“ಮರೆಯದ ಮಾಣಿಕ್ಯ” ರಾಜಸಾಬ ಆನಾಹೊಸೂರು – ಶರಣಬಸವ ಕೆ.ಗುಡದಿನ್ನಿ

“ಮರೆಯದ ಮಾಣಿಕ್ಯ” ರಾಜಸಾಬ ಆನಾಹೊಸೂರು

ಲೇಖಕ: ಶರಣಬಸವ ಕೆ. ಗುಡದಿನ್ನಿ

ಸರಕಾರದ ಕೆಲಸ ದೇವರ ಕೆಲಸ ಅಂತಾರೆ!ಆದರೆ ಅದನ್ನು ರೂಢಿಯಲ್ಲಿ ತರೋರು ತುಂಬಾ ವಿರಳ.ಅದರಲ್ಲೂ ಶಿಕ್ಷಕ,ವೈದ್ಯ,ಶುಶ್ರೂಷಕ,
ಡ್ರೈವರ್ ಮುಂತಾದ ಕೆಲಸಗಳಂತೂ ಅಪಾರವಾದ ಶ್ರದ್ಧೆಯನ್ನು ಮತ್ತು ಅಗಾಧವಾದ ತಾಳ್ಮೆಯನ್ನು ಬೇಡುತ್ತವೆ.
ಅಂತಹ ತಾಳ್ಮೆ,ಶ್ರದ್ಧೆಯನ್ನು ಮೈಗೂಡಿಸಿಕೊಂಡು ಬದುಕಿಡೀ ಸೇವೆಯನ್ನ ಉಸಿರಾಗಿಸಿಕೊಂಡವರು ಅಲ್ಲಲ್ಲಿ ಕಾಣಸಿಗುತ್ತಾರೆ ಅಂತಹ ವ್ಯಕ್ತಿತ್ವಗಳಲ್ಲಿ ನಾನು ನೋಡಿದಂತಹ ರಾಜಸಾಬ ಆನಾಹೊಸೂರು ಒಬ್ಬರು.

ಇವತ್ತಿಗೂ ಅವರು ಕೆಲಸ ಮಾಡಿದ ಊರುಗಳಲ್ಲಿ ಜನ ಅವರನ್ನ ಮರೆತಿಲ್ಲ! ಮಾತು ಬಂದಾಗಲೊಮ್ಮೆ ಅವರ ನಿಷ್ಕಾಮ ಕರ್ಮವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ಆ ಕಾರಣಕ್ಕಾಗಿಯೇ ಅವರನ್ನು ಮರೆಯದ ಮಾಣಿಕ್ಯ ಎಂದದ್ದು.

ಬಡತನದ ಬಾಲ್ಯ,ಕಂಡುಂಡ ಕಷ್ಟಗಳು ರಾಜಸಾಬರನ್ನ ಮೆತ್ತಗ ಮಾಡಿದ್ದವು.
ಆ ಕಾರಣಕ್ಕಾಗಿಯೇ ಮೀಸೆ ಚಿಗುರುವ ಮುನ್ನವೇ ಆನಹೊಸೂರಿನ ಗೌಡರ ಮನೆಯ ಗಿರಣಿಯಲ್ಲಿ ಕೆಲಸಕ್ಕೆ ಸೇರಿದ್ದು.
ತಮಗೊಂದು ಆರೋಗ್ಯ ಇಲಾಖೆಯ ಪುಟ್ಟ ನೌಕರಿ ಸಿಗುವವರೆಗೆ ಆ ಗಿರಣಿಯಲ್ಲೆ ನಿಯತ್ತಿನಿಂದ ಚಾಕರಿ ಮಾಡಿದರು.
ಇವರು ಶ್ರಮವಹಿಸಿ ದುಡಿಯುವದನ್ನು ಕಂಡು ಪುಳಕಿತರಾಗುತ್ತಿದ್ದ ಗೌಡರು “ನಿನ್ನಂತಹ ನಿಯತ್ತಿನ ಮನುಷ್ಯ ಈ ದಿನಮಾನಗಳಲ್ಲಿ ಅಪರೂಪ ನೋಡೊ ರಾಜಸಾಬ ” ಅಂತ ಹೊಗುಳುತ್ತಿದ್ದರು.
ಹೀಗೆ ಅಲ್ಲಿ ದುಡಿಯುತ್ತಲೇ ರಾಜಸಾಬ ಅವರು ದಾಂಪತ್ಯಕ್ಕೆ ಕಾಲೊಟ್ಟರು.
ಹೊಳೆದಂಡೆಯ ಕನ್ಯೆಯನ್ನು ಹುಡುಕಾಡಿ ಕಟ್ಟಿಕೊಂಡು ಬದುಕಿಡೀ ಜನುಮದ ಜೋಡಿಯಂತೆ ಜೊತೆಯಾಗಿ ಸಂಸಾರ ಸಾಗಿಸಿದರು.

