ಬಸವ ದರ್ಶನ ಮಾಲೆ ೧೧ : ಪರಶಿವನೊಬ್ಬನೇ ನಂಬಬೇಕಾದ ನಿಜಬಂಧು – ಮುಕ್ಕಣ್ಣ ಕರಿಗಾರ

ಪರಶಿವನೊಬ್ಬನೇ ನಂಬಬೇಕಾದ ನಿಜಬಂಧು

*ಮುಕ್ಕಣ್ಣ ಕರಿಗಾರ

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ ;
ಚಂದ್ರ ಕುಂದೆ ಕುಂದುವುದಯ್ಯಾ.
ಚಂದ್ರಂಗೆ ರಾಹುವಡ್ಡ ಬಂದಲ್ಲಿಯಂಬುಧಿ ಬೊಬ್ಬಿಟ್ಟಿತ್ತೆ?
ಅಂಬುಧಿಯ ಮುನಿಯಾಪೋಷಣವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ ?
ಆರಿಗಾರೂ ಇಲ್ಲ : ಕೆಟ್ಟವಂಗೆ ಕೆಳೆಯಿಲ್ಲಾ !
ಜಗದ ನಂಟ ನೀನೇ ಅಯ್ಯಾ,ಕೂಡಲ ಸಂಗಮದೇವಾ.

ಬಸವಣ್ಣನವರು ಈ ವಚನದಲ್ಲಿ ಶಾಶ್ವತವಲ್ಲದ,ವ್ಯವಹಾರಿಕವಾದ ಮನುಷ್ಯ ಸಂಬಂಧಗಳ ಬಗ್ಗೆ ಸುಂದರವಾದ ದೃಷ್ಟಾಂತಗಳ ಮೂಲಕ ವಿವರಿಸಿ ಪರಮಾತ್ಮನಾದ ಶಿವನೊಬ್ಬನೇ ನಂಬಬೇಕಾದ ,ನೆಚ್ಚಬೇಕಾದ ನಮ್ಮ ಹಿತವನು,ನಮ್ಮ ಶ್ರೇಯೋಕಾಂಕ್ಷಿಯು ಎನ್ನುವುದನ್ನು ಪ್ರತಿಪಾದಿಸಿದ್ದಾರೆ.ಸಮುದ್ರವು ಶುಕ್ಲಪಕ್ಷದಲ್ಲಿ ಚಂದ್ರನ ಬೆಳದಿಂಗಳು ವಿಕಸಿಸಿದಂತೆ ತನ್ನ ತೆರೆಗಳ ಏರಿಳಿತಗಳ ಆರ್ಭಟವನ್ನು ಹೆಚ್ಚಿಸುತ್ತದೆ.ಹುಣ್ಣಿಮೆಯ ರಾತ್ರಿಯ ಸಮಯದಲ್ಲಂತೂ ಸಮುದ್ರವು ಹುಚ್ಚೆದ್ದು ಕುಣಿಯುತ್ತದೆ.ಚಂದ್ರನ ಬೆಳದಿಂಗಳಿಗೆ ಆಕರ್ಷಿತವಾಗುವ ಸಮುದ್ರವು ಶುಕ್ಲಪಕ್ಷದಲ್ಲಿ ಜೋರಾಗಿ ಅಬ್ಬರಿಸಿದರೆ ಹುಣ್ಣಿಮೆಯ ಮರುದಿನದಿಂದ ಚಂದ್ರನ ಬೆಳದಿಂಗಳು ಕ್ಷೀಣಿಸಿದಂತೆ ದಿನದಿನಕ್ಕೆ ತನ್ನ ಆರ್ಭಟ ಕಡಿಮೆಮಾಡಿಕೊಳ್ಳುತ್ತದೆ.ಚಂದ್ರನ ವೃದ್ಧಿ ಕ್ಷಯಗಳಿಗನುಗುಣವಾಗಿ ತನ್ನ ಅಲೆಗಳ ಏರಿಳಿತ ವರ್ತನೆಯನ್ನು ಬದಲಾಯಿಸುತ್ತದೆ ಸಮುದ್ರ.ಆದರೆ ಚಂದ್ರನು ರಾಹುಗ್ರಸ್ತನಾಗೆ,ಗ್ರಹಣ ಪೀಡಿತನಾಗೆ ಚಂದ್ರನು ಸಂಕಟಕ್ಕೆ ಸಿಲುಕಿದ್ದಾನೆ ಅಯ್ಯೋ ಬಿಡಿಸ ಬನ್ನಿ ಎಂದು ಕೂಗಿ ಕರೆಯುತ್ತದೆಯೆ ಯಾರನ್ನಾದರೂ ? ಇಲ್ಲ.