ಕಲ್ಯಾಣ ಕಾವ್ಯ : ಕವಿಶೈಲದ ಕಾಡಕುಸುಮ -ಮುಕ್ಕಣ್ಣ ಕರಿಗಾರ

ಕವಿಶೈಲದ ಕಾಡಕುಸುಮ

ಮುಕ್ಕಣ್ಣ ಕರಿಗಾರ

ಯಗದಕವಿಯನ್ನು ಜಗಕ್ಕೆ ಕೊಡುಗೆ ಇತ್ತ
ಕವಿಶೈಲದ ಬಂಡೆಗಲ್ಲುಗಳಾಸರೆಯಲ್ಲಿ
ಬೆಳೆದ ಕಾಡು ಹೂವಿನ ಗಿಡವಿದು.
ಹೆಸರು ನಾವರಿಯೆವು
ನಾಡೂ ಗುರುತಿಸದು
ಹೂಗಿಡದ ಹೆಸರೇನು ಎಂದು.

ಗುರುತಿಸದಿದ್ದರೇನಂತೆ ಜನರು
ತನ್ನೆದೆಯ ಅಂತಃಸತ್ತ್ವವನು ಹೊರಚೆಲ್ಲಿ
ಸೂಸಿ ಹರಡಿತ್ತು ಮಕರಂದ.
ಮಲ್ಲಿಗೆಗೂ ಮಿಗಿಲು ಮಕರಂದ
ಆದರೂ ಹೆಸರಿಲ್ಲ!
ಕಾಡುಹೂವಿನ ಸುಗಂಧ ಆಘ್ರಾಣಿಸುವವರಿಲ್ಲ
ಮೂಸುವವರೆ ಇಲ್ಲವೆಂದ ಬಳಿಕ
ಮುಡಿವರಾರು?
ದೇವರಗುಡಿಗೆ ಒಯ್ವರಾರು?
ಗಿಡಕೊ ಆ ಚಿಂತೆ ಇಲ್ಲವೇ ಇಲ್ಲ!
ಗುರುತಿಸಿ ಏನಾಗಬೇಕು ನನ್ನನ್ನು?
ನನ್ನೆದೆಯ ಕಸುವ ಹೂವಾಗಿ ಅರಳಿಸಿ
ಕಂಪು ಹರಡುವುದಷ್ಟೆ ನನ್ನ ಗುರಿ.
ಲೋಕದ ಹೆಸರಿನಾಸೆ
ಮತ್ತದಕೆ ಹೋರಾಡುವ ಪರಿ
ಬೇಡವೆನಗೆ,
ಇರುವೆ ನನ್ನ ಪಾಡಿಗೆ ನಾನು
ಹೂಗಳ ಅರಳಿಸುತ್ತ
ಬಳಿ ಬಂದವರಿಗೆ ಕಂಪ ಸೂಸುತ್ತ
ದೇವರ ತಲೆ,ಮೈಗಳ ಸಿಂಗರಿಸದಿದ್ದರೇನಂತೆ
ಇರುವೆ ನನ್ನ ಪಾಡಿಗೆ ನಾನು
ದೇವರ ಮುಡಿಯನೇರುವಗೊಡವೆಗಿಂತ
ನನಗಾಗಿ ನಾನು ಬಾಳುವುದೆ ಪರಮಾರ್ಥ
ಎನ್ನುತ್ತಿತ್ತು ಕಾಡುಹೂವಿನ ಮರ.

ಈ ಇಂಥ ಕಾಡುಹೂ ಮರಗಳಿಂದ
ಪ್ರೇರಣೆಪಡೆದ ಮಹಾಕವಿ ಕುವೆಂಪು
ನಭದೆತ್ತರದ ಸಾಧನೆ ಗೈದೂ
ನಿರ್ಲಿಪ್ತರಾಗಿದ್ದ ಸ್ಥಿತಪ್ರಜ್ಞರು!
ಸಮಾಧಿಯಾದರೂ ತಮ್ಮಿಷ್ಟದ
ಕವಿಶೈಲದ ಹೆಬ್ಬಂಡೆಗಳಲ್ಲಿ
ಕಾಡಕುಸುಮದಂತೆಯೇ ಬಯಲಾಗಿಹರು
ಜಂಗಮಕ್ಕೇಕೆ ಸ್ಥಾವರದ ಹಂಗು?
ಬೇಡವೆಂದರು ಸಮಾಧಿ ಕಟ್ಟಡ, ಸ್ಮಾರಕ!
ಕವಿಶೈಲದ ಬಂಡೆಗಳಲ್ಲಿ ತಾನೊಂದು ಬಂಡೆ
ಎಂಬಂತೆ ಮಲಗಿಹರು ನಿರುಮ್ಮಳರಾಗಿ !
ಅರಸಿ ಬಳಿ ಬಂದವರ ಬಾಳುಗಳ
ಸ್ಫೂರ್ತಿಗೊಳಿಸುತ್ತ ಯೋಗನಿದ್ದೆಯೊಳಿರುವ
ಋಷಿಕವಿ ಒಂದಾಗಿಹರು ಇಲ್ಲಿ
ಪ್ರಕೃತಿಯಲ್ಲಿ.
ಪ್ರಕೃತಿಯ ಮಡಿಲಿಂದ ಬಂದ
ಕವಿಕೇಸರಿ
ಪ್ರಕೃತಿಯ ಮಡಿಲಲ್ಲೇ ಮಲಗಿಹರು
ಸದ್ದು ಗದ್ದಲವನೊಲ್ಲದ
ಧೀರಗಾಂಭಿರ್ಯದ,ಬಯಲಯೋಗಿಯ
ಪರಮಶಾಂತಿಯಲಿ

ಮುಕ್ಕಣ್ಣ ಕರಿಗಾರ

12.01.2022