ಅವರು ಆರೋಗ್ಯ ಇಲಾಖೆಯಲ್ಲಿ ಮೊದಲು ನೇಮಕಾತಿ ಹೊಂದಿದ್ದು ಮಂಗಳೂರಿನ ಒಂದು ಪುಟ್ಟ ಊರಿಗೆ.
ಅಲ್ಲಿ ಎರಡು ವರ್ಷ ವೃತ್ತಿಯ ಓನಾಮ ಕಲಿತವರು ಮತ್ತೆ ವಳ್ಳಿ ಬಿಸಿಲ ಊರಿನ ಮಡಿಲಿಗೆ ಬಿದ್ದರು.
ಅಲ್ಲಿಂದ ನೇರವಾಗಿ ಬಂದಿದ್ದು ಯಲಬುರ್ಗ ತಾಲ್ಲೂಕಿನ ಹಿರೆವಂಕಲಕುಂಟಕ್ಕೆ.
ಆ ನಂತರ ಮರ್ಚಟನಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರು.
ಹುಟ್ಟಿದ ಊರು ಆನಹೊಸೂರು ಆದರೂ ಇವತ್ತಿಗೂ ಅತಿಹೆಚ್ಚು ಬಂಧುಗಳು,ಹಿತೈಷಿಗಳು, ಪ್ರೀತಿಸುವವರು ಇರುವದು ಮರ್ಚಟಾಳದಲ್ಲಿ!
ಮಕ್ಕಳು ಹುಟ್ಟಿ,ಬೆಳೆದು ಓಡಾಡಿದ್ದು ಇದೇ ಊರುಗಳ ಅಂಗಳದಲ್ಲೆ.
ಅವರ ಬಾಲ್ಯ,ಶಾಲೆ,ಕಾಲೇಜಿನ ನೆನಪುಗಳಲ್ಲಿ ಈ ಊರಿನ ನೆನಪು ಸದಾ ತಂಗಾಳಿಯಂತೆ ಸೂಸುತ್ತದೆ.ನಿರಂತರ ಇಪ್ಪತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಲಿಂಗಸ್ಗೂರು ತಾಲ್ಲೂಕಿಗೆ ವರ್ಗಾವಣೆ ಆದಾಗ ಜನ ಹೋಗೋದು ಬೇಡ ಅಂತ. ತರುಬಿ ಹಾಕಿದ್ದರು.
ಆ ಸಂದರ್ಭದಲ್ಲಿ ನೀರಾವರಿ ಸಚಿವರಾಗಿದ್ದ ಮಾನ್ಯ ಮುನಿಯಪ್ಪ ಮುದ್ದಪ್ಪ ಅವರು ಕಾಳಜಿಯಿಂದ ಮನೆಗೆ ಕರೆಸಿಕೊಂಡು “ಯಾಕ್ ಹೋತಿದ್ದಿ ಬಿಡಪ್ಪ ಸಾಬು ಊರವ್ರು ಗಲಾಟಿ ಮಾಡಕತ್ಯಾರ” ಅಂದಿದ್ದರು.
ಆದರೆ ಹುಟ್ಟಿದ ಊರಿಗೆ ಬರಬೇಕು, ತಂದೆ-ತಾಯಿಗಳ ಕೊನೆಯ ದಿನಗಳಲ್ಲಿ ಜೊತೆ ಇರಬೇಕು ಎಂಬ ನಿರ್ದಾರಕ್ಕೆ ಎಲ್ಲರೂ ತಲೆಬಾಗಿ ಸುಮ್ಮನಾಗಿದ್ದರು.
ಆದರೆ ವರ್ಗಾವಣೆ ಆದ ನಂತರದ ಇಪ್ಪತ್ತು ದಿನಗಳು ತಮ್ಮ ಪ್ರೀತಿಯ ಮಳೆಯನ್ನೆ ಸುರಿಸಿದ್ದರು.
ಪ್ರತೀ ಮನೆ ಓಣಿಗೆ ರಾಜಸಾಬ ದಂಪತಿಗಳನ್ನು ಕರೆಸಿಕೊಂಡು ಬಟ್ಟೆ-ಬರೆ ಮಾಡಿದರು.ಜಾತಿ, ಮತ, ಧರ್ಮದ ಹಂಗಿಲ್ಲದೆ ಊರಿನ ಪ್ರತಿಯೋರ್ವರು ತಮ್ಮ ಎದೆಯೊಳಗಿನ ಪ್ರೀತಿಯನ್ನು ಧಾರೆ ಎರೆದರು‌.
ಆ ದಿನ ಮನೆಯಲ್ಲಿ ಹೋಳಿಗೆ,ಕಡಬು ಮಾಡಿ ದಿಬ್ಬಣ ಮಾಡಿದರು.
ಮುಂಜಾನೆ ಒಬ್ಬರ ಮನೆಯಲ್ಲಿ ಔತಣ ಆದರೆ ಮಧ್ಯಾಹ್ನ ಮತ್ತೊಬ್ಬರ ಮನೆಯಲ್ಲಿ ರಾತ್ರಿಗೆ ಮತ್ತೆ ಬೇರೆಯವರ ಮನೆ ಹೀಗೆ ಬೀಳ್ಕೊಡುಗೆಯನ್ನ ಎಂದೂ ಯಾರೂ ಕೇಳರಿಯದ ರೀತಿಯಲ್ಲಿ ಮಾಡಿ ಬದುಕಪೂರ ಆ ಊರ ನೆನಪು ಅಜಾರಾಮರ ಉಳಿಯುವಂತೆ ಮಾಡಿದ್ದರು.

