ಎಲ್ಲದಕ್ಕೂ ದೇವರಿದ್ದಾನೆ ಬಿಡಿ ಬಾಸೂ….ಅನ್ನುವ ಮುನ್ನ – ದೀಪಕ್ ಶಿಂಧೆ

ಎಲ್ಲದಕ್ಕೂ ದೇವರಿದ್ದಾನೆ ಬಿಡಿ ಬಾಸೂ….ಅನ್ನುವ ಮುನ್ನ

           ಲೇಖಕ: ದೀಪಕ್ ಶಿಂಧೆ

ಛೇ..ಛೇ…ಛೇ…ಛೇ .ಹೀಗಾಗಬಾರ್ದಿತ್ತು ಪಾಪ! ನೀವೆಷ್ಟು ಒಳ್ಳೆಯವರು ಹೋಗಿ-ಹೋಗಿ ನಿಮಗೆ ಹಿಂಗ್ ಆಗ್ಬೇಕಾ???ಒಮ್ಮೊಮ್ಮೆ ದೇವರು ಅನ್ನೋ ಬಡ್ಡಿ ಮಗಾ ಇಲ್ವೆ ಇಲ್ಲ ಅನಸುತ್ತೆ ಸಾರ್ ಅದೇನ್ ಕರ್ಮಾನೊ ಎನೋ… ಉಪಕಾರಕ್ಕೆ ಇದು ಜಮಾನಾನೆ ಅಲ್ಲಾ ಬಿಡಿ ಬಾಸು.ಕಾಸಿದ್ರೆ ಮಾತ್ರ ಕೈಲಾಸ ಇಲ್ಲ ಅಂದ್ರೆ ಯಾರಗೂ ತಪ್ಪೊದಿಲ್ಲ‌ ವನವಾಸ…ಇಷ್ಟೇ ಸಾರ್ ಜೀವನಾ! ಹಿಂಗೆ ನಿಧಾನಕ್ಕೆ ನೈಸು ಮಾಡುತ್ತ ನಿಮ್ಮ ಎಲ್ಲ ಹಳೆಯ ಕಥೆಗಳನ್ನ ಅದರ ಹಿಂದಿನ ನಿಮ್ಮ ಒಂದಷ್ಟು ವ್ಯಥೆಗಳನ್ನ ಯಾರಾದ್ರೂ ತುಂಬಾ ಕಾಳಜಿಯಿಂದ, ಒಂದಷ್ಟು ಸಲುಗೆಯಿಂದ ಮತ್ತಷ್ಟು ಅಕ್ಕರೆಯಿಂದ ಕೇಳ್ತಾ ಇದ್ದಾರೆ ಅಂದ್ರೆ ಅಲ್ಲಿ ಹಂಡ್ರೆಡ್ ಪರ್ಸೆಂಟ್ ದಾಲ್ ಮೆ ಕುಚ್ ಕಾಲಾ ಹೇ…..
ಅಯ್ಯೋ ಸಾರ್ ನೀವು ಎಷ್ಟ ಭಯಾ ಭಕ್ತಿಯಿಂದ ಪೂಜೆ ಪುನಸ್ಕಾರ ಎಲ್ಲಾ ಮಾಡ್ಕೊಂಡ್ ಬಂದಿದ್ರಿ ನಿಮ್ಮನ್ನ ಇಪತ್ ವರ್ಷದಿಂದ ನೋಡ್ತಾ ಇದಿನಿ ಶನೇಶ್ವರನ ದೇವಸ್ಥಾನದ ಪಕ್ಕದಲ್ಲೆ ನಮ್ಮನೆ…ಪಾಪ ಎಷ್ಟೊಂದ್ ಕಷ್ಟಾ ಪಟ್ಟು ಮಕ್ಕಳನ ಗ್ರಾಜುಯೆಟ್ ಮಾಡಸಿದ್ರಿ…ಆದ್ರೆ ಪಾಪಿ ಮುಂಡೆ ಮಕ್ಕಳು ನಿಮ್ಮನ್ನೆ ಅನಾಥಾಶ್ರಮ ಸೇರೊ ಹಂಗ್ ಮಾಡಿದ್ರಲ್ಲ ಸಾರ್…ಅವರ ಕೈ ಸೇದೋಗಾ,ಅವರಿಗೆ ಬರಬಾರದ ಕಾಯಿಲೆ ಬಂದು ಹಾಸಿಗೆ ಹಿಡಿದು ಬಾಯಿಗ್ ಮಣ್ಣ ಬೀಳಾ… ಅಂದಂಗೆ ನಂದೂ ಸೇಮ್ ಟು ಸೇಮ್ ಇದೇ ಕತೆ ನೋಡಿ ನಿಮಗೆ ನಿಮ್ಮ ಬಾಮೈದ,ಮಕ್ಕಳು ಮೋಸಾ ಮಾಡ್ದ ನನಗೆ ನನ್ನ ಹೆಂಡತಿ ತಂಗಿ….