ಪರರ ಕೈಯಲ್ಲಿ ಮಾಡಿಸಲಾಗದು ದೇವರ ಪೂಜೆ
ಲೇಖಕರು: ಮುಕ್ಕಣ್ಣ ಕರಿಗಾರ
ತನ್ನಾಶ್ರಯದ ರತಿಸುಖವನು,ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮದೇವಾ ?
ಬಸವಣ್ಣನವರ ಈ ವಚನವು ಆಧುನಿಕ ಕಾಲದ ಆಪೂಜೆ,ಈ ಶಾಂತಿ,ಆಹೋಮ- ಈ ಹವನ,ಆಕಥೆ- ಈ ಪುರಾಣ ಎಂದು ಮನೆ ಮಂದಿರಗಳಲ್ಲಿ ಪೂಜಾರಿ,ಅರ್ಚಕರು,ಜ್ಯೋತಿಷಿಗಳ ಕೈಯಲ್ಲಿ ಪೂಜೆಮಾಡಿಸಿ ಸಂತೃಪ್ತಭಾವವನ್ನನುಭವಿಸುವವರ ದಡ್ಡತನಕ್ಕೆ ಬೀಸಿದ ಛಾಟಿ ಏಟು.ಧರ್ಮದ ಹೆಸರಿನಲ್ಲಿ ವಿವಿಧ ಬಗೆಯ ಪೂಜೆ,ಅರ್ಚನೆಗಳೆಂಬ ಶಾಸ್ತ್ರಗಳನ್ನು ರಚಿಸಿ ಜನರನ್ನು ವಂಚಿಸುವ ಪುರೋಹಿತಶಾಹಿಯನ್ನು ಮತ್ತು ಅವರ ಅರ್ಥಹೀನ,ಅತಿರಂಜನೆಯ ಮಾತುಗಳಿಗೆ ಮರಳಾಗಿ ಆ ಪೂಜೆ,ಈ ವ್ರತಾಚರಣೆಗಳನ್ನು ದೊಡ್ಡದಾಗಿ ಆಚರಿಸುವ ಜನರ ಹುಂಬುತನವನ್ನು ಖಂಡಿಸಿಲಾಗಿದೆ ಈ ವಚನದಲ್ಲಿ.ದೇವಸ್ಥಾನಗಳಲ್ಲಿ ಭಕ್ತರ ಹೆಸರುಗಳಲ್ಲಿ ದೇವರುಗಳಿಗೆ ವಿವಿಧ ಬಗೆಯ ಪೂಜೆ,ಸೇವೆಗಳನ್ನು ಮಾಡುತ್ತಾರೆ ಅರ್ಚಕರು.ಇಂತಹ ದಡ್ಡತನದ ಕೃತ್ಯಗಳನ್ನು ಬಸವಣ್ಣನವರು ಬಹುಕಟುವಾದ ಮಾತಿನಲ್ಲಿ ಖಂಡಿಸಿದ್ದಾರೆ.ತನ್ನ ಸ್ತ್ರೀಯಲ್ಲಿ ತಾನು ರತಿಸುಖವನ್ನನುಭವಿಸಬೇಕಲ್ಲದೆ ಅದನ್ನು ಬೇರೆಯವರ ಕೂಡ ಮಾಡಿಸಲಾಗದು.ತನ್ನ ಹೊಟ್ಟೆಗೆ ಹಸಿವೆ ಆದಾಗ ತಾನು ಉಣ್ಣಬೇಕಲ್ಲದೆ ಮತ್ತೊಬ್ಬರು ಉಂಡರೆ ತನ್ನ ಹೊಟ್ಟೆಯ ಹಸಿವು ಅಡಗದು.ಹಾಗೆಯೇ ಶಿವನಿಗೆ,ಲಿಂಗಕ್ಕೆ ಮಾಡುವ ಪೂಜೆಯನ್ನು ತಾನೇ ಮಾಡಬೇಕಲ್ಲದೆ ಬೇರೆಯವರಿಂದ ಮಾಡಿಸಲಾಗದು.ಉಪಚಾರಕ್ಕೆ ಶಿವಪೂಜೆ ಮಾಡುವವರಿಗೆ ಶಿವತತ್ತ್ವ,ಶಿವಪೂಜಾ ಮಹಿಮೆ- ಮಹತ್ತುಗಳು ಅರಿವು ಇರುವುದಿಲ್ಲ.
