ಶಿವನ ಮನೆಯ ಮಗನೆನ್ನಿಸಿಕೊಳ್ಳುವುದೇ ಜೀವನದ ಸಾರ್ಥಕತೆ
ಮುಕ್ಕಣ್ಣ ಕರಿಗಾರ
” ಇವನಾರವ,ಇವನಾರವ,ಇವನಾರವ?”ನೆಂದೆನಿಸದಿರಯ್ಯಾ.
” ಇವ ನಮ್ಮವ,ಇವ ನಮ್ಮವ,ಇವ ನಮ್ಮವ” ನೆಂದೆನಿಸಯ್ಯಾ.
ಕೂಡಲ ಸಂಗಮದೇವಾ,ನಿಮ್ಮ ಮನೆಯ ಮಗನೆನಿಸಯ್ಯಾ.
ಬಸವಣ್ಣನವರು ಈ ವಚನದಲ್ಲಿ ಶಿವ ಭಕ್ತರ ಸಾರ್ಥಕ್ಯ ಯಾವುದರಲ್ಲಿದೆ ಎನ್ನುವುದನ್ನು ನಿರೂಪಿಸಿದ್ದಾರೆ.ಶಿವನು ತನ್ನ ಭಕ್ತರನ್ನು ಅನ್ಯರು ಎಂದು ಬಗೆಯದೆ ತನ್ನವರು,ತನ್ನ ಮನೆಯ ಮಕ್ಕಳು ಎಂದು ಭಾವಿಸುವಂತೆ ಸಾಧಿಸಬೇಕು ಶಿವಭಕ್ತಿಯನ್ನು,ಮೆರೆಯಬೇಕು ಶಿವನಿಷ್ಠೆಯನ್ನು ಎನ್ನುತ್ತಾರೆ.ಭಕ್ತನಲ್ಲಿ ಶಿವನಲ್ಲಿ ಏಕೋನಿಷ್ಠೆ ಇದ್ದುದಾದರೆ ಶಿವನು ಅವರನ್ನು ತನ್ನವರು,ತನ್ನ ಮನೆಯ ಮಕ್ಕಳು ಎಂದು ಒಪ್ಪುತ್ತಾನೆ.
ಶಿವನಲ್ಲಿ ನಿಜನಿಷ್ಠೆ ಇಲ್ಲದೆ ಕಂಡ ಕಂಡ ದೇವರುಗಳನ್ನು ಪೂಜಿಸಿ,ಭಜಿಸುವವರ ಬಗ್ಗೆ ಶಿವನಲ್ಲಿ ಆಸಕ್ತಿ ಮೂಡದು.ಇವನು ಯಾರವ,ಇವನು ಯಾರವ,ಇವನು ಯಾರವನು ಎಂದು ಪರೀಕ್ಷಿಸಿ ನೋಡುತ್ತಾನೆ.ಅಂದರೆ ಇವನು ಯಾವ ದೇವರನ್ನು ಪೂಜಿಸಿದ್ದಾನೆ,ಎಲ್ಲಿಗೆ ಸೇರಬೇಕಾದನು ಎಂದು ವಿಚಾರಿಸುತ್ತಾನೆ.ತನ್ನ ಭಕ್ತರಲ್ಲದವರು,ತನ್ನನ್ನು ನಿಜನಿಷ್ಠೆಯಿಂದ ಪೂಜಿಸದವರನ್ನು ಶಿವನು ತನ್ನ ಬಳಿ ಕರೆದುಕೊಳ್ಳಲು ಒಪ್ಪಲಾರ; ಶಿವಭಕ್ತರಲ್ಲದವರಿಗೆ ಕೈಲಾಸದಲ್ಲಿ ಸ್ಥಾನವಿಲ್ಲ.