ಬಸವ ದರ್ಶನ ೧೮ : ಆತ್ಮ ನಿವೇದನೆ – ಮುಕ್ಕಣ್ಣ ಕರಿಗಾರ

ಆತ್ಮ ನಿವೇದನೆ

ಮುಕ್ಕಣ್ಣ ಕರಿಗಾರ

ಮೇರುಗುಣವನರಸುವುದೆ ಕಾಗೆಯಲ್ಲಿ ?
ಪರುಷಗುಣವನರಸುವುದೆ ಕಬ್ಬುನದಲ್ಲಿ ?
ಸಾಧುಗುಣವನರಸುವುದೆ ಅವಗುಣಿಯಲ್ಲಿ ?
ಚಂದನಗುಣವನರಸುವುದೆ ತರುಗಳಲ್ಲಿ ?
ಸರ್ವಗುಣ ಸಂಪನ್ನ ಲಿಂಗವೆ,ನೀನೆನ್ನಲ್ಲಿ
ಅವಗುಣವನರಸುವುದೆ,
ಕೂಡಲ ಸಂಗಮದೇವಾ ?

ಶಿವಭಕ್ತರು ಸರ್ವಾಂಗ ಶುದ್ಧಿಯ ಕಲ್ಯಾಣಗುಣ ಸಂಪನ್ನರಾಗಿರಬೇಕು ಎನ್ನುವುದನ್ನು ಬಲ್ಲ ಬಸವಣ್ಣನವರು ಸಾಮಾನ್ಯ ಭಕ್ತರ ಮನಸ್ಸಿನ ಹೊಯ್ದಾಟವನ್ನಿಲ್ಲಿ ಬಣ್ಣಿಸಿದ್ದಾರೆ.ಬಸವಣ್ಣನವರ ಶಿವಭಕ್ತಜೀವನದ ಪ್ರಾರಂಭದ ಮನೋಸ್ಥಿತಿಯನ್ನು ಬಿಂಬಿಸುವಂತಿರುವ ಈ ವಚನ ಆಧ್ಯಾತ್ಮಿಕ ಸಾಧಕರ ಯೋಗಸಾಧನೆಯ ಪ್ರಾರಂಭಿಕ ಹಂತದ ಮನಸ್ಸಿನ ತಳಮಳ ತಾಕಲಾಟಗಳನ್ನು ಅಭಿವ್ಯಕ್ತಿಸುತ್ತದೆ.ಉನ್ನತ ತತ್ತ್ವಾದರ್ಶ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಪರಮಾತ್ಮನ ಅನುಗ್ರಹವಾಗಬೇಕಾದರೆ.ಸಾಧಕರು ಸಾಧನೆಯ ಪ್ರಾರಂಭದ ದಿನಗಳಲ್ಲಿ ಮನಸ್ಸು ಮತ್ತು ಇಂದ್ರಿಯಗಳ ನಿಗ್ರಹಕ್ಕಾಗಿ ಬಹಳಷ್ಟು ಪರಿತಪಿಸುವುದು ಸಹಜ.ಎಲ್ಲ ಮಾನವರಂತೆಯೇ ಇರುವ,ಎಲ್ಲ ಮಾನವರಲ್ಲೊಬ್ಬನಾಗಿರುವ ಸಾಧಕನು ವಿಷಯ ಪ್ರಪಂಚದಿಂದ ವೈರಾಗ್ಯ ಪ್ರಪಂಚದತ್ತ ನಡೆಯುವಾಗ ಎಡಹುವುದು,ಗೊಂದಲ- ಸಂದೇಹಗಳಿಗೆ ಈಡಾಗುವುದು ಸಹಜ.ರಕ್ತ ಮಾಂಸಗಳ ಈ ಶರೀರವು ಒಮ್ಮೆಲೆ ಶುದ್ಧಿಯಾಗದು,ಮಂಗನಂತೆ ಮರದಿಂದ ಮರಕ್ಕೆ ಜಿಗಿಯುವ ಮನಸ್ಸು ಒಮ್ಮೆಲೆ ಹತೋಟಿಗೆ ಬರದು.ಮನಸ್ಸಿನ ಚಂಚಲತೆ,ಇಂದ್ರಿಯದ ಉಗ್ರತಾಪಕ್ಕೆ ಸಿಕ್ಕ ಸಾಧಕನು‌ ಒಮ್ಮೊಮ್ಮೆ ಗೆಲ್ಲುವೆನೊ ಸೋಲುವೆನೊ ಎನ್ನುವ ದ್ವಂದ್ವಕ್ಕೆ ಸಿಲುಕುತ್ತಾನೆ.ದಿನಗಳದಂತೆ ಸಾಧಿಸುತ್ತಾನೆ ಇಂದ್ರಿಯಗಳ ಮೇಲೆ ವಿಜಯ.ಗುರುವಿನ ಉಪದೇಶ ಮತ್ತು ಗ್ರಂಥಗಳ ಅಧ್ಯಯನದಿಂದ ಸಿದ್ಧನಾಗಲು ಶುದ್ಧವ್ಯಕ್ತಿತ್ವ ಮುಖವೆಂಬುದನ್ನರಿತ ಸಾಧಕ ಆತ್ಮನಿರೀಕ್ಷಣೆಯ ಮೂಲಕ ತನ್ನನ್ನು ತಾನು ನಿಯಂತ್ರಿಸಿಕೊಂಡು ಮುನ್ನಡೆಯಬೇಕು.ಆಧ್ಯಾತ್ಮಿಕ ಸಾಧಕನ ಆರಂಭಿಕ ಜೀವನದ ಮನಸ್ಸಿನ ಹೊಯ್ದಾಟವನ್ನು ವ್ಯಕ್ತಪಡಿಸುವ ಬಸವಣ್ಣನವರ ಹಲವಾರು ವಚನಗಳಿವೆ.ತನ್ನ ಅವಗುಣಗಳನ್ನೆ ಶಿವಗುಣಗಳನ್ನಾಗಿ ಪರಿವರ್ತಿಸಿ ಅನುಗ್ರಹಿಸುವಂತೆ ಪರಶಿವನನ್ನು ಬೇಡುವ ಸಾಮಾನ್ಯ ಭಕ್ತನ ಮನೋಸ್ಥಿತಿ ಅಂತಹ ವಚನಗಳಲ್ಲಿದೆ.

