ಬಸವ ದರ್ಶನ ಮಾಲೆ ೦೯ : ಸಾರ್ವಜನಿಕ ಸೇವಕರು ಹೃದಯವಂತರಾಗಿರಬೇಕು – ಮುಕ್ಕಣ್ಣ ಕರಿಗಾರ

ಸಾರ್ವಜನಿಕ ಸೇವಕರು ಹೃದಯವಂತರಾಗಿರಬೇಕು

    *ಮುಕ್ಕಣ್ಣ ಕರಿಗಾರ

‘ಏನು ಬಂದಿರಿ,ಹದುಳವಿದ್ದಿರೆ?’ ಎಂದರೆ
ನಿಮ್ಮ ಮೈ ಸಿರಿ ಹಾರಿಹೋಹುದೆ ?
‘ ಕುಳ್ಳಿರೆಂ’ದರೆನೆಲ ಕುಳಿಹೋಹುದೆ ?
ಒಡನೆ ನುಡಿದರೆ ಶಿರ- ಹೊಟ್ಟೆಯೊಡೆವುದೆ ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮದೇವನು ?

ಬಸವಣ್ಣನವರು ಈ ವಚನದಲ್ಲಿ ಹೃದಯವಂತಿಕೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ.ಹಣ,ಅಧಿಕಾರ- ಅಂತಸ್ತುಗಳು ಒದಗಿ ಬಂದಾಗ ದುರಂಹಕಾರದಿಂದ ವರ್ತಿಸುವವರನ್ನು ಕೆಡೆ ನುಡಿದಿದ್ದಾರೆ.ಬಸವಣ್ಣನವರ ಈ ವಚನವು ನಮ್ಮ ಸಾರ್ವಜನಿಕ ಸೇವಕರಿಗೆ ಅದರಲ್ಲೂ ಸರಕಾರಿ ಅಧಿಕಾರಿಗಳಿಗೆ ವಿಶೇಷವಾಗಿ ಅನ್ವಯವಾಗುತ್ತದೆ.ಸರಕಾರಿ ಅಧಿಕಾರಿಗಳಾದೊಡನೆ ‘ ಸ್ವರ್ಗದಿಂದ ಧರೆಗಿಳಿದವರಂತೆ’ ಬೀಗುತ್ತ ತಮ್ಮ ಬಳಿ ಬಂದವರೊಡನೆ ಸರಿಯಾಗಿ ವರ್ತಿಸದೆ,ದುರಂಹಕಾರದಿಂದ ಬೀಗುವ ಸರಕಾರಿ ಅಧಿಕಾರಿಗಳು ಬಸವಣ್ಣನವರ ಈ ವಚನವನ್ನು ಓದಿ,ಅರ್ಥೈಸಿಕೊಳ್ಳಬೇಕು.ಬಿಜ್ಜಳನ ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿದ್ದೂ ‘ ಎನಗಿಂತ ಕಿರಿಯರಿಲ್ಲ’ ಎನ್ನುವ ವಿನೀತಭಾವವನ್ನು ಹೊಂದಿದ್ದ ಬಸವಣ್ಣನವರ ಮೇರುವ್ಯಕ್ತಿತ್ವ ಸಾರ್ವಕಾಲಿಕ ಆದರ್ಶ ಸಾರ್ವಜನಿಕ ಸೇವಕರಿಗೆ.ಅರಸೊತ್ತಿಗೆಯ ಆ ಕಾಲದಲ್ಲೇ ಬಸವಣ್ಣನವರು ವಿನಯಗುಣವನ್ನು ಸಾಮಾಜಿಕ ಮೌಲ್ಯ ಎಂದು ಪ್ರತಿಪಾದಿಸಿದ್ದರೆ ಪ್ರಜಾಪ್ರಭುತ್ವ ಭಾರತದ ಸಾರ್ವಜನಿಕ ಸೇವಕರುಗಳಾದ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ತಾವು ಋಣಿಯಾಗಿರಬೇಕಾದ ಜನತೆಯ ಎದುರು ಮಣಿಯದೆ ಇದ್ದರೂ ಚಿಂತೆಯಿಲ್ಲ,ಅವರನ್ನು ಧಣಿಗಳು ಎಂದು ಒಪ್ಪದೇ ಇದ್ದರೂ ಚಿಂತೆಯಿಲ್ಲ ಅವರೊಂದಿಗೆ ನಾಲ್ಕು ಸೌಜನ್ಯದ ಮಾತುಗಳನ್ನಾಡಬಾರದೆ?

ಮನುಷ್ಯರಿಗೆ ಹಣ,ಅಧಿಕಾರ- ಅಂತಸ್ತುಗಳು ಬಂದರೆ ಅವರ ವರ್ತನೆಯೇ ಬದಲಾಗುತ್ತದೆ.ತಾವು ವಿಶೇಷವ್ಯಕ್ತಿಗಳು,ಪುಣ್ಯಪುರುಷರು ಅದಕ್ಕೆಂದೇ ಈ ಉನ್ನತಿಕೆ ಪ್ರಾಪ್ತವಾಗಿದೆ ಎಂದು ಬೀಗುತ್ತಾ ಇತರರನ್ನು ಕಡೆಗಣಿಸುತ್ತಾರೆ.ಅಧಿಕಾರ ಮದೋನ್ಮತ್ತರಾಗಿ ತಮ್ಮ ಬಳಿ ಬಂದವರನ್ನು ಕೀಳಾಗಿ ಕಾಣುತ್ತಾರೆ.ಹಣ- ಅಧಿಕಾರವು ಶಾಶ್ವತವಲ್ಲ ಎನ್ನುವುದನ್ನು ಮರೆತು ದೇವೇಂದ್ರನಪಟ್ಟದಲ್ಲಿ ಕುಳಿತವರಂತೆ ನಟಿಸುತ್ತಾರೆ.ಅದು ಸಲ್ಲದು ಎನ್ನುವ ಬಸವಣ್ಣನವರು ಸುಶೀಲರಾಗಿರಬೇಕು,ಸೌಜನ್ಯಯುತ ನಡೆ ನುಡಿಗಳನ್ನು ಹೊಂದಿರಬೇಕು ಎಂದು ಉಪದೇಶಿಸಿದ್ದಾರೆ.ನಮ್ಮ ಬಳಿ ಯಾರಾದರೂ ಬಂದರೆ ‘ ಏನು ಕಾರಣ ಬಂದಿರಿ? ಚೆನ್ನಾಗಿದ್ದೀರಾ?’ ಎಂದು ಅವರೊಡನೆ ಮಾತನಾಡಿದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯೇನೂ ಬರುವುದಿಲ್ಲ. ಬಂದವರನ್ನು ‘ ಕುಳಿತುಕೊಳ್ಳಿ’ ಎಂದು ಹೇಳಿದರೆ ನೆಲವೇನೂ ಬಿರುಕುಬಿಟ್ಟು ಇಬ್ಭಾಗವಾಗುವುದಿಲ್ಲ.ನಮ್ಮೆದುರಿನ ಖುರ್ಚಿಯಲ್ಲಿ ಬಂದವರು ಕುಳಿತರೆ ಆಗಬಾರದ್ದೇನೂ ಆಗುವುದಿಲ್ಲ.ನಮ್ಮ ಬಳಿ ಬಂದವರನ್ನು ಅವರು ಬಂದ ಕ್ಷಣವೇ ಮಾತನಾಡಿಸಿ,ಬಂದ ಕಾರಣ ಕೇಳಿದರೆ ತಲೆಸಿಡಿದು ಹೋಗುವುದಿಲ್ಲ,ಹೊಟ್ಟೆ ಒಡೆದು ಹೋಗುವುದಿಲ್ಲ.ಬಳಿ ಬಂದವರಿಗೆ ನೆರವು ನೀಡುವುದು ಆಗದೆ ಇದ್ದರೂ ಅವರೊಡನೆ ಸೌಜನ್ಯದಿಂದ ವರ್ತಿಸಲಾಗದೆ? ಇಂತಹ ಸಂಸ್ಕಾರವಿಹೀನರನ್ನು ದಂಡಿಸದೆ ಬಿಡಲಾರನು ಶಿವನು ಎನ್ನುತ್ತಾರೆ ಬಸವಣ್ಣನವರು.

ನಮ್ಮ ಸರಕಾರಿ ಅಧಿಕಾರಿಗಳಲ್ಲಿ ಬಹಳಷ್ಟು ಜನರು ಇಂತಹ ‘ ವಿಪರೀತಮತಿ’ಗಳೆ! ಸಾರ್ವಜನಿಕರು ತಮ್ಮ ಕಛೇರಿಗಳಿಗೆ ಬಂದಾಗ ಅವರು ತಮ್ಮೆದುರು ಕೈಕಟ್ಟಿಕೊಂಡು ನಿಂತೇ ಮಾತನಾಡಬೇಕು ಎಂದು ಬಯಸುತ್ತಾರೆ.ತಮ್ಮ ಎದುರಿನ ಖುರ್ಚಿಗಳಲ್ಲಿ ಜನರು ಕುಳಿತುಕೊಳ್ಳುವುದು ತಮಗೆ ಮಾಡುವ ಅಪಮಾನ ಎಂದೇ ಭಾವಿಸುವ ಪುಣ್ಯಾತ್ಮರುಗಳೂ‌ ಇದ್ದಾರೆ ಸರಕಾರಿ ಅಧಿಕಾರಿಗಳಲ್ಲಿ.ಸರಕಾರಿ ಕೆಲಸಕ್ಕಾಗಿ ಬಳಿಬಂದವರೊಡನೆ ಪೊಗರಿನಿಂದ ವರ್ತಿಸುತ್ತ,ಅವರ‌ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡುತ್ತ ಉಪೇಕ್ಷಿಸುವ ಉದ್ಧಟವರ್ತನೆಯ ಅಧಿಕಾರಿಗಳು ಪ್ರಜಾಪ್ರಭುತ್ವ ಭಾರತದ ನಾಗರಿಕ ಸಮಾಜಕ್ಕೆ ಭೂಷಣರಲ್ಲ.ಜನಸಾಮಾನ್ಯರನ್ನು ಲಘುವಾಗಿ ಕಾಣುವ ಯಾವ ಅಧಿಕಾರಿಯೂ ದೊಡ್ಡವರಲ್ಲ.ದುರ್ದೈವವಶಾತ್ ನಮ್ಮ ಸಮಾಜ ಅಧಿಕಾರಿಗಳ ಉನ್ಮತ್ತವರ್ತನೆಯನ್ನು ಸಹಿಸಿಕೊಂಡಿರುವುದು ಮಾತ್ರವಲ್ಲ ಅವರನ್ನು ಬೆಂಬಲಿಸುತ್ತಿದೆ ಎನ್ನುವುದು ದುರಂತ.ಉತ್ತಮ ಸರಕಾರಿ ಅಧಿಕಾರಿಗಳನ್ನು,ಜನಪರ ಕಾಳಜಿ ಉಳ್ಳವರನ್ನು,ಸಚ್ಚಾರಿತ್ರ್ಯವಂತರನ್ನು ಬೆಂಬಲಿಸಿದರೆ ಪರವಾಯಿಲ್ಲ,ಅದಕ್ಕೊಂದು ಅರ್ಥವಿರುತ್ತದೆ.ಕೇವಲ ಸ್ಥಾನಬಲದಿಂದ ದೊಡ್ಡವರು ಎಂದು ಪರಿಗಣಿಸಿ ಸರಕಾರಿ ಅಧಿಕಾರಿಗಳ ಹುಂಬತನವನ್ನು,ಉದ್ಧಟತನವನ್ನು ಸಹಿಸಿಕೊಂಡಿರುವುದು ಸರಿಯಲ್ಲ.ಅಷ್ಟಕ್ಕೂ ಪ್ರಜೆಗಳೇನೂ ಬ್ರಿಟಿಷರ ಆಳ್ವಿಕೆಯಲ್ಲಿ ಇಲ್ಲ,ಸರಕಾರಿ ಅಧಿಕಾರಿಗಳು ಬ್ರಿಟಿಷರ ಪ್ರತಿನಿಧಿಗಳೂ ಅಲ್ಲ.’ ಭಾರತದ ಪ್ರಜೆಗಳಾದ ನಾವು’ ಎಂದೇ ಆರಂಭವಾಗುವ ಭಾರತದ ಸಂವಿಧಾನದ ಪೀಠಿಕೆಯ ಮಾತುಗಳಲ್ಲೇ ಭಾರತದ ಸಾರ್ವಭೌಮ ಅಧಿಕಾರವು ತಮ್ಮಲ್ಲಿಯೇ ಇದೆ ಘೋಷಿಸಿಕೊಂಡ ಜನಸಮುದಾಯದ ಪ್ರತಿನಿಧಿಗಳಾಗಿ ಸಾರ್ವಜನಿಕ ಸೇವಕರುಗಳಾದ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ನಯ ವಿನಯ ಸಂಪನ್ನರಾಗಿರಬೇಕು.ವಿನಯಸಂಪನ್ನರಲ್ಲದವರು ಸಾರ್ವಜನಿಕ ಸೇವಕರಾಗಲು ಅರ್ಹರಲ್ಲ.ಸಂಸ್ಕಾರವಿಹೀನರು ಉತ್ತಮ ಸ್ಥಾನ ಮಾನಗಳನ್ನು ಹೊಂದಲು ಯೋಗ್ಯರಲ್ಲ.

ಬಳಿಬಂದವರನ್ನು ಆದರಿಸಬೇಕು ಎನ್ನುವ ಬಸವಣ್ಣನವರ ಈ ವಚನದಲ್ಲಿ ಮಹತ್ವದ ಒಂದು ಸಂದೇಶ ಇದೆ.ಎಲ್ಲರ ಅಂತರಾತ್ಮದಲ್ಲಿಯೂ ಶಿವನಿದ್ದಾನೆ.ನಮ್ಮ ಬಳಿ ಬಂದವರಲ್ಲಿ ಶಿವನಿದ್ದಾನೆ ಎಂದು ತಿಳಿದು ಮಾತನಾಡಬೇಕು.ಶಿವನೇ ನಮ್ಮೆದುರು ಕುಳಿತಿದ್ದಾನೆ ಎಂದು ಶಿವನಿಗೆ ತೋರಿಸುವ ಗೌರವಾದರಗಳನ್ನು ನಮ್ಮೆದುರು ಕುಳಿತವರಿಗೆ ತೋರಿಸಬೇಕು.ಗುಡಿ ಗುಂಡಾರಗಳ ಮೂರ್ತಿ ವಿಗ್ರಹಗಳಲ್ಲಿ ಶಿವನನ್ನು ಕಾಣುವ ಬದಲು ನಮ್ಮೆದುರು ಕುಳಿತವರಲ್ಲಿಯೇ ಶಿವನಿದ್ದಾನೆ ಎಂದರಿತು ಅವರ ಕೆಲಸ ಕಾರ್ಯಗಳನ್ನು ಮನತುಂಬಿ ಮಾಡಿಕೊಡುವುದೇ ಶಿವಪೂಜೆ,ಶಿವಸೇವೆ.ಎಲ್ಲರಲ್ಲಿಯೂ ಶಿವನನ್ನು ಕಾಣುವ,ಎಲ್ಲದರಲ್ಲಿಯೂ ಶಿವನನ್ನು ಕಾಣುವ ಗುಣ ಉಳ್ಳವರನ್ನು ಶಿವನು ಹಿಡಿದೆತ್ತಿ ಉದ್ಧರಿಸುತ್ತಾನೆ ಎನ್ನುತ್ತಾರೆ ಬಸವಣ್ಣನವರು.ವಚನದ ಕೊನೆಯಲ್ಲಿ ‘ ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮದೇವನು? ‘ ಎಂದಿರುವುದು ವಿಚಾರಾರ್ಹ.ನಮಗೆ ಒದಗಿ ಬಂದಿರುವ ಹಣ,ಅಧಿಕಾರ- ಅಂತಸ್ತುಗಳು ಶಿವನ‌ ಕರುಣೆಯಿಂದಲೇ ಪ್ರಾಪ್ರವಾಗಿರುತ್ತವೆ.ಶಿವಾನುಗ್ರಹದಿಂದ ಪಡೆದ ಸಂಪತ್ತು- ಪದವಿಯನ್ನು ನಯ ವಿನಯ,ಭಕ್ತಿ- ಗೌರವದ ಸನ್ನಡತೆಯಿಂದ ಅನುಭವಿಸದಿದ್ದರೆ ಶಿವನು ಅಂತಹವರನ್ನು ‘ತನ್ನವರಲ್ಲ’ ಎಂದು ಬಗೆದು ದುರ್ಗತಿಗೆ ತಳ್ಳುತ್ತಾನೆ ಎನ್ನುವ ಭಾವ ಇಲ್ಲಿದೆ.ಕೊಡುವವನು ಶಿವನೆ,ಕಸಿದುಕೊಳ್ಳುವವನೂ ಶಿವನೆ.ನನ್ನದೇನಿದೆ ವಿಶೇಷ? ಶಿವಕೊಟ್ಟ ಸಂಪತ್ತನ್ನು ಸಮಾಜದ ಹಿತಕ್ಕೆ ಬಳಸುವೆ.ಶಿವ ಕೊಟ್ಟ ಅಧಿಕಾರವನ್ನು ಜನಸಮಸ್ತರ ಕಲ್ಯಾಣಕ್ಕಾಗಿ ಬಳಸುವೆ ಎನ್ನುವ ಶಿವವಿನಯಭಾವನೆಯಿಂದ ಸಾರ್ವಜನಿಕ ಸೇವೆ ಮಾಡುವವರನ್ನು ನನ್ನವರು ಎಂದು‌ ಒಪ್ಪಿ,ಅಪ್ಪುತ್ತಾನೆ‌ ಪರಶಿವನು ಎನ್ನುವ ಸೇವೆಯು ಸಾರ್ಥಕವಾಗುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಬಸವಣ್ಣನವರು.

ಮುಕ್ಕಣ್ಣ ಕರಿಗಾರ

04.01.2022