ಬಸವ ದರ್ಶನ ಮಾಲೆ ೧೪ : ಪಾಂಡಿತ್ಯದಿಂದ ಒಲಿಸಲಾಗದು ಪರಶಿವನನ್ನು ! – ಮುಕ್ಕಣ್ಣ ಕರಿಗಾರ

ಪಾಂಡಿತ್ಯದಿಂದ ಒಲಿಸಲಾಗದು ಪರಶಿವನನ್ನು !

ಮುಕ್ಕಣ್ಣ ಕರಿಗಾರ

ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ–
ನಮ್ಮ ಶರಣರಿಗುರಿಗರಗಾಗಿ ಕರಗದನ್ನಕ್ಕ ?
ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ ?
ಕೂಡಲ ಸಂಗಮದೇವಾ,ಬರಿಯ ಮಾತಿನ ಮಾಲೆಯಲೇನಹುದು ?

ಬಸವಣ್ಣನವರು ಈ ವಚನದಲ್ಲಿ ವಾದದಿಂದ ಗೆಲ್ಲಲಾಗದು ಪರಶಿವನನ್ನು,ಪಂಡಿತಪ್ರಿಯನಲ್ಲದ ಪರಮೇಶ್ವರನು ಶುದ್ಧಾಂತಃಕರಣದ ಭಕ್ತಿಗೆ ಒಲಿಯುತ್ತಾನೆ ಎಂದು ನಿರೂಪಿಸಿದ್ದಾರೆ.ದ್ವೈತ ಅದ್ವೈತ ಎಂದು ವಾದಿಸುತ್ತ ಕುಳಿತರೇನು ಫಲ? ಅವು ಬರಿಯ ಸಿದ್ಧಾಂತಗಳೇ ಹೊರತು ಮೋಕ್ಷ ಸಾಧನೆ ಆಗದು ದ್ವೈತಾದ್ವೈತಗಳ ಓದು,ಚರ್ಚೆಗಳಿಂದ. ಶಿವಶರಣರು ಎನ್ನುವ ಉರಿಗೆ ಭಕ್ತರು ಅರಗಿನಂತೆ ಕರಗಿ ತಮ್ಮ ದೇಹಭಾವವನ್ನಳಿದುಕೊಂಡು ದೇವಭಾವನ್ನಳವಡಿಸಿಕೊಳ್ಳಬೇಕು.ಸ್ಥಾವರ ಮತ್ತು ಜಂಗಮಗಳೆರಡೂ ಒಂದೇ ಎಂದರಿತು ಸ್ಥಾವರಲಿಂಗದ ಚರಸ್ವರೂಪಿಗಳಾಗಿರುವ ಶಿವಯೋಗಿಗಳು,ಸಾಧುಜನರನ್ನು ಆದರಿಸಿ,ಆತಿಥ್ಯವನ್ನು ನೀಡಿ ಸತ್ಕರಿಸಬೇಕು.ಶಿವಶರಣರು,ಶಿವಯೋಗಿಗಳು,ಸಾಧುಗಳಿಗೆ ಉಣಲಿಕ್ಕದೆ,ಉಡಲಿಕ್ಕದೆ ಬರಿಯ ರಂಜನೆಯ ಮಾತುಗಳ ಮಾಲೆ ಕಟ್ಟಿದರೆ ಅದನ್ನು ಮೆಚ್ಚುವನೆ ಮಹಾದೇವ ಶಿವನು ಎಂದು ಪ್ರಶ್ನಿಸುವ ಬಸವಣ್ಣನವರು ಶಿವಶರಣರ ಸೇವೆ- ಪೂಜೆಗಳಿಗೆ ಶಿವನು ಒಲಿಯುವನು ಎನ್ನುವ ಶಿವಕಾರುಣ್ಯವಿಶೇಷವನ್ನು ಸಾರಿದ್ದಾರೆ ಈ ವಚನದಲ್ಲಿ.

