ಬಸವ ದರ್ಶನ ಮಾಲೆ ೧೨ : ತಮ್ಮಿಚ್ಚೆಯಂತೆ ಇತರರು ನಡೆಯಬೇಕು ಎಂದು ಬಯಸುವ ಮನುಷ್ಯ ವರ್ತನೆ – ಮುಕ್ಕಣ್ಣ ಕರಿಗಾರ

ತಮ್ಮಿಚ್ಚೆಯಂತೆ ಇತರರು ನಡೆಯಬೇಕು ಎಂದು ಬಯಸುವ ಮನುಷ್ಯ ವರ್ತನೆ

ಲೇಖಕರು: ಮುಕ್ಕಣ್ಣ ಕರಿಗಾರ

ತನ್ನಿಚ್ಚೆಯ ನುಡಿದರೆ ನಚ್ಚುವುದೀ ಮನವು :
ಇದಿರಿಚ್ಚೆಯ ನುಡಿದರೆ ಮೆಚ್ಚದೀ ಮನವು
ಕೂಡಲ ಸಂಗನ ಶರಣರ
ನಚ್ಚದ ಮನವ ಕಿಚ್ಚಿನೊಳಗಿಕ್ಕುವೆ

ಬಸವಣ್ಣನವರು ಈ ವಚನದಲ್ಲಿ ತಮ್ಮಿಚ್ಚೆಯಂತೆ ಇತರರು ಮಾತನಾಡಬೇಕು ಎಂದು ಅಪೇಕ್ಷಿಸುವ ಲೋಕಜನರರೂಢಿಯನ್ನು ವಿವರಿಸಿದ್ದಾರೆ.ಜನರಿಗೆ ತಮ್ಮ ಇಚ್ಚೆಯನ್ನರಿತು ಇತರರು ವ್ಯವಹರಿಸಿದರೆ ಸಂತೋಷವಾಗುತ್ತದೆ.ತಾವು ಬಯಸಿದಂತೆ ಇತರರು ವರ್ತಿಸಬೇಕು ಎಂದು ನಿರೀಕ್ಷಿಸುವ ಜನರು ತಮ ಇಚ್ಚೆಗೆ ವಿರುದ್ಧವಾಗಿ ವರ್ತಿಸುವವರನ್ನು ಸಹಿಸುವುದಿಲ್ಲ.ಶಿವಭಕ್ತರು,ಶರಣರು ತಮ್ಮ ಇಚ್ಚೆಯಂತೆ ನುಡಿವರು,ತಮ್ಮ ಇಚ್ಚೆಯಂತೆ ನಡೆವರಲ್ಲದೆ ಲೋಕದ ಇಚ್ಚೆಯಂತೆ ನುಡಿಯರು,ನಡೆಯರು.ಅಂತಹ ಧೀರಮತಿಗಳು ಸ್ವತಂತ್ರ ಪಥಿಗಳು ಆದ ಸತ್ಪುರುಷರನ್ನು ಲೋಕಜನರು ಆದರಿಸರು,ಅನುಸರಿಸರು ಎನ್ನುತ್ತಾರೆ ಬಸವಣ್ಣನವರು.

ಅಧಿಕಾರ,ಹಣ,ಅಂತಸ್ತುಗಳುಳ್ಳವರು ಇತರರು ತಮ್ಮ ಇಚ್ಚೆಯಂತೆ ನುಡಿಯಬೇಕು,ನಡೆಯಬೇಕು ಎಂದು ನಿರೀಕ್ಷಿಸುತ್ತಾರೆ.ತಮಗೆ ಎದುರು ಆಡುವವರನ್ನು,ತಮಗೆ ಪ್ರತಿ ಉತ್ತರ ನೀಡುವವರನ್ನು ಸಹಿಸಲಾರರು.ಮನುಷ್ಯರ ಸ್ವಭಾವವೇ ಹಾಗೆ.ಎಲ್ಲವೂ ನನ್ನಿಚ್ಚೆಯಂತೆ ನಡೆಯಬೇಕು ಎಂದು ಅಪೇಕ್ಷಿಸುವ ಮನಸ್ಸು ತನ್ನಿಚ್ಚೆಗೆ ವಿರುದ್ಧವಾಗಿ ವರ್ತಿಸುವವರನ್ನು ಸಹಿಸದು.ಕೂಡಲ ಸಂಗನ ಶರಣರು ಅಂದರೆ ಶಿವಭಕ್ತರು,ಶಿವಯೋಗಿಗಳು ಶಿವನನ್ನು ಮೆಚ್ಚಿಸಬಯಸುತ್ತಾರಲ್ಲದೆ ಜನರನ್ನು ಮೆಚ್ಚಿಸಬಯಸುವುದಿಲ್ಲ; ಮಹಾದೇವನನ್ನು ಮೆಚ್ಚಿಸಬಯಸುವ ಶರಣರು ಮಂದಿಯನ್ನು ಮೆಚ್ಚಿಸಬಯಸುವುದಿಲ್ಲ.ಶರಣರ‌ ಪಥ ಶಿವಭಕ್ತರಿಗೆ,ಲೋಕಜೀವರುಗಳಿಗೆ ಆದರ್ಶವಾಗಬೇಕು.ಶರಣರ ಶಿವಪಥವನ್ನು ಒಪ್ಪದ ಮನಸ್ಸನ್ನು ಸುಡಬೇಕು ಎನ್ನುತ್ತಾರೆ ಬಸವಣ್ಣನವರು.’ ಕೂಡಲ ಸಂಗನ ಶರಣರ ನಚ್ಚದ ಮನವ ಕಿಚ್ಚಿನೊಳಗಿಕ್ಕುವೆ’ ಎನ್ನುವ ಬಸವಣ್ಣನವರ ಮಾತಿನಲ್ಲಿ ‘ ವಿಷಯಾಸಕ್ತ ಮನಸ್ಸನ್ನು ಸುಡಬೇಕು,ಪಶುಪತಿಯತ್ತ ಲಕ್ಷ್ಯ ನೆಟ್ಟ ಮನಸ್ಸನ್ನು ಬೆಳಸಬೇಕು ಅಂದರೆ ವಿಷಯಾಸಕ್ತ ಮನಸ್ಸನ್ನು ಪಶುಪತಿಯ ಪಥದತ್ತ ಪರಿವರ್ತಿಸಬೇಕು’ ಎನ್ನುವ ಭಾವ ಅಡಗಿದೆ. ಮನಸ್ಸನ್ನು ಸುಡುವುದು ಎಂದರೆ ಮನಸ್ಸಿನ ಚಂಚಲತೆ,ಕಾಪಟ್ಯ ಮೊದಲಾದ ಅವಗುಣಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸಿಕೊಳ್ಳುವುದು.

