ಅರ್ಧ ನೆನಪಿನ ಕನಸಲ್ಲಿ ಹೆಪ್ಪುಗಟ್ಟಿದ ಕಥೆಗಳು- ರಾಮಕೃಷ್ಣ ಕಟ್ಕಾವಲಿ

ಅರ್ಧ ನೆನಪಿನ ಕನಸಲ್ಲಿ ಹೆಪ್ಪುಗಟ್ಟಿದ ಕಥೆಗಳು

ಲೇಖಕರು: ರಾಮಕೃಷ್ಣ ಕಟ್ಕಾವಲಿ

ಬದುಕು ಆಗೆಯೇ ಜಾರಿ ಹೋದಾಗ ಅವುಗಳನ್ನು ಮೆಲುಕು ಹಾಕುವ ಪರಿ ಒಬ್ಬೊಬ್ಬರದ್ದು ಒಂದೊಂದು ಬಗೆಯಾಗಿರುತ್ತೆ.

ಅನನ್ಯ ತುಷಿರಾ ಇವರ ನೆನಪುಗಳು ಕಥೆಯಾಗಿ ಹೆಪ್ಪುಗಟ್ಟಿವೆ. ವೃತ್ತಿಯಿಂದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯ ಆಯುಕ್ತರಾಗಿರುವ ಇವರು, ಕಥೆಯ ಹಂದರಕ್ಕೆ ಬಂದರೆ ವೃತ್ತಿಗೂ ಕಥೆಗಳಿಗೆ ಸಂಬಂಧವೇ ಇಲ್ಲದಂತೆ ಬರೆದಿದ್ದಾರೆ.

ಅರ್ಧ ನೆನಪು ಅರ್ಧ ಕನಸು ಎನ್ನುವ ಶಿರೋನಾಮದಲ್ಲಿ ಪ್ರಕಟವಾದ ಅನನ್ಯ ತುಷಿರಾ (ಸವಿತಾ. ಆರ್. ಇನಾಮದಾರ್)
ಇವರ ಕಥಾ ಸಂಕಲನವನ್ನು ಜೋಗಿ ಸಂಪಾದಕತ್ವದಲ್ಲಿ ಅಂಕಿತ ಪುಸ್ತಕ ಪ್ರಕಾಶಕರು ಪ್ರಕಟಿಸಿದ್ದಾರೆ.

ಈ ಸಂಕಲನದಲ್ಲಿ ಹದಿನಾಲ್ಕು ಕಥೆಗಳು ವಿಭಿನ್ನ ಕಥಾವಸ್ತುವನ್ನು ಹೊಂದಿವೆ.
ಕಥೆ ಹೇಳುವ ಶೈಲಿ ಜೋಳದ ಕಡಕ್ ರೊಟ್ಟಿ ಖಾರದ ಪುಡಿಯಂತೆ ತಮ್ಮ ನೆಲದ ಭಾಷೆಯನ್ನೇ ಬಳಸಿದ್ದಾರೆ.
ಆಗಾಗಿ ಕಥೆಗಳು ಅಯಸ್ಕಾಂತೀಯ ಗುಣವನ್ನು ಹೊಂದಿವೆ.

“ಜೋಳದ ಕಾಳು” ಎನ್ನುವ ಕಥೆಯು ವರ್ತಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ಶ್ರೀಕಂಠ ಸ್ವಾಮಿ ಮತ್ತು ರಾಜೇಸಾಬರ ಗೆಳೆತನದ ಪರೀಕ್ಷೆಗೊಡ್ಡುವ ಹಾಗೆ ನಡೆಯುವ ಘಟನೆಗಳು ಕೊನೆಗೆ ಗೆದ್ದಿದ್ದು ಸ್ನೇಹವಾದರೂ, ಒಂದು ಜೋಳದ ಚೀಲದ ಕಳುವಿನ ಆರೋಪ ನಾಲ್ಕು ಜೋಳದ ಚೀಲವಾಗಿರುತ್ತವೆ. ರಾಜೇಸಾಹೇಬನನ್ನು ಉಳಿಸಲು ಶ್ರೀಕಂಠ ಸ್ವಾಮಿ ತನ್ನ ಸ್ವಲ್ಪ ಭೂಮಿಯನ್ನೇ ಬರೆದು ಕೊಡುತ್ತಾನೆ. ಕಥೆಯ ತಿರುವು ಎಂದರೆ ಒಂದು ಚೀಲ ಜೋಳವನ್ನು ಒಯ್ದ ರಾಜಸಾಹೇಬನನ್ನು ಗಮನಿಸಿದ ಮಾಧುಗೌಡನು ಮೂರು ಚೀಲವನ್ನು ಒಯ್ದು ಅದರ ಭಾರವನ್ನು ರಾಜಸಾಹೇಬನ ಹೆಗಲಿಗೆ ಕಟ್ಟುತ್ತಾರೆ. ಈ ಮಾಧುಗೌಡನೆ ಮುಂದಿನ ಪಂಚರ ಮುಖ್ಯಸ್ಥನಾಗಲಿದ್ದಾನೆ ಎನ್ನುವುದೇ ಕಥೆಯ ವ್ಯಂಗ್ಯವಾಗಿದೆ.