ಅದ್ವೈತ ಮತ್ತು ದ್ವೈತಗಳೆರಡು ಪರಮಾತ್ಮನ ಇರವನ್ನು ಬಣ್ಣಿಸುವ ಎರಡು ಪರಿಯ ಸಿದ್ಧಾಂತಗಳು.ಜೀವ ಮತ್ತು ಶಿವರ ನಡುವಿನ ಸಂಬಂಧ ಎಂತಹದು ಎನ್ನುವುದನ್ನು ಈ ಎರಡು ಸಿದ್ಧಾಂತಗಳು ವಿವರಿಸುತ್ತವೆ.ಶಿವ ಮತ್ತು ಜೀವರು ಬೇರೆ ಬೇರೆ ಅಲ್ಲ,ಇಬ್ಬರೂ ಒಂದೇ ಎನ್ನುವುದು ಅದ್ವೈತವಾದರೆ ಶಿವ ಜೀವರು ಒಂದೇ ಅಲ್ಲ,ಅವರಿಬ್ಬರೂ ಪ್ರತ್ಯೇಕ ಅಸ್ತಿತ್ವ ಉಳ್ಳವರು,ಜೀವಿಯು ಶಿವನಾಗಲು ಸಾಧ್ಯವಿಲ್ಲ ಎನ್ನುವುದು ದ್ವೈತ ಸಿದ್ಧಾಂತ.’ಒಂದು’ ಎನ್ನುವುದು ಅದ್ವೈತವಾದರೆ ‘ಎರಡು’ ಎನ್ನುವುದು ದ್ವೈತ.ಇದರಲ್ಲಿ ಯಾವ ಸಿದ್ಧಾಂತವೂ ಪರಿಪೂರ್ಣವಲ್ಲ.ಈ ಸಿದ್ಧಾಂತಗಳ ಮಂಡನೆ,ಪರ- ವಿರೋಧ ಚರ್ಚೆಗಳಿಂದ ವ್ಯರ್ಥಕಾಲಹರಣವೇ ಹೊರತು ಸಾಧ್ಯವಾಗುವುದಿಲ್ಲ ಶಿವಸಾಕ್ಷಾತ್ಕಾರ.ಮತ,ತತ್ತ್ವ- ಸಿದ್ಧಾಂತಗಳನ್ನು ಮಂಡಿಸಿ,ಪ್ರಚುರಪಡಿಸಿ, ವಿದ್ವತ್ಪೂರ್ಣ ಪ್ರವಚನಾದಿಗಳಿಂದ ಪಂಡಿತರು ಎನ್ನಿಸಿಕೊಳ್ಳಬಹುದೇ ಹೊರತು ಪಡೆಯಲಾಗದು ಪರಮಾತ್ಮನ ಅನುಗ್ರಹವನ್ನು.ವಾದ,ಪಾಂಡಿತ್ಯದಿಂದ ಶಿವನಿಗೆ ಆಗಬೇಕಾದುದೇನು? ಜೀವರುಗಳು ತಾವು ಉದ್ಧಾರವಾಗಬೇಕಾದರೆ,ಶಿವನ ಸಾಕ್ಷಾತ್ಕಾರ ಪಡೆಯಬೇಕಾದರೆ ಸಾಧಿಸಬೇಕು ಶಿವಭಕ್ತಿಯನ್ನು,ಶಿವಯೋಗವನ್ನು.ಶಿವಕಾರುಣ್ಯಕ್ಕೆ ಪಾತ್ರರಾಗಿ ಭವಮುಕ್ತರಾಗುವ ಬೆಡಗಿನ ಪರಿ ಒಂದನ್ನು ತೋರಿದ್ದಾರೆ ಬಸವಣ್ಣನವರು ಈ ವಚನದಲ್ಲಿ– ದ್ವೈತ ಅದ್ವೈತಗಳೆಂಬ ಒಣ ಚರ್ಚೆಯಲ್ಲಿ ವ್ಯರ್ಥ ಹಾಳಾಗದೆ ಶಿವಶರಣರು ಎನ್ನುವ ಉರಿಯನ್ನು ಕಂಡು ಆ ಉರಿಯ ಎದುರು ಅರಗಿನಂತೆ ಕರಗಿ ಮುಕ್ತರಾಗಬೇಕು ಅವಗುಣಗಳಿಂದ,ಇದೇ ಶಿವನೊಲುಮೆಯ ಪರಮಸಾಧನ ಎನ್ನುವ ಶಿವಬೆಡಗನ್ನು.ಉರಿ ಮತ್ತು ಅರಗುಗಳ ದೃಷ್ಟಾಂತದ ಮೂಲಕ ಬಸವಣ್ಣನವರು ಶರಣರ ಸೇವೆಯಿಂದ ಭವಮುಕ್ತರಾಗಬಹುದೆಂಬ ಸತ್ಯವನ್ನು,ತತ್ತ್ವವನ್ನು ನಿರೂಪಿಸಿದ್ದಾರೆ.ಉರಿ ಅಂದರೆ ಬೆಂಕಿ,ಅರಗು ಲಾಕ್ಷಾರಸದ ಅಂಟು.ರಾಶಿಗಟ್ಟಲೆ ಅರಗು ಇದ್ದರೂ ಅದು ಬೆಂಕಿಗೆ ಕರಗುತ್ತದೆ.ಬೆಂಕಿಗೆ ಅರಗು ಕರಗುತ್ತದೆ ಎನ್ನುವ ಕಾರಣದಿಂದ ಬಸವಣ್ಣನವರು ಇಲ್ಲಿ ಜೀವರುಗಳನ್ನು ಅರಗಿಗೆ ಹೋಲಿಸಿ ಶರಣರನ್ನು ಉರಿ ಅಥವಾ ಬೆಂಕಿಗೆ ಹೋಲಿಸಿದ್ದಾರೆ.ಉರಿತಾಗಿದ ಅರಗು ಕರಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳುವಂತೆ ಶರಣರ ದರ್ಶನ,ಸ್ಪರ್ಶನ ಮತ್ತು ಆಶೀರ್ವಚನಗಳಿಂದ ಭಕ್ತರು ಉದ್ಧಾರವಾಗಬೇಕು ಎನ್ನುವ ಸಂದೇಶ ನೀಡಿದ್ದಾರೆ ಬಸವಣ್ಣನವರು ಈ ವಚನದಲ್ಲಿ.ಅರಗು ಬೆಂಕಿಗೆ ಕರಗುವಂತೆ ಶರಣರ ದರ್ಶನ,ಆಶೀರ್ವಚನಗಳಿಂದ ಭಕ್ತರು ತಮ್ಮ ಭವದ ಬಳ್ಳಿಯನ್ನು ಸುಟ್ಟುರುಹಿಕೊಂಡು ಭವದ ಮುಕ್ತರಾಗಬಹುದು.ಶರಣರು ಎನ್ನುವ ಬೆಂಕಿ ಅವಗುಣಗಳನ್ನು ಮಾತ್ರವಲ್ಲ ,ಭವದ ಬಳ್ಳಿಯನ್ನೇ ಸುಡುವ ಸಾಮರ್ಥ್ಯ ಹೊಂದಿದೆಯಾದ್ದರಿಂದ ಶಿವಶರಣರು,ಶಿವಯೋಗಿಗಳು,ಸಾಧುಗಳ ಬಳಿಸಾರಿ ಭವಮುಕ್ತರಾಗಬೇಕು ಎನ್ನುವುದು ವಚನದ ಆಶಯ.

