ಬಸವ ದರ್ಶನ ಮಾಲೆ ೦೬: ಕಾಲಪಕ್ವವಾದಲ್ಲದೆ ಪ್ರಾಪ್ತಿಯಾಗದು ಶಿವಾನುಗ್ರಹ – ಮುಕ್ಕಣ್ಣ ಕರಿಗಾರ

ಕಾಲಪಕ್ವವಾದಲ್ಲದೆ ಪ್ರಾಪ್ತಿಯಾಗದು ಶಿವಾನುಗ್ರಹ

ಲೇಖಕರು: ಮುಕ್ಕಣ್ಣ ಕರಿಗಾರ

ಮನಸ್ಸು ಒಳಿತನ್ನು ಬಯಸುತ್ತದೆ.ಒಳ್ಳೊಳ್ಳೆಯ ಕನಸುಗಳನ್ನು ಕಾಣುತ್ತೇವೆ.ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳುವುದರತ್ತ ಎಲ್ಲರ ಆಸಕ್ತಿ.ಆದರೆ ಕೆಲವೊಮ್ಮೆ ಅಂದುಕೊಂಡಂತೆ ಆಗದು.ಬಯಸಿದ್ದೆಲ್ಲ ಈಡೇರದು.ಆಸೆ ಕೈಗೂಡದೆ ಇದ್ದಾಗ ದುಃಖಿಸುತ್ತದೆ ಮನಸ್ಸು.ಕಾಲ ಪಕ್ವವಾದಲ್ಲದೆ ನಮ್ಮ ಬಯಕೆಗಳು ಕೈಗೂಡವು.ಜಗನ್ನಿಯಾಮಕನಾದ ಪರಶಿವನು ಯಾರಿಗೆ,ಯಾವಾಗ,ಏನು ಕೊಡಬೇಕು ಎಂದು ಸಂಕಲ್ಪಿಸುತ್ತಾನೋ ಆ ಸಮಯದಲ್ಲಿ ಕರುಣಿಸುತ್ತಾನೆ ಅವರಿಗದನ್ನು.ಪರಶಿವನ ಲೀಲಾಭೂಮಿಯಾದ ಈ ಪ್ರಪಂಚದಲ್ಲಿ ಶಿವನ ಸಂಕಲ್ಪದ ಹೊರತು ಮತ್ತೇನೂ ಘಟಿಸದು.ಶಿವಸಂಕಲ್ಪದಂತೆ ನಡೆದಿರುವ ವಿಶ್ವವ್ಯವಹಾರದೊಳು ಅದೃಷ್ಟ,ಉನ್ನತಿಕೆ,ಉತ್ತಮಿಕೆಗಳು ಬರುವ ಕಾಲಕ್ಕೆ ಬರುತ್ತವೆ.ನಾವು ಕರೆದಾಗಲೇ ಬರುವುದಿಲ್ಲ.ಆದ್ದರಿಂದ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಶಿವನನ್ನು ಬೇಡಬೇಕು ಮತ್ತು ಶಿವನು ನೀಡುವವರೆಗೂ ಕಾಯಬೇಕು ಎನ್ನುತ್ತಾರೆ ಬಸವಣ್ಣನವರು.

ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದೊಡಿಲ್ಲ ; ಕಂಡಯ್ಯಾ !
ತಾಳಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ!
ಕೂಡಲ ಸಂಗಮದೇವ ಕೇಳಯ್ಯಾ,
ನೀವೀವ ಕಾಲಕ್ಕಲ್ಲದಿಲ್ಲ,ಕಂಡಯ್ಯಾ!

