ಬಸವ ದರ್ಶನ ಮಾಲೆ ೧೭: ಶಿವನೊಲುಮೆಯಿಂದ ಅಸಾಧ್ಯವೂ ಸಾಧ್ಯವಾಗುತ್ತದೆ – ಮುಕ್ಕಣ್ಣ ಕರಿಗಾರ

ಶಿವನೊಲುಮೆಯಿಂದ ಅಸಾಧ್ಯವೂ ಸಾಧ್ಯವಾಗುತ್ತದೆ

         ಮುಕ್ಕಣ್ಣ ಕರಿಗಾರ

ನೀನೊಲಿದರೆ ಕೊರಡು ಕೊನರುವುದಯ್ಯಾ ;
ನೀನೊಲಿದರೆ ಬರಡು ಹಯನಹುದಯ್ಯಾ ;
ನೀನೊಲಿದರೆ ವಿಷವೆ ಅಮೃತವಹುದಯ್ಯಾ ;
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪವು,
ಕೂಡಲ ಸಂಗಮದೇವಾ.

ಶಿವಾನುಗ್ರಹದಿಂದ ಸಕಲವೂ ಸಾಧ್ಯ ಎನ್ನುವುದನ್ನು ಸಾರುವ ಬಸವಣ್ಣನವರು ಶಿವನೊಲುಮೆಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ ಈ ವಚನದಲ್ಲಿ.ಶಿವನೊಲಿದರೆ ಒಣಕೊರಡು ಚಿಗುರಿ ಹಸಿರಾಗುತ್ತದೆ.ಶಿವನೊಲಿದರೆ ಬರಡು ಆಕಳು ಹಾಲನ್ನು ಕೊಡುತ್ತದೆ.ಶಿವನೊಲಿದರೆ ವಿಷವು ಸಹ ಅಮೃತವಾಗುತ್ತದೆ.ಶಿವನೊಲಿದರೆ ಬಯಸಿದ ಪಡಿಪದಾರ್ಥಗಳೆಲ್ಲವೂ ಎದುರು ಬಂದು ನಿಲ್ಲುವವು ಎನ್ನುವ ಬಸವಣ್ಣನವರು ಶಿವಭಕ್ತರು ಶಿವಾನುಗ್ರಹದಿಂದ ಅಸಾಧ್ಯವಾದುದೆಲ್ಲವನ್ನು ಬಲು ಸುಲಭವಾಗಿ ಸಾಧಿಸಬಹುದು ಎನ್ನುತ್ತಾರೆ.

ಶಿವ ಭಕ್ತರು ಶಿವನೊಲುಮೆ ಸಂಪಾದಿಸುವತ್ತ ಆಸಕ್ತರಾಗಬೇಕು.ಪ್ರಪಂಚ ನಿಯಾಮಕನಾಗಿರುವ ಪರಮೇಶ್ವರ ಶಿವನು ತನ್ನ ಭಕ್ತರಿಗೆ ನೀಡದೆ ಇರುವಂಥಹದ್ದು ಯಾವುದೂ ಇಲ್ಲ.ಮನುಷ್ಯರಿಗೆ ಅಸಾಧ್ಯವಾಗಿರಬಹುದಾದ ಸಂಗತಿಗಳು ಪ್ರಕೃತಿಪತಿಯಾದ ಪರಶಿವನಿಗೆ ಅಸಾಧ್ಯವಾದವುಗಳೇನಲ್ಲ.ಸರ್ವಶಕ್ತನೂ ಸರ್ವಜ್ಞನನೂ ಸರ್ವಾಂತರ್ಯಾಮಿಯೂ ಆದ ಶಿವನು ತನ್ನ ಭಕ್ತರು ಬೇಡಿದೆಲ್ಲವನ್ನೂ ಕರುಣಿಸಬಲ್ಲ ಸರ್ವಸಮರ್ಥ,ಭಕ್ತ ವತ್ಸಲ.ಜಗತ್ತಿನಲ್ಲಿ ಶಿವಭಕ್ತರಿಗೆ ಅಸಾಧ್ಯವೆನ್ನುವ ಯಾವ ಕಾರ್ಯವೂ ಇಲ್ಲ.ಆದರೆ ಶಿವನ ಒಲುಮೆಯನ್ನು ಪಡೆಯುವುದು ಮುಖ್ಯ.ಶಿವನ ಒಲುಮೆ ಪಡೆಯುವುದು ಅಥವಾ ಶಿವಾನುಗ್ರಹಕ್ಕೆ ಪಾತ್ರರಾಗುವುದು ಎಂದರೆ ಶಿವನಲ್ಲಿ ಏಕನಿಷ್ಠೆಯನ್ನಿಟ್ಟು ನಡೆಯಬೇಕು,ದುಡಿಯಬೇಕು.ಮರುಳ ಶಂಕರ ಶಿವನು ಬಹುಬೇಗ ಪ್ರಸನ್ನನಾಗುತ್ತಾನೆ.ಆದರೆ ಪ್ರಸನ್ನನಾಗಿ ತನ್ನ ಭಕ್ತರನ್ನು ಉದ್ಧರಿಸುವ ಮುನ್ನ ಒಮ್ಮೆ ಪರೀಕ್ಷಿಸಿ ನೋಡುವ ಹಂಬಲ ಶಿವನದು.ತನ್ನ ಭಕ್ತರ ನಿಷ್ಠೆ ಎಂತಹದ್ದು ಎನ್ನುವುದನ್ನು ಪರೀಕ್ಷಿಸಲೋಸುಗ ಶಿವನು ಕೆಲವು ಕಠಿಣತರ ಪ್ರಸಂಗಗಳನ್ನು ತಂದೊಡ್ಡುತ್ತಾನೆ ಭಕ್ತರ ಬಾಳಿನಲ್ಲಿ.ವಿಪರೀತವೆನ್ನಬಹುದಾದ ಅಂತಹ ದುರ್ಧರ ಪ್ರಸಂಗಗಳಲ್ಲಿಯೂ ಶಿವನಲ್ಲಿನ ನಿಷ್ಠೆ ಕಡಿಮೆಯಾಗದಿದ್ದರೆ ತನ್ನ ಭಕ್ತರನ್ನು ಅನುಗ್ರಹಿಸಿ ಅವರನ್ನು ವಿಶ್ವವಂದ್ಯರನ್ನಾಗಿಸುವ,ಲೋಕಪೂಜ್ಯರನ್ನಾಗಿಸುವ ಮೂಲಕ ತನ್ನ ಭಕ್ತವತ್ಸಲ ಲೀಲೆಯನ್ನು ಮೆರೆಯುತ್ತಾನೆ.