ಅಲ್ಲಿಂದ ಅವರು ಬಂದಿದ್ದು ಮಾತೃ ತಾಲ್ಲೂಕಿನ ಈಚನಾಳ phc ಯ ಗೊರೆಬಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ.
ಆವಾಗಲೇ ನಾನು ಅವರ ಸಂಪರ್ಕಕ್ಕೆ ಬಂದಿದ್ದು.
ಕಡಿಮೆ ಮಾತಿನ ಅದಮ್ಯ ಕೆಲಸಗಾರರಾಗಿದ್ದ ಅವರು ಯಾವಾಗಲೂ ಬಿಳಿ ಅಂಗಿ ಅಂತದೇ ಪ್ಯಾಂಟಿನಲಿ ಕಾಣಿಸುತ್ತಿದ್ದರು.
ಶಾಲೆಯ ಎದುರಿಗೆ ಎಡವಿ ಬಿದ್ದರೆ ಸಿಗುವಷ್ಟು ಸಮೀಪದಲ್ಲಿ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿಹೆಚ್ಚಿನ ಫಲಾನುಭವಿಗಳೆಂದರೆ ನಮ್ಮ ಶಾಲೆಯ ಮಕ್ಕಳೇ!
ಬಿದ್ದರು,ಎದ್ದರು,ಕಾಲು-ಕೈ ತರಚಿಕೊಂಡರೂ ಸಾಕು ಅವರ ಮುಂದೆ ನಿಲ್ಲುತ್ತಿದ್ದವು ಮಕ್ಕಳು.
ಒಂದು ದಿನವೂ ರೇಗಲಿಲ್ಲ “ನಿಮ್ದೇನಲೇ ಕಿರಿಕಿರಿ” ಅಂತ ಬೈಯಲಿಲ್ಲ.
ನಾಕಾರು ಜನ ತಾಯಿ ಕಾರ್ಡು, ಪೆನ್ಸಿಲಿನ್, ಪೋಲಿಯೋ, ಅಂತ ಜನರಿದ್ದರೂ ಅವರ ಮಧ್ಯೆ ಮಕ್ಕಳ ದೇಖಾರೇಕಿ ಮಾಡುತ್ತಿದ್ದರು.
ಆಮೇಲೆ ಪ್ರತೀ ರಾಷ್ಟ್ರೀಯ ಕಾರ್ಯಕ್ರಮವನ್ನು ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದನ್ನು ನೋಡಿದ್ದು ಅದೇ ಮೊದಲು ಇರಬೇಕು.
ಯಾವದೇ ಕಾರಣಕ್ಕೂ ಕೆಲಸದಲ್ಲಿ ಕಾಂಪ್ರೋಮೈಸ್ ಆಗುತ್ತಿದ್ದಿಲ್ಲ.
ಮತ್ತು ಇತರರು ಬರಲಿ, ಬಿಡಲಿ ಸಮಸ್ತ ಭಾರವನ್ನು ತಮ್ಮ ಹೆಗಲ ಮೇಲೆಯೇ ಹೊತ್ತು ಹಿಡಿದ ಕೆಲಸ ಮಾಡಿ ಮುಗಿಸುತ್ತಿದ್ದರು.
ಈ ಕಾರಣಕ್ಕೆ ಇಲಾಖೆಯಲ್ಲಿ ಕೆಲವರಿಗೆ ಇವರನ್ನು ಕಂಡರೆ ಆಗುತ್ತಿರಲಿಲ್ಲ
“ಅವ್ರೆಲ್ಲ ಕೆಲ್ಸಗಳ್ರು ಸಾರ್ ಏನಾರ ಮಾಡಿಕೆಲಿ, ನಮ್ಕೆಲ್ಸ ನಾವು ಮಾಡಾದು” ಅಂತ ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ನೆಮ್ಮದಿಯಿಂದ ಇರುತ್ತಿದ್ದರು.

