ನಾಡು- ನುಡಿ : ಕನ್ನಡ ಪುಸ್ತಕ ಸಂಸ್ಕೃತಿ ಬೆಳೆಸುವ ಪರಿ – ಮುಕ್ಕಣ್ಣ ಕರಿಗಾರ

ಕನ್ನಡ ಪುಸ್ತಕ ಸಂಸ್ಕೃತಿ ಬೆಳೆಸುವ ಪರಿ

       *ಮುಕ್ಕಣ್ಣ ಕರಿಗಾರ

ಇಂದು( ೦೩.೦೧.೨೦೨೨) ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಭೇಟಿ ನೀಡಿದ್ದೆ ಪುಸ್ತಕಗಳ ಖರೀದಿಗಾಗಿ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಮುದ್ರಿಸಿ ಮಾರಾಟ ಮಾಡುತ್ತಿದೆ ಹಲವು ವರ್ಷಗಳಿಂದ.ಪುಸ್ತಕಗಳನ್ನು ಕನ್ನಡದ ಓದುಗರು ಕೊಂಡು ಓದದೆ‌ ಇರುವುದರಿಂದ ಅರ್ಧದಷ್ಟು ಬೆಲೆಗೆ ರಿಯಾಯತಿ ದರದಲ್ಲಿ ಇಲಾಖೆಯು ಪುಸ್ತಕಗಳನ್ನು ಮಾರಾಟ ಮಾಡುತ್ತಿದೆ.ನಾನು ಕರ್ತವ್ಯ ನಿರ್ವಹಿಸಿದ ಜಿಲ್ಲೆಗಳಲ್ಲೆಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರುಗಳ ಕಛೇರಿಗೆ ನಿಯತವಾಗಿ ಭೇಟಿ ಮಾಡಿ,ಪುಸ್ತಕ ಖರೀದಿಸುತ್ತಿರುತ್ತೇನೆ.ನನ್ನ ಕನ್ನಡಪುಸ್ತಕ ಖರೀದಿ‌ ಪ್ರೇಮವನ್ನು ಕಂಡು ಆಶ್ಚರ್ಯವ್ಯಕ್ತಪಡಿಸಿದ್ದ ಈ ಹಿಂದೆ ರಾಯಚೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಚಿತ್ರದುರ್ಗ ಜಿಲ್ಲೆಯ ನಿಜಲಿಂಗಪ್ಪ ಅವರು ನನ್ನ ನಿಕಟವರ್ತಿಗಳಾಗಿದ್ದರು.ಯಾವುದೇ ಹೊಸ ಪುಸ್ತಕಗಳು ಬಂದರೆ ‘ ಸರ್ ಹೊಸ ಪುಸ್ತಕ ಬಂದಿವೆ’ ಎಂದು ಫೋನ್ ಮಾಡುತ್ತಿದ್ದರು.ಬಿಡುವಿದ್ದರೆ ನಾನು ಅವರ ಕಛೇರಿಗೆ ಹೋಗುತ್ತಿದ್ದೆ,ಇಲ್ಲದಿದ್ದರೆ ಅವರೇ ಪುಸ್ತಕಗಳನ್ನು ತೆಗೆದುಕೊಂಡು ರಾಯಚೂರು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿದ್ದ ನನ್ನ ಕಛೇರಿಗೆ ಬರುತ್ತಿದ್ದರು.ನಾವು ಇಂದು ಕನ್ನಡ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವಿದೆ .ಕನ್ನಡಿಗರು ಪುಸ್ತಕ ಓದುವುದು ಕಡಿಮೆ,ಪುಸ್ತಕಗಳನ್ನು ಖರೀದಿಸಿ,ಓದುವವರ ಸಂಖ್ಯೆ ಇನ್ನೂ ಕಡಿಮೆ ! ಕನ್ನಡದ ಕವಿ- ಸಾಹಿತಿಗಳು ಪುಸ್ತಕವನ್ನೇ ಬರೆದು ಬದುಕುತ್ತೇವೆ ಎನ್ನುವ ಸ್ಥಿತಿಯಲ್ಲಿ ಇಲ್ಲ.ಇಂಗ್ಲಿಷ್,ಜರ್ಮನ್,ಫ್ರೆಂಚ್ ಮೊದಲಾದ ಭಾಷೆಗಳ ಲೇಖಕರುಗಳು ಸರಕಾರಿ ಸೇವೆ,ಖಾಸಗಿ ಕೆಲಸಗಳನ್ನು ಬಯಸದೆ ಅವರು ಪುಸ್ತಕಗಳನ್ನು ಬರೆದೇ ಹಣ ಸಂಪಾದಿಸುತ್ತಿದ್ದಾರೆ,ಪುಸ್ತಕೋದ್ಯಮಿಗಳಾಗಿ ಸ್ವತಂತ್ರವಾಗಿ ನೆಮ್ಮದಿಯ ಜೀವನ ನಿರ್ವಹಣೆ ಮಾಡುತ್ತಾರೆ.ಭಾರತೀಯ ಇಂಗ್ಲಿಷ್ ಬರಹಗಾರರಿಗೆ ಸ್ವಲ್ಪ ಭದ್ರತೆ ಇದೆ,ಹಿಂದೀ ಭಾಷೆಯ ಬರಹಗಾರರಿಗೆ ಸರಕಾರ ಮತ್ತು ಹಿಂದೀ ಸಂಘ- ಸಂಸ್ಥೆಗಳ ಮನ್ನಣೆ ಇದೆ.ವಿವಿಧ ಬಗೆಯ ಸೌಲಭ್ಯ- ಸವಲತ್ತುಗಳು ಇಂಗ್ಲಿಷ್ ಮತ್ತು ಹಿಂದಿ ಬರಹಗಾರರಿಗೆ ಸಿಗುತ್ತವೆ.ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳ ಲೇಖಕರುಗಳಿಗೆ ಅಂತಹ ಯಾವುದೇ ಸೌಲಭ್ಯಗಳಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಯಲ್ಲಿ ನಾನು ಇಂದು ಹತ್ತು ಅತ್ಯುಪಯುಕ್ತ ಪುಸ್ತಕಗಳನ್ನು ಖರೀದಿಸಿದೆ.ಅವುಗಳಲ್ಲಿ ಕೆಲವು ಬೃಹತ್ ಗಾತ್ರದ ಪುಸ್ತಕಗಳು ಬೇರೆ.ಇಷ್ಟೂ ಪುಸ್ತಕಗಳ ಬೆಲೆ 1110 ರೂಪಾಯಿಗಳು ಮಾತ್ರ! ಅರ್ಧದಷ್ಟು ರಿಯಾಯತಿ ಬೆಲೆಗೆ ಈ ಹತ್ತು ಪುಸ್ತಕಗಳನ್ನು 555 ರೂಪಾಯಿಗಳಿಗೆ ಖರೀದಿಸಿದೆ! ಇದನ್ನು ಪ್ರಸ್ತಾಪಿಸುವ ಕಾರಣ ಕನ್ನಡದ ಓದುಗರು ಸಪ್ನಾ ಬುಕ್ ಹೌಸಿನಂತಹ ಪುಸ್ತಕ ಮಾರಾಟ ಸಂಸ್ಥೆಗಳಲ್ಲಿ ಅತಿಹೆಚ್ಚು ಬೆಲೆಕೊಟ್ಟು ಪುಸ್ತಕಗಳನ್ನು ಖರೀದಿಸುವ ಬದಲು ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಸರಕಾರಿ ಪುಸ್ತಕ ಮಾರಾಟಕೇಂದ್ರಗಳಿಗೆ ಭೇಟಿ ನೀಡಲಿ ಎಂಬುದು.ನಾನು ಸಪ್ನಾ ಬುಕ್ ಹೌಸಿಗೆ 1997 ರಿಂದಲೂ ನಿಯತವಾಗಿ ಭೇಟಿ ನೀಡಿ, ಪ್ರತಿಭೇಟಿಯಲ್ಲಿ ಹತ್ತಾರು ಸಾವಿರ ರೂಪಾಯಿಗಳ ಬೆಲೆಯ ಪುಸ್ತಕಗಳನ್ನು ಖರೀದಿಸುತ್ತೇನೆ.