ಎಷ್ಟೇ ಮಹಿಮಾಶಾಲಿ ಎಂದು ಪೂಜಿಸಿಕೊಳ್ಳುವ ಲೋಕದ ದೇವರುಗಳನ್ನು ಪೂಜಿಸಿದರೂ ಸಿಗದು ಅಂತಹವರಿಗೆ ಕೈಲಾಸದಲ್ಲಿ ಸ್ಥಾನ.ಯಾವುದೇ ಯೋಗ,ಎಂತಹುದೇ ಸಾಧನೆ ಮಾಡಿದ್ದರೂ ದೊರಕದು ಕೈಲಾಸದ ಪ್ರವೇಶ ಪತ್ರ ಶಿವಮಂತ್ರ ಜಪಿಸದೆ ಇದ್ದರೆ ! ಶಿವನಾಮ ಮತ್ತು ಶಿವನೇಮಗಳುಳ್ಳವರಿಗೆ ಸುಲಭವಾಗಿ ತೆರೆಯುವ ಕೈಲಾಸದ ದ್ವಾರಬಾಗಿಲು ಇತರ ದೇವರನ್ನು ಭಜಿಸಿ,ಪೂಜಿಸಿದ ಮಹಾಯೋಗಿಗಳೆನ್ನಿಸಿಕೊಂಡವರಿಗೂ ತೆರೆಯದು.ಇತರ ದೇವರುಗಳನ್ನು ಪೂಜಿಸಿದರೆ ಭೋಗ ಭಾಗ್ಯಗಳು ಸಿಗಬಹುದು,ಆದರೆ ಮೋಕ್ಷಕ್ಕೆ ಶಿವನೊಬ್ಬನೇ ಅಧಿಪತಿ ಆದ್ದರಿಂದ,ಶಿವನಲ್ಲದೆ ಮತ್ತೊಬ್ಬ ದೇವರು ಮೋಕ್ಷವನ್ನು ಕರುಣಿಸಲಾರರಾದ್ದರಿಂದ ಮೋಕ್ಷಾಪೇಕ್ಷಿಗಳು ಶಿವನನ್ನೇ ಪೂಜಿಸಿ,ಸೇವಿಸಬೇಕು.ಶಿವನ ಮನೆಯ ಮಗನೆನ್ನಿಸಿಕೊಳ್ಳುವುದು ಎಂದರೆ ಶಿವನ ನೆಲೆ ಕೈಲಾಸದಲ್ಲಿ ವಾಸಿಸುವುದು.ಕೈಲಾಸವು ಹುಟ್ಟು ಸಾವುಗಳಿಲ್ಲದ,ರೋಗ ರುಜಿನಿಗಳಿಲ್ಲದ,ನೋವು ಸಂಕಟಗಳಿರದ,ನಿತ್ಯಾನಂದಿಗಳ ನಿವಾಸವಾದ ನಿಜಾನಂದದ ನೆಲೆಯಾಗಿರುವುದರಿಂದ ಕೈಲಾಸದಲ್ಲಿ ಪರಶಿವನೊಂದಿಗೆ ಇರುವ ಭಾಗ್ಯಕ್ಕಿಂತ ಮಿಗಿಲು ಭಾಗ್ಯ ಅದಾವುದಿರುವುದು? ಪ್ರಣವಾರ್ಥನೂ,ಪ್ರಣವವಾಚಕನೂ,ಪ್ರಣವಪೀಠದಲ್ಲಿ ಪವಡಿಸಿದವನೂ ಆದ ಪರಶಿವನ ಪ್ರಣವಲೋಕದಲ್ಲಿ ವಾಸಿಸುವುದೆಂದರೆ ನಿತ್ಯಮುಕ್ತರೆಂದೇ ಅರ್ಥ.