ಶಿವಸಂಕಲ್ಪದಂತೆ ಲೋಕೋದ್ಧಾರಕ್ಕಾಗಿ ಅವತರಿಸಿರುವ ಶರಣರು,ಶಿವಯೋಗಿಗಳು,ಸಾಧುಗಳನ್ನು ಶಿವನೆಂದೇ ಬಗೆದು ಪೂಜಿಸಬೇಕು.ದೇವಸ್ಥಾನಗಳಲ್ಲಿನ ಸ್ಥಾವರಶಿವಲಿಂಗಕ್ಕೆ ಸಲ್ಲಿಸುವ ಪೂಜೆ ಸೇವೆಗಳನ್ನು ಶಿವಯೋಗಿಗಳಿಗೂ ಸಲ್ಲಿಸಬೇಕು.ಶಿವಲಿಂಗಕ್ಕೂ ಶಿವಯೋಗಿಗಳಿಗೂ ವ್ಯತ್ಯಾಸವಿಲ್ಲ.ಶಿವಶರಣರ ಬರವನ್ನು ನಿರೀಕ್ಷಿಸಬೇಕು,ಇಲ್ಲದಿದ್ದರೆ ಅವರನ್ನು ಕರೆತಂದು ಪೂಜಿಸಿ,ಗೌರವಿಸಬೇಕು.ಶಿವಶರಣರ ಸೇವೆಯಿಂದ ಶಿವನು ಸಂತೃಪ್ತಗೊಳ್ಳುವನು.ತನ್ನ ಲಿಂಗದಲ್ಲಿ ಶಿವನು ಎಂತಿಹನೋ ಅಂತಯೇ ಇಹನು ಶಿವಸಾಧುಗಳ ಒಡಲಲ್ಲಿ.ವಾದ-ಚರ್ಚೆಗಳ ರಂಜನೆಯ,ಭಂಜನೆಯ ಮಾತುಗಳಲ್ಲಿ ವ್ಯರ್ಥ ಹಾಳಾಗದೆ ಶಿವಶರಣರನ್ನು ನಂಬಿ,ಅವರ ಪಥದಿ ನಡೆದು ಉದ್ಧಾರವಾಗಬೇಕು.