ಹಾಗೆಯೇ ಅಗಸ್ತ್ಯ ಋಷಿಗಳು ಸಮುದ್ರದ ಜಲವನ್ನೆಲ್ಲ ಆಪೋಷಣ ಮಾಡಿ,ಬರಿದು ಮಾಡಿದಾಗ ಚಂದ್ರನು ಸಮುದ್ರದ ನೆರವಿಗೆ ಬಂದನೆ ? ಬರಲಿಲ್ಲ ! ಹೀಗೆಯೇ ಮನುಷ್ಯ ಸಂಬಂಧಗಳು ಅರ್ಥಹೀನ.ಇಲ್ಲಿ ಯಾರಿಗೆ ಯಾರೂ ಇಲ್ಲ.ಕೆಟ್ಟಸ್ಥಿತಿಯೊಳಿರುವ ಮನುಷ್ಯನಿಗೆ ಗೆಳೆಯರೇ ಇರುವುದಿಲ್ಲ.ಆದ್ದರಿಂದ ಸ್ಥಿರವಲ್ಲದ ಮನುಷ್ಯ‌ ಸಂಬಂಧಗಳನ್ನು ನಂಬಿ ಕೆಡುವುದಕ್ಕಿಂತ ಹರನನ್ನೇ ನಂಬಿ ಉದ್ಧಾರವಾಗಬೇಕು‌ ಎನ್ನುತ್ತಾರೆ‌ ಬಸವಣ್ಣನವರು.

ಮನುಷ್ಯ ಸಂಬಂಧಗಳು ಸ್ವಾರ್ಥಲೇಪಿತ‌ ಸಂಬಂಧಗಳು.ಪ್ರತಿಫಲಾಪೇಕ್ಷೆಯ ಸಂಬಂಧಗಳು.’ ನೀ ನನಗಿದ್ದರೆ ನಾ ನಿನಗೆ’ ಎನ್ನುವ ಭಾವನೆಯು ಮನುಷ್ಯ ಸಂಬಂಧಗಳ ಉಗಮದ ಮೂಲ.ತಂದೆ-ತಾಯಿ,ಹೆಂಡತಿ- ಮಕ್ಕಳುಗಳು ಮತ್ತು ಕೆಲವೇ ಜನ ಆತ್ಮೀಯ ಸ್ನೇಹಿತರು,ಹಿತವರುಗಳ ಬಗ್ಗೆ ಈ ಮಾತಿಗೆ ವಿನಾಯತಿ ನೀಡಬಹುದಾದರೂ ಅಲ್ಲೂ ಕೂಡ ಪರಿಪೂರ್ಣ ನಿಸ್ವಾರ್ಥ ಮನೋಭಾವವನ್ನರಸಲಾಗದು ತಂದೆ- ತಾಯಿಗಳ ಹೊರತು.ತಂದೆ- ತಾಯಿಗಳು ಮಾತ್ರ ನಮ್ಮಿಂದ ಏನನ್ನೂ ಬಯಸದೆ ನಮಗೆ ಒಳಿತನ್ನೇ ಬಯಸುತ್ತಾರೆ.ಅಣ್ಣ ತಮ್ಮಂದಿರು ಮದುವೆಯಾಗುವವರೆಗೆ ಮಾತ್ರ ಆತ್ಮೀಯರಾಗಿರುತ್ತಾರೆ.ಮದುವೆಯಾಗಿ ಸಂಸಾರಹೊಂದೆ ಅವರವರ ಸಂಸಾರವೇ ಅವರಿಗೆ ಹಿರಿದಾಗುತ್ತದೆ,ಮನೆತನದ ಭಾವನೆ ನಗಣ್ಯವಾಗುತ್ತದೆ.ಹೆಂಡತಿಯು ಗಂಡನ ಆಸ್ತಿ,ಹಣ – ಅಧಿಕಾರಗಳಲ್ಲಿ ಆನಂದಿಸುತ್ತಾಳೆ.ಮಕ್ಕಳು ತಂದೆಯಿಂದ ಅವರ ಸುಖಜೀವನದ ಆಧಾರ ಬಯಸುತ್ತಾರೆ.ಸ್ನೇಹಿತರಲ್ಲಿ ಎಲ್ಲೋ ಒಬ್ಬಿಬ್ಬರು ಪ್ರಾಣಪ್ರಿಯರಾದ ಪ್ರಾಣಸ್ನೇಹಿತರು ಸಿಕ್ಕುತ್ತಾರಷ್ಟೆ.ಉಳಿದ ಸ್ನೇಹಿತರುಗಳೆಲ್ಲ ವ್ಯಾವಹಾರಿಕ ಭಾವನೆಯುಳ್ಳವರು.ಇನ್ನು ಬಂಧು,ಬಾಂಧವರೋ.