ಶಿವಭಕ್ತರು ಶಿವನನ್ನೇ ಆಶ್ರಯಿಸಬೇಕು
ಮುಕ್ಕಣ್ಣ ಕರಿಗಾರ
ಎನ್ನ ವಾಮ- ಕ್ಷೇಮ ನಿಮ್ಮದಯ್ಯಾ ;
ಎನ್ನ ಹಾನಿ- ವೃದ್ಧಿ ನಿಮ್ಮದಯ್ಯಾ ;
ಎನ್ನ ಮಾನಾಪಮಾನ ನಿಮ್ಮದಯ್ಯಾ;
ಬಳ್ಳಿಗೆ ಕಾಯಿ ದಿಮ್ಮಿತ್ತೆ,ಕೂಡಲ ಸಂಗಮದೇವಾ.
ಶಿವನಲ್ಲದೆ ಮತ್ತೊಬ್ಬರು ಹಿತವರಿಲ್ಲ,ಮತ್ತೊಬ್ಬರು ಉದ್ಧಾರಕರಿಲ್ಲವಾದ್ದರಿಂದ ಶಿವಭಕ್ತರು ಶಿವನನ್ನೇ ಆಶ್ರಯಿಸಿ,ಉದ್ಧಾರವಾಗಬೇಕು ಎನ್ನುತ್ತಾರೆ ಬಸವಣ್ಣನವರು.ಭಕ್ತನು ತನ್ನ ಬದುಕನ್ನೆಲ್ಲ ಶಿವಾರ್ಪಣಂ ಎಂದಾಗ ಅವನ ಬದುಕಿನ ಹೊಣೆಯೂ ಪರಮಾತ್ಮನಾದ ಶಿವನದೇ ಆಗುತ್ತದೆ.ಜಗತ್ತಿನ ಜಡರು- ಜಂಜಡಗಳಲ್ಲಿ ಹಣ್ಣಾಗುವ ಜೀವಕ್ಕೆ ಶಿವನಲ್ಲದೆ ಮತ್ತಾರು ಪರಮಾಶ್ರಯದಾತರು ? ಬಸವಣ್ಣನವರು ಶಿವಭಕ್ತರು ಅವರ ಯೋಗ ಕ್ಷೇಮದ,ಒಳಿತು- ಕೆಡುಕಿನ ಹೊರೆಯನ್ನು ಶಿವನಿಗೆ ಬಿಡಬೇಕು,ಲಾಭ- ನಷ್ಟಗಳು ಶಿವನಿಚ್ಚೆಯಂತೆ ಎಂದು ತಿಳಿಯಬೇಕು,ಜಗತ್ತಿನಲ್ಲಿ ಬಂದೊದಗುವ ಮಾನ ಮತ್ತು ಅಪಮಾನದ ಪ್ರಸಂಗಗಳಲ್ಲಿ ಶಿವನೇ ಗತಿಮತಿ ಎಂದು ನಂಬಬೇಕು,ಬಳ್ಳಿಯೊಳಗಿನ ಕಾಯಿ ಬಳ್ಳಿಗೆ ಭಾರವಾಗದಂತೆ ಜಗದ ಕರ್ತಾರನಾದ ಶಿವನು ತನ್ನ ಭಕ್ತರ ಬಾಳ ಹೊಣೆಹೊರುವನು ಎನ್ನುತ್ತಾರೆ.