ಹಾಗಂತ ಸಪ್ನಾದವರು ನನಗೇನೂ ವಿಶೇಷ ರಿಯಾಯತಿ ನೀಡಿಲ್ಲ.10%,20% ರಿಯಾಯ್ತಿಯ ಕಾರ್ಡುಗಳನ್ನು ನವೆಂಬರ್ ತಿಂಗಳುಗಳಲ್ಲಿ ಮಾತ್ರ ವಿತರಿಸುತ್ತಾರಾದರೂ ಆ ರಿಯಾಯತಿಯೇನು ದೊಡ್ಡದಾಗಿರುವುದಿಲ್ಲ ಪುಸ್ತಕದ ಮಾರಾಟದ ಬೆಲೆಗೆ.ಹಾಗಾಗಿ ಸಪ್ನಾ ಬುಕ್ ಹೌಸಿನಂತಹ ಲಾಭೋದ್ದೇಶದ ವ್ಯಾಪಾರಿ ಸಂಸ್ಥೆಗಳನ್ನು ಬಲಪಡಿಸುವ ಬದಲು ನಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಸರಕಾರಿ ಸಂಸ್ಥೆಗಳಿಂದ ಪುಸ್ತಕಗಳನ್ನು ಖರೀದಿಸಿ,ಆ ಸಂಸ್ಥೆಗಳನ್ನು ಬೆಂಬಲಿಸಬೇಕು.

ಕನ್ನಡದಲ್ಲಿ ಸಾವಿರಾರು ಪ್ರಕಾಶನ ಸಂಸ್ಥೆಗಳಿವೆಯಾದರೂ ಪುಸ್ತಕ ಮುದ್ರಣ ಮತ್ತು ಮಾರಾಟ ಮಾಡುವ ಎರಡು ಬಗೆಯ ಹೊಣೆನಿರ್ವಹಿಸುವ ಪ್ರಕಾಶಕರು ಕಡಿಮೆ.ನವಕರ್ನಾಟಕ,ರಾಷ್ಟ್ರೋತ್ಥಾನಗಳಂತಹ ಖಾಸಗಿ ವಲಯದ ಪುಸ್ತಕ ಪ್ರಕಾಶಕರು ಮೌಲಿಕವಾದ ಪುಸ್ತಕಗಳನ್ನು ಪ್ರಕಟಿಸಿ,ಮಾರಾಟ ಮಾಡುತ್ತಾರೆ ಅವರದೆ ಪುಸ್ತಕಮಳಿಗೆಗಳ ಮೂಲಕ.ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಸಾವಿರಾರು ವಿವಿಧ ಪುಸ್ತಕಗಳನ್ನು ಮುದ್ರಿಸಿ ಕಡಿಮೆ ಬೆಲೆಗೆ ಪುಸ್ತಕಗಳನ್ನು ಮಾರಾಟ ಮಾಡುತ್ತಿದೆ.ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡಗರಿಗೆ ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಅಭಿನಂದನಾರ್ಹ ಕಾರ್ಯ ಮಾಡುತ್ತಿದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ,ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು ಸೇರಿದಂತೆ ಹಲವು ಇತರ ಸ್ವಾಯತ್ತ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಪುಸ್ತಕಗಳ ಮಾರಾಟದ ವ್ಯವಸ್ಥೆ ಮಾಡಿವೆ.ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳು ಕನ್ನಡ ಭಾಷೆ,ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಹಿತ್ಯ,ಸಂಶೋಧನಾ ಕೃತಿಗಳನ್ನು ಪ್ರಕಟಿಸಿವೆ.ಕನ್ನಡಕ್ಕಾಗಿಯೇ ಇರುವ ಹಂಪೆಯ ಕನ್ನಡ ವಿಶ್ವವಿದ್ಯಾಲಯವು ಸಹ ಸಾವಿರಾರು ಕನ್ನಡದ ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದೆ.ಓದುವ ಆಸಕ್ತಿ ಉಳ್ಳ ಕನ್ನಡ ಓದುಗರ ಅಭಿರುಚಿ,ಆಸಕ್ತಿಗಳಿಗೆ ಅನುಗುಣವಾದ ಎಲ್ಲ ಬಗೆಯ ಪುಸ್ತಕಗಳು ಕನ್ನಡದ ಸರಕಾರಿ ಮತ್ತು ಸರಕಾರಿ ಆಧೀನದ ಕನ್ನಡ ಸಂಸ್ಥೆಗಳಲ್ಲಿ ದೊರೆಯುತ್ತಿವೆ.ಹೀಗಿದ್ದೂ ಕನ್ನಡದಲ್ಲಿ ಪುಸ್ತಕ ಸಂಸ್ಕೃತಿ ಬೆಳೆದಿಲ್ಲ ಎನ್ನುವುದು ವಿಷಾದದ ಸಂಗತಿ.

ಬೆಂಗಳೂರಿನ ಸಪ್ನಾ ಬುಕ್ ಸ್ಟಾಲ್ ದಕ್ಷಿಣ ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎನ್ನುವ ಹೆಸರಿನಲ್ಲಿ ಕನ್ನಡದ ಖ್ಯಾತನಾಮರ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕೋದ್ಯಮಕ್ಕೆ ಹೆಸರಾಗಿದೆ.ಸಪ್ನಾ ಬುಕ್ ಹೌಸ್ ನ ಪುಸ್ತಕಗಳ ಬೆಲೆ ತೀರ ಹೆಚ್ಚು.ಸಪ್ನಾ ಬುಕ್ ಹೌಸ್ ಮುದ್ರಿಸಿದ ಅದೇ ಲೇಖಕರುಗಳ ಪುಸ್ತಕಗಳು ಇತರ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ.ಸಪ್ನಾ ಬುಕ್ ಹೌಸಿನ ಪುಸ್ತಕಗಳ ಬೆಲೆಗೆ ಹೋಲಿಸಿದಾಗ ‘ ನವಕರ್ನಾಟಕ ಪಬ್ಲಿಕೇಶನ್ಸ್’ ಪ್ರಕಾಶನ ಸಂಸ್ಥೆಯು‌ ಪ್ರಕಟಿಸುವ ಪುಸ್ತಕಗಳ ಬೆಲೆ ಕಡಿಮೆ ಮತ್ತು ನವಕರ್ನಾಟಕವು ವೈಜ್ಞಾನಿಕ ಮನೋಭಾವವನ್ನು ಮೂಡಿಸುವ,ವೈಚಾರಿಕ ಪ್ರಜ್ಞೆಯನ್ನು ಎತ್ತರಿಸಲು ಸಹಾಯಕವಾಗುವ ಪುಸ್ತಕಗಳನ್ನು ಪ್ರಕಟಿಸುತ್ತಿದೆ.ನವಕರ್ನಾಟಕವು ಕನ್ನಡದಲ್ಲಿ ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕಿದೆ.ಬಳ್ಳಾರಿಯ ‘ ಲೋಹಿಯಾ ಪ್ರಕಾಶನ ಮತ್ತು ಗದಗಿನ ‘ ಲಡಾಯಿ ಪ್ರಕಾಶನ’ ಗಳು ಸಹ ಕನ್ನಡ ಪುಸ್ತಕ ಸಂಸ್ಕೃತಿಗೆ ತಮ್ಮದೆ ಆದ ವಿಶಿಷ್ಟ ಕೊಡುಗೆ ನೀಡಿವೆಯಾದರೂ ಆ ಎರಡು ಪ್ರಕಾಶನಗಳು ಕನ್ನಡದ ಎಲ್ಲ ಬರಹಗಾರರ ಪುಸ್ತಕಗಳನ್ನು ಪ್ರಕಟಿಸುವ ಬದಲು ತಮ್ಮ ಪ್ರಕಾಶನ ಸಂಸ್ಥೆಯ ಆಸಕ್ತಿ ಮತ್ತು ಅಭಿರುಚಿಗಳಿಗೆ ಅನುಗುಣವಾದ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಿವೆ .ಆಶ್ಚರ್ಯಕರ ಮತ್ತು ಅಭಿನಂದನಾರ್ಹ ಸಂಗತಿ ಒಂದಿದೆ– ಅದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಭಂಡಾರ ಪ್ರಕಾಶನ ಸಂಸ್ಥೆಯವರದ್ದು.ಕಲ್ಬುರ್ಗಿ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪುಸ್ತಕಗಳನ್ನು ಖರೀದಿಸಲು ಹೋಗಿದ್ದ ನಾನು ಭಂಡಾರ ಪ್ರಕಾಶನ ನನ್ನ ಜಿಲ್ಲೆಯ ಪ್ರಕಾಶನ ಎಂದು ಸುಮಾರು ಐದುಸಾವಿರಕ್ಕೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಆ ಸಂಸ್ಥೆಯಿಂದ ಖರೀದಿಸಿದ್ದೆ.ಭಂಡಾರ ಪ್ರಕಾಶನವು ಅದ್ಭುತವಾದ ಕಾರ್ಯವನ್ನು ಮಾಡಿದೆ.ಇತರ ಪ್ರಕಾಶಕರುಗಳು ಕಥೆ,ಕಾದಂಬರಿಗಳಂತಹ ಜನಪ್ರಿಯ ಸಾಹಿತ್ಯ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸಿದರೆ ಭಂಡಾರ ಪ್ರಕಾಶನವು ಇತಿಹಾಸ,ಕಲೆ – ಸಂಸ್ಕೃತಿ,ಶಿಲಾಶಾಸನಗಳು,ಊರು- ಕೇರಿಗಳಂತಹ ಕೆಲವೇ ಜನ ಆಸಕ್ತ ಓದುಗರು ಮಾತ್ರ ಓದಬಲ್ಲ ಪುಸ್ತಕಗಳನ್ನು ಸಹ ಪ್ರಕಟಿಸಿದೆ.ಮಳಿಗೆಯಲ್ಲಿದ್ದ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರನ್ನು ಕೇಳಿದ್ದೆ -‘ ಇಷ್ಟೆಲ್ಲ ಶೀರ್ಷಿಕೆಯಡಿ ಪುಸ್ತಕಗಳನ್ನು ಮುದ್ರಿಸಿದ್ದೀರಲ್ಲ.ಮಾರಾಟ ಆಗುತ್ತವೆಯೆ?ಎಂದು .ಅವರು ‘ಹೇಗೋ ಮಾಡಬೇಕಲ್ಲ ಸರ್’ ಎಂದು ಕಷ್ಟ ಸುಖಗಳನ್ನು ಹೇಳಿಕೊಂಡಿದ್ದರು.