ನಮ್ಮ ನೆರೆಯವರೊ,ಬಂಧು ಮಿತ್ರರೋ ಚೆನ್ನಾಗಿದ್ದಾರೆ ,ನಾವು ಅವರಂತೆ ಆಗಬೇಕು ಎಂದು ಬಯಸುವುದು ಸಹಜ.ಅಥವಾ ನನಗೆ ಒಳ್ಳೆಯ ಅದೃಷ್ಟ,ಅವಕಾಶ ಸಿಗಲಿ ಎಂದು ಆಶಿಸುವುದು ಸಹಜ.ಆದರೆ ನಾವು ಇಚ್ಛೆ ಪಟ್ಟಾಕ್ಷಣ ಕೈಗೂಡವು ನಮ್ಮ ಆಸೆಗಳು.ಅದಕ್ಕಾಗಿ ಕಾಯಬೇಕಾಗುತ್ತದೆ ಕಾಲಕೂಡಿ ಬರುವವರೆಗೆ.ತಾಳದ ಹಣ್ಣುಗಳು ರುಚಿಯಾಗಿರುತ್ತವೆ.ಆದರೆ ಅಕಾಲದಲ್ಲಿ ತಾಳದ ಹಣ್ಣುಗಳು ಸಿಗಲಿ ಎಂದರೆ ಹೇಗೆ? ಅಥವಾ ಎತ್ತರವಾದ ತಾಳೆಮರದ ಕೆಳಗೆ ಅದರ ಬೊಡ್ಡೆಗೆ ಕೈಕೊಟ್ಟು ಮೇಲೆ ನೋಡಿ ಹಣ್ಣು ಬೀಳಲಿ ಎಂದು ಆಶಿಸಿದರೆ ಉದುರುತ್ತವೆಯೆ ತಾಳದ ಹಣ್ಣುಗಳು?ಒಂದೋ ಕಲ್ಲಿನಿಂದ ಹೊಡೆದು ನೆಲಕ್ಕೆ ಕೆಡಹಿ ತಿನ್ನಬೇಕು ಇಲ್ಲವೆ ತಾಳಮರದ ಗೊಂಚಲಲ್ಲಿ ಹಣ್ಣುಪಕ್ವವಾಗಿ ಕೆಳಕ್ಕೆ ಉದುರುವವರೆಗೆ ಕಾಯಬೇಕು ಸವಿಯಬೇಕು ತಾಳದ ಹಣ್ಣಿನ ಸವಿಯನ್ನು ಎಂದರೆ.ಅಕಾಲದಲ್ಲಿ,ಹಣ್ಣು ಪಕ್ವವಾಗದ ಕಾಲದಲ್ಲಿ ತಾಳಮರದ ಬೊಡ್ಡೆಗೆ ಕೈಯಾನಿಸಿ,ಎಷ್ಟು ಹೊತ್ತು ಗೋಣೆತ್ತಿ ಮೇಲೆ ನೋಡಿದರೆ ಏನುಫಲ? ಏನು ಪ್ರಯೋಜನ? ಬಸವಣ್ಣನವರು ಹೇಳುವ ಮಾತು ‘ಕೂಡಲ ಸಂಗಮದೇವ ಕೇಳಯ್ಯಾ,
ನೀವೀವ ಕಾಲಕ್ಕಲ್ಲದಿಲ್ಲ’.ಅಂದರೆ ಮಹಾದಾನಿಯಾದ ಶಿವನು ಕೊಟ್ಟರಷ್ಟೇ ನಮ್ಮ ಬಯಕೆ ಈಡೇರಲು ಸಾಧ್ಯ.ಜಗದೀಶ್ವರನಾದ ಶಿವನು ಅನುಗ್ರಹಿಸುವ ಕಾಲದವರೆಗೂ ಕಾಯಬೇಕು.ಭೋಗ- ಮೋಕ್ಷಗಳೆರಡನ್ನೂ ಅನುಗ್ರಹಿಸಬಲ್ಲ ಶಿವನು ತಾನು ಇಷ್ಟಪಟ್ಟು ಅನುಗ್ರಹಿಸುವವರೆಗೆ ಕಾಯಬೇಕು.ತನ್ನನ್ನು ನಂಬಿದವರನ್ನು ಕೈಬಿಡದೆ ಉದ್ಧರಿಸುತ್ತಾನೆ ಶಿವನು ಎನ್ನುವ ನಂಬಿಕೆಯಿಂದ ನಮ್ಮ ಉದ್ಧರಣದ ಕಾಲ ಬರುವವರೆಗೆ ಕಾಯಬೇಕು.

ಶಿವನು ಅನುಗ್ರಹಿಸಿದ ಕಾಲಕ್ಕೆ ಬಯಸಿದ್ದಕ್ಕಿಂತ ಹೆಚ್ಚಿನ ಲಾಭ ಪ್ರಾಪ್ತಿಯಾಗುತ್ತದೆ.ಶಿವನು ನೀಡುವ ಕಾಲಕ್ಕೆ ಏನೆಲ್ಲವೂ ಸಾಧ್ಯವಾಗುತ್ತದೆ ಎನ್ನುವುದನ್ನು ಸಾರುವ ಬಸವಣ್ಣನವರ ವಚನ ;

ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು
ಹರಿದು ಹೆದ್ದೊರೆಯ ಕೆರೆ ತುಂಬಿದಂತಯ್ಯಾ !
ನೆರೆಯದ ವಸ್ತು ನೆರೆವುದು ನೋಡಯ್ಯಾ!
ಅರಸು ಪರಿವಾರ ಕೈವಾರ ನೋಡಯ್ಯಾ !
ಪರಮನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ
ಕಲ್ಲು ಕೊಂಡಂತೆ, ಕೂಡಲ ಸಂಗಮದೇವಾ !