ಶಿವಾನುಗ್ರಹವಿಲ್ಲದೆ ನರರಿಗೆ ಉನ್ನತಿಯಿಲ್ಲ ,ಶಿವನಲ್ಲದೆ ಕರೆದು ಮೊರೆಯಲು ಮತ್ತೊಬ್ಬ ದೇವರಿಲ್ಲ ಎನ್ನುವುದು ಈ ವಚನದ ಸಾರ.ಭಕ್ತನಾದವನು ಎಷ್ಟೇ ಶಕ್ತನಿದ್ದರೂ ಸಮರ್ಥನಿದ್ದರೂ ಬದುಕು ಅವನ ಇಚ್ಚೆಯಂತೆ ನಡೆಯದು,ಬದುಕಿನೊಳು ಬಂದೊದಗುವ ಇಷ್ಟಾನಿಷ್ಟ ಪ್ರಸಂಗಗಳು ಭಕ್ತನ ಎಣಿಕೆಯಂತೆ ನಡೆಯವು.ಈ ಲೋಕದಲ್ಲಿ ಹುಟ್ಟಿದ ಎಲ್ಲರ ಬದುಕಿನಲ್ಲೂ ಸುಖ- ದುಃಖಗಳಿವೆ,ನಲಿವು- ನೋವುಗಳಿವೆ.ಸದಾಸುಖಿಗಳೆಂಬುವರು ಇಲ್ಲ ಮನುಷ್ಯರಲ್ಲಿ.ನಡೆಹಿಡಿದ ಬಾಳಿನಲ್ಲಿ ಬಯಸಿದ್ದನ್ನೆಲ್ಲ ಪಡೆಯಲಾಗದು.ಪೂರ್ವನಿರ್ಧಾರಿತವಾದ ಬಾಳಿನಲ್ಲಿ ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುವುದರಿಂದ ಪರಮಾತ್ಮನನ್ನು ಪ್ರಾರ್ಥಿಸಿ ನಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಬಹುದು.ಭಕ್ತನು ತನ್ನನ್ನು ತಾನು ಪರಮಾತ್ಮನಿಗೆ ಅರ್ಪಿಸಿಕೊಳ್ಳಬೇಕು.ಸರ್ವವೂ ಶಿವನದೆ,ನನ್ನದು ಏನೂ ಇಲ್ಲ ಎಂದು ಶಿವನ ಮೇಲೆಭಾರ ಹಾಕಬೇಕು.
ತನ್ನಲ್ಲಿ ಶರಣುಬಂದವರ ಬಾಳ ಹೊಣೆಹೊರುವ ಶಿವನು ತನ್ನ ಭಕ್ತರ ಬದುಕಿಗೆ ಶುಭವನ್ನುಂಟು ಮಾಡುತ್ತಾನೆ,ಅನಿಷ್ಟಗಳನ್ನು ಪರಿಹರಿಸಿ ಮಂಗಳವನ್ನುಂಟು ಮಾಡುತ್ತಾನೆ.ಭಕ್ತರು ಒಳಿತೇ ಬರಲಿ,ಕೆಡುಕೇ ಬರಲಿ ಶಿವನಿದ್ದಾನೆ ಎನ್ನಬೇಕು.ಲಾಭವೇ ಆಗಲಿ ನಷ್ಟವೇ ಆಗಲಿ ಶಿವನಿಚ್ಚೆ ಎನ್ನಬೇಕು.ಜನರು ನಮ್ಮನ್ನು ಹೊಗಳಲಿ ತೆಗಳಲಿ ಶಿವನ ಪ್ರೇರಣೆ ಎನ್ನಬೇಕು.ಇಂತಹ ಶಿವಾರ್ಪಣವಾದ ಬದುಕಿನ ಹೊಣೆಯನ್ನು ಶಿವನೇ ನಿರ್ವಹಿಸುತ್ತಾನೆ.ನೆಲದಲ್ಲಿ ಹರಡಿದ ಬಳ್ಳಿಗೆ ಕಾಯಿ ಹೇಗೆ ಭಾರವಾಗದೊ ಹಾಗೆಯೇ ಶಿವನಿಗೆ ತನ್ನ ಭಕ್ತರು ಭಾರವಾಗಲಾರರು.ಶಿವನು ತನ್ನ ಭಕ್ತರನ್ನು ಪರೀಕ್ಷಿಸುತ್ತಾನೆ.