ಸತ್ಯವು ಮಹಾನ್ ತತ್ತ್ವ ಮತ್ತು ಆದರ್ಶ.ಮಹಾತ್ಮರಾಗಬೇಕೆನ್ನುವವರು,ಯಶಸ್ವಿಗಳಾಗಬೇಕು ಎನ್ನುವವರು ಸತ್ಯನಿಷ್ಠರಾಗಿರಬೇಕು.ಸತ್ಯವು ಅಪ್ರಿಯವಾಗಿರುತ್ತದೆ.ಹಾಗೆಂದು ಸತ್ಯಪಥದಿಂದ ವಿಮುಖರಾಗಬಾರದು.ಆಧ್ಯಾತ್ಮಿಕ ಸಾಧನೆಯ ಪಥದಲ್ಲಿ ಮುಂದುವರೆಯಬೇಕಾದರೆ ಸತ್ಯನಿಷ್ಠರಾಗಿರಬೇಕು.ಶಿವನು ಸತ್ಯಸ್ವರೂಪನಾಗಿರುವುದರಿಂದ ಶಿವಭಕ್ತರು,ಶಿವಾನುಗ್ರಹ ಬಯಸುವವರು ಸತ್ಯವಂತರಾಗಿರಬೇಕು.ಸತ್ಯನಿಷ್ಠರಾಗಿರುವುದೆಂದರೆ ವಾಸ್ತವವನ್ನು ಒಪ್ಪಿಕೊಳ್ಳುವುದು,ಆತ್ಮಾವಲೋಕನ ಮಾಡಿಕೊಳ್ಳುವುದು,ಆತ್ಮಸ್ತುತಿಯಿಂದ ವಿಮುಖರಾಗಿರುವುದು.ಇತರರು ನಮ್ಮ ಬಗ್ಗೆ ಏನು ಆಡುತ್ತಾರೆ ಎನ್ನುವುದರ ಬಗ್ಗೆ ನಾವು ಪ್ರಾಮಾಣಿಕರಾಗಿರಬೇಕು.ನಮ್ಮ ಬಗ್ಗೆ ಬರೀ ಒಳ್ಳೆಯದನ್ನೇ ಆಡಬೇಕು,ಬರೀ ಹೊಗಳಬೇಕು ಎಂದು ನಿರೀಕ್ಷಿಸಬಾರದು.ನಮ್ಮಲ್ಲಿ ಯಾರೂ ಪರಿಪೂರ್ಣರಿಲ್ಲ.ನಮ್ಮ ಬೆನ್ನು ನಮಗೆ ಕಾಣಿಸದು.ನಮ್ಮ ದೋಷಗಳು ನಮಗೆ ಗೊತ್ತಾಗುವುದಿಲ್ಲ.ಯಾರಾದರೂ ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದಾಗ ನಾವು ಮುಖ ಸಿಂಡರಿಸದೆ ಮುಕ್ತವಾಗಿ ಒಪ್ಪಿಕೊಳ್ಳಬೇಕು,ನಮ್ಮ ದೋಷ- ದೌರ್ಬಲ್ಯಗಳನ್ನು ತಿದ್ದಿಕೊಳ್ಳಬೇಕು.ತಮ್ಮ‌ಇಚ್ಚೆಯಂತೆ ಇತರರು ನುಡಿಯಬೇಕು ಎಂದು ನಿರೀಕ್ಷಿಸುವುದು ಸತ್ಯಪಥವನ್ನು ನಿರಾಕರಿಸಿದಂತೆ.ಸತ್ಯವನ್ನು ಒಲ್ಲದವರು ಶಿವನನ್ನು ಹೇಗೆ ಒಲಿಸಬಲ್ಲರು?ತಮ್ಮ ಅವಗುಣವನ್ನು ತಿದ್ದಿಕೊಳ್ಳದವರು ಅಭವಶಿವನ ಅನುಗ್ರಹಕ್ಕೆ ಹೇಗೆ ಪಾತ್ರರಾಗುತ್ತಾರೆ? ಆದ್ದರಿಂದ ಶಿವಾನುಗ್ರಹಕ್ಕೆ ಪಾತ್ರರಾಗಬೇಕೆನ್ನುವವರು‌ ಪ್ರಾಮಾಣಿಕರಾಗಿರಬೇಕು,ಅವರ ನಡತೆಯು ಪಾರದರ್ಶಕವಾಗಿರಬೇಕು.

ಮುಕ್ಕಣ್ಣ ಕರಿಗಾರ
  • 07.01.2022