ಭಕ್ತನು ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಮೇಲೇರಲು‌ ಪ್ರಯತ್ನಿಸುತ್ತಿರುವಾಗ ಜಾರಿ ಬೀಳುವುದುಂಟು ಆಗಾಗ.ಅಂತಹ ಸಂದರ್ಭಗಳಲ್ಲಿ ಕರುಣಾಕರನಾದ ಶಿವನನ್ನೇ ತನ್ನ ಸರ್ವ ದೋಷ- ದೌರ್ಬಲ್ಯಗಳನ್ನು ಮನ್ನಿಸಿ ಪೊರೆ ಎಂದು ಆರ್ತರಾಗಿ ಪ್ರಾರ್ಥಿಸಬೇಕು.ಆರ್ತರಾಗಿ ಪ್ರಾರ್ಥಿಸುವವರ ಮೊರೆ ಕೇಳ್ವ ಶಿವನು ಭಕ್ತರಿಗೆ ಇಂದ್ರಿಯಗಳ ನಿಗ್ರಹಸಾಮರ್ಥ್ಯವನ್ನಿತ್ತು ಉದ್ಧರಿಸುವನು.ಕಾಗೆಯಂತಹ ಹೀನಗುಣಗಳ ತನ್ನಲ್ಲಿ ಮೇರುಪರ್ವತದ ಶ್ರೇಷ್ಠಗುಣಗಳನ್ನು ಹುಡುಕುವುದೆ? ತುಕ್ಕುಹಿಡಿವ ಕಬ್ಬಿಣದಂತಹ ತನ್ನಲ್ಲಿ ಸ್ಪರ್ಶಮಣಿಯ ಗುಣವನ್ನು ಹುಡುಕುವುದೆ ? ದುರ್ಗುಣಗಳ ಖಣಿಯಾದ ತನ್ನಲ್ಲಿ ಸಾಧುಗಳ ದಯಾರ್ದಭಾವವನ್ನು ಹುಡುಕುವುದೆ ? ಬೀದಿಯ ಗಿಡಮರಗಳಂತಿರುವ ತನ್ನಲ್ಲಿ ಶ್ರೀಗಂಧದ ಕಂಪನ್ನರಸಬಹುದೆ ?ಸರ್ವಗುಣಸಂಪನ್ನನಾದ ಶಿವನೆ ಅವಗುಣಗಳ ಮುದ್ದೆಯಾದ ನನ್ನಲ್ಲಿ ನೀನು ಸದ್ಗುಣವನ್ನರಸಬಹುದೆ ಎಂದು ಪ್ರಶ್ನಿಸುವ ಬಸವಣ್ಣನವರು ಸರ್ವಗುಣಸಂಪನ್ನನಾದ ಶಿವನು ತನ್ನ ಭಕ್ತರ ದೋಷದೌರ್ಬಲ್ಯಗಳ ಬಗ್ಗೆ ಲಕ್ಷ್ಯವಹಿಸದೆ ಅವರ ಭಕ್ತಿಯ ಕಾರಣದಿಂದಲೇ ಅವರನ್ನು ಉದ್ಧರಿಸುತ್ತಾನೆ ಎನ್ನುತ್ತಾರೆ.ಕನಿಷ್ಟವಸ್ತುವನ್ನು ಸರ್ವಶ್ರೇಷ್ಠವಸ್ತುವಿನೊಂದಿಗೆ ಹೋಲಿಸಿ ಶ್ರೇಷ್ಠವಸ್ತುವಿನ ಹಿರಿಮೆಯನ್ನು ನಿರೂಪಿಸುವ ಆತ್ಮದ ಉನ್ನತಿಯನ್ನು ಸಂಕೇತಿಸುವ ವಿಶಿಷ್ಟಬಗೆಯ ಆತ್ಮತತ್ತ್ವದ ನಿರೂಪಣೆ ಈ ವಚನದಲ್ಲಿದೆ.ಮಹಾತಪಸ್ವಿಗಳು,ಸಾಧು- ಸಂತರುಗಳು ಅನವರತಸಾಧನೆಯಿಂದ ಶುದ್ಧಿಗೊಂಡು ಧವಳಶುಭ್ರವ್ಯಕ್ತಿತ್ವದ ಸಿದ್ಧತ್ವವನ್ನು ಸಂಪಾದಿಸಿಕೊಂಡಿರುತ್ತಾರೆ.