‘ಬರಿಯ ಮಾತಿನ ಮಾಲೆಯಲೇನಹುದು’? ಎನ್ನುವ ಬಸವಣ್ಣನವರ ಮಾತು ಆಧ್ಯಾತ್ಮಿಕ ಪಥದಲ್ಲಿ ನಡೆಯುವವರು ಮತ್ತು ಶಿವಭಕ್ತರಿಗೆ ಮಾರ್ಗದರ್ಶಕ ಮಾತು.ಕೆಲವರು ಬರಿ ವಾದ- ತರ್ಕಗಳಲ್ಲಿಯೇ ಕಾಲಹರಣ ಮಾಡುತ್ತಾರೆ ಆಧ್ಯಾತ್ಮಿಕ ವಿಷಯಗಳ ಕುರಿತು ಚರ್ಚಿಸುತ್ತ.ಅವರು ಹಾಗೆ ಹೇಳಿದ್ದಾರೆ,ಇವರು ಹೀಗೆ ಹೇಳಿದ್ದಾರೆ,ಆ ಗ್ರಂಥದಲ್ಲಿ ಹಾಗಿದೆ, ಈ ಗ್ರಂಥದಲ್ಲಿ ಹೀಗಿದೆ ಎಂದು ಪುಸ್ತಕಗಳ ಪ್ರಮಾಣವನ್ನಿಟ್ಟುಕೊಂಡು ವಾದ,ಚರ್ಚೆಗಳಲ್ಲಿಯೇ ಮುಳುಗಿ ಹಾಳಾಗುತ್ತಿದ್ದಾರೆ ಆಧ್ಯಾತ್ಮಿಕ ಸತ್ಯವನ್ನರಿಯದೆ.ಮಾತಿನ ಮಾಲೆ ಎನ್ನುವುದು ತಮ್ಮ ತತ್ತ್ವಗಳ ಪ್ರತಿಪಾದನೆಗೆ ಮಂಡಿಸುವ ಬಹುಜಾಣ್ಮೆಯ ವಾಗಾಡಂಬರ. .ವಾದದಲ್ಲಿ ಗೆಲ್ಲಲೇಬೇಕು ಎಂದು ತಮ್ಮ ವಾದವಿಷಯಕ್ಕೆ ಪೂರಕವಾಗುವ ಏನೆಲ್ಲ ಸಂಗತಿಗಳನ್ನು ಉದಾಹರಿಸುತ್ತಾರೆ,ವಿತಂಡವಾದವನ್ನೂ ಮಂಡಿಸುತ್ತಾರೆ.ವಾದದಿಂದ ಉದ್ವೇಗ- ಉಮ್ಮಳಗಳೇ ಹೊರತು ಸಾಧಿಸಲಿಲ್ಲ ಪರಮಾತ್ಮನ ಅನುಗ್ರಹವನ್ನು.ವಾದಕ್ಕಾಗಿಯೇ ಹಲವು ಹತ್ತು ಗ್ರಂಥಗಳನ್ನು ಓದಿ,ವಾದಿಸಿ ಏನನ್ನು ಸಾಧಿಸಿದಂತಾಯಿತು? ಹೆಚ್ಚೆಂದರೆ ಪಂಡಿತರು,ಜ್ಞಾನಿಗಳು ಎಂದು ಜನರು ಗುರುತಿಸಬಹುದಷ್ಟೆ.ಅಲ್ಲಲ್ಲಿ ವಾದಿಸಿ ಗೆದ್ದು ಮಾನ- ಸನ್ಮಾನಗಳನ್ನು ಸ್ವೀಕರಿಸಿ,ಬಿರುದು ಬಾವಲಿ,ಪದವಿ- ಪ್ರಶಸ್ತಿಗಳನ್ನು ಮೈತುಂಬ ಧರಿಸಿದರೆ ಶಿವನು ಬರಮಾಡಿಕೊಳ್ಳುವನೆ ಇವನು ಮಹಾಪಂಡಿತ,ನನಗೆ ಬೇಕಾದವನು ಎಂದು? ಇಲ್ಲ,ಪಂಡಿತರಿಗೆ ಖಂಡಿತವಾಗಿಯೂ ಇಲ್ಲ ಪ್ರವೇಶ ಕೈಲಾಸದಲ್ಲಿ! ಭಕ್ತಿಪ್ರಿಯನಾದ ಶಿವನು ಶುದ್ಧಾಂತಃಕರಣ ಉಳ್ಳ ಭಕ್ತರನ್ನು ತನ್ನೆಡೆಗೆ ಬರ ಮಾಡಿಕೊಳ್ಳುವನಲ್ಲದೆ ಪಂಡಿತರು,ವಾದ ಮಂಡಿಸುವವರ ಬಗ್ಗೆ ಕಿಂಚತ್ತೂ ಕರಗಲಾರ.