲಿ ಸಿಲುಕಿ ಪಥಗಾಣದಂತೆ ಮಾಡುತ್ತದೆ.ಶಿವನ ಆಶ್ರಯವಿಲ್ಲದೆ ಗೆಲ್ಲಲಾಗದು ಶಿವಮಾಯೆಯನ್ನು.ವೈದ್ಯನು ಶಸ್ತ್ರಚಿಕಿತ್ಸೆ ಮಾಡಿ ರೋಗವನ್ನು ಗುಣಪಡಿಸುವಂತೆ ಹುಟ್ಟುಸಾವುಗಳ ಪರಿಭ್ರಮಣೆಯ ಚಕ್ರದಿಂದ ಪಾರಾಗಲು ಭವರೋಗವೈದ್ಯನಾದ ಶಿವನನ್ನು ಪ್ರಾರ್ಥಿಸಬೇಕು,ಕೂಗಿಕರೆಯಬೇಕು ಭವವಿಲ್ಲದ,ಭವಕ್ಕೆ ಸಿಲುಕದ ಭವವಿರಹಿತ ಶಿವನನ್ನು.ವೈದ್ಯರು ನೀಡಿದ ಮಾತ್ರೆ,ಟಾನಿಕ್ ಗಳಿಂದ ದೇಹಕ್ಕಂಟಿದ ರೋಗವು ನಿವಾರಣೆಯಾಗುವಂತೆ ಭವರೋಗವೈದ್ಯ ಶಿವನ ನಾಮಸ್ಮರಣೆಯಿಂದ ಭವ ಎಂಬ ರೋಗ ಇಲ್ಲವಾಗುತ್ತದೆ,ಭವಮುಕ್ತರಾಗುತ್ತೇವೆ.ಶಿವನು ಭಕ್ತರತ್ತ ಕೃಪಾದೃಷ್ಟಿ ಬೀರಿ ಕರುಣೆ ತೋರಿದರೆ ಮಾತ್ರ ಭವಮುಕ್ತರಾಗಿ ಭಕ್ತರು ಮೋಕ್ಷವನ್ನು ಪಡೆಯುವುದು.ಮೋಕ್ಷ ಸಂಪಾದನೆಯಲ್ಲಿ ಭಕ್ತರ ಸಾಧನೆ,ಪ್ರಯತ್ನಗಳಿಗಿಂತ ಶಿವನ ಕಾರುಣ್ಯದ ಪಾತ್ರವೇ ಹಿರಿದು.ಭಕ್ತರು ಎಷ್ಟೇ ಪೂಜೆ,ಧ್ಯಾನಗಳನ್ನು ಮಾಡಿದಾಗ್ಯೂ ಶಿವನು ಅವರತ್ತ ಕಣ್ಣು ತೆರೆದು ನೋಡದಿದ್ದರೆ ? ಆದ್ದರಿಂದ ‘ ಅವಧಾರು,ಕರುಣಿಸು’ ಎಂದು ಬೇಡುತ್ತಾರೆ ಬಸವಣ್ಣನವರು ಶಿವನಲ್ಲಿ.ಓ ಪರಮಕರುಣಾಳು ಶಿವನೆ! ಒಂದು ಕ್ಷಣ ಇತ್ತ ನೋಡು,ನನ್ನತ್ತ ನಿನ್ನ‌ ಕೃಪಾದೃಷ್ಟಿ ಬೀರು.ಕರುಣಿಸಿ ನನ್ನನ್ನು ಉದ್ಧರಿಸು ಎಂದು ಶಿವನನ್ನು ಕಾಡಿ ಬೇಡಿ ಭವಮುಕ್ತರಾಗಬೇಕು.