ಅಂತಹ ಮಹೋನ್ನತ ವ್ಯಕ್ತಿತ್ವಗಳೊಂದಿಗೆ ಹೋಲಿಸಲಾಗದು ಆಧ್ಯಾತ್ಮಿಕ ಪಥದಿ ನಡೆಹಿಡಿದ ಸಾಧಕನನ್ನು.ಮೇರುಪರ್ವತವು ಸರ್ವಶ್ರೇಷ್ಠ ಪರ್ವತವಾಗಿದ್ದು ದೇವತೆಗಳು ಮತ್ತು ಋಷಿಗಳಿಗೆ ಆಶ್ರಯಸ್ಥಾನವಾಗಿದೆ.ಮುಳ್ಳುಗಿಡದ ಲ್ಲಿ ಗೂಡುಕಟ್ಟಿಕೊಂಡು ಕಾಳುಕಡಿ,ಹುಳ- ಹುಪ್ಪಡಿಗಳನ್ನಾಯ್ದು ತಿನ್ನುವ ಕಾಗೆಯು ಮೇರುಪರ್ವತವಾಗಬಹುದೆ? ಸಾಧ್ಯವಿಲ್ಲ.ಸ್ಪರ್ಶಮಣಿಯು ಮುಟ್ಟಿದ ಕಬ್ಬಿಣವು ಬಂಗಾರವಾಗುತ್ತದೆ.ಆದರೆ ಕಬ್ಬಿಣವು ಮುಟ್ಟಿದ ಕಬ್ಬಿಣವು ಬಂಗಾರವಾಗದು.ಕಬ್ಬಿಣದ ಗುಣವನ್ನು ಪರಿವರ್ತಿಸಿ ಬಂಗಾರವನ್ನಾಗಿಸುವ ಸ್ಪರ್ಶಮಣಿಯ ಸಾಮರ್ಥ್ಯ ಕಬ್ಬಿಣದ ತುಂಡಿಗೆ ಇಲ್ಲ.ರಾಗ- ದ್ವೇಷಗಳ,ಮಾಯೆ- ಮೋಹಗಳ ಸೆಳೆತಕ್ಕೆ ಸಿಕ್ಕು ಒದ್ದಾಡುವ ಅವಗುಣಿಯಾದವನಲ್ಲಿ ಸಾಧುಸಜ್ಜನರ ಲೋಕಕಾರುಣ್ಯ ಗುಣವನ್ನು ಹುಡುಕಿದರೆ ಸಿಕ್ಕದು.ಕಾಡಿನ ದಟ್ಟಗಿಡಪೊದೆಗಳ ಮಧ್ಯೆಬೆಳೆಯುವ ಶ್ರೀಗಂಧದ ಕಂಪು,ಸತ್ವಗಳನ್ನು ಬೀದಿಯ ಗಿಡಮರಗಳಲ್ಲಿ ಹುಡುಕಿದರೆ ಸಿಕ್ಕಬಹುದೆ? ಇಲ್ಲ.ಹಾಗೆಯೇ ಸರ್ವಗುಣಸಂಪನ್ನನೂ ಸರ್ವಪರಿಪೂರ್ಣನೂ ಆಗಿರುವ ಶಿವನೆ ರಕ್ತ ಮಾಂಸಗಳ ಮುದ್ದೆಯಾಗಿರುವ ನನ್ನಲ್ಲಿ ನೀನು ಮತ್ತೆ ತಪ್ಪು ಅಥವಾ ದೋಷಗಳನ್ನು ಹುಡುಕಿ,ದೂರೀಕರಿಸಿದರೆ ಅದು ಉಚಿತವೆ ? ಕುಂದಲ್ಲವೆ ನಿನ್ನ ಹಿರಿಮೆಗೆ? ಆದ್ದರಿಂದ ಎಲೆ ನನ್ನ ತಂದೆ ಕಂದುಗೊರಳ ಶಿವನೆ ನನ್ನ ದೋಷಗಳನ್ನು ಎಣಿಸದೆ ನಿನ್ನ ಕಾರುಣ್ಯಾಮೃತವನ್ನು ಉಣಬಡಿಸು ಉದ್ಧರಿಸು ಎನ್ನುವ ಭಕ್ತನ ನಿವೇದನೆ ಈ ವಚನದಲ್ಲಿದೆ.