ಸರಕಾರದ ಗ್ರಂಥಾಲಯ ಇಲಾಖೆ ಮತ್ತಿತರ ಪುಸ್ತಕಗಳನ್ನು ಖರೀದಿಸುವ ಸಂಸ್ಥೆಗಳು ಇಂತಹ ಸಾಹಸಿಪುಸ್ತಕ ಪ್ರಕಾಶಕರುಗಳು‌ ಪ್ರಕಟಿಸಿದ ಪುಸ್ತಕಗಳನ್ನು ಆದ್ಯತೆಯ ಮೇಲೆ ಖರೀದಿಸಬೇಕು.ಇದರಿಂದ ಸಣ್ಣಪುಟ್ಟ ಪ್ರಕಾಶನ ಸಂಸ್ಥೆಗಳು ಬೆಳೆಯಲು ಸಹಾಯಕವಾಗುತ್ತದೆ.ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ನಾಲ್ಕೈದು ಇಂತಹ ಪ್ರಕಾಶನ ಸಂಸ್ಥೆಗಳು ಬೆಳೆದರೆ ಸ್ಥಳೀಯ ಬರಹಗಾರರ ಪುಸ್ತಕಗಳ ಪ್ರಕಟಣೆಗೆ ನೆರವು ಆಗುತ್ತದೆ.

ಸರಕಾರವು ಪುಸ್ತಕ ಸಂಸ್ಕೃತಿ ಮತ್ತು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು.ಪುಸ್ತಕ ಸಂಸ್ಕೃತಿಯಡಿ ಕನ್ನಡದ ಕವಿ ಸಾಹಿತಿ ಲೇಖರುಗಳ ಪುಸ್ತಕಗಳ ಹಸ್ತಪ್ರತಿಗಳನ್ನು ಹೆಚ್ಚಿನ ಗೌರವಧನ ಕೊಟ್ಟು ಖರೀದಿಸಬೇಕು.ಖರೀದಿಸಿದ ಹಸ್ತಪ್ರತಿಗಳನ್ನು ಕಡಿಮೆ ಬೆಲೆಗೆ ಮುದ್ರಿಸಿ ಶಾಲೆ ಕಾಲೇಜುಗಳು,ಸರಕಾರಿ ಕಛೇರಿಗಳಿಗೆ ತಲುಪಿಸಬೇಕು.ಶಾಲಾ ಕಾಲೇಜುಗಳಲ್ಲಿ ಪುಸ್ತಕ ಓದುವ ಸ್ಪರ್ಧೆಗಳನ್ನೇರ್ಪಡಿಸಿ ಬಹುಮಾನ,ಪ್ರಶಸ್ತಿಗಳನ್ನು ವಿತರಿಸಬೇಕು.ಗ್ರಾಮ ಪಂಚಾಯತಿಗಳ ಮೂಲಕ ಗ್ರಾಮೀಣ ಜನರಿಗೆ ಸಂಚಾರಿ ಪುಸ್ತಕಾಲಯಗಳ ಮೂಲಕ ಓದುವ ಅಭಿರುಚಿ ಮೂಡಿಸಬೇಕು.ಕನ್ನಡ ಪುಸ್ತಕ ಸಂಸ್ಕೃತಿ ಮತ್ತು ಪುಸ್ತಕ ಓದುವ ಸಂಸ್ಕೃತಿ ಬೆಳೆಸುವುದು ಸರಕಾರದ ಆದ್ಯತೆಯ ವಿಷಯವಾದರೆ ಕನ್ನಡದ ಸಾಹಿತಿಗಳು,ಪುಸ್ತಕ ಪ್ರಕಾಶಕರು ಮತ್ತು ಓದುಗರ ನಡುವೆ ಸಂಪರ್ಕ ಏರ್ಪಟ್ಟು ಆ ಮೂಲಕ ಕನ್ನಡ ಸಂಸ್ಕೃತಿಗೆ ಅರ್ಥಪೂರ್ಣ ಸೇವೆ ಸಲ್ಲಿಸಿದಂತೆ ಆಗುತ್ತದೆ.

ಮುಕ್ಕಣ್ಣ ಕರಿಗಾರ

03.01.2022