ಬಸವಣ್ಣನವರು ಈ ವಚನದಲ್ಲಿ ಸಾಮಾನ್ಯ ನೋಟಕ್ಕೆ,ಲೋಕದೃಷ್ಟಿಯಲ್ಲಿ ಅಸಾಧ್ಯವಾದವು ಎನ್ನಬಹುದಾದ ಪ್ರಸಂಗಗಳನ್ನು ಪ್ರಸ್ತಾಪಿಸಿ ಶಿವನ ಕರುಣೆಯಿಂದ ಇಂತಹ ಅಸಾಧ್ಯ ಸಂಗತಿಗಳು ಸಹ ಸುಲಭಸಾಧ್ಯವಾಗುತ್ತವೆ ಎನ್ನುತ್ತಾರೆ.ಒಣಕಟ್ಟಿಗೆಯ ತುಂಡು ಕೊನರದು ಲೋಕದೃಷ್ಟಿಯಲ್ಲಿ.ಆದರೆ ಶಿವನ‌ ಕರುಣಾಕಟಾಕ್ಷವು ಆ ಕೊರಡಿನ ಮೇಲೆ ಬಿದ್ದರೆ ತಕ್ಷಣ ಆ ಕೊರಡು ಚಿಗುರಿ ನಳನಳಿಸುತ್ತದೆ !ಬರಡು ಆಕಳು ತಾಯ್ತನದಿಂದ ವಂಚಿತವಾಗಿರುವುದರಿಂದ ಅದು ಹಾಲನ್ನು ನೀಡುವುದಿಲ್ಲ.ಶಿವನು ತನ್ನ ಕರುಣಾದೃಷ್ಟಿಯನ್ನು ಒಮ್ಮೆ ಆ ಬರಡು ಹಸುವಿನ ಮೇಲೆ ಬೀರಿದರೆ ಆ ಕ್ಷಣವೇ ಬರಡು ಹಸು ಹಾಲನ್ನು ನೀಡುತ್ತದೆ.ಭಯಂಕರವಾದ ವಿಷವೂ ಕೂಡ ಶಿವನ ಕಾರುಣ್ಯನೋಟದಿಂದ ಅಮೃತವಾಗಿ ಪರಿವರ್ತನೆ ಆಗುತ್ತದೆ.ತನ್ನ ಭಕ್ತರು ಬೇಡಿದ ಸಕಲ ಪಡಿಪದಾರ್ಥ,ಸರಕು ಸಾಮಗ್ರಿಗಳೆಲ್ಲವೂ ಭಕ್ತನ ಎದುರು ಇರುವಂತೆ ಮಾಡುತ್ತಾನೆ ಶಿವನು.ಪ್ರಕೃತಿಪುರುಷನಾದ ಪರಶಿವನಿಗೆ ಪ್ರಕೃತಿಯ ಮೇಲೆ ಪೂರ್ಣಪ್ರಭುತ್ವ ಇರುವುದರಿಂದ ಅಸಾಧ್ಯವನ್ನು ಸುಸಾಧ್ಯವನ್ನಾಗಿಸುವ ಲೀಲೆಯನ್ನೆಸಗುವನು.ಪ್ರಪಂಚವು ಪರಮಾಣು ಕಣಗಳಿಂದ ರಚಿಸಲ್ಪಟ್ಟಿದೆ.ಯೋಗಿಯು ಅಣು ಇಲ್ಲವೆ ಕಣಗಳ ಮೇಲೆ ತನ್ನ ಶಕ್ತಿಪ್ರವಹಿಸಿ ಅಸಾಧ್ಯವಾದ ಕೆಲಸ ಕಾರ್ಯಗಳನ್ನು ಮಾಡುತ್ತಾನೆ.ಶಿವಯೋಗಿಯೇ ಅಘಟಿತಕಾರ್ಯಗಳನ್ನು ಘಟಿಸುವಂತೆ ಮಾಡಬಲ್ಲನಾದರೆ ಶಿವನು ಏನನ್ನು ತಾನೆ ಮಾಡಲಾರ ? ವಿಜ್ಞಾನವು ‘ ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ‘ ಎನ್ನುತ್ತದೆ; ಆದರೆ ಆಧ್ಯಾತ್ಮವು ‘ಶೂನ್ಯವೇ ಸೃಷ್ಟಿಯ ಮೂಲ ‘ ಎನ್ನುತ್ತದೆ ! ಮುಂಬರುವ ಜಗತ್ತಿನಲ್ಲಿ ವಿಜ್ಞಾನವು ಸಹ ಶೂನ್ಯದಿಂದ ಸೃಷ್ಟಿ ಸಾಧ್ಯ ಎಂದು ಒಪ್ಪಬಹುದು.ಯಾಕೆಂದರೆ ವಿಜ್ಞಾನದ ಕೆಲವು ನಿಯಮಗಳು,ಹಲವು ಸೂತ್ರಗಳು ಬದಲಾಗಿವೆ ; ಬದಲಾಗುತ್ತಲೂ ಇವೆ.