ಇಷ್ಟೆಲ್ಲ ಸಹೃದಯರು, ಕಾಯಕ ಜೀವಿಗಳು ಆಗಿದ್ದ ರಾಜಸಾಬರು ಮನೆ ಮತ್ತು ಮಕ್ಕಳ ವಿಷಯದಲ್ಲಿ ಮಾತ್ರ ಅತ್ಯಂತ ನಿರ್ದಯವಾಗಿ ವರ್ತಿಸುತ್ತಿದ್ದರು.
ನೋಡುವವರಿಗೆ ಇದು ಚೂರು ಅತಿಯಾಯ್ತು ಅನಿಸಿದರೂ ಇವತ್ತಿಗೆ ನಿಂತು ನೆನಿಸಿಕೊಂಡರೆ ಅವತ್ತು ಅವರು ತೋರಿಸುತ್ತಿದ್ದ ಅತಿಯಾದ ಶಿಸ್ತು ಎಷ್ಟು ಮುಖ್ಯ ಅಂತ ಅರ್ಥ ಆಗ್ತಿದೆ.
ಅವರ ಮಕ್ಕಳ ಬದುಕುಗಳು ಹಸನಾಗಿ ಅವರು ಸಮಾಜದಲ್ಲಿ ಬೆರೆತು ಬದುಕುವದನ್ನ ನೋಡಿದ ಪ್ರತೀ ಕ್ಷಣವೂ ರಾಜಾಸಾಬರು ಮರೆಯದೆ ಕಣ್ಣ ಮುಂದೆ ಬರುತ್ತಾರೆ.