ನನಗೆ ಸಮಾಜದಲ್ಲಿ ಇನ್ನೂ ಜೀವಂತವಾಗರಿವ ವ್ಯವಸ್ಥೆಯಂತೆ ಕಂಡಿದ್ದು “ಹಾದಿ” ಎನ್ನುವ ಕಥೆ.

ಶೀವಮಾದಯ್ಯ ಕಥಾ ನಾಯಕ.
ಅವನು ಮಿರ್ಚಿ, ಚಹಾದ ಅಂಗಡಿ ಶಾಲೆಯ ಪಕ್ಕದಲ್ಲಿಯೇ ಇತ್ತು. ಎಣ್ಣೆಗೆ ಬಿದ್ದ ಮಿರ್ಚಿಯ ವಾಸನೆ ಹಬ್ಬಲು ಶುರುವಾಯಿತೆಂದರೆ ಶಾಲೆಯ ಊಟದ ಬೆಲ್ ಹೊಡೆಯುತ್ತೆ ಅಂತ ಅರ್ಥ. ಶಾಲೆಯ ಶಿಕ್ಷಕರಿಗೆ ಶಿವಮಾದಯ್ಯನ ಭಜ್ಜಿಯೊಂದಿಗೆ ಅವಿನಾಭಾವ ಸಂಬಂಧ ಬೆಳೆದಿತ್ತು.

ಶನಿವಾರ ಬಂತು ಅಂದ್ರೆ ಶಿವಮಾದಯನ್ಯನ ಮಿರ್ಚಿ ಇಲ್ಲದೆ ಆ ದಿನ ಮುಗಿಯುತ್ತಿಲ್ಲ ಎನ್ನುವಷ್ಟುರ ಮಟ್ಟಿಗೆ ಶಾಲೆಯ ಶಿಕ್ಷಕರೆಲ್ಲಾ ಹೊಂದಿಕೊಂಡಿದ್ದರು. ವರ್ಷಗಳು ಉರುಳುತ್ತಿದಂತೆ ಶಿವಮಾದಯ್ಯ ದತ್ತಾಂಶ ಒಂದೂ ಬಿಡದೆ ಬೇಡವೆಂದರೂ ಬಂದು ತಲುಪಿತ್ತು. ಅವನ ಊರು, ಧರ್ಮ, ಜಾತಿ ತಿಳಿಯುತ್ತಿದಂತೆ ಇಬ್ಬರು ಶಿಕ್ಷಕರನ್ನು ಬಿಟ್ಟರೆ ಉಳಿದವರು ಊರಿನ ಇನ್ನೊಂದು ಹೊಟೆಲ್ ನಿಂದ ಮಿರ್ಚಿ ತರಿಸಿಕೊಂಡ ವಿಷಯ ಬೆಂಕಿಯಂತೆ ಊರ ತುಂಬಾ ಹರಡಿತ್ತು‌.
ಕೊನಗೆ ಶಿವಮಾದಯ್ಯ ಬೇರೆ ವೃತ್ತಿ ಆಯ್ದುಕೊಂಡ ಊರು ಬಿಟ್ಟು ಹೋಗುತ್ತಾನೆ. ಇದು ಕಥೆಯಾಗದೆ ಜೀವಂತವಾಗಿ ಉಳಿದಿರುವ ಜಾತೀಯ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತಿದೆ.

ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗುವ ಅವಾಂತರಗಳು ಅಷ್ಟಿಷ್ಟಲ್ಲ. ಆ-ನಿಕೇತ್ ಎನ್ನುವ ಕಥೆಯಲ್ಲಿ ಫೇಸ್ ಬುಕ್ ನಲ್ಲಿ ಅನಾಮಿಕನೊಂದಿಗೆ ಉಂಟಾದ ಬಂಧವು ಕೊನೆಗೆ ಸಾವಿನೊಂದಿಗೆ ಕೊನೆಗೊಂಡಿದ್ದು ದುರಂತವಾಗಿದೆ. ಈಗಿನ ಜಾಯಮಾನದ ಹುಡುಗರು ಓದಲೇ ಬೇಕಾದ ಕಥೆಯಾಗಿದೆ.