ನಾವು ನೆಟ್ಟಗಿದ್ದಾಗ ಮಾತ್ರ ನಮ್ಮತ್ತ ಬರುತ್ತಾರೆ,ನಮ್ಮಿಂದ ಪ್ರಯೋಜನ ಇರುವವರೆಗೆ ನಮ್ಮವರು ಆಗಿರುತ್ತಾರೆ.ನಮಗೆ ಕೆಟ್ಟಸ್ಥಿತಿ ಪ್ರಾಪ್ತವಾದೊಡನೆ ಅಥವಾ ನಾವು ಯಾವುದಾದರೂ ತೊಂದರೆಗೆ ಸಿಲುಕೆ ನಮ್ಮವರು ಎಂದು ನಾವು ನಂಬಿರುವ ಯಾವ ಹಿತೈಷಿಗಳು,ಬಂಧುಮಿತ್ರರು ನಮ್ಮ ನೆರವಿಗಾಗುವುದಿಲ್ಲ.ಇಂತಹ ಹುಸಿಸಂಬಂಧಗಳನ್ನು ನಂಬಿ,ಬಳಲುವುದಕ್ಕಿಂತ ಪರಶಿವನನ್ನು ನಂಬಿ,ಉನ್ನತಿಯನ್ನು ಕಾಣಬಹುದು,ಆನಂದವನ್ನು ಅನುಭವಿಸಬಹುದು ಎನ್ನುವ ಬಸವಣ್ಣನವರು ಪರಮಾತ್ಮನೇ ಜಗದ ನಿಜವಾದ ಬಂಧು ಎನ್ನುತ್ತಾರೆ.

ಹಲವು ಪೌರಾಣಿಕ ಸಂಗತಿಗಳೊಂದಿಗೆ ಮನುಷ್ಯ ಸಂಬಂಧಗಳ ಕಪಟ ಮತ್ತು ಕೃತ್ರಿಮತೆಯನ್ನು ನಿರೂಪಿಸುವ ಬಸವಣ್ಣನವರು ಶಿವನೊಬ್ಬನೇ ಜಗದ ಬಂಧು ಎನ್ನುವ ಪರಮಸತ್ಯವನ್ನು ಸಾರಿದ್ದಾರೆ ಈ ವಚನದಲ್ಲಿ.ಚಂದ್ರನ ವೃದ್ಧಿ ಕ್ಷಯಗಳ ಹಿಂದೆ ಚಂದ್ರನಿಗೆ ಅವನ ಮಾವ ದಕ್ಷನು ಕೊಟ್ಟ ಶಾಪ ಮತ್ತು ಚಂದ್ರನು ಸೌರಾಷ್ಟ್ರದಲ್ಲಿ ಶಿವನನ್ನು ಪೂಜಿಸಿ ಶಾಪಮುಕ್ತನಾಗಿ ಶಿವನ ತಲೆಯನ್ನು ಅಲಂಕರಿಸಿದ ಎನ್ನುವ ಪೌರಾಣಿಕ ಪ್ರಸಂಗದಲ್ಲಿಯೂ ಶಿವನಲ್ಲದೆ ಚಂದ್ರನನ್ನು ಉದ್ಧರಿಸಲು ಯಾರೂ ಶಕ್ಯರಾಗಲಿಲ್ಲ ಶಿವನೊಬ್ಬನೇ ಆರ್ತರ ಬಂಧು,ದೀನಬಂಧು ಎನ್ನುವ ಸಂದೇಶ ಇದೆ.ಚಂದ್ರನಂತೆ ಇತರ ದೇವತೆಗಳೂ ದಕ್ಷನ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದರೂ ಅವರಾರೂ ಚಂದ್ರನ ನೆರವಿಗೆ ಬರಲಿಲ್ಲ ದಕ್ಷನಿಗೆ ಹೆದರಿ,ದಕ್ಷನು ಚಂದ್ರನಿಗೆ ಕುಷ್ಟರೋಗಿಯಾಗು ಎಂದು ಶಪಿಸಿದಾಗ.ಪುರಾಣದ ಕಥೆಯಂತೆ ದಕ್ಷನು ತನ್ನ ಇಪ್ಪತ್ತೇಳು ಜನಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಡುತ್ತಾನೆ.