ಇನ್ನೂ ಅವರು ಕೇವಲ ಕಛೇರಿ, ಆಸ್ಪತ್ರೆಯ ಡ್ಯೂಟಿ ಮಾತ್ರ ಮಾಡಿ ಸುಮ್ಮನೆ ಕೂಡುತ್ತಿದ್ದಿಲ್ಲ.
ಉಳಿದ ಸಮಯ ಪ್ರಾಥಮಿಕ ಆರೋಗ್ಯ ಕೇಂದ್ರದ ದೇಖಾರೇಖಿಗೆ ನಿಲ್ಲುತ್ತಿದ್ದರು.
ಕಂಪೌಂಡಿಗೆ ಆತುಕೊಂಡಂತೆ ಸುತ್ತಲೂ ಬೇವು,ಬದಾಮಿ,ಹೊಂಗೆ ಸೇರಿದಂತೆ ಹಲವು ಸಸಿಗಳನ್ನ ತಂದು ಹಚ್ಚುತ್ತಿದ್ದರು.
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೊ ಎಂಬಂತೆ ಬೆಳೆವ ಸಸಿಗಳನ್ನು ಕಕ್ಕಲಾತಿಯಿಂದ ಬೆಳೆಸುತ್ತಿದ್ದರು.
ತಮ್ಮ ಕೈಯಾರೆ ಆರೋಗ್ಯ ಕೇಂದ್ರದ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿಯುತ್ತಿದ್ದರು.
ಕಿಟಕಿ,ಬಾಗಿಲು,ಗೇಟು,ಚಿಲಕ ಮುರಿದರೆ ಶನಿವಾರ,ರವಿವಾರ ‘ಉದೋ’ ಅಂತ ಅದೇ ಕೆಲಸಕ್ಕೆ ನಿಂತು ಸರಿ ಮಾಡುತ್ತಿದ್ದರು.
ಅವರಿದ್ದ ಕಾಲಕ್ಕೆ ಹಚ್ಚ ಹಸಿರಾಗಿ ಕುಂತವರಿಗೆ ನೆರಳಾಗಿ ಶುಶ್ರೂಷೆಯ ಕೇಂದ್ರವಾಗಿ ನಳನಳಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವರು ಬಿಟ್ಟು ಹೋದ ಮೇಲೆ ಅನಾಥ ಮಕ್ಕಳಂತೆ ರೋಧಿಸಿ ಎಲೆಯುದಿರಿ ಕಳೆಗುಂದಿದ್ದನ್ನ ಕಣ್ಣಾರೆ ನಾನೇ ನೋಡಿದ್ದೇನೆ.