ಭಕ್ತರು ಅಚಲನಿಷ್ಠೆ,ನಿಜಭಕ್ತಿಯುಳ್ಳವರು ಎಂದು ದೃಢಪಟ್ಟರೆ ಅವರನ್ನು ಒಲಿದು ಉದ್ಧರಿಸುತ್ತಾನೆ.ಶರಣಾಗತ ರಕ್ಷಕ,ಆರ್ತಪರಿಪಾಲಕ,ದೀನಬಂಧು,ಕರುಣಾಸಿಂಧು ಎನ್ನುವ ಬಿರುದುಗಳನ್ನು ಹೊಂದಿರುವ ಶಿವನು ತನ್ನ ಲ್ಲಿ ಶರಣು ಬಂದ ಭಕ್ತರನ್ನು ಕಾರುಣ್ಯವಿಶೇಷದಿಂದ ಪೊರೆಯುತ್ತಾನೆ.ಪ್ರಪಂಚದಲ್ಲಿ ಬೆಳೆಯಬೇಕಾದರೆ ಎಡರು- ತೊಡರು,ತೊಂದರೆ- ಕಾಟ,ವಿಘ್ನ- ವಿಪತ್ತುಗಳನ್ನು ಎದುರಿಸಲೇಬೇಕು.ಸಂಕಷ್ಟಬಂದಾಗ ಹೆದರದೆ ಪರಶಿವನನ್ನು ಆಶ್ರಯಿಸಬೇಕು.ಆದರೆ ಸುಖಬಂದಾಗ ದೇವರನ್ನು ಮರೆತು ದುಃಖ ಬಂದಾಗ ಮಾತ್ರ ದೇವರನ್ನು ಸ್ಮರಿಸುವವರು ನಿಜ ಭಕ್ತರಲ್ಲ.ಸುಖವು ಬಂದರೆ ಶಿವನ ಕರುಣೆ ಎನ್ನಬೇಕು,ದುಃಖ ಬಂದಾಗ ಶಿವನಿಚ್ಚೆ ಎನ್ನಬೇಕು.ಸುಖ- ದುಃಖಗಳೆರಡರ ಕಾರಣನು ಶಿವನಾದ್ದರಿಂದ ನನ್ನದೇನಿದೆ,ಅವನಿಚ್ಚೆ ಎನ್ನುವ ಭಾವ ಬಲಿತದ್ದಾದರೆ ಶಿವನು ಅಂತಹ ಭಕ್ತರನ್ನು ಒಲಿದು ಉದ್ಧರಿಸುವನು.ವಾಮ- ಕ್ಷೇಮ ಎಂದರೆ ಒಳಿತು – ಕೆಡುಕುಗಳು.ಬದುಕಿನಲ್ಲಿ ಒಳಿತು ಆದರೆ ಮಂಗಲಮೂರ್ತಿ ಶಿವನ ಕೃಪೆ ಎನ್ನಬೇಕು.ಕೆಡುಕು ಒದಗಿದಾಗ ಅಶುಭನಿವಾರಕ,ಮಂಗಳಕಾರಕ ಶಿವನನ್ನು ಸ್ಮರಿಸಬೇಕು.ಕೈಕೊಂಡ ಉದ್ಯೋಗ,ವೃತ್ತಿಗಳಲ್ಲಿ ನಷ್ಟ ಉಂಟಾದಾಗ ಶಿವನನ್ನು ಮೊರೆಯಬೇಕು,ಲಾಭಪ್ರಾಪ್ತಿಯಾದಾಗ ಶಿವನಿಗೆ ಕೃತಜ್ಞತೆಗಳನ್ನರ್ಪಿಸಬೇಕು.ನಮಗೆ ಮಾನ ಸನ್ಮಾನಗಳು ಒದಗಿದಾಗ ಶಿವಾನುಗ್ರಹವೆಂದು ವಿನೀತರಾಗಿ ಬಾಗಬೇಕು ಶಿವನೆದುರು, ಅಪಮಾನವಾದಾಗ ಶಿವನೋಡಿಕೊಳ್ಳುತ್ತಾನೆ ಎನ್ನುವ ಧೈರ್ಯ ಹೊಂದಬೇಕು.