ಸತ್ಯ ಹೀಗಿರುವಾಗ ವ್ಯರ್ಥ ವಾದಿಸಿ,ಹಾಳಾಗುವುದೇಕೆ? ಪರತತ್ತ್ವ ಎನ್ನುವುದು ವಾದಕ್ಕೆ ಎಟುಕದ ಸಂಗತಿ.ಪರಮಾತ್ಮನು ಎಲ್ಲವನ್ನೂ ಮೀರಿದ ಅತೀತ.ಮನುಷ್ಯ ಮತಿಯ ಮಿತಿಯ ಆಚೆಗೆ ಇರುವ ಪರಮಾತ್ಮನನ್ನು ಅತಿವಿನಯ,ಶುದ್ಧಭಕ್ತಿಯಿಂದ ಮಾತ್ರ ಒಲಿಸಬಹುದು.ಹುಟ್ಟು ಸಾವುಗಳಿಗೆ ಅತೀತನಾಗಿರುವ ಪರಶಿವನು ತನ್ನ ಲೀಲಾಸಂಕಲ್ಪದಂತೆ ನಡೆಯುತ್ತಿರುವ ಜಗದ ಸೃಷ್ಟಿ ಸ್ಥಿತಿ ಲಯಗಳೆಂಬ ಉಜ್ಜುಗತ್ರಯಗಳ ವಿಶ್ವ ವ್ಯವಹಾರದ ಮಾರ್ಗದರ್ಶಕರುಗಳನ್ನಾಗಿ ತನ್ನ ಗಣರುಗಳನ್ನು ಶರಣರು,ಸಂತರು,ಶಿವಯೋಗಿಗಳ ರೂಪದಲ್ಲಿ ಕಳುಹಿಸುತ್ತಾನೆ.ಶಿವಸಂಕಲ್ಪದಿಂದ,ಶಿವಧಾಮದಿಂದಲೇ ಅವತರಿಸಿದ ಶಿವಕಾರಣರಾದ ಶಿವಶರಣರು- ಶಿವಯೋಗಿಗಳು ಗುಡಿಗಳೊಳಗಣ ಸ್ಥಾವರ ಶಿವಲಿಂಗಗಳಂತೆಯೇ ಪೂಜ್ಯರು,ಪೂಜಾರ್ಹರು.ಶಿವಯೋಗಿಗಳ ದೇಹದಲ್ಲಿಯೇ ಶಿವನಿರುತ್ತಾನಾದ್ದರಿಂದ ಶಿವಯೋಗಿಗೆ ಸಲ್ಲುವ ಪೂಜೆ- ಸೇವೆಗಳು ಶಿವನಿಗೇ ಸಲ್ಲುತ್ತವೆ.ವ್ಯರ್ಥ ತರ್ಕ- ಸಿದ್ಧಾಂತಗಳ ಮಂಡನೆಯಲ್ಲಿ ಮಂಡೆಬಿಸಿಮಾಡಿಕೊಂಡು,ಉದ್ವೇಗ- ಉನ್ಮಾದ ರೋಗಗಳಿಗೆ ಬಲಿಯಾಗಿ ಬಳಲುವುದಕ್ಕಿಂತ ಶಿವಶರಣರ ಸೇವೆ,ಸತ್ಕಾರಗಳಿಂದ ಹರಿದುಕೊಂಡು ಭವದ ಬಳ್ಳಿಯನ್ನು ಒಂದಾಗಬಹುದು ಅಭವ ಶಿವನೊಳು ಎಂಬ ಸಂದೇಶ ಕರುಣಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ.

ಮುಕ್ಕಣ್ಣ ಕರಿಗಾರ

09.01.2022