ಆದರೆ ಚಂದ್ರನು ರೋಹಿಣಿ ಒಬ್ಬಳಲ್ಲೇ ಅತಿಯಾದ ಆಸಕ್ತಿಯನ್ನು ಹೊಂದಿ ಸದಾ ಅವಳೊಂದಿಗೆ ಇರುತ್ತ ಇತರ ಇಪ್ಪತ್ತಾರು ಜನ ಹೆಂಡತಿಯರನ್ನು ಕಡೆಗಣಿಸುವನು.ದಕ್ಷಪುತ್ರಿಯರು ಈ ನೋವನ್ನು ತಂದೆ ದಕ್ಷನೆದುರು ತೋಡಿಕೊಳ್ಳುವರು.ಮೊದಮೊದಲು ಅಳಿಯನೆಂಬ ಪ್ರೀತಿಯಿಂದ ದಕ್ಷನು ಚಂದ್ರನನ್ನು ಎಚ್ಚರಿಸುವನು.ಆಗಲೂ ಚಂದ್ರ ಪರಿವರ್ತನೆ ಆಗದೆ ಇದ್ದಾಗ ‘ ಕುಷ್ಟರೋಗಿಯಾಗು’ ಎಂದು ಶಪಿಸುವನು.ಬ್ರಹ್ಮ,ವಿಷ್ಣು,ಇಂದ್ರಾದಿ ದೇವತೆಗಳು ಸಹ ದಕ್ಷನ ಶಾಪದಿಂದ ಚಂದ್ರನನ್ನು ರಕ್ಷಣೆ ಮಾಡಲು ಮುಂದೆ ಬರದೆ ಇದ್ದಾಗ ಚಂದ್ರನು ಸೌರಾಷ್ಟ್ರಕ್ಕೆ ಬಂದು ಅಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುವನು.ಶಿವನು ಚಂದ್ರನ ಭಕ್ತಿಗೆ ಒಲಿದು ಅವನನ್ನು ಉದ್ಧರಿಸಿ ತನ್ನ ತಲೆಯಲ್ಲಿ ಧರಿಸುವ ಅಭಯವಿತ್ತು,ವೃದ್ಧಿ ಕ್ಷಯಗಳುಳ್ಳವನಾಗು ಎಂದು ಹರಸಿದನು.ಚಂದ್ರನ ಮತ್ತೊಂದು ಹೆಸರು ಸೋಮ.ಸೋಮನು ಪ್ರತಿಷ್ಠಾಪಿಸಿ ಪೂಜಿಸಿದ ಲಿಂಗವಾದ್ದರಿಂದ ಸೌರಾಷ್ಟ್ರದ ಶಿವಲಿಂಗವು ಸೋಮೇಶ್ವರ ಜ್ಯೋತಿರ್ಲಿಂಗ ಎಂದು ಪ್ರಸಿದ್ಧಿಯಾಯಿತು.ಶಿವನೂ ಸಹ ದಕ್ಷನ ಅಳಿಯನೆ ! ದಕ್ಷನ ಕೊನೆಯ ಮಗಳು ಸತಿಯನ್ನು ಶಿವ ಮದುವೆ ಆಗಿರುತ್ತಾನೆ.ಮಾವನ ಅಳುಕಿಗಿಂತ ಭಕ್ತನ ಹಂಗೇ ದೊಡ್ಡದಾಗುತ್ತದೆ ಶಿವನಿಗೆ.ಮಾವನ ಕೋಪ,ಆಗ್ರಹಗಳಿಗೆ ತುತ್ತಾಗುವ ಪ್ರಸಂಗ ಬರುವುದನ್ನು ಲೆಕ್ಕಿಸದೆ ಶಿವನು ಚಂದ್ರನನ್ನು ಉದ್ಧರಿಸುತ್ತಾನೆ ಮಾತ್ರವಲ್ಲ ಶುಭಕರನೂ,ಮಂಗಳಕರನೂ ಆದ ತನ್ನ ತಲೆಯಲ್ಲಿಯೇ ಚಂದ್ರನನ್ನು ಧರಿಸಿ,ಸೋಮಶೇಖರ,ಚಂದ್ರಶೇಖರ ಎನ್ನುವ ಬಿರುದನ್ನು ಧರಿಸಿ ಚಂದ್ರನ ಭಕ್ತಿಯನ್ನು ಲೋಕಕ್ಕೆ ಸಾರುವನು.ಇದು ಶಿವನು ಭಕ್ತವತ್ಸಲನು,ಲೋಕೋದ್ಧಾರಕನು ಎನ್ನುವುದನ್ನು ಎತ್ತಿತೋರಿಸುತ್ತದೆ.