ಕಥೆಗಾರ್ತಿ ಅನನ್ಯಳಿಗೆ ಕಥೆಯ ಕಸುಬುಗಾರಿಕೆ ಒಲಿದಿದೆ.
ದಕ್ಕುವ ಬೆಳಕು, ಉರುಳು, ಭ್ರಮೆಯ ಬಸರಿನಲ್ಲಿ, ಹೂ ಗಂಧ ಹನಿ ಹಸಿರು ಮತ್ತು ರಮಾಕಾಂತ ಮುಂತಾದವು ಸಂಕಲದ ಮುಖ್ಯ ಕಥೆಗಳಾಗಿವೆ.
ಇದು ಇವರ ಮೊದಲ ಕಥಾ ಸಂಕಲನ ಎನ್ನುವ ರಿಯಾಯಿತಿಯಂತು ಬೇಕಾಗಿಲ್ಲ ಎನ್ನುವ ಮಟ್ಟಿಗೆ ಕಥೆಗಳನ್ನು
ಹೇಳಿದ್ದಾರೆ.

ವರ್ತಮಾನದ ವಿದ್ಯಮಾನಗಳಿಗೆ ಬಿಡುಗಣ್ಣಾಗಿರುವ ಇವರು, ತಾವು ಬದುಕುತ್ತಿರುವ ಕಾಲವನ್ನೇ ಕಥೆಗಳನ್ನಾಗಿಸುವ ಉತ್ಸಾಹಿಗಳು. ಅವರ ಕಥೆಗಳಲ್ಲಿನ ಪಾತ್ರಗಳ ನೋವು ಮತ್ತು ಅಸಹಾಯಕತೆ ಸಹೃದಯರನ್ನು ಕಂಗೆಡಿಸುವಂತಹದ್ದು ಹಾಗೂ ರೋಗಗ್ರಸ್ತ ಸಮಾಜದ ಬಗ್ಗೆ ಗಮನ ಸೆಳೆಯುವಂತಹದ್ದು.
ಬದುಕಿನ ಹೋರಾಟ, ಸಾಮಾಜಿಕ ಸಮಸ್ಯೆ, ಲೌಕಿಕ ಬದುಕಿನ ಸಂಬಂಧ ಕಟ್ಟಿಕೊಡುವ ಕಥೆಗಳಿವೆ, ಹೀಗೆನ್ನುವುದಕ್ಕಿಂತ ಕಥೆ ಇರುವುದೇ ಜನ ಸಾಮಾನ್ಯರದ್ದು ಎನ್ನಬಹುದು.

ಕಥೆಯಲ್ಲಿ ಚಿಕ್ಕ ಪುಟ್ಟ ನೂನ್ಯತೆಗಳಿವೆ. ಅತೀಯಾದ ಪ್ರಾದೇಶಿಕ ಭಾಷೆಯ ಪ್ರಯೋಗ ಎಲ್ಲಾ ಓದುಗರನ್ನು ತಲುಪದೇ ಇರಬಹುದು. ಕೆಲವು ಕಡೆ ಕಥೆಯ ಚೌಕಟ್ಟನ್ನು ಬಿಟ್ಟು ಹೊಗಿದ್ದುಂಟು. ಅದನ್ನು ಮೀರುವುದು ದೊಡ್ಡ ವಿಷಯವೇನಲ್ಲ‌

ಪ್ರೀತಿ, ಪ್ರೇಮಕ್ಕೆ ಹಲವು ಆಯಾಮಗಳು ಹಲವು ಸಂಕಟಗಳಿಗೂ ಸ್ಪಂದಿಸುವ ನೆಲ ವಿಜಯಪುರ ಜಿಲ್ಲೆಯ ತಾಳಿಕೋಟೆ‌. ಈ ಪರಿಸರದ ಸುತ್ತಲಿನ ಬದುಕಿನ ಭಾಗವೇ ಇವರ ಕಥೆಗಳಲ್ಲಿವೆ. ಈ ನೆಲದ ಗುಣವೇ ಅಂತದ್ದು. ರಕ್ತ ಸಂಬಂಧವನ್ನು, ಶೋಷಣೆ, ಬವಣೆ, ಅನ್ಯಾಯ, ಅವಜ್ಞಾನಗಳ ಪರಿಯನ್ನು ಎಳೆಎಳೆಯಾಗಿ ಬಿಡಿಸಿ ತೋರಿಸುವ ಒಂದೊಂದು ಬಗೆಯ ಚಿತ್ರಣ ಇಲ್ಲಿನ ಬಹುತೇಕ ಕತೆಗಳಲ್ಲಿ ಕಣ್ಣುಕಟ್ಟುತ್ತದೆ.
ಇಲ್ಲಿನ ಕತೆಗಳು ಸವೆದ ಬದುಕಿನ ಕತೆಗಳಲ್ಲ; ಸವಿದ ಬದುಕಿನ ಚಿತ್ರಣಗಳು.

ಒಂದೊಂದು ಕಥೆಯನ್ನು ಓದುತ್ತಿದ್ದರೆ, ನಮ್ಮ ಸುತ್ತಲೂ ಹೆಣೆದಿರುವ ಕಥೆಗಳಂತೆ ಆಪ್ತವೆನಿಸುತ್ತವೆ. ಕಥೆಗಳನ್ನು ಓದುತ್ತಿರುವಾಗ ನಮ್ಮ ಪಾತ್