ವಚನದ ಕೊನೆಯಲ್ಲಿ ಬಸವಣ್ಣನವರು ಹೇಳುವ ‘ ಬಳ್ಳಿಗೆ ಕಾಯಿ ದಿಮ್ಮಿತ್ತೆ’ ಎನ್ನುವ ಮಾತು ಮನನೀಯ.ಬಳ್ಳಿಗಳಲ್ಲಿ ಕೆಲವು ನೆಲದ ಮೇಲೆ ಹರಡಿ ಬೆಳೆದರೆ ಮತ್ತೆ ಕೆಲವು ಗಿಡ ಮರಗಳ ಕೊಂಬೆ ರೆಂಬೆಗಳನ್ನಾಶ್ರಯಿಸಿ ಬೆಳೆಯುತ್ತವೆ ಇಲ್ಲವೆ ಕಟ್ಟಿಗೆಯ ಹಂದರ- ಚಪ್ಪರಗಳಾಸರೆಯಲ್ಲಿ ಬೆಳೆಯುತ್ತವೆ.ಪರಾವಲಂಬಿಯಾಗಿ ಬೆಳೆದರೂ ಆ ಬಳ್ಳಿಯು ಸಾಕಷ್ಟು ದೊಡ್ಡದೊಡ್ಡ ಗಾತ್ರದ ಕಾಯಿಗಳನ್ನು ಬಿಡುತ್ತದೆ ಮಾತ್ರವಲ್ಲ ನನಗೆ ಭಾರವಾದವು ಈ ಕಾಯಿಗಳು ಎಂದು ಕೆಳಕ್ಕೆ ಬಿಸುಡದು .ಕುಂಬಳ ಬಳ್ಳಿಯಲ್ಲಿ ದೊಡ್ಡದೊಡ್ಡ ಕುಂಬಳಕಾಯಿಗಳು ಹುಟ್ಟುತ್ತವೆ,ಕಿಲೋಗಳಗಟ್ಟಲೆ ತೂಗುತ್ತವೆ.ಆದರೆ ಕುಂಬಳಬಳ್ಳಿಯು ಈ ಕಾಯಿಗಳು ನನಗೆ ಭಾರವಾದವು ಎಂದು ಹೊರಕ್ಕೆ ಎಸೆಯುವುದಿಲ್ಲ ಕಾಯಿಗಳನ್ನು.ಸವತೆ ಬಳ್ಳಿಯಲ್ಲಿಯೂ ಕೂಡ ದೊಡ್ಡಗಾತ್ರದ ಸವತೆಕಾಯಿಗಳು ಹುಟ್ಟುತ್ತವೆ.ಸವತೆಯೂ ಕೂಡ ತನ್ನ ಕಾಯಿಗಳು ಭಾರವಾದವು ಎಂದು ಬಗೆದು ಹೊರತಳ್ಳದು ಕಾಯಿಗಳನ್ನು.ಮನೆಯ ಬಳಕೆಗೆ ಇಲ್ಲವೆ ಮಾರಾಟಕ್ಕೆಂದು ಕಟ್ಟಿಗೆಯ ಚಪ್ಪರದಲ್ಲಿ ಬೆಳೆಯುವ ಹೀರೇಕಾಯಿ,ಸೋರೇಕಾಯಿಗಳ ಬಳ್ಳಿಗಳು ಸಹ ದೊಡ್ಡ,ಉದ್ದನೆಯ ಕಾಯಿಗಳನ್ನು ಬಿಡುತ್ತವೆ.ಆ ಕಾಯಿಗಳು ಭಾರವಾದವು ಎಂದು ನೆಲಕ್ಕೆ ಎಸೆಯವು.ಬಳ್ಳಿ ಯಾವುದೇ ಆಗಿರಲಿ ಅದು ನೆಲದಲ್ಲಿಯೇ ಬೆಳೆದಿರಲಿ ಅಥವಾ ಬೇರೆಯಾವುದರ ಆಶ್ರಯವನ್ನವಲಂಬಿಸಿ ಬೆಳೆದಿರಲಿ ತನ್ನ ಕಾಯಿಗಳನ್ನು ಜೋಪಾನವಾಗಿಟ್ಟುಕೊಳ್ಳಬಯಸುತ್ತದೆ,ಅವುಗಳನ್ನು ಸಂರಕ್ಷಿಸಿ ಬೆಳೆಸುತ್ತದೆ.ಕುಂಬಳಕಾಯಿ,ಸವತೆಕಾಯಿ ಅಥವಾ ಮತ್ತಾವುದೇ ಬಳ್ಳಿ ಆಗಿರಲಿ ಮಿಡಿ,ಹೀಚು ಕಾಯಿಗಳು ಬೆಳೆಯುವಾಗ ಅದರ ರಕ್ಷಣೆಗೆ ತನ್ನ ಎಲೆಗಳನ್ನು ಮುಚ್ಚುತ್ತದೆ.ಅಗತ್ಯಕ್ಕಿಂತ ಹೆಚ್ಚು ಬಿಸಿಲು ತಗುಲದಿರಲಿ,ಹೆಚ್ಚಿನ ಗಾಳಿ ಬಡಿಯದಿರಲಿ ಎಂದು ಬಳ್ಳಿಯು ಕಾಯಿಗಳ ರಕ್ಷಣೆ ಮಾಡುತ್ತದೆ ! ಬಳ್ಳಿಗಳೇ ತಮ್ಮ ಕಾಯಿಗಳ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಿರಬೇಕಾದರೆ ಪರಶಿವನು ತನ್ನ ಭಕ್ತರ ಬಗ್ಗೆ ಕಾಳಜಿ ವಹಿಸದೆ ಇರುವನೆ? ಬಸವಣ್ಣನವರು ಈ ವಚನದಲ್ಲಿ ಬಳ್ಳಿ ಮತ್ತು ಕಾಯಿಯ ನಿದರ್ಶನ ನೀಡಿದ್ದರಲ್ಲಿ ಒಂದು ವಿಶೇಷಾರ್ಥವೂ ಇದೆ.