ಚಂದ್ರನ ಬೆಳದಿಂಗಳು ಸಮುದ್ರದ ಉಬ್ಬರವಿಳಿತಕ್ಕೆ ಸ್ಫೂರ್ತಿಯಾಯಿತು.ಆದರೂ ಚಂದ್ರನನ್ನು ರಾಹು ಹಿಡಿಯುವಾಗ ಸಮುದ್ರವು ಚಂದ್ರನ ನೆರವಿಗೆ ಬರಲಿಲ್ಲ.ತನ್ನಿಂದ ಸ್ಫೂರ್ತಿಗೊಂಡು ಕುಣಿವ ಸಮುದ್ರವನ್ನು ಕಂಡು ಆನಂದಿಸಿದರೂ ಅಗಸ್ತ್ಯ ಋಷಿಯು ಸಮುದ್ರವನ್ನು ಒಂದೇ ಗುಟುಕಿಗೆ ಕುಡಿದಾಗ ಚಂದ್ರನು ಸಮುದ್ರದ ರಕ್ಷಣೆಗೆ ಬರಲಿಲ್ಲ.ಪ್ರಕೃತಿಯ ಸಂಗತಿಗಳೇ ಹೀಗಿರಬೇಕಾದರೆ ರಕ್ತ- ಮಾಂಸಗಳ ಮುದ್ದೆಯಾದ ಮಾನವರು ಹೇಗಿರಬೇಡ ? ಸುಖ ಇದ್ದಾಗ ನಮ್ಮೊಂದಿಗೆ ಇರುವ ದುಃಖದ ದಿನಗಳಲ್ಲಿ ನಮ್ಮಿಂದ ದೂರ ಇರಬಯಸುವ ಮನುಷ್ಯ ಸಂಬಂಧಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ‌ ಪರಶಿವನೆ ಗತಿಮತಿ ಎಂದು ನಂಬಿ ನಡೆಯಬೇಕು ಎನ್ನುವ ಬಸವಣ್ಣನವರು ಶಿವ ಮತ್ತು ಜೀವರುಗಳ ನಡುವೆ ಅನಾದಿ ಕಾಲದಿಂದಲೂ ಸಂಬಂಧ ಇರುವುದರಿಂದ ಶಿವನನ್ನೇ ನಂಬಬೇಕು ಎನ್ನುತ್ತಾರೆ.ತಾನು ಹುಟ್ಟಿಸಿದ ಜೀವರುಗಳ ಹೊಣೆಯನ್ನು ಕೊನೆಗೆ ತಾನೇ ಹೊರಬೇಕಾದ ಅನಿವಾರ್ಯತೆಯು ಶಿವನಿಗೆ ಇರುವುದರಿಂದ ತುಂಬಿದ ಹೊಳೆಯ ನಡು ನೀರಲ್ಲಿ ಕೈಬಿಡುವ ನರರಿಗಿಂತ ಸದಾ ಕೈ ಹಿಡಿದು ಮುನ್ನಡೆಸುವ ಪರಶಿವನನ್ನೇ ಪೊರೆಯಲೆಂದು ಮೊರೆಯಬೇಕು ಎನ್ನುವ ಸಂದೇಶ ಈ ವಚನದಲ್ಲಿದೆ.

ಮುಕ್ಕಣ್ಣ ಕರಿಗಾರ