ಅವರು ಗೊರೆಬಾಳದಲ್ಲಿ ಇರುವಷ್ಟು ದಿನ ಸುತ್ತಲೂ ಇರುತ್ತಿದ್ದ ಆರ್.ಎಂ.ಪಿ ಡಾಕ್ಟರುಗಳು ಪುಜೂಲು ಅಡ್ಡಾಡುತ್ತಿದ್ದರು.
ಆದರೆ ಅವರು ಅಲ್ಲಿಂದ ಮುದಗಲ್ಲಿಗೆ ಹೊರಟ ದಿನ ನಾವು ಸೇರಿದಂತೆ ಶಾಲೆಯ ಮಕ್ಕಳು, ಗರ್ಬಿಣಿ ಸ್ತ್ರೀಯರು, ಸಣ್ಣಪುಟ್ಟ ಖಾಯಿಲೆಯವರು, ಆಸ್ಪತ್ರೆಗೆ ಆತುಕೊಂಡು ದುಡಿಯುವಂತಹ ಆಶಾಕಾರ್ಯಕರ್ತೆಯರು ಮನಸಾರೆ ದುಃಖುಸಿದ್ದೆವು.
“ಪುರದ ಪುಣ್ಯಂ ಪುರುಷ ರೂಪಂದಿ ಪೋಗುತಿದೆ” ಎಂಬ ಕವಿತೆಯ ಸಾಲಿನಂತೆ ಆ ಊರಿನ ಪುಣ್ಯ ಆವತ್ತಿಗೆ ಮುಗಿಯಿತು ಎಂಬಂತೆ ಅವರು ಅಲ್ಲಿಂದ ಹೊರಟು ಹೋಗಿದ್ದರು.
ಆದರೆ ಅವರು ಮಾಡುತ್ತಿದ್ದ ಕೆಲಸ,ಆ ಕೆಲಸದಲ್ಲಿ ಅವರು ತೋರಿಸುತ್ತಿದ್ದ ಶ್ರದ್ಧೆ ನನ್ನನ್ನ ಮತ್ತು ನನ್ನಂತಹ ಹತ್ತಾರು ಅಶಿಸ್ತಿನ ಯುವಕರನ್ನ ಆತ್ಮಸಾಕ್ಷಿಯಾಗಿ ಕಾಡಿದ್ದಿದೆ.
ನಾನು ಅಲ್ಲಿದ್ದ ಕಾಲಕ್ಕೆ ಒಂದು ಕಾರ್ಯಕ್ರಮದಲ್ಲಿ ಆ ಊರಿನಲ್ಲಿ ಸೇವೆ ಸಲ್ಲಿಸಿ ಬಿಟ್ಟು ಹೋದವರನ್ನು ಕರೆದು ಸನ್ಮಾನಿಸುವ ಕೆಲಸ ಮಾಡಿದೆ ಆ ಕಾರ್ಯ ನನಗೆ ಆತ್ಮ ತೃಪ್ತಿಯನ್ನು ತಂದುಕೊಟ್ಟಿತು.
ಆ ಸಂದರ್ಭದಲ್ಲಿ ರಾಜಾಸಾಬ ಅವರನ್ನೂ ಕರೆಸಿದ್ದೆವು.
“ಹತ್ತು ಕಡೆ ಕೆಲಸ ಮಾಡೀನಿ ಎಲ್ಲಿಯೂ ಅಲ್ಲಾ ಅನಿಸಿಗೆಂಡಿಲ್ಲ, ಆದರೆ ಯಾರೂ ಹಿಂಗಾ ಕರದು ಸನ್ಮಾನ ಮಾಡಿಲ್ರೀ ಮಾಸ್ಟ್ರೆ ನೀವು ವಜ್ಜಿ ಮಾಡಿದ್ರಿ” ಅಂತ ಅಲವತ್ತುಕೊಂಡಿದ್ದರು.
ಆಮೇಲೆ ಭಾಷಣ ಮಾಡುತ್ತ ಆ ಊರಿನ ಕುರಿತು, ಶಾಲೆ ಕುರಿತು, ಶಾಲಾ ಮಕ್ಕಳ ಭವ್ಯ ಬವಿಷ್ಯತ್ತಿನ ಕುರಿತು ಆಶಾದಾಯಕ ಮಾತುಗಳನ್ನ ಆಡಿದ್ದರು.
ಯಾವ ಪ್ರತಿಫಲವನ್ನು ಬಯಸದೆ ಮಾಡುವ ನಿಷ್ಕಾಮ ಕರ್ಮದ ಮಹತ್ವವನ್ನು ಮತ್ತು ಹಾಗೆ ಸೇವೆ ಮಾಡಿದಾಗ ಸಿಗುವ ಆತ್ಮ ಸಂತೋಷದ ಕುರಿತು ಹಲವು ಮಾತುಗಳನ್ನ ನೆನಪಿನಲ್ಲಿ ಅದ್ದಿ ಹಂಚಿಕೊಂಡಿದ್ದರು.
ಅಲ್ಲಿಂದ ಮುದುಗಲ್ಲಿಗೆ ಹೋಗಿ ಅಲ್ಲೊಂದು ಮೂರು-ನಾಕು ವರ್ಷ ಅಂತಹದೆ ಸೇವೆ ಸಲ್ಲಿಸಿ ನಿವೃತ್ತಿಯಾದರು.