ಕಷ್ಟಕ್ಕೆ ಆಗುತ್ತೆ ಅಂತ ಟೀ ಅಂಗಡಿ ನಡೆಸಿ ಬಂದಿದ್ ಲಾಭದಲ್ಲೆ ಸ್ವಲ್ಪ ಎತ್ತಿಟ್ಟು ಕಟ್ಟಿದ ಚೀಟಿ ದುಡ್ ಗೆ ಮೋಸಾ ಆಯ್ತು ಸರ್ ಆಮೇಲೆ ಅದೇನ್ ನರಕಾ ಅನುಭವಿಸಿದಿನಿ ಅಂತೀರಾ??ನನ್ನಾ ನಂಬಿ ಚೀಟಿ ಕಟ್ಟಿದ ಬಡ್ಡಿ ಮಕ್ಕಳೆಲ್ಲಾ ದಿನಾ ಬಂದು ದುಡ್ ಕೊಡು-ದುಡ್ ಕೊಡು ಅಂತ ಪೀಡಸೋರು,
ನಾನ್ಯಾವತ್ತು ಕಂಡೋರ ದುಡ್ಡಿಗೆ ಆಸೆ ಪಟ್ಟಿಲ್ಲಾ ಸಾರ್ ಇಲ್ಲಾ ಅಂದ್ರೆ ಹೊಸಪೇಟೆಯಂತ ಊರ ಬಿಟ್ಟು ದಾವಣಗೆರೆಗೆ ಬರ್ತಾನೆ ಇರಲಿಲ್ಲ ಸಾರ್….ಸದ್ಯಕ್ ಒಂದ್ ಐದ್ ಸಾವ್ರ ಇದ್ರೆ ಕೊಡಿ ನಾಳೆ ನಾಡಿದ್ದು ವಾಪಸ್ ಕೊಟ್ ಬಿಡ್ತೀನಿ ನನ್ನ ಮಕ್ಕಳ ಮೇಲ್ ಆಣೆ ಸಾರ್…..ಅಂದೋರಿಗೆ ನೀವ್ ಏನಾದ್ರು ಪಾಪ ಅಂತ ದುಡ್ ಕೊಟ್ರಾ ಅಲ್ಲಿಗೆ ಮುಗೀತು…ಆ ಹಣ ವಾಪಸ್ ಬಂದಂಗೆ.

ಜಾನಕಮ್ಮ ಆ ಪಾನ್ ಬೀಡಾ ಅಂಗಡಿ ಮಂಜನ್ನ ನಿನ್ನೆ ಮೊನ್ನೆ ಎನೋ ಸ್ಕೀಮು ಅಂತ ಶುರು ಇಟ್ಕೊಂಡೋನು ಇವತ್ತು ಬೆಂಜ್ ಕಾರಲ್ಲಿ ಓಡಾಡ್ತಾ ಇದಾನೆ. ನಾವೂನೂವೆ ಸ್ವಲ್ಪ ಕಷ್ಟ ಪಟ್ರೆ ಸಾಕು ಎರಡ್ ತಿಂಗಳಲ್ಲೆ ಲಕ್ಷಾಧೀಶ್ವರ್ ಎನ್ ಮಹಾ ಬಿಡಿ ಕೋಟ್ಯಾಧೀಶ್ವರರೇ ಆಗ್ತೀವಿ.ಇಷ್ಟಕ್ಕು ಲಕ್ಕೂ ಅನ್ನೋದೆನು ಆ ಬಡ್ಡಿ ಮಕ್ಕಳಿಗೆ ಅಷ್ಟೆ ಅಂತ ಅವರ ಹಣೆ ಮೇಲೆ ಬರ್ಕೊಂಡವ್ರಾ?? ಒಂದ್ ಒಳ್ಳೆ ಸ್ಕೀಮ್ ಇದೆ ನೋಡಿ ನಿವ್ ಹಾಕೋ ಬಂಡವಾಳಕ್ಕೆ ಅಸಲು ಬಡ್ಡಿ ಎಲ್ಲಾ ಸೇರಿ ಎರಡ ತಿಂಗಳಲ್ಲಿ ಎರಡು ಪಟ್ಟು ವಾಪಸ್ ಕೊಡ್ತಾರೆ ಇಪ್ಪತ್ತೈದು ಸಾವಿರ ಹಾಕಿದ್ರೆ ಐವತ್ತಕ್ಕಂತೂ ಮೋಸಾ ಇಲ್ಲ…ನಾನು ಎರಡ್ ಲಕ್ಷ ಇಟ್ಟಿದ್ದೆ ಇನ್ನು ಹತ್ತೆ ದಿನದಲ್ಲಿ ನಾಲ್ಕು ಲಕ್ಷ ಬರುತ್ತೆ.
