ಗಜಲ್
ಮಂಡಲಗಿರಿ ಪ್ರಸನ್ನ
ಸವಕಲಾದ ಮಾತು ಸಾಕಿನ್ನು ಹೊಸಬೆಳಕು ಮೂಡಲಿ
ಗಾಳಿಗೊಡ್ಡಿದ ದೀಪ ನಾವಿನ್ನು ಹೊಸಬೆಳಕು ಮೂಡಲಿ
ದೃಢನಂಬಿಕೆ ಹೆಜ್ಜೆಯಿಡು ಸಾಕು ವೃಥಾ ಕಾಲಹರಣ
ಚಿಂತನೆಗೆ ಮುಖ ಮಾಡಿನ್ನು ಹೊಸಬೆಳಕು ಮೂಡಲಿ
ಕತ್ತಲೆಯ ಗುಹೆಯಿಂದ ಬೆಳಕಿನ ದಿಕ್ಕಿನೆಡೆಗೆ ತಿರುಗು
ದಿಗಂತದ ದೂರ ನೋಡಿನ್ನು ಹೊಸಬೆಳಕು ಮೂಡಲಿ
ಕಾಯುತಿದೆ ಶತಮಾನದ ಜಿಡ್ಡುಗಟ್ಟಿದ ಕವಲು ದಾರಿ
ಕಂಗೆಟ್ಟ ಮೌಢ್ಯಗಳ ಬಿಡಿನ್ನು ಹೊಸಬೆಳಕು ಮೂಡಲಿ
ನಿಂತ ನೀರಲಿ ಜೊಂಡುಗಟ್ಟಿದ ಪಾಚಿಯಂತಾಗದಿರು ‘ಗಿರಿ’
ನಿರಂತರ ಚಲನಶೀಲತೆ ಬಾಳಿನ್ನು ಹೊಸಬೆಳಕು ಮೂಡಲಿ

ಮೊ:9449140580