ಅವರು ನಮ್ಮನ್ನ ಅಗಲುವ ಕೊನೆ ದಿನಗಳಲ್ಲಿ ನಾನು ಒಂದು ಸಲ ಅವರ ಮನೆಗೆ ಹೋಗಿ ಅಚಾನಕ್ಕಾಗಿ ಬೇಟಿಯಾಗಿ ಬಂದಿದ್ದೆ.
ಮಲಗಿದವರು ದಿಂಬಿಗೆ ಆಸರಾಗಿ ಎದ್ದು ಕುಳಿತು ಮಗನ ಜೊತೆ ಮಾತಾಡಿದಷ್ಟೆ ಪ್ರೀತಿಯಿಂದ ಮಾತಾಡಿದ್ದರು.
ಮನೆ,ಹೆಂಡತಿ, ಮಕ್ಕಳ ಕುರಿತು ವಿಚಾರಿಸಿದರು.
ನಾ ಬರೆದ ಪುಸ್ತಕ,ಸಾಹಿತ್ಯ ಲೋಕಾಭಿರಾಮದ ಮಾತಿನ ನಂತರ ತಮ್ಮ ಎದೆಯಾಳದ ನೋವುಗಳನ್ನ ಕಣ್ಣ ಕೊನೆಯಲ್ಲಿ ನೀರು ತುಂಬಿಕೊಂಡು ಹಂಚಿಕೊಂಡರು.
ಮಾತಿಗೊಮ್ಮೆ ದಯಾಮಯನಾದ ‘ಅಲ್ಲಾಹ್’ ನ ನಾಮ ಅವರ ಬಾಯಿಂದ ಬರುತ್ತಿತ್ತು.
ಅವರನ್ನ ಕುಟುಂಬ ಕಲಹ ಹಣ್ಣು ಮಾಡಿತ್ತು.ಹೆಣ್ಣು ಮಕ್ಕಳನ್ನ ಚೂರು “ಸ್ಥಿತಿವಂತ” ಮನೆಗಳಿಗೆ ಕೊಡಲಿಲ್ಲ ಅವರ ಹೋರಾಟದ ಬದುಕು ಯಾವತ್ತಿಗೆ ಕೊನೆಯಾಗಿ ನೆಮ್ಮದಿಯಿಂದ ಮೂರು ಹೊತ್ತು ಉಂಡಾರು ಅಂತ ಹಲುಬುತ್ತಿದ್ದರು.
ಹುಟ್ಟಿದ ಊರು,ತಮ್ಮ,ಹೊಲ, ಮಂದಿ-ಮಕ್ಕಳು ಅಂದರೆ ಬಿದ್ದು ಸಾಯುತ್ತಿದ್ದ ಅವರಿಗೆ ಮುಂದೆ ಅವರ ನಿಜರೂಪಗಳು ಬಯಲಾದಂತೆ ಗೊಂದಲಕ್ಕೆ ಒಳಗಾಗಿದ್ದರು.
ಈ ಬದುಕು ಅವರಿಗೆ ನಶ್ವರ ಎನಿಸತೊಡಗಿತ್ತು.
ಈ ಲೌಕಿಕ ಬದುಕಿನ ಬಂಧುಗಳಿಗೆ ಮಾಡಿದ ಸಹಾಯಗಳು “ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ” ಎಂಬ ಸತ್ಯ ಮನಸಿಗೆ ಕಹಿಯಾಗಿ ಇಳಿದಿತ್ತು.
ಮುಖ್ಯವಾಗಿ ನಾನು ಹೋದಮೇಲೆ ನನ್ನ ಮಕ್ಕಳು ನನ್ನ ತಮ್ಮನನ್ನ ನಾನು ಉಳಿಸಿದ ಹೊಲವನ್ನ ನನ್ನಂತೆ ನೋಡಿಕೊಂಡಾರು ಎಂಬುದು ಎದೆಯನ್ನು ಕೊರೆಯುತ್ತಿತ್ತು.
ತಮ್ಮನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಸಲುಹುತ್ತಿದ್ದವರು ಆತನಿಗೆ ಚೂರು ಏನೂ ಕಮ್ಮಿ ಆಗದಂತೆ ನೋಡಿಕೊಂಡರು.
ಆದರೆ ಕೊನೆಯ ದಿನಗಳ ನೋವು ಅವರ ಎದೆಯನ್ನ
ತಾಕಿದ್ದುಅವರ ಮಾತುಗಳನ್ನ ಆಲಿಸುತ್ತಿದ್ದ ನನಗೆ ವಿಧಿತವಾಗುತ್ತಿತ್ತು.
ಅದರಾಚೆ ಬದುಕಿಡೀ ಹೆಜ್ಜೆ ಹಾಕಿ ಆತನ ನೆರಳಂತೆ ಬದುಕಿದ ಹೆಂಡತಿ ಸಂತೆಯಲ್ಲಿ ಕಳೆದುಕೊಂಡ ಮಗುವಿನಂತೆ ಒಂಟಿಯಾಗಿಬಿಟ್ಟಾಳು ಅಂತಾನು ಅನಿಸಿರಬೇಕು!
“ಯಾವತ್ತಿಗೂ ಆಕೆಯನ್ನ ಹೊರಗೆ ಕರೆತರಲಿಲ್ಲ ಈ ಜಗತ್ತಿನ ಒಳ್ಳೆಯದು ಕೆಟ್ಟದನ್ನ ತೋರಿಸಲಿಲ್ಲ ನಾ ಹೋದ ಮೇಲೆ ಈ ಮನೆಯನ್ನ ಇಷ್ಟು ದೊಡ್ಡ ಬಳಗವನ್ನ ಆಕೆ ಹೆಂಗ್ ನಿಬಾಯಿಸ್ತಾಳೇನ್ರಿ ಮಾಸ್ಟ್ರೇ ?ಸಣ್ ಹುಡುಗರು ಇದ್ದಾಂಗ್ರಿ ನಿಮವ್ವ ”
ಅಂದಿದ್ರು.
ಕಣ್ಣಲಿ ನೀರಿನ ಚಕ್ರತೀರ್ಥವಿತ್ತು.