ಹೀಗೆ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಹತ್ತಿರ ಯಾವ ಯಾವದೋ ಕಾರಣಕ್ಕೆ ಪರಿಚಯವಾಗಿ ಒಂದಷ್ಟು ಸಲುಗೆ ಬೆಳೆಸಿಕೊಂಡು ನಮ್ಮವರ ಹಾಗೆಯೆ ಇದ್ದು ಕೊನೆಗೊಂದು ದಿನ ತಮ್ಮ ಅಸಲಿಯತ್ತು ತೋರಿಸುವ ಜನ ಈ ಜಗತ್ತಿನಲ್ಲಿ ಬೇಜಾನ್ ಸಂಖ್ಯೆಯಲ್ಲಿ ಇದ್ದಾರೆ.
ಅರೆ ಎನ್ ಸಾರ್ ಬೈಕು ಹೊಸದಾ…ಎಷ್ಟ ಕೊಟ್ರಿ?? ಅಂತ ಕೇಳಿ ಕಂಗ್ರಾಟ್ಸ ಅಂತ ಹೇಳೊದನ್ನ ಬಿಟ್ಟು ಇದಕ್ಕಿಂತ ಇನ್ನೊಂದು ಇಪತ್ ಸಾವ್ರ ಡೌನ್ ಪೇಮೆಂಟ್ ಮಾಡಿದ್ರೆ ಬೈಕೇನು ಕಾರೇ ತಗೋಬೋದಿತ್ತು ಬಿಡಿ ಅನ್ನುತ್ತ ನಮ್ಮ ಏಳಿಗೆಯನ್ನ ನೋಡಿ ಒಳಗೊಳಗೆ ಕರುಬುವ,ಮತ್ತು ಯಾವ ದ್ವೇಷವೂ ಇಲ್ಲದೆ ಕಾರಣಗಳೂ ಇಲ್ಲದೆ ಸುಮ್ಮನೆ ದಾರಿಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೊರಟವನನ್ನ ವಿನಾಕಾರಣ ಎಳೆದು ಹೊಡೆದು ಜಗಳ ತೆಗೆದು ಎಂಜಾಯ್ ಮಾಡುವ ವೀಕೃತ ಮನಸ್ಥಿತಿಯ ಪುಂಡ ಪೋಕರಿಗಳೆ ತುಂಬಿರುವ ಇಂದಿನ ದಿನಗಳಲ್ಲಿ ನಮ್ಮ ನಿಮ್ಮಂತಹ ಸಭ್ಯ,ಸುಸಂಸ್ಕೃತ ಮತ್ತು ಸಂಭಾವಿತರು ಅನ್ನಿಸಿಕೊಂಡವರಿಗೆ ಇಟ್ಸ ನಾಟ್ ಎ ಜಮಾನಾ….ಇಲ್ಲಿ ಯಾಮಾರ್ತಾ ಇದ್ರೆ ಯಾಮಾರಿಸೋಕೆ ಅಂತನೆ ಮೂಲೆಗೊಬ್ಬರು ಹುಟ್ಟಿಕೊಂಡಿರ್ತಾರೆ.ಇನ್ನೊಬ್ಬರ ಕಷ್ಟ,ಅಸಹಾಯಕತೆಗಳನ್ನೆ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಇರುತ್ತಾರೆ.
