ನಮ್ಮ ಉದ್ಧಾರವನ್ನು ನಾವು ಮಾಡಿಕೊಂಡರೆ ಸಾಕು !
* ಮುಕ್ಕಣ್ಣ ಕರಿಗಾರ
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತಯ್ಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮದೇವ.
ಬಸವಣ್ಣನವರು ಕೀರ್ತಿವಾರ್ತೆಗಾಗಿ ಲೋಕೋದ್ಧಾರಕರ ಸೋಗು ನಟಿಸುವವರ ವರ್ತನೆಯನ್ನು ವಿಡಂಬಿಸಿದ್ದಾರೆ ಈ ವಚನದಲ್ಲಿ.ಜಗತ್ತನ್ನು ಉದ್ಧರಿಸುವ ಹುಮ್ಮಸ್ಸು,ಆವೇಶಗಳುಳ್ಳವವರು ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳಲಿ,ತಮ್ಮ ತಮ್ಮ ವ್ಯಕ್ತಿತ್ವದ ಓರೆ- ಕೋರೆಗಳನ್ನು ತಿದ್ದಿಕೊಂಡು ನೇರ್ಪುಗೊಳಿಸಿಗೊಂಡರೆ ಸಾಕು,ಜಗತ್ತಿನ ಉದ್ಧಾರಕ್ಕೆ ಹೋರಾಡುವ ಅಗತ್ಯವಿಲ್ಲ.ತಮ್ಮ ದೇಹ ಮತ್ತು ಮನಸ್ಸುಗಳನ್ನೇ ತಮ್ಮ ಅಂಕೆಯಲ್ಲಿಟ್ಟುಕೊಳ್ಳದ ಜನರು ಜಗತ್ತನ್ನು ಎಂತು ಉದ್ಧರಿಸಬಲ್ಲರು? ನೆರೆಮನೆಯವರು ದುಃಖದಲ್ಲಿದ್ದಾರೆ ಎಂದು ತಾವು ಅಳುವುದು ಕಪಟವಲ್ಲದೆ ನೈಜದುಃಖವಲ್ಲ.ಪಕ್ಕದ ಮನೆಯವರು ದುಃಖದಲ್ಲಿದ್ದಾಗ ಅವರಿಗೆ ಸಾಂತ್ವನ ,ಸಮಾಧಾನ ಹೇಳಿದರದು ಮಾನವೀಯತೆ.ನೆರೆಮನೆಯವರು ದುಃಖದಲ್ಲಿದ್ದಾರೆಂದು ಇವರು ಅಳುವುದು ನಟನೆ ಎನ್ನುತ್ತಾ ಬಸವಣ್ಣನವರು ನೆರೆಮನೆಯ ದುಃಖಕ್ಕೆ ಅಳುವವರು ತಮ್ಮ ಮನೆಯ ದುಃಖ,ದುಗುಡ- ದುಮ್ಮಾನಗಳನ್ನು ಸರಿಪಡಿಸಿಕೊಂಡರೆ ಸಾಕು ಎನ್ನುತ್ತಾರೆ.