ತನ್ನಾಶ್ರಯದ ರತಿಸುಖವನ್ನು ಬೇರೆಯವರ ಕೂಡ ಮಾಡಿಸುವುದು ಎಂತಹ ನಿರ್ಲಜ್ಯ ಕಾರ್ಯವೋ ಹಾಗೆಯೇ ತನ್ನ ಪರವಾಗಿ ಪೂಜೆ,ಪ್ರಾರ್ಥನೆಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಸುವುದು ಕೂಡ ನಿಷ್ಪ್ರಯೋಜಕ.ತನ್ನ ಹೆಂಡತಿಯಲ್ಲಿ ಅಥವಾ ತನ್ನ ಪ್ರೇಯಸಿಯಲ್ಲಿ ತಾನು ಕಾಮಸುಖವನ್ನನುಭವಿಸಿದರೆ ಅದು ಪುರುಷಸಹಜ ವರ್ತನೆ,ಪುರುಷತ್ವದ ಲಕ್ಷಣ.ತನ್ನಸ್ತ್ರೀಯಳನ್ನು ಪರಪುರುಷರೊಡನೆ ಸುಖಿಸು ಎಂದು ಹೇಳುವವರು ಶಿಖಂಡಿಗಳು,ಪುರುಷತ್ವಹೀನರು.ನಿಜವಾದ ಗಂಡಸಾದವನು ಹೇಗೆ ತನ್ನ ಸ್ತ್ರೀಯರನ್ನು ಪರಪುರುಷರ ಬಳಿ ಕಳುಹಿಸಲಾರನೋ ಹಾಗೆಯೇ ನಿಜವಾದ ಭಕ್ತನಾದವನು ತನ್ನ ಪೂಜೆಯನ್ನು ತಾನೇ ಮಾಡಬೇಕಲ್ಲದೆ ಅವರಿವರ ಕೈಯಲ್ಲಿ ಮಾಡಿಸಲಾಗದು.ಶಾಸ್ತ್ರಿಗಳು,ಅರ್ಚಕರು,ಜ್ಯೋತಿಷಿಗಳ ಕೈಯಲ್ಲಿ ಆ ಪೂಜೆ,ಈ ಹವನ ಇಂಥ ಶಾಂತಿ ಮಾಡಿಸುವ ಜನರು ಬಸವಣ್ಣನವರ ಈ ಮೊನಚು ಮಾತನ್ನು ಅರ್ಥಮಾಡಿಕೊಳ್ಳಬೇಕು.ಬಸವಣ್ಣನವರ ಮಾತಿನ ತೀಕ್ಷ್ಣತೆಯ ಹಿಂದಿರುವ ಉದ್ದೇಶವನ್ನು ತಿಳಿದುಕೊಳ್ಳಬೇಕು.ಪುರುಷತ್ವ ಉಳ್ಳ ಯಾವನೂ ತನ್ನ ಸ್ತ್ರೀಯರನ್ನು ಪರಪುರುಷನ ಬಳಿ ಕಳುಹಿಸಲಾರ.ಹಾಗೆಯೇ ಭಕ್ತರಾದವರು ದೇವರ ಪೂಜೆ- ಸೇವೆಗಳನ್ನು ತಾವೇ ಮಾಡಬೇಕು.ಹಸಿವು ಆದಾಗ ತಾನು ಉಂಡರೆ ಹೊಟ್ಟೆ ತುಂಬುವುದಲ್ಲದೆ ತನ್ನ ಪರವಾಗಿ ಬೇರೆಯವರು ಊಟ ಮಾಡಿದರೆ ತನ್ನ ಹೊಟ್ಟೆ ತುಂಬದು.ಕಾಮ ಮತ್ತು ಹಸಿವೆಗಳ ದಾಹ ತಾನನುಭವಿಸಿದಾಗಲೇ ದಕ್ಕುವ ಸುಖ.ಹಾಗೆಯೇ ದೇವರ ಪೂಜೆಯ ಫಲ ಮತ್ತು ಆನಂದಗಳು ತಾನೇ ಅನುಭವಿಸಬೇಕಾದ ಸಂಗತಿಗಳು.ಹಣವಂತರು ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿಸಿ ಅರ್ಚಕರನ್ನು ನೇಮಿಸಿ,ಪೂಜೆಯ ಏರ್ಪಾಟು ಮಾಡುತ್ತಾರೆ.