ಸಾಧ್ಯವಾದರೆ ಒತ್ತಡದ ಮತ್ತು ಜಂಝಾಟದ ಈ ಬದುಕಿನಲ್ಲಿ ನಿಮ್ಮ ಕಷ್ಟವನ್ನ ಯಾರ ಹತ್ತಿರನೂ ಹೇಳ್ಕೋಬೇಡಿ,ಯಾವ ಕಾರಣಕ್ಕೂ ಹತಾಶರಾಗಬೇಡಿ,ಎಲ್ಲಿಯೂ ಬಣ್ಣದ ಮಾತುಗಳಿಗೆ ಮರುಳಾಗಿ ದಿಢೀರ ಶ್ರೀಮಂತ ರಾಗುವ ಆಸೆ ಕನಸುಗಳನ್ನ ಹುಟ್ಟಿಸುವ ಸ್ಕೀಮುಗಳಿಗೆ ಬಲಿಯಾಗಿ ನಿಮ್ಮ ಜೀವಮಾನದ ದುಡಿಮೆಯನ್ನೆಲ್ಲ ಅನಾಮತ್ತು ಎತ್ತಿ ಯಾರದೋ ಕೈಗೆ ಕೊಟ್ಟು ಬಿಡಬೇಡಿ .ಇಷ್ಟಾಗಿಯೂ ಎಲ್ಲ ತಿಳಿದು ಕೂಡ ನಮ್ಮ ದುಡ್ಡು ಮತ್ತೊಬ್ಬರ ಪಾಲಾಯಿತಾ?? ನಂಬಿಸಿದವರೇ ವಂಚಿಸಿಬಿಟ್ಟರಾ?? ಸಂಭಂಧಿಕರೆ ಕೈ ಕೊಟ್ರಾ?? ನಮ್ಮ ಇನವೆಸ್ಟಮೆಂಟು ಲಾಸ್ ಆಯ್ತಾ?? ಡೋಂಟ್ ವರಿ ಈ ಕ್ಷಣಕ್ಕೆ ನಾವು ಸೋತಿರಬಹುದು…ನಮ್ಮನ್ನು ನಂಬಿಸಿ ವಂಚಿಸಿದವರು ಗೆದ್ದಿರಬಹುದು ಆದರೆ ಯಾರ ಸೋಲು ಕೂಡ ಶಾಸ್ವತ ಅಲ್ಲ.ಅವರು ನಮ್ಮ ಇಷ್ಟು ದಿನದ ದುಡಿಮೆಯನ್ನ,ನಮ್ಮ ಶ್ರಮದ ಫಲವನ್ನು ಕಿತ್ತುಕೊಂಡಿರಬಹುದು ಅಷ್ಟೇ ಆದರೆ ಹಣೆಬರಹವನ್ನಲ್ಲ….ನೆನಪಿರಲಿ ಎಲ್ಲದಕ್ಕೂ ದೇವರಿದ್ದಾನೆ ನಮಗೆ ಕೆಟ್ಟದ್ದು ಮಾಡಿದವರಿಗೆ ಅವನೇ ಪಾಠ ಕಲಿಸ್ತಾನೆ.ಕಂಡೋರ್ ದುಡ್ಡು ಉಂಡೋರ್ ಯಾರಿಗೂ ಒಳ್ಳೇದಾಗಿಲ್ಲ ಅಂತ ಶಪಿಸುತ್ತ ಕೂಡುವದಕ್ಕಿಂತ ಮತ್ತೆ ಎಡವಿದ ಜಾಗದಲ್ಲೇ ಎದ್ದು ನಿಂತು ಗೆದ್ದೆ ಗೆಲ್ತಿನಿ,ಇಂತಹ ಸಾವಿರ ಅವಮಾನ ನಿಂದನೆಗಳನ್ನ ಮೆಟ್ಟಿ ನಿಲ್ತಿನಿ ಅನ್ನುವ ಛಲ ನಿಮ್ಮೊಳಗೆ ಇರಲಿ.ಲೆಟ್ಸ್ ಸ್ಟಾರ್ಟ್ ಫ್ರಮ್ ಬಿಗಿನಿಂಗ್….. ಯಾಂಡ್ ಥಿಂಕ್ ಬಿಗ್ ಅಚೀವ್ ಬಿಗ್ ಏನಂತೀರಿ???

ದೀಪಕ್ ಶಿಂಧೆ
ಪತ್ರಕರ್ತ, ಅಥಣಿ
ಮೊ:9482766018