ಸಮಾಜಸುಧಾರಣೆ ಮಾಡಬೇಕು ಎನ್ನುವುದು ಕೆಲವರ ಹಂಬಲ.ದೇಶ ಸುಧಾರಿಸಬೇಕು ಎನ್ನುವುದು ಹಲವರ ಅಪೇಕ್ಷೆ.ಜಗತ್ತಿನ ಉದ್ಧಾರ ಮಾಡಬೇಕು ಎನ್ನುವುದು ಮತ್ತೆ ಕೆಲವರ ಮಹದಾಸೆ.ಆಸೆಯೇನೋ ಸರಿ.ಆದರೆ ತಮ್ಮನ್ನು ತಾವು ಉದ್ಧರಿಸಿಕೊಳ್ಳದೆ ಜಗತ್ತನ್ನು ಉದ್ಧರಿಸುತ್ತೇವೆ ಎಂದು ಹೊರಡುವುದು ಮೂರ್ಖತನವಲ್ಲವೆ ಎನ್ನುತ್ತಾರೆ ಬಸವಣ್ಣನವರು.’ ಮನೆಗೆದ್ದು ಮಾರುಗೆಲ್ಲು’ ಎನ್ನುವ ಕನ್ನಡದ ಗಾದೆಯು ಅದನ್ನೇ ಹೇಳುತ್ತದೆ.ಲೋಕೋದ್ಧಾರಕರಾಗುವವರು ಮೊದಲು ತಮ್ಮನ್ನು ತಾವು ಉದ್ಧರಿಸಿಕೊಳ್ಳಬೇಕು.ಲೋಕವಾರ್ತೆಗೆ ಪ್ರಲಪಿಸುವ ಮೊದಲು ತಮ್ಮ ಮನೆವಾರ್ತೆಯನ್ನು ಕಿವಿಗೊಟ್ಟು ಕೇಳಬೇಕು.ತಮ್ಮ ಮನೆಯಲ್ಲಿಯೇ ನೂರೆಂಟು ಸಮಸ್ಯೆಗಳನ್ನಿಟ್ಟುಕೊಂಡು ಊರು,ನಾಡು,ದೇಶಗಳನ್ನು ದೇಶಗಳನ್ನು ಉದ್ಧರಿಸುತ್ತೇನೆ ಎಂದು ಹಂಬಲಿಸುವುದು ಅರ್ಥಹೀನ.ಮನೆಯ ಸಮಸ್ಯೆಗಳಿಗೆ ಕಣ್ಣಿದ್ದು ಕುರುಡರಾಗಿ,ಕಿವಿಯಿದ್ದೂ ಕಿವುಡರಾಗುವವರು ಜಗತ್ತಿನ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನಾಶೀಲರು ಎಂದು ಹೇಳಿಕೊಂಡರೆ ಅದು ಬೊಗಳೆಯಲ್ಲದೆ ನಿಜವಲ್ಲ.
ದೇಶ- ಜಗತ್ತನ್ನು ಉದ್ಧರಿಸಬೇಕು ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು- ತಮ್ಮ ದೇಹ ಮತ್ತು ಮನಸ್ಸುಗಳ ಮೇಲೆ ಹಿಡಿತ ಸಾಧಿಸಿದ್ದೇವೆಯೇ ಎಂದು.ತಮ್ಮ ದೇಹ ಮತ್ತು ಮನಸ್ಸುಗಳನ್ನೇ ಗೆಲ್ಲದವರು ಜಗತ್ತನ್ನು ಹೇಗೆ ಗೆಲ್ಲುತ್ತಾರೆ? ಪಂಚಭೂತಗಳಿಂದಾದ ಮನುಷ್ಯದೇಹವು ಪಂಚೇಂದ್ರಿಯಗಳ ಸಂಚಲನದಿಂದ ಒದ್ದಾಡುತ್ತದೆ,ವಿಕಾರಗೊಳ್ಳುತ್ತದೆ.ಇಂದ್ರಿಯಕ್ಕೆ ವಶವಾದ ದೇಹ ಇಂದ್ರಿಯ ಸುಖದ ಈಡೇರಿಕೆಗಾಗಿಯೇ ತಡಪಡಿಸುತ್ತದೆ,ಬಡಬಡಿಸುತ್ತದೆ.ರಾಗ- ದ್ವೇಷಗಳು,ಮೋಹ ಮಮಕಾರಗಳು ದೇಹ ಮತ್ತು ಮನಸ್ಸನ್ನು ಕವಿದು,ದಾರಿಕಾಣದಂತೆ ಮಾಡಿವೆ.ರಕ್ತ- ಮಾಂಸಗಳ ಮುದ್ದೆಯಾದ ಮನುಷ್ಯ ದೇಹವು ಉದ್ವೇಗ- ಉದ್ರೇಕಗಳಿಗೆ ಈಡಾಗುವುದು ಸಹಜ.ಅರಿಷಡ್ವರ್ಗಗಳು,ಅಷ್ಟಮದಗಳು ಬೆನ್ನಟ್ಟಿ ಕಾಡುತ್ತಿವೆ.ಎಷ್ಟೊಂದು ಅವಗುಣಗಳಿವೆ! ಅವಗುಣಗಳ ಆಕಾರರಾದ ಮನುಷ್ಯರು ಅವಗುಣಮುಕ್ತರಾಗಿ,ಸದ್ಗುಣಶೀಲರಾಗಿ ಶಿವಗುಣ,ಕಲ್ಯಾಣಗುಣ ಸಿದ್ಧಿಸಿಕೊಂಡರದೇ ಸಾರ್ಥಕತೆ.