ಶಿವನು ಪ್ರಸನ್ನನಾಗಿ ತನ್ನ ಭಕ್ತರನ್ನು ಅನುಗ್ರಹಿಸಿದ ಕಾಲಕ್ಕೆ ಸಿರಿ ಸಂಪತ್ತು ಬೇಡ ಬೇಡವೆಂದರೂ ಬೆನ್ನಹಿಂದೆಯೇ ಹರಿದುಬರುತ್ತದೆ ಹಿರಿಯ ತೊರೆಯು ಹರಿದು ಕೆರೆಯತುಂಬಿದಂತೆ.ಪ್ರವಾಹೋಪಾದಿಯಲ್ಲಿ ಸಿರಿ ಸಂಪತ್ತು ಸೌಭಾಗ್ಯಗಳು ಭಕ್ತನ ಮನೆತುಂಬುತ್ತವೆ.ಶಿವ ಕಾರುಣ್ಯವಾದ ಕಾಲಕ್ಕೆ ಒದಗಿಬಾರದಿದ್ದ ವಸ್ತುಗಳು ಕರಸುಲಭವಾಗಿ ಒದಗುತ್ತವೆ; ಅಸಾಧ್ಯವಾದ ಕೆಲಸ ಕಾರ್ಯಗಳು ಕರಸುಲಭವಾಗುತ್ತವೆ.ನೆನೆಸದ ಮುನ್ನವೇ ಕೈಗೂಡುತ್ತವೆ ಬಯಕೆಗಳು.ಶಿವಾನುಗ್ರಹವಾದ ಕಾಲಕ್ಕೆ ಅರಸುತನ,ದೊರೆತನವೂ ಒದಗಿ ಬರುತ್ತದೆ.ಮಂದಿ- ಮಕ್ಕಳು,ಬಂಧು- ಬಾಂಧವರು ಉಂಟಾಗುತ್ತಾರೆ.ಆದರೆ ಶಿವನು ತನ್ನ ಭಕ್ತನನ್ನು ಮರೆತರೆ ಇಲ್ಲವೆ ಉದಾಸೀನ ಮಾಡಿದರೆ ಹಾಲು ತುಂಬಿದ ಕೊಡಕ್ಕೆ ಕಲ್ಲಿನಿಂದ ಹೊಡೆದಂತೆ.ಅಂದರೆ ಅದೃಷ್ಟ ಮತ್ತು ಅವಕಾಶಗಳು ಒಡೆದ ಮಡಕೆಯಿಂದ ಹಾಲು ಹೊರಚೆಲ್ಲಿ ಮಣ್ಣುಪಾಲಾಗುವಂತೆ ಶಿವನು ಭಕ್ತನನ್ನು ಮರೆತ ಕಾಲಕ್ಕೆ ಅವನ ಬದುಕು,ಭವಿಷ್ಯಗಳು ಮಣ್ಣುಪಾಲಾಗುತ್ತವೆ.ಹರನ ಅನುಗ್ರಹ ಪಡೆಯುವುದು ಎಷ್ಟು ಮುಖ್ಯವೋ ಹಾಗೆಯೇ ಹರನ ಅನುಗ್ರಹವನ್ನು ಕಾಯ್ದುಕೊಳ್ಳುವುದು ಸಹ ಅಷ್ಟೇ ಮುಖ್ಯ ಎನ್ನುತ್ತಾರೆ ಬಸವಣ್ಣನವರು.ಹರನು ತಾನು ಮನಸ್ಸು ಮಾಡುವವರೆಗೆ ಭಕ್ತರ ಉದ್ಧಾರ ಸಾಧ್ಯವಿಲ್ಲ.ಹರನ ಅನುಗ್ರಹವಾದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.ಆದರೆ ಹರನು ತನ್ನನ್ನು ಮರೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆಯು ಭಕ್ತನದು.ಶಿವನು ತನ್ನ ಭಕ್ತರಿಗೆ ಸಿರಿ ಸಂಪತ್ತನ್ನಿತ್ತು ಅವರನ್ನು ಪರೀಕ್ಷಿಸುತ್ತಾನೆ.ಸಂಪತ್ತನ್ನು ಸದ್ವಿನಿಯೋಗಕ್ಕೆ ಬಳಸಿದರೆ,ಸತ್ಕಾರ್ಯಕ್ಕೆ ಬಳಸಿದರೆ,ಶಿವಕಾರ್ಯಕ್ಕೆ ಬಳಸಿದರೆ ಪ್ರಸನ್ನನಾಗಿ ಶಿವನು ಕುಬೇರನ ಐಶ್ವರ್ಯವನ್ನೇ ಅನುಗ್ರಹಿಸುತ್ತಾನೆ.ಆದರೆ ಸಂಪತ್ತು ಬಂದ ಕಾಲದಲ್ಲಿ ಉನ್ಮತ್ತನಾಗಿ ವರ್ತಿಸಿ,ಮಾಡಬಾರದ್ದನ್ನೆಲ್ಲ ಮಾಡಿದರೆ ಬಂದ ಸಂಪತ್ತು,ಹಣ- ಅಧಿಕಾರಗಳು ಬಂದಹಾಗೆಯೇ ಕರಗಿಹೋಗುತ್ತವೆ.ಶಿವ ಭಕ್ತರಾದವರು ಶಿವನ ಅನುಗ್ರಹಕ್ಕೆ ಪಾತ್ರರಾಗಬೇಕು ಮತ್ತು ಸದಾ ಕಾಲವೂ ಶಿವಾನುಗ್ರಹವನ್ನುಣ್ಣಬೇಕು,ಶಿವನ ಆಗ್ರಹಕ್ಕೆ ತುತ್ತಾಗಬಾರದು ಎಂದು ಎಚ್ಚರಿಸಿದ್ದಾರೆ ಶಿವಭಕ್ತರನ್ನು ಬಸವಣ್ಣನವರು.

ಮುಕ್ಕಣ್ಣ ಕರಿಗಾರ

01.01.2022