ಬಳ್ಳಿಯು ಪರಾವಲಂಬಿಯು.ನೆಲ ಇಲ್ಲವೆ ಮರದ ಕೊಂಬೆ ರೆಂಬೆಗಳ ಆಸರೆಯಲ್ಲಿ ಬೆಳೆಯುತ್ತದೆ.ಹಾಗೆಯೇ ಈ ವಿಶ್ವವು ಪರಮಾತ್ಮನ ಸಂಕಲ್ಪದಂತೆ ಸೃಷ್ಟಿಗೊಂಡು ಪರಮಾತ್ಮನ ಆಸರೆಯಲ್ಲಿಯೇ ಇದೆ ಮತ್ತು ಬೆಳೆದಿದೆ.ಪರಮಾತ್ಮನೆಂಬ ಮರವನ್ನಾಶ್ರಯಿಸಿ ಹಬ್ಬಿ ಹರಡಿದೆ ಪ್ರಪಂಚವೆಂಬ ಬಳ್ಳಿ.ಮನುಷ್ಯರೂ ಸೇರಿದಂತೆ ಪ್ರಪಂಚದ ಜೀವಜಾಲವು ಬಳ್ಳಿಗಳ ಆಶ್ರಯದಲ್ಲಿ ಬೆಳೆವ ಕಾಯಿಗಳು.ಬಳ್ಳಿಯು ಹೇಗೆ ಕಾಯಿಯನ್ನು ಕಾಯ್ದುಪೊರೆಯುವುದು ತನ್ನ ಮಾತೃಧರ್ಮ ಎನ್ನುತ್ತದೆಯೋ ಹಾಗೆಯೇ ಪರಶಿವನು ತನ್ನನ್ನು ಆಶ್ರಯಿಸಿದ ಭಕ್ತರ ಬದುಕಿನ ಹೊಣೆ ನನ್ನದು ಎಂದು ಅವರನ್ನು ಉದ್ಧರಿಸುವನಲ್ಲದೆ ಶರಣಾಗತರನ್ನು ಎಂದೂ ಕೈಬಿಡಲಾರನು.ಆದ್ದರಿಂದ ಶಿವಭಕ್ತರು ಮನುಷ್ಯರನ್ನು ನಂಬಿ ಕೆಡುವುದಕ್ಕಿಂತ ಮಹಾದೇವ ಶಿವನನ್ನು ನಂಬಿ ಉದ್ಧಾರವಾಗಬೇಕು.ಕೊಟ್ಟು ಆಡಿಕೊಳ್ಳುವ ಮನುಷ್ಯರಿಗಿಂತ ಕೊಟ್ಟು ಮರೆಯುವ ಮಹಾದಾನಿ ವಿಶ್ವೇಶ್ವರ ಶಿವನನ್ನು ಬೇಡಬೇಕು.ಏನನ್ನಾದರೂ ಬೇಡುವಂತಿದ್ದರೆ ಹರನನ್ನೇ ಬೇಡಬೇಕಲ್ಲದೆ ನರರನ್ನು ಬೇಡಬಾರದು.ಬಳ್ಳಿಯಲ್ಲಿ ಕಾಯಿಬೆಳೆಯುವ ಬೆಡಗನ್ನಿರಿಸಿದ ಪ್ರಪಂಚ ನಿಯಾಮಕನಾದ ಶಿವನಿಗೆ ತನ್ನ ಭಕ್ತರು ಬೇಡಿದ ಯಾವುದೂ ಅಸಾಧ್ಯವೆನ್ನಿಸುವುದಿಲ್ಲ,ಕಷ್ಟಕರ ಎನ್ನಿಸುವುದಿಲ್ಲ.ಮನದಿಚ್ಚೆಯನ್ನು ಮಹಾದೇವನ ಮುಂದೆ ಇಟ್ಟು ಪ್ರಾರ್ಥಿಸಿ ಇಷ್ಟಾರ್ಥಸಿದ್ಧಿಯನ್ನು ಹೊಂದಬೇಕು ಎನ್ನುವ ಆಶಯ ಈ ವಚನದಲ್ಲಿ ಪ್ರಕಟಗೊಂಡಿದೆ.

ಮೊ; 94808 79501
10.01.2022