ಆಧುನಿಕ ಕಾಲ ಘಟ್ಟದ ಮಾನವೀಯ ಸಂಬಂಧಗಳೊಂದಿಗೆ ಬೆಸೆಯಬಹುದು ಈ ವಚನಾರ್ಥವನ್ನು.ಲೋಕದ ಕರ್ತಾರನಾದ ಶಿವನು ಎಲ್ಲ ಜೀವರುಗಳನ್ನು ಹುಟ್ಟಿಸಿದ್ದರಿಂದ ಎಲ್ಲರಿಗೂ ಶಿವನೇ ತಂದೆ.ಇಲ್ಲಿ ಯಾರೂ ಶಿವನಿಂದ ಅಭಿನ್ನರಲ್ಲ,ಶಿವನಿಂದಲೇ ಬಂದ ಎಲ್ಲರೂ ಒಬ್ಬನೇ ತಂದೆಯ ಮಕ್ಕಳಾದ ಸಹೋದರ ಸಹೋದರಿಯರು ಎನ್ನುವ ಒಂದೇ ಕುಟುಂಬ ಭಾವನೆಯಿಂದ,ವಿಶ್ವಕುಟುಂಬ ಭಾವನೆಯಿಂದ ಬದುಕಿದರೆ ಧರೆಯೇ ಕೈಲಾಸವಾಗುತ್ತದೆ.ಇವನು ಆ ಜಾತಿಯವನು,ಇವನು ಆ ಧರ್ಮದವನು,ಇವನು ಆ ದೇಶದವನು ,ಇವನು ಈ ಭಾಷೆಯನ್ನಾಡುವವನು,ಇವನು ಬಿಳಿಯ,ಇವನು ಕರಿಯ ಎಂದು ಜನರಲ್ಲಿ ತರತಮವೆಣಿಸದೆ ಎಲ್ಲರೂ ಪರಮಾತ್ಮನ ಮಕ್ಕಳೆ,ಎಲ್ಲರಲ್ಲಿಯೂ ಶಿವನ ಅಂಶ ಇದೆ,ಎಲ್ಲರೂ ಶಿವನ ವಂಶಿಕರೆ ಎಂದು ತಿಳಿದರೆ ಜಗತ್ತಿನಲ್ಲಿ ಎಲ್ಲಿ ಸಂಘರ್ಷವಿರುತ್ತದೆ ? ಆದರೆ ಇಂತಹ ಶಿವವಿಶ್ವಕುಟುಂಬದ ಸಮರಸಭಾವನೆ ಮೂಡಬೇಕಲ್ಲ,ಮನುಷ್ಯರಲ್ಲಿ ! ಶಿವಕುಟುಂಬಿಗಳು ನಾವೆಲ್ಲರೂ ಎಂದು ತಿಳಿಯದೆ ಇದ್ದುದೇ ಜಗತ್ತಿನ ದ್ವಂದ್ವ- ಸಂಘರ್ಷ- ಹೋರಾಟಗಳ ಮೂಲವಾಗಿದೆ.ನಾವೇ ಹುಟ್ಟಿಸಿಕೊಂಡ ಶಾಸ್ತ್ರ- ಪುರಾಣ,ಧರ್ಮಗ್ರಂಥಗಳ ಕಟ್ಟುಪಾಡುಗಳಿಗೆ ಒಳಗಾಗಿ ಸಂಕುಚಿತರಾಗುವುದಕ್ಕಿಂತ ಪರಮಾತ್ಮನ ಲೋಕಪ್ರೇಮದ ಸೂತ್ರವನ್ನರಿತು ಆಚರಿಸಿದರೆ ಲೋಕವು ಪ್ರೇಮಲೋಕವಾಗುತ್ತದೆ,ಮರ್ತ್ಯವು ಮಹಾದೇವನ ಮನೆಯಾಗುತ್ತದೆ.ಮರ್ತ್ಯವನ್ನು ಮಹಾದೇವನ ಮನೆಯನ್ನಾಗಿ ಪರಿವರ್ತಿಸುವ ಘನಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದ ಬಸವಣ್ಣನವರ ಈ ವಚನದ ಆಶಯ– ಮನುಷ್ಯರಾದ ನಾವೆಲ್ಲರೂ ಜಾತಿ ಮತ ಪಂಥ- ಪಂಗಡಗಳಾಚೆ ನಡೆದು “ಎಲ್ಲರೂ ಒಂದೇ ; ಶಿವನೇ ಎಲ್ಲರ ತಂದೆ” ಎನ್ನುವ ಮಹಾಶೈವ ಧ್ಯೇಯವಾಕ್ಯವನ್ನಳವಡಿಸಿಕೊಂಡು ನಡೆದರೆ ವಿಶ್ವೇಶ್ವರ ಶಿವನು ಕೈಲಾಸವನ್ನು ತೊರೆದು ಇಲ್ಲಿಗೇ ಬರುತ್ತಾನೆ,ಇಲ್ಲಿಯೇ ಇರುತ್ತಾನೆ ನಮ್ಮೊಂದಿಗೆ,ಧರೆಯೇ ಹರಧಾಮ ಕೈಲಾಸಪುರವಾಗುತ್ತದೆ .

12.01.2022