ಪ್ರೇಕ್ಷಣೀಯ ಸ್ಥಳ : ಬುಕ್ಕಾಂಬುಧಿಯ ರಮಣೀಯ ಪರಿಸರದಲ್ಲಿ ಒಂದೆರಡು ತಾಸುಗಳು – ಮುಕ್ಕಣ್ಣ ಕರಿಗಾರ

ಬುಕ್ಕಾಂಬುಧಿಯ ರಮಣೀಯ ಪರಿಸರದಲ್ಲಿ ಒಂದೆರಡು ತಾಸುಗಳು

ಮುಕ್ಕಣ್ಣ ಕರಿಗಾರ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸಲ್ಲಿಕೆಯಾದ ಒಂದು ದೂರಿನ ಸ್ಥಳತನಿಖೆಗಾಗಿ ಇಂದು(04.01.2022) ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಗೆ ಭೇಟಿ ನೀಡಿದ್ದೆ.ಸ್ಥಳ ಪರಿಶೀಲನೆಯ ನಂತರ ಬುಕ್ಕಾಂಬುಧಿಯ ಐತಿಹಾಸಿಕ ಮಹತ್ವದ ಬಗ್ಗೆ ತಿಳಿದುಕೊಂಡು ಮರುಳಸಿದ್ಧರು ತಪಸ್ಸು ಮಾಡಿದ ಸ್ಥಳ ಮತ್ತು ಬುಕ್ಕಾಂಬುಧಿಗಳಿಗೆ ತೆರಳಿ ಒಂದೆಡೆ ಆಧ್ಯಾತ್ಮಿಕ ಅನುಭೂತಿಯನ್ನುಂಟುಮಾಡುವ ಮತ್ತೊಂದೆಡೆ ಆಳರಸರ ಪ್ರಜಾಕಲ್ಯಾಣ ಕಾರ್ಯದ ಸಾಕ್ಷಿಯಾಗಿ ಉಳಿದಿರುವ ದೊಡ್ಡಕೆರೆಯನ್ನು ನೋಡಿದೆ.

ಉಜ್ಜಯನಿ ಪೀಠದ ಮೂಲಗುರುಗಳಾದ ಮರುಳಸಿದ್ಧರು ಎತ್ತರದ ದಿನ್ನೆಯಾಕಾರದ ಕಿರುಬೆಟ್ಟದಲ್ಲಿ ತಪಸ್ಸು ಮಾಡಿದ್ದರಂತೆ.ಅವರ ಉತ್ತರಾಧಿಕಾರಿಗಳಾದ ಸಿದ್ಧಲಿಂಗ ಶಿವಾಚಾರ್ಯರು ಇಲ್ಲಿ ತಪೋನುಷ್ಠಾನ ಗೈದಿದ್ದರು.ಆ ಕುರುಹಿಗಾಗಿ ಗುಹೆಯಲ್ಲಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.ಪ್ರಶಾಂತ ಪರಿಸರ.ಆಧ್ಯಾತ್ಮಿಕ ಸಾಧನೆ ಮಾಡಬೇಕು ಎನ್ನುವವರಿಗೆ ಉತ್ತಮತಾಣ.

ಬುಕ್ಕಾಂಬುಧಿ ಗ್ರಾಮ ಪಂಚಾಯತಿಗೆ ಬುಕ್ಕರಾಯನ ಕೆರೆಯಿಂದಾಗಿ ಆ ಹೆಸರು ಬಂದಿದೆ.ವಿಜಯನಗರದ ಸ್ಥಾಪಕರಾದ ಹಕ್ಕ ಬುಕ್ಕ ( ಒಂದನೇ ಹರಿಹರ ಮತ್ತು ಬುಕ್ಕರಾಯ)ರ ಕಾಲದಲ್ಲಿ ಕಟ್ಟಿಸಿದ ದೊಡ್ಡಕೆರೆ.ಬುಕ್ಕರಾಯನ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಕೆರೆಯಾದ್ದರಿಂದ ಬುಕ್ಕರಾಯನ ಕೆರೆ ಎಂದು ಮತ್ತು ಸಮುದ್ರದಂತೆ ವಿಸ್ತಾರವಾದ್ದರಿಂದ ಬುಕ್ಕಾಂಬುಧಿ ಎಂದೂ ಕರೆಯುತ್ತಾರೆ.ಒಟ್ಟು ಕೆರೆಯ ಅಚ್ಚುಕಟ್ಟೆ ಪ್ರದೇಶದ ವಿಸ್ತಾರ 230.40 ಹೆಕ್ಟರ್ ಗಳಷ್ಟು.ಅಂದರೆ ಸುಮಾರು 568.34 ಎಕರೆಗಳಷ್ಟು ವಿಸ್ತಾರವಾದ ಕೆರೆ ಇದು.ಬುಕ್ಕಾಂಬುಧಿಯ ಕೆರೆಯ ನೀರು ಹರಿದು ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ( ಮಾರಿ ಕಣಿವೆ ಡ್ಯಾಂ)ಕ್ಕೆ ಸೇರುತ್ತದೆ.ಬುಕ್ಕಾಂಬುಧಿಯ ಕೆರೆಯನೀರು ಅಜ್ಜಂಪುರ ಗ್ರಾಮ( ಇಂದು ತಾಲೂಕಾ ಕೇಂದ್ರ) ಹಾಗೂ ಸುತ್ತಮುತ್ತಣ ಗ್ರಾಮಗಳ ವ್ಯವಸಾಯಕ್ಕೆ,ದನಕರುಗಳಿಗೆ ಉಪಯೋಗಿಸಲ್ಪಡುತ್ತದೆ.ಬುಕ್ಕಾಂಬುಧಿಯು ಹಿಂದೆ ತರೀಕೆರೆ ತಾಲೂಕಿನ ಭಾಗವಾಗಿದ್ದು ಈಗ ಹೊಸದಾಗಿ ಅಸ್ತಿತ್ವಕ್ಕೆ ಬಂದ ಅಜ್ಜಂಪುರ ತಾಲೂಕಿನ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಯಾಗಿದೆ.

ಬುಕ್ಕಾಂಬುಧಿಯ ದಂಡೆಯಲ್ಲಿ ಒಂದು ಮರದಡಿ ಸಪ್ತಮಾತೃಕೆಯರ ವಿಗ್ರಹಗಳಿವೆ.ಗಣಪತಿ,ಶಿವಲಿಂಗ ಹಾಗೂ ದೇವಿಯ ವಿಗ್ರಹವೂ ಇದೆ.ಮತ್ತೊಂದು ಪಾರ್ಶ್ವದಲ್ಲಿ ಬುಕ್ಕರಾಯನ ಪಟ್ಟಾಭಿಷೇಕದ ಕುರುಹಿಗೆಂಬಂತೆ ಆನೆಯ ಮುಂದೆ ನಿಂತ ಬುಕ್ಕರಾಯನ ಶಿಲ್ಪ ಕೆತ್ತಿದ್ದಾರೆ.ಬುಕ್ಕರಾಯ ಪಟ್ಟಕ್ಕೆ ಬಂದ ನೆನಪಿಗೆಂದು ಕಟ್ಟಿಸಿದ ಈ ಕೆರೆಯು ಬುಕ್ಕರಾಯನ ಜನಕಲ್ಯಾಣ ಬದ್ಧತೆಯ ಕುರುಹು.ಹಿಂದಿನ ಕಾಲದ ‘ ಕೆರೆಯಂ ಕಟ್ಟಿಸು,ಬಾವಿಯಂ ತೋಡಿಸು’ ಎನ್ನುವ ಜನಕಲ್ಯಾಣದ ಆಶಯಕ್ಕನುಗುಣವಾಗಿ ವಿಜಯನಗರ ಸ್ಥಾಪಕ ಅರಸ ಸಹೋದರರಲ್ಲೊಬ್ಬನಾದ ಬುಕ್ಕರಾಯನು ಈ ಕೆರೆಯನ್ನು ಕಟ್ಟಿಸಿ ಜನಮಾನಸದಲ್ಲಿ ಅಜರಾಮರವಾಗಿದ್ದಾನೆ.

ಬುಕ್ಕಾಂಬುಧಿಯು ನೀರು ಮದಗದ ಮೂಲಕ ಹರಿದು ಹೋಗುತ್ತಿರುವ ದೃಶ್ಯ ಮನಮೋಹಕವಾಗಿದೆ.ಮದಗದ ಮುಂಭಾಗದಲ್ಲಿ ಕೆರೆಯನೀರು ಹರಿಯುವ ಕಾಲುವೆಯ ದಂಡೆಯಲ್ಲಿ ಮದಗದಮ್ಮ ಎನ್ನುವ ದೇವಿಯ ಸನ್ನಿಧಿ ಇದೆ.ಇತ್ತೀಚಿನ ವರ್ಷಗಳಲ್ಲಿ ಅದನ್ನು ನವೀಕರಿಸಿದ್ದಾರೆ.ಪುರಾತನ ಹುಣಸೆ ಮರದಡಿ ನೆಲೆಗೊಂಡು ಕೆರೆ ಮತ್ತು ಮದಗವನ್ನು ರಕ್ಷಿಸುವ ದೇವಿಯು ಮದಗದಮ್ಮ ಎಂದು ಕರೆಯಿಸಿಕೊಂಡಿದ್ದಾಳೆ.ಜನರು ಅದರಲ್ಲೂ ಮಹಿಳೆಯರು ಸಂಸಾರದಲ್ಲುಂಟಾದ ಕಿರಿಕಿರಿ,ಮನಸ್ತಾಪಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕೆರೆಗೆ ಬಂದಾಗ ಮದಗದಮ್ಮ ಅವರನ್ನು ರಕ್ಷಿಸುತ್ತಾ,ಬುದ್ಧಿ ಹೇಳಿ ,ಭರವಸೆ ನೀಡಿ ಮರಳಿ ಮನೆಗೆ ಕಳಿಸುತ್ತಿದ್ದಳಂತೆ.ಆದ್ದರಿಂದ ಮದಗದಮ್ಮ ಎಂದು ಸ್ಥಳೀಯರು ಭಕ್ತಿಭಾವದಿಂದ ಪೂಜಿಸುತ್ತಾರೆ.ಹುಣಸೆಮರದ ಬುಡದಲ್ಲಿ ದೇವಿ ಇರುವುದು ವಿಶೇಷ.ಹುಣಸೆಮರದಲ್ಲಿಯೇ ಆಲದ ಮರ ಮತ್ತು ಬೇವಿನಮರಗಳು ಬೆಳೆದಿವೆ.ಮದಗಮ್ಮನಂತಹ ಜನಪದ ದೇವತೆಗಳು,ಗ್ರಾಮದೇವತೆಗಳು ಭಾರತೀಯ ಸಂಸ್ಕೃತಿಯನ್ನು ರೂಪಿಸಿದ ನೆಲಮೂಲದ ದೇವತೆಗಳು.

ಅಜ್ಜಂಪುರ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಗಣೇಶ,ಎಡಿ ಮಲ್ಲಿಕಾರ್ಜುನ,ಟಿ ಸಿ ಸಚಿನ್,ಪಿಡಿಒ ಸುರೇಶ,ಡಿಐಇಸಿ ಸುರೇಶ ಮತ್ತು ಎಸ್ ಎಲ್ ಎಂ ಡಬ್ಲುಎಮ್ ಸಂಯೋಜಕ ರುದ್ರೇಶ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಯವರು ನನ್ನೊಂದಿಗೆ ಇದ್ದರು.

04.01.2022