ಹಿಂದೆ ಪರಮಾಣು ವಿಭಜನೆ ಸಾಧ್ಯವಿಲ್ಲ ಎಂದು ನಂಬಿದ್ದ ವಿಜ್ಞಾನ ಇಂದು ಪರಮಾಣು ವಿಭಜನೆಯಿಂದ ಪ್ರಚಂಡ ಶಕ್ತಿಯನ್ನು ಪಡೆಯಬಹುದು ಎನ್ನುತ್ತದೆ! ಆಧ್ಯಾತ್ಮದಂತೆ ಶೂನ್ಯವು ನಿರಾಕಾರ ಪರಶಿವನ ಪ್ರತೀಕವಾದರೆ ಆ ಶೂನ್ಯದ ಒಡಲೊಳಗಿನಿಂದಲೇ ಒಡಮೂಡಿ ಸಾಕಾರಗೊಂಡು ಉಮಾಪತಿಯಾಗಿ ವಿಶ್ವಲೀಲೆಯನ್ನಾಡುತ್ತಾನೆ ಶಿವ.ಶಿವಸಾಕ್ಷಾತ್ಕಾರ ಎನ್ನುವುದು ಕೂಡ ಹೀಗೆಯೇ! ಅವ್ಯಕ್ತನಾಗಿರುವ ಪರಶಿವನು ತನ್ನ ಭಕ್ತನೆದುರು ಭಕ್ತನ ಭಾವದಂತೆ ರೂಪುಗೊಂಡು ಪ್ರಕಟಗೊಳ್ಳುತ್ತಾನೆ.ಇದು ವಿಜ್ಞಾನದ ಅಳವಿಗೆ ಎಟುಕದ ಸಂಗತಿ.ದೇವರು ಇಲ್ಲ ಎನ್ನುವುದು ವಿಜ್ಞಾನಿಯ ಭಾವನೆಯಾದರೆ ಪರಮಾತ್ಮನನ್ನು ಪ್ರತ್ಯಕ್ಷವಾಗಿ ಕಾಣಬಲ್ಲೆ,ತೋರಿಸಬಲ್ಲೆ ಎನ್ನುವ ಸಾಮರ್ಥ್ಯ ಯೋಗಿಯದು.ವಿಜ್ಞಾನವೂ ಪರಮಾತ್ಮನ ಸಂಕಲ್ಪವೆ! ಆದರೆ ವಿಜ್ಞಾನಿಗಳು ಅದನ್ನು ಒಪ್ಪುತ್ತಿಲ್ಲವಷ್ಟೆ.ಪ್ರತ್ಯಕ್ಷಪ್ರಮಾಣ ಮತ್ತು ಪರೀಕ್ಷೆಗಳಿಂದ ದೃಢಪಟ್ಟರೆ ಮಾತ್ರ ಸತ್ಯವೆನ್ನುವ ವಿಜ್ಞಾನಿಯು ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಕಾಣಿಸದ ಎಷ್ಟೋ ಸಂಗತಿಗಳು ನಿತ್ಯವೂ ನಡೆಯುತ್ತಿರುತ್ತವೆ ಎನ್ನುವುದನ್ನು ಗ್ರಹಿಸುವುದಿಲ್ಲ.ವೈರಸ್,ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಾಣು ಜೀವಿಗಳು ಬರಿಯ ಕಣ್ಣಿಗೆ ಕಾಣಿಸುವುದಿಲ್ಲ.ಆದರೆ ಅವುಗಳ ಅಸ್ತಿತ್ವ ಮತ್ತು ಕಾರ್ಯನಿರ್ವಹಣೆಯಿಂದಲೇ ಅಲ್ಲವೆ ಜೀವಪ್ರಪಂಚದ ಇಷ್ಟಾನಿಷ್ಟಗಳು ಘಟಿಸುತ್ತಿರುವುದು ? ಇಂದು ವೈದ್ಯಲೋಕ,ವಿಜ್ಞಾನ ಲೋಕಕ್ಕೆ ಬಿಡಿಸಲಾರದ ಒಗಟಾಗಿ ಕಾಡುತ್ತಿರುವ ಕೊರೊನಾ ವೈರಸ್ ಜಗತ್ತಿನಲ್ಲಿ ಪುರುಷಪ್ರಯತ್ನ,ವಿಜ್ಞಾನದ ಆಚೆಯೂ ಇರಬಹುದಾದ ಅತೀತಶಕ್ತಿಯ ಮಹಿಮೆಯನ್ನು ಎತ್ತಿತೋರಿಸಿದೆ.ಮಂಗಳ ಲೋಕಕ್ಕೆ ಕಾಲಿಡುವಷ್ಟು ಮುಂದುವರೆದಿರುವ ವಿಜ್ಞಾನಕ್ಕೆ ರೊಬೋಟ್ಗಳ ಮೂಲಕ ಪ್ರತಿಸೃಷ್ಟಿಯನ್ನೇ ಮಾಡಹೊರಟಿರುವ ವೈದ್ಯರುಗಳಿಗೆ ಕೊರೊನಾ ವೈರಸ್ ನ ಹಾವಳಿಯಿಂದ ಜಗತ್ತನ್ನು ಮುಕ್ತಮಾಡುವುದು ಸಾಧ್ಯವಾಗಿಲ್ಲ ಎನ್ನುವುದು ಮನುಷ್ಯ ಬುದ್ಧಿಯ ಫಲವಾದ ನಾಗರಿಕತೆ,ಪ್ರಗತಿ ಮತ್ತು ವಿಜ್ಞಾನದ ಮಿತಿಯನ್ನು ಸಾರುತ್ತದೆ.

