‘ಬದಲಾಗುವದೆಂದರೆ ಕ್ಯಾಲೆಂಡರಿನ ಹಾಳೆ ಬದಲಿಸಿದಂತೆ ಅಲ್ಲ’
ಲೇಖಕ: ದೀಪಕ್ ಶಿಂಧೆ
ಇಂದು ಹೊಸ ವರುಷವಂತೆ
ಕೆಲವರಿಗೆ ಅದೇ ಹರುಷವಂತೆ. ಮತ್ತೆ ಪೂರ್ವದಲ್ಲಿ ಸೂರ್ಯ ಉದಯಿಸಿದ್ದಾನೆ
ಹೊಸತೆನೂ ಇಲ್ಲ.
ಅದೆ ನದಿಯ ತೊರೆ,ಬೀಸುವ ಸುಳಿಗಾಳಿ,ಬೇಕೆಂದೇ ಕಿತ್ತ ಸೈಲೆನ್ಸರ್ ಬೈಕಿನ ಸದ್ದು,ಆಕೆ
ಅದೆಷ್ಟು ಅದುಮಿಟ್ಟರೂ ಮತ್ತೆ ಹೊರ ಹೊಮ್ಮಿ ನಿದ್ದೆಗೆಡಿಸುವ ಪಕ್ಕದ ಮನೆಯ ಅಜ್ಜಿಯ ಕೆಮ್ಮು,ಮಕ್ಕಳು ಬಿಟ್ಟು ಹೋದ ಮುದುಕರ ಗೊಣಗಾಟ
ಹೌದು ಯಾವದೂ ಬದಲಾಗಿಲ್ಲ ಹೊಸತೆನೂ ಇಲ್ಲ
ಹಳೆಯದಾಗಿದೆ ಕ್ಯಾಲೆಂಡರಿನ ಹಾಳೆ,ಬದಲಾಗಿದೆ ಒಂದು ಅಂಕೆ,ಗಡಿಯಾರದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆ,ಮತ್ತು ಆಯುಷ್ಯದ ಒಂದು ದಿನ.
ಮತ್ತೆ ನಿತ್ಯದಂತೆ ಎದುರಾದಾಗ ಅದೆ ಬಣ್ಣದ ಮಾತು,ನಯ-ವಿನಯದ ನಾಜೂಕು ನಾಟಕ.ಉಭಯ ಕುಶಲೋಪರಿ
ಹೊಸತೆನೂ ಇಲ್ಲ.ಹೌದು ಎನೂ ಬದಲಾಗಿಲ್ಲ
ನಿನ್ನೆ ರಾತ್ರಿಗೆ ಭರ್ಜರಿ ಬಾಡೂಟದ ಪಾರ್ಟಿ,
ಗುಂಡು-ತುಂಡು,ಹಳೆ ಗೆಳೆಯರ ಜೊತೆ ಕಾಲಹರಣ ಮತ್ತದೆ ಹ್ಯಾಂಗೋವರ್ರು,ಬಾರಿನ ಕಡೆಗೆ ಮತ್ತದೆ ನೋಟ ಹೊಸತೇನೂ ಇಲ್ಲ.ಹೌದು ಎನೂ ಬದಲಾಗಿಲ್ಲ
ಅದೆ ಹಳೆಯ ಗಾಯಗಳು, ಮಾಯದ ನೋವುಗಳು, ನೊಂದ ಹೃದಯಕ್ಕೆ ಒಂಟಿತನವೇ ಸಂಗಾತಿ
ಮತ್ತದೆ ಏಕಾಂತ ಹೊಸತೆನೂ ಇಲ್ಲ ಎನೂ ಬದಲಾಗಿಲ್ಲ.
ಯಾರೊ ಹೊಸದಾಗಿ ಕೊಂಡ ಕಾರು,
ನೆರೆ ಮನೆಯವರ ಗೃಹ ಪ್ರವೇಶ,ಎದುರು ಮನೆಯಲ್ಲಿ ಬಂದಿಳಿದ ನವದಂಪತಿಗಳ ಜೋಡಿ,ಒಂದಷ್ಟು ನಗು-ಹರಟೆ ಜೊತೆಗಷ್ಟು ಬಣ್ಣದ ಬಟ್ಟೆ ಆದರೆ ಎನೂ ಬದಲಾಗಿಲ್ಲ
ಮತ್ತೆ ಬದಲಾಗುವ ಮಾತುಗಳು, ಸುಧಾರಿಸುವ ಕನಸುಗಳು, ಖಾಲಿ ಜೋಳಿಗೆಯ ಫಕೀರನ ಹತ್ತಿರ ಖಾಲಿ ಜೇಬಿನ ಹೊರತು ಮತ್ತೆನೂ ಇಲ್ಲ
ಹೌದು ಇಲ್ಲಿ ಯಾವುದೂ ಇನ್ನೂ ಬದಲಾಗಿಲ್ಲ.
ಬದಲಾಗುವದೆಂದರೆ ನಮ್ಮವರ
ಮೊದಲ ನೊಟಕ್ಕೆ ನಾವು ಗುರುತು ಸಿಗದಂತಾಗುವದಲ್ಲ.
ಡ್ರೆಸ್ಸು,ಒಡವೆ,ಬೈಕಿನ ಖರೀದಿಗಳೂ ಅಲ್ಲ.
ಯಾರನ್ನೋ ಜರಿದು ದೂರುತ್ತ ಕೂರುವದೂ ಅಲ್ಲ.
ಬದಲಾಗುವದೆಂದರೆ ಕ್ಯಾಲೆಂಡರಿನ ಹಾಳೆ ಬದಲಿಸುವದಲ್ಲ.ಒಂದು
ಪೆಗ್ಗು ಜಾಸ್ತಿ ಹಾಕಿ,ಡಾಲ್ಬಿ ಹಚ್ಚಿ ಕೇಕು ಕತ್ತರಿಸಿ ಹುಚ್ಚೆದ್ದು ಕುಣಿಯುವದೂ ಅಲ್ಲ. ನಮ್ಮತನವ ನಾವು ಮರೆಯುವದಂತು ಅಲ್ಲವೇ ಅಲ್ಲ.
ಬದಲಾಗುವದೆಂದರೆ ನಮ್ಮ
ತಪ್ಪುಗಳ ತಿದ್ದಿಕೊಂಡು,ಮತ್ತೊಬ್ಬರ ಮಣ್ಣಿಸುತ್ತ,ಉಪಕರಿಸಿದವರ ಧ್ಯಾನಿಸುತ್ತ.ಹಳೆಯ ಶತ್ರುಗಳ ಜೊತೆಗಿನ ವೈರತ್ವ,ವಿನಾಕಾರಣದ ಮುನಿಸು-ದ್ವೇಷಗಳ ಮರೆತು
ಕೈಗೆ-ಕೈಗಳ ಮಿಲಾಯಿಸಿ ನಗುತ್ತ ಹೆಜ್ಜೆ ಹಾಕುವದೂ ಕೂಡ…..

ಮೊ:9482766018