ಇನ್ನೊಬ್ಬರನ್ನು ಉದ್ಧರಿಸುವ ಮುನ್ನ ನಮ್ಮನ್ನು ನಾವು ಉದ್ಧರಿಸಿಕೊಳ್ಳಬೇಕು,ಜಗತ್ತಿನ ಉದ್ಧಾರವನ್ನು ಬಯಸುವ ಮುಂಚೆ ನಮ್ಮ ಮನೆ,ಕುಟುಂಬ,ಬಂಧು- ಬಾಂಧವರನ್ನು ಉದ್ಧರಿಸಿದರೆ ಸಾಕು ಎನ್ನುವ ಬಸವಣ್ಣನವರು ಲೋಕೋದ್ಧಾರಕರು,ವಿಶ್ವಮಾನವರು ಎಂದು ಹುಸಿಬೊಗಳೆಕೊಚ್ಚುವವರನ್ನು ಕೆಡೆನುಡಿಯುತ್ತ ಈ ವಚನದಲ್ಲಿ ಮಹತ್ವದ ಸಂದೇಶ ಒಂದನ್ನು ಸಾರಿದ್ದಾರೆ; ಇಲ್ಲಿ ಯಾರು ಯಾರನ್ನೂ ಉದ್ಧರಿಸಬೇಕಿಲ್ಲ,ಅವರವರ ಉದ್ಧಾರದ ಶಿಲ್ಪಿಗಳು ಅವರವರೆ! ಹುಟ್ಟಿಸಿದ ಪರಮಾತ್ಮನೇ ಎಲ್ಲರ ಉದ್ಧಾರದ ಹೊಣೆಯನ್ನು ಹೊತ್ತಿರುವಾಗ ನಾನು ಅವರನ್ನು ಉದ್ಧರಿಸುತ್ತೇನೆ,ಇವರನ್ನು ಉದ್ಧರಿಸುತ್ತೇನೆ,ಊರು ಸುಧಾರಿಸುತ್ತೇನೆ,ನಾಡು ಸುಧಾರಿಸುತ್ತೇನೆ,ದೇಶ ಸುಧಾರಿಸುತ್ತೇನೆ,ವಿಶ್ವದ ಉದ್ಧಾರ ಮಾಡುತ್ತೇನೆ ಎಂದು ಬೀಗುವುದು ಒಣಜಂಭವಲ್ಲದೆ ಸತ್ಯವಲ್ಲ.ಪರಮಾತ್ಮನು ಈ ಜಗತ್ತಿಗೆ ಯಾರನ್ನೂ ಬರಿಗೈಯಲ್ಲಿ ಕಳಿಸಿಲ್ಲ,ಎಲ್ಲರಿಗೂ ಉನ್ನತಿ- ಉತ್ತಮಿಕೆಗಳ ಹಕ್ಕು- ಅವಕಾಶಗಳ ಕೊಡುಗೆಯನ್ನಿತ್ತೇ ಕಳಿಸಿದ್ದಾನೆ.ಜೀವರುಗಳು ತಮ್ಮೊಳಗಣ ಅಂತರ್ಗತಶಕ್ತಿಯನ್ನರಿತುಕೊಂಡು ಆತ್ಮೋದ್ಧಾರ ಮಾಡಿಕೊಳ್ಳಬೇಕಷ್ಟೆ.