ಆ ಬೇಟಿಯಾಗಿ ಕೆಲವು ದಿನಗಳ ನಂತರ ಒಂದು ದಿನ ಆ ಹಿರಿಯ ಜೀವ ನಮ್ಮನ್ನ ಅಗಲಿ ಕಣ್ಣೀರು ಕಪಾಳಕ್ಕೆ ಇಳಿದು ಹಳೆಯ ನೆನಪುಗಳೆಲ್ಲ ಕಣ್ಣ ಮುಂದೆ ಬಂದು ಹೋದವು.

ನನ್ನ ನೆನಪು ಸರಿಯಿದ್ದರೆ ಈ ಎರಡು ಮೂರು ದಿನಗಳಿಗೆ ಅವರು ನಮ್ಮನ್ನಗಲಿ ಒಂದು ವರ್ಷವಾಯಿತು.
ಆ ಕಾರಣಕ್ಕೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನೆಪದಲ್ಲಿ ಇಷ್ಟೆಲ್ಲ ಬರೆದೆ.
ಬರೀ ಸ್ವಾರ್ಥಿಗಳು ,ಲಂಚಕೋರರು ಸರಕಾರಿ ಕೆಲಸವೆಂದರೆ ಐಷರಾಮಿ ಕೆಲಸ ಎಂದುಕೊಂಡ ಹರಾಮಿಗಳೇ ತುಂಬಿರುವ ಈ ಜಗದಲಿ ಆಸ್ಪತ್ರೆಯ ಕಂಪೌಂಡರ್ ನಂತಹ ಹುದ್ದೆಯನ್ನ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ವರೆಗೆ ನಿಭಾಯಿಸಿ ಸೈ ಅನಿಸಿಕೊಂಡು ನೊಂದವರಿಗೆ,ರೋಗಿಗಳಿಗೆ, ಗರ್ಭಿಣಿಯರಿಗೆ ತಂದೆಯಂತೆ,ಮಗನಂತೆ, ಸೇವಕನಂತೆ ಕೆಲಸ ಮಾಡಿದ ಕಾಯಕ ಯೋಗಿಯ ನೆನಪು ಹಲವರಿಗೆ ಸ್ಪೂರ್ತಿಯ ಸೆಲೆಯಾಗುವದರಲ್ಲಿ ಎರಡು ಮಾತಿಲ್ಲ..

ಅಗಲಿದ ಹಿರಿಯ ಜೀವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ..

ಮಿಸ್ ಯೂ ಅಬ್ಬಾ ಜಾನ್..

ಶರಣಬಸವ ಕೆ. ಗುಡದಿನ್ನಿ
ಮೊ:8217337933