ಭಕ್ತರು ಶಿವನಲ್ಲಿ ಅನನ್ಯ ನಿಷ್ಠೆಯನ್ನು ಹೊಂದಿದ್ದರೆ ಅಂತಹ ಭಕ್ತರ ಮಹಿಮೆ ಮೆರೆಸಲು ಶಿವನು ಲೋಕಕ್ಕೆ ಅಸಾಧ್ಯವೆನ್ನಬಹುದಾದ ಲೀಲಾಪ್ರಸಂಗಗಳನ್ನುಂಟು ಮಾಡುತ್ತಾನೆ.ಇವೇ ಪವಾಡಗಳು.ಪವಾಡಗಳು ಎಂದರೆ ಪ್ರಕೃತಿಪತಿಯಾದ ಪರಶಿವನು ತನ್ನ ಭಕ್ತರ ಮಹಿಮೆಯನ್ನು ಲೋಕಕ್ಕೆ ಪ್ರಕಟಗೊಳಿಸಲೋಸುಗ ಉಂಟು ಮಾಡುವ ಲೀಲಾ ಪ್ರಸಂಗಗಳು,ಘಟಿಸಲ್ಪಡುವ ಅಘಟಿತಗಳು.

ಮುಕ್ಕಣ್ಣ ಕರಿಗಾರ

13.01.2022