ಪ್ರಪಂಚ ಆರಂಭವಾದಾಗಿನಿಂದ ಜೀವರುಗಳು ಹುಟ್ಟುತ್ತಾರೆ,ಸಾಯುತ್ತಾರೆ ಪ್ರಪಂಚ ಚಕ್ರದ ಪರಿಭ್ರಮಣೆಯಂತೆ.ಸೃಷ್ಟಿ ಚಕ್ರವು ಸದಾ ಸುತ್ತುತ್ತಲೇ ಇದೆ.ಎಂಬತ್ನಾಲ್ಕು ಲಕ್ಷ ಜೀವರಾಶಿಗಳ ಸೃಷ್ಟಿಚಕ್ರದ ಪರಿಭ್ರಮಣೆಯಲ್ಲಿ ಜೀವರುಗಳು ಮುಕ್ತರಾಗದ ಹೊರತು ಈ ಚಕ್ರವನ್ನವಲಂಬಿಸಿ ಸುತ್ತುವುದು ತಪ್ಪಿದ್ದಲ್ಲ.ಸಂಸಾರದ ಮೋಹ,ಧನ- ಕನಕ,ಸಿರಿ ಸಂಪದಗಳ ವ್ಯಾಮೋಹ,ಅಧಿಕಾರದ ಮದ,ತನಗಿಂತ ಉನ್ನತರನ್ನು ಕಂಡಾಗುವ ಉಂಟಾಗುವ ಮತ್ಸರ ಇಂತಹ ಹತ್ತು ಹಲವು ದುರ್ಗುಣ,ದೌರ್ಬಲ್ಯಗಳಿಗೆ ವಶರಾಗಿ ಜೀವರುಗಳು ಹುಟ್ಟುಸಾವುಗಳ ಚಕ್ರದಿಂದ ಹೊರಬರಲರಿಯದೆ ಒದ್ದಾಡುತ್ತಾರೆ.ವೈದ್ಯನು ದೇಹಕ್ಕೆ ಅಂಟಿದ ರೋಗ ಅಥವಾ ವ್ರಣವನ್ನು‌ ಶಸ್ತ್ರಚಿಕಿತ್ಸೆಯ ಮೂಲಕ ಕಿತ್ತೆಸೆಯುವಂತೆ ಸದಾ ಸುತ್ತುತ್ತಲೇ ಇರುವ ಈ ಸಂಸಾರ ಚಕ್ರದಿಂದ ಹೊರಹೋಗಬೇಕಾದರೆ ಶಿವಕಾರುಣ್ಯವು ಅವಶ್ಯಕ.ಸುತ್ತುತ್ತಿರುವ ಚಕ್ರದಿಂದ ಒಂದು ವಸ್ತು ಹೊರಹೋಗುವುದು ಎರಡು ಸನ್ನಿವೇಶಗಳಲ್ಲಿ ಮಾತ್ರ– ಒಂದು ಹೊರಗಿನ ವ್ಯಕ್ತಿಗಳ ಕೈಯಾಸರೆಯಿಂದ ,ಎರಡನೆಯದು ಚಕ್ರದಪರಿಭ್ರಮಣ ವೇಗಕ್ಕಿಂತ ತನ್ನ ವೇಗದ ಸಾಮರ್ಥವನ್ನು ಹೆಚ್ಚಿಸಿಕೊಂಡು ಹೊರನೆಗೆಯುವುದು.ಯೋಗಿಗಳು,ಸಿದ್ಧರುಗಳು ತಮ್ಮ ಯೋಗಸಾಧನೆಯ ಬಲದಿಂದ ವೇಗೋತ್ಕರ್ಷ ಹೆಚ್ಚಿಸಿಕೊಂಡು ಹುಟ್ಟುಸಾವುಗಳ ಪ್ರಪಂಚ ಪರಿಭ್ರಮಣೆಯ ಚಕ್ರವನ್ನು ದಾಟಿ ಹೊರಹೋಗುತ್ತಾರೆ.ಆದರೆ ಸಾಮಾನ್ಯ ಭಕ್ತರು? ಶಿವನನ್ನು ಆಶ್ರಯಿಸಿ,ಶಿವನಾಮವನ್ನು ಜಪಿಸುತ್ತ ಶಿವಕಾರುಣ್ಯವನ್ನುಂಡು ಭವಮುಕ್ತರಾಗುತ್ತಾರೆ.ಶಿವನು ತನ್ನ‌ ಕೈಯಾಸರೆ ನೀಡಿ ಭಕ್ತರನ್ನು ತನ್ನತ್ತ ಎಳೆದುಕೊಳ್ಳುತ್ತಾನೆ ಹುಟ್ಟು ಸಾವುಗಳ ಪರಿಭ್ರಮಿಸುತ್ತಿರುವ ಪ್ರಪಂಚ ಚಕ್ರದಿಂದ.ಹುಟ್ಟುಸಾವುಗಳಿಲ್ಲದ ಶಿವನನ್ನು ಗಟ್ಟಿಯಾಗಿ ನಂಬಿ,ಪೂಜಿಸುವುದೇ ಭವಮುಕ್ತರಾಗುವ ಸುಲಭೋಪಾಯ.

ಮುಕ್ಕಣ್ಣ ಕರಿಗಾರ

13.01.2022