ಹೆಸರು- ಖ್ಯಾತಿಗಳಿಗಾಗಿ ಹಂಬಲಿಸುವ,ಪತ್ರಿಕೆ- ಟಿ ವಿಗಳಲ್ಲಿ ನಿತ್ಯ ಸುದ್ದಿಯಾಗಬಯಸುವ ಪ್ರಚಾರಪ್ರಿಯರಿಗೆ ಸಮಾಜ ಸುಧಾರಣೆಯ,ಜಗತ್ತಿನ ಉದ್ಧಾರದ ತೆವಲು ಅಂಟಿರುತ್ತದೆಯಾಗಲಿ ಸಂತರು,ಶರಣರು,ಮಹಾತ್ಮರುಗಳಿಗೆ ಪ್ರಚಾರದ ಗೀಳು ಇರುವುದಿಲ್ಲ.ಮಹಾತ್ಮರುಗಳು ಹೇಳಿಕೊಳ್ಳದೆ ಸಮಾಜಸುಧಾರಣೆಯ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ.ಸೂರ್ಯೋದಯವಾದೊಡನೆ ಕತ್ತಲೆಯ ಕರಗುವಂತೆ ಸಂತರು- ಶರಣರು,ಯೋಗಿಗಳು,ಮಹಾತ್ಮರ ಬದುಕೇ ಸಮಾಜ- ದೇಶ,ವಿಶ್ವಕ್ಕೆ ಸ್ಫೂರ್ತಿಯಾಗುತ್ತದೆ,ಜನತೆಯ ಉದ್ಧಾರದ ಪ್ರೇರಕಶಕ್ತಿಯಾಗುತ್ತದೆ.ಮಲ್ಲಿಗೆಯು ಬಳ್ಳಿಯಲ್ಲಿಯೇ ಮಘಮಘಿಸಿ ತನ್ನ ಸುತ್ತಲೂ ಸುಗಂಧವಾಸನೆಯನ್ನು ಹರಡುವಂತೆ ಮಹಾತ್ಮರುಗಳು ತಾವಿದ್ದ ಎಡೆಯಿಂದಲೇ ಜಗತ್ತಿನ ಉದ್ಧಾರವನ್ನು ಸಂಕಲ್ಪಿಸಿ ತಮ್ಮ ವ್ಯಕ್ತಿಶ್ರೀಯ ಮಹೋನ್ನತಿಯಿಂದ, ಶಕ್ತಿತರಂಗಗಳನ್ನು ಹೊರಸೂಸುತ್ತ ಸ್ಫೂರ್ತಗೊಳಿಸುತ್ತಾರೆ ಜನರನ್ನು,ಜಗತ್ತನ್ನು.ಪ್ರಚಾರಪ್ರಿಯರ ಜಗದೋದ್ಧಾರದ ಸೇವೆಯು ತತ್ಕಾಲಕ್ಕೆ ಇಲ್ಲವೆ ಕೆಲವು ವರ್ಷಗಳವರೆಗೆ ಮಾತ್ರ ಸೀಮಿತವಾದರೆ ಸತ್ಪುರುಷರು,ಆಧ್ಯಾತ್ಮಸಾಧಕರು,ಯೋಗಿಗಳು ತಾವು ಕಾಲವಾದ ಬಳಿಕವೂ ಸಾಧಿಸುತ್ತಾರೆ ಲೋಕೋದ್ಧಾರವನ್ನು ವಿಶ್ವಾತ್ಮರಾಗಿ ,ಕಾಲ- ದೇಶಾತೀತರಾಗಿ.

02.01.2022