ಸರ್ವಗುಣ ಸಂಪನ್ನನಾದ ಶಿವ ಮತ್ತು ಅವಗುಣಗಳಮೊತ್ತವಾದ ಜೀವರುಗಳ ನಡುವೆ ಎಲ್ಲಿಯ ಉಪಮೆ? ಎಲ್ಲಿಯ ಹೋಲಿಕೆ?ನಿತ್ಯಶುದ್ಧನಾದ ಶಿವನ ನಾಮದ ಬಲದಿಂದಲೇ ಭಕ್ತರು ಶುದ್ಧಿ- ಸಿದ್ಧಿಗಳನ್ನು ಸಂಪಾದಿಸುತ್ತಾರೆ.ಶಿವನಾಮವು ಅಘನಾಶಿನಿ ತೀರ್ಥ ಇದ್ದಹಾಗೆ.ಆ ನಾಮಜಪದ ಬಲದಿಂದಲೇ ಭಕ್ತನು ಶುದ್ಧನಾಗುತ್ತಾನೆ,ಸಿದ್ಧನಾಗುತ್ತಾನೆ.ಭಕ್ತನು ತನ್ನ ಅವಗುಣಗಳ ನಡುವೆಯೂ ಸರ್ವಗುಣಸಂಪನ್ನನೂ ನಿತ್ಯಪರಿಶುದ್ಧನೂ ಪರಿಶುದ್ಧಾತ್ಮನೂ ಆಗಿರುವ ಪರಶಿವನ ಚರಣಕಮಲಗಳನ್ನಾಶ್ರಯಿಸಿ ಉದ್ಧಾರವಾಗಬೇಕು.ಭಕ್ತನು ತನ್ನ ದೋಷ- ದೌರ್ಬಲ್ಯಗಳನ್ನೆಲ್ಲ ಶಿವನೆದುರು ನಿವೇದಿಸಿಕೊಂಡು ನನ್ನನ್ನು ದೋಷಮುಕ್ತನನ್ನಾಗಿಸು ಎಂದು ಪ್ರಾರ್ಥಿಸಬೇಕು.ತನ್ನಲ್ಲಿ ಆರ್ತಭಾವದಿಂದ ಶರಣು ಬಂದವರನ್ನು ಉದ್ಧರಿಸುತ್ತಾನೆ ಶಿವನು.

ಮುಕ್ಕಣ್ಣ ಕರಿಗಾರ

‌ ‌ ‌‌ ‌‌ 13.01.2022