ಕ್ಷೇತ್ರ ಪರಿಚಯ : ಬಗ್ಗವಳ್ಳಿ ಯೋಗ ನರಸಿಂಹ – ಮುಕ್ಕಣ್ಣ‌ ಕರಿಗಾರ

ಬಗ್ಗವಳ್ಳಿ ಯೋಗ ನರಸಿಂಹ

ಮುಕ್ಕಣ್ಣ‌ ಕರಿಗಾರ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮವು ಯೋಗನರಸಿಂಹ ದೇವರ ಸನ್ನಿಧಾನದಿಂದ ಪ್ರಸಿದ್ಧಿಯಾಗಿದೆ.ಹೊಯ್ಸಳರ ಕಾಲದ ಈ ದೇವಸ್ಥಾನವು ಸುಂದರ ವಾಸ್ತುಶಿಲ್ಪದಿಂದ ಆಕರ್ಷಿಸುತ್ತದೆ.ಹೊಯ್ಸಳರ ದಂಡನಾಯಕರು ಯುದ್ಧಕ್ಕೆ ಹೊರಡುವ ಮುಂಚೆ ಯೋಗನರಸಿಂಹ ಸ್ವಾಮಿಯನ್ನು ಪೂಜಿಸುತ್ತಿದ್ದರಂತೆ.

ಯೋಗನರಸಿಂಹ ದೇವಸ್ಥಾನದ ಪ್ರಧಾನ ದೇವರು ಚೆನ್ನಕೇಶವ.ಚೆನ್ನಕೇಶವನ ಲೀಲಾವತಾರಗಳಲ್ಲಿ ಒಂದು ಎಂಬ ಕಲ್ಪನೆಯಲ್ಲಿ ಯೋಗನರಸಿಂಹನನ್ನು ಪ್ರತಿಷ್ಠಾಪಿಸಲಾಗಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಪುರುಷೋತ್ತಮ ಅವರು.ಚೆನ್ನಕೇಶವನಿಗೆ ಮೊದಲು ಪೂಜೆ ಸಲ್ಲಿಸಿದ ಬಳಿಕ ಯೋಗನರಸಿಂಹನಿಗೆ ಪೂಜೆ ಸಲ್ಲಿಸುವ ಮೂಲಕ ಚೆನ್ನಕೇಶವ ದೈವ ಪ್ರಾಧಾನ್ಯವನ್ನು ಪ್ರತಿಪಾದಿಸಲಾಗಿದೆ.ಈ ದೇವಸ್ಥಾನದಲ್ಲಿ ಚೆನ್ನಕೇಶವ,ಯೋಗನರಸಿಂಹ ಮತ್ತು ಸರಸ್ವತಿಯರ ಮೂರು‌ಪ್ರತ್ಯೇಕ ಗರ್ಭಗುಡಿಗಳಿವೆ.ಅಲ್ಲದೆ ಗಣಪತಿ, ಸುಬ್ರಹ್ಮಣ್ಯ,ಲಕ್ಷ್ಮೀ ನಾರಾಯಣ,ಆಂಜನೇಯನ ವಿಗ್ರಹಗಳಿವೆ.ಹೊರಭಾಗದ ಕಲ್ಲುಮಂಟಪದಲ್ಲಿ ರುದ್ರದೇವರು ಎಂದು ವೈಷ್ಣವರು ಪೂಜಿಸುವ ಶಿವಲಿಂಗ ಇರುವಲ್ಲಿ ಒಂದು ಕಂಬದ ಮೇಲೆ ಗಣಪತಿಯು ಮೂಡಿದ್ದು ಅದನ್ನು ‘ ಉದ್ಭವ ಗಣಪತಿ’ ಎನ್ನುತ್ತಾರೆ.ಹಿಂದೆ ಒಬ್ಬ ತಪಸ್ವಿಗಳು ಅಲ್ಲಿ ಗಣಪತಿಯ ಉಪಾಸನೆ ಮಾಡಿದ್ದರ ಫಲವಾಗಿ ಗಣಪತಿಯು ಆ ಕಂಬದಲ್ಲಿ ಉದ್ಭವಗೊಂಡಿದ್ದಾನೆ ಎನ್ನುವುದು ಗ್ರಾಮಸ್ಥರ ನಂಬಿಕೆ.ಎಪ್ಪತ್ತು ಎಂಬತ್ತು ವರ್ಷಗಳ ವಯಸ್ಸಿನ ಹಿರಿಯರನ್ನು ವಿಚಾರಿಸಿದಾಗ ಅವರು ಆ ಕಂಬದಲ್ಲಿ ಮೊದಲು ಗೆರೆಗಳ ಗುರುತುಗಳು ಮಾತ್ರ ಇದ್ದು ಬರಬರುತ್ತ ಗಣಪತಿಯ ಆಕಾರ ಸ್ಪಷ್ಟವಾಗಿ ಮೂಡಿದೆ ಎನ್ನುತ್ತಾರೆ.ಗಣಪತಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾನೆ ಎನ್ನುವುದು ಗ್ರಾಮದ ಜನರ ನಂಬಿಕೆ.