ಆ ಪೂಜಾಫಲವು ಅರ್ಚಕನಿಗಲ್ಲದೆ ಶ್ರೀಮಂತನಿಗೆ ಲಭಿಸುವುದಿಲ್ಲ.ಸಿರಿವಂತರು ಶಾಸ್ತ್ರಿಗಳು,ಅರ್ಚಕರುಗಳನ್ನು ಕರೆಯಿಸಿ ಬಗೆಬಗೆಯ ಪೂಜೆ- ಸೇವೆಗಳನ್ನು ಮಾಡಿಸುತ್ತಾರೆ.ಆ ಪೂಜೆ ಸೇವೆಗಳ ಫಲ ಅರ್ಚಕರ ಪಾಲಾಯಿತಲ್ಲದೆ ಶ್ರೀಮಂತನಿಗೆ ದೊರಕಲಿಲ್ಲ.
ದೇವರು,ಧರ್ಮಗಳನ್ನು ಗುತ್ತಿಗೆ ಹಿಡಿದ ವರ್ಗವು ಸಮಾಜದಲ್ಲಿ ಹೊಸಹೊಸ ಮೂಢನಂಬಿಕೆಗಳನ್ನು ಹರಡುತ್ತಿದೆ.ಪೂರ್ವನಿರ್ಧಾರಿತವಾದ ಮನುಷ್ಯ ಬದುಕಿನಲ್ಲಿ ಬಂದೊದಗುವ ಒಳಿತು ಕೆಡುಕು ಎಂಬ ಸಂಗತಿಗಳು ಸಹಜವಾಗಿ ಬರುತ್ತವೆ,ಹೋಗುತ್ತವೆ.ಬದುಕಿನ ಸಹಜ ಸಂಗತಿಗಳಿಗೆ ಶಾಪ- ಪಾಪದ ಅರ್ಥಕಲ್ಪಿಸಿ ಈ ಪೂಜೆ ಮಾಡಬೇಕು,ಇಂಥ ಶಾಂತಿ ಮಾಡಿಸಬೇಕು ಎನ್ನುತ್ತಾರೆ.ಆ ಗ್ರಹಕಾಟ,ಈ ಗ್ರಹಪೀಡೆ ಎಂದು ನವಗ್ರಹಶಾಂತಿ ಮಾಡಬೇಕು ಎನ್ನುತ್ತಾರೆ.ಕಟ್ಟಿದ ಹೊಸಮನೆಯು ಚೆನ್ನಾಗಿದ್ದರೂ ಆ ದೋಷ ಈ ದೋಷ ಎಂದು ವಾಸ್ತುಶಾಂತಿ ಮಾಡಿಸಬೇಕು ಎನ್ನುತ್ತಾರೆ.ಸಮಸ್ಯೆಯ ಸುಳಿಗೆ ಸಿಕ್ಕ ಜನರು ಸರಿತಪ್ಪುಗಳನ್ನು ವಿಚಾರಿಸುವಷ್ಟು ಸಹನೆ ಉಳಿಸಿಕೊಂಡಿರುವುದಿಲ್ಲ.’ಹೇಗಾದರೂ ಸರಿ,ಈ ಸಮಸ್ಯೆಯಿಂದ ಮುಕ್ತನಾದರೆ ಸಾಕು’ ಎಂದು ಜ್ಯೋತಿಷಿ,ಅರ್ಚಕ ಹೇಳಿದ ಮಾತುಗಳನ್ನು ನಿಜವೆಂದು ಭ್ರಮಿಸಿ ,ಅವರು ಕೇಳಿದಷ್ಟು ಹಣಕೊಟ್ಟು ಪೂಜೆ ಮಾಡಿಸುತ್ತಾರೆ.ಅರ್ಚಕರು ,ಜ್ಯೋತಿಷಿಗಳು ಬದುಕಲು ಕಂಡುಕೊಂಡ ಇಂತಹ ಅತಿಬುದ್ಧಿವಂತಿಕೆಯ ಶಾಸ್ತ್ರಗಳಿಂದ ಪೂಜೆಮಾಡಿಸಿದವರಿಗೆ ಯಾವ ಪ್ರಯೋಜನವೂ ಇಲ್ಲ.ಬುದ್ಧಿವಂತ ಜನರು ಕಂಡುಕೊಂಡ ಬದುಕುವ ಜಾಣ್ಮೆಯ ಕಲೆಗೆ ಮುಗ್ಧರು,ಅಮಾಯಕರು ಬಲಿಯಾಗುತ್ತಾರೆ.
ಬಸವಣ್ಣನವರು ಈ ವಚನದಲ್ಲಿ ಭಕ್ತ ಮತ್ತು ಭಗವಂತರ ನಡುವೆ ಮಧ್ಯಸ್ಥಗಾರರು ಇಲ್ಲವೆ ದಲ್ಲಾಳಿಗಳ ಅಗತ್ಯ ಇಲ್ಲ ,ಭಕ್ತನೇ ನೇರವಾಗಿ ಭಗವಂತನ ಬಳಿ ಸಾರಬೇಕು ಎನ್ನುವ ಸಂದೇಶ ಸಾರಿದ್ದಾರೆ.ಭಕ್ತ ಮತ್ತು ಭಗವಂತರ ನಡುವೆ ಸೃಷ್ಟಿಯಾಗಿರುವ ಪೂಜಾರಿ ಇಲ್ಲವೆ ಅರ್ಚಕ ವರ್ಗವು ಭಕ್ತ ಮತ್ತು ಭಗವಂತರ ನಡುವೆ ಅಡ್ಡಗೋಡೆಯಾಗಿದೆ.ಭಕ್ತರು ಪೂಜಾರಿಗಳನ್ನು ಅವಲಂಬಿಸದೆ ನೇರವಾಗಿ ಭಕ್ತನನ್ನು ಪೂಜಿಸಿ,ಧ್ಯಾನಿಸಬೇಕು.ದೇವಾಲಯ ವ್ಯವಸ್ಥೆಯಲ್ಲಿ ಭಕ್ತ ಮತ್ತು ಭಗವಂತರ ನಡುವೆ ಅರ್ಚಕರ ಏರ್ಪಾಟು ಇರುವುದರಿಂದ ನಿಜಭಕ್ತರು ದೇವಸ್ಥಾನಗಳ ಬಳಿಸಾರದೆ ತಾವಿದ್ದ ಎಡೆಗಳಲ್ಲೇ ದೇವರನ್ನು ಪೂಜಿಸಿ,ಧ್ಯಾನಿಸುವ ಮೂಲಕ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕು.ಕಾಮತೃಷೆ ಮತ್ತು ಹಸಿವುಗಳು ಹೇಗೆ ತನ್ನ ಸ್ವಯಂಅನುಭವವೇದ್ಯವೋ ಹಾಗೆಯೇ ಭಗವಂತನ ದರ್ಶನವೂ ಭಕ್ತನ ಖಾಸಗಿ ಅನುಭವ,ಅಂತರಂಗದ ಬೆಳಕು.ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ.ಭಕ್ತರು ತಮ್ಮ ಮನೆಗಳಲ್ಲಿ,ಏಕಾಂತಸ್ಥಾನಗಳಲ್ಲಿ ಕುಳಿತು ಪೂಜಿಸಿ,ಪ್ರಾರ್ಥಿಸಬೇಕು ಪರಮಾತ್ಮನನ್ನು.ಪರಮಾತ್ಮನು ಭಕ್ತರ ಆರ್ತ ಪ್ರಾರ್ಥನೆಗೆ ಓಗೊಡುವನಲ್ಲದೆ ಶಾಸ್ತ್ರಗಳ ಮಂತ್ರ,ಅಷ್ಟೋಪಚಾರ,ಷೋಡಷೋಪಚಾರ ಪೂಜೆಗಳಿಗೆ ಒಲಿಯುವುದಿಲ್ಲ.ಶಾಸ್ತ್ರವಲ್ಲ ಪರಮಾತ್ಮನ ಅನುಗ್ರಹದ ಸಾಧನ; ಭಾವತುಂಬಿದ ಭಕ್ತಿಯಿಂದ,ಪರಿಶುದ್ಧ ಭಗವತ್ ಪ್ರೇಮದಿಂದ ಪರಮಾತ್ಮನ ಕಾರುಣ್ಯವನ್ನುಣ್ಣಬಹುದು.ತನ್ನ ಪರವಾಗಿ ಪೂಜಾರಿ ಏಕೆ ತನ್ನ ತಂದೆ,ಅಣ್ಣ ಅಥವಾ ಹೆಂಡತಿ ಪೂಜೆ ಮಾಡಿದರೂ ಆ ಪೂಜೆಯ ಫಲ ಅವರಿಗೆ ಪ್ರಾಪ್ತವಾಗುವುದಲ್ಲದೆ ಪೂಜೆ ಮಾಡಿಸಿದವನಿಗೆ ದೊರಕದು.ಗಂಡನ ಪೂಜೆಯ ಫಲ ಹೆಂಡತಿಗೆ ದೊರಕದು; ಹೆಂಡತಿಯ ಪೂಜೆಯ ಫಲ ಗಂಡನಿಗೆ ಬರದು.ಪಿತ್ರಾರ್ಜಿತ ಆಸ್ತಿಯಂತೆ ಪೂಜೆಯ ಫಲವನ್ನು ಭಾಗಮಾಡಿಕೊಂಡು ಅನುಭವಿಸಲಾಗದು.ಯಾರಿಗೆ ಪರಮಾತ್ಮನ ಅನುಗ್ರಹಬೇಕೋ ಅವರೇ ಮಾಡಬೇಕು ಪರಮಾತ್ಮನ ಪೂಜೆ ಸೇವೆಯನ್ನು.ಸಂಬಂಧಗಳು ದೇಹಕ್ಕಲ್ಲದೆ ಆತ್ಮನಿಗೆ ಅಲ್ಲ.ಹಾಗಾಗಿ ನಮ್ಮ ಪರವಾಗಿ ನಮ್ಮ ಮನೆಯ ಯಾರೇ ಮಾಡಿದ ಪೂಜೆಯ ಫಲ ದಕ್ಕುವುದಿಲ್ಲ ನಮಗೆ.ನಮ್ಮ ಮನೆಯವರೇ ಮಾಡಿದ ದೇವರ ಪೂಜೆಯ ಫಲವು ನಮಗೆ ದೊರಕದು ಎಂದಾಗ ನಮ್ಮ ಪರವಾಗಿ ಶಾಸ್ತ್ರಿಗಳು,ಅರ್ಚಕರು ಮಾಡುವ ಪೂಜೆಯ ಫಲ ಸಿಗಬಹುದೆ ನಮಗೆ? ಮಂದಿಯ ಕೈಯಲ್ಲಿ ಪೂಜೆ ಮಾಡಿಸಿ ಧನ್ಯರಾದೆವು ಎಂದು ಭ್ರಮಿಸುವ ಪುಣ್ಯಾತ್ಮರುಗಳು ಅರ್ಥಮಾಡಿಕೊಳ್ಳಬೇಕು ಬಸವಣ್ಣನವರ ಈ ವಚನದ ಹಿಂದಿನ ತತ್ತ್ವ,ಉಪದೇಶವನ್ನು.

05.01.2022