ಪೂರ್ವದಲ್ಲಿ ಇದನ್ನು ಭಾರ್ಗವಪುರ ಎಂದು ಕರೆಯುತ್ತಿದ್ದುದಾಗಿಯೂ ಬರಬರುತ್ತ ಬಗ್ಗವಳ್ಳಿಯಾಯಿತು ಎನ್ನುವ ಸ್ಥಳಪುರಾಣ ಉಳ್ಳ ಬಗ್ಗವಳ್ಳಿಯ ಬಗ್ಗೆ ಅಧ್ಯಯನ ನಡೆಸಿದರೆ ಐತಿಹಾಸಿಕ ಮಹತ್ವದ ಸ್ಥಳವಾಗಿ ಹೊರಹೊಮ್ಮಬಹುದು.ಸದ್ಯ ಮುಜರಾಯಿ ಇಲಾಖೆಯ ಆಧೀನದ ಸಿ ದರ್ಜೆಯ ದೇವಸ್ಥಾನವಾಗಿದ್ದು ಜೀರ್ಣೋದ್ಧಾರದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.ಬಗ್ಗವಳ್ಳಿಯಲ್ಲಿ ವಿವಿಧ ಜನಸಮುದಾಯಗಳು ಪೂಜಿಸುವ ಮುವ್ವತ್ತೈದು ದೇವಸ್ಥಾನಗಳಿವೆ ಎಂದು ಮಾಹಿತಿ ನೀಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೇಖರ ಅವರು ರೇಣುಕಾಯಲ್ಲಮ್ಮ ಗ್ರಾಮದೇವಿಯಾಗಿದ್ದು ರೇಣುಕೆಯ ಎರಡು ದೇವಸ್ಥಾನಗಳಿವೆ,ವರ್ಷಕ್ಕೊಮ್ಮೆ ಎಲ್ಲಮ್ಮನ ಜಾತ್ರೆ ಆಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದರು.ಮೈಲಾರಲಿಂಗನ ದೇವಸ್ಥಾನ,ಶಿವ ದೇವಸ್ಥಾನ,ವೀರಭದ್ರದೇವಸ್ಥಾನಗಳಿವೆಯಂತೆ ಬಗ್ಗವಳ್ಳಿ ಗ್ರಾಮದಲ್ಲಿ.ಗ್ರಾಮ ಪಂಚಾಯತಿ ಕೇಂದ್ರವಾಗಿರುವ ಬಗ್ಗವಳ್ಳಿಯು ಐದು ಕಂದಾಯ ಗ್ರಾಮಗಳನ್ನು ಹೊಂದಿರುವ ಗ್ರಾಮ ಪಂಚಾಯತಿ ಕೇಂದ್ರಸ್ಥಾನವಾಗಿರುವ ಗ್ರಾಮ.

ಯೋಗನರಸಿಂಹ ದೇವಸ್ಥಾನದ ಅರ್ಚಕರಾದ ಪುರುಷೋತ್ತಮ ಅವರು ನಮಗಾಗಿ ವಿಶೇಷ ಪೂಜೆ ಸಲ್ಲಿಸಿ ದೇವರ ಹೂಮಾಲೆಯನ್ನು ಕೊರಳಿಗೆ ಹಾಕಿ ಸತ್ಕರಿಸುವ ಮೂಲಕ ಯೋಗನರಸಿಂಹ ಸ್ವಾಮಿಯ ಆಶೀರ್ವಾದವನ್ನು ಪ್ರಸಾದಿಸಿ,ಪ್ರಸಾದವನ್ನು ನೀಡಿದರು. ಬಗ್ಗವಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಶೇಖರ ಹೆಚ್ ಕೆ,ಗ್ರೇಡ್ 1 ಕಾರ್ಯದರ್ಶಿ ಸಂತೋಷ ಮತ್ತು ಸಿಬ್ಬಂದಿ ಪ್ರದೀಪ ಅವರುಗಳು ನಮ್ಮ ತಂಡವನ್ನು ಯೋಗನರಸಿಂಹ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪರಿಚಯಿಸಿದರು.ಜಿಲ್ಲಾ ಪಂಚಾಯತಿಯ ಸಮಾಲೋಚಕ ಸಿಬ್ಬಂದಿಯವರಾದ ಸುರೇಶ ಮತ್ತು ರುದ್ರೇಶ ಅವರಿಬ್ಬರು ನನ್ನ ಜೊತೆಗಿದ್ದರು

ಮುಕ್ಕಣ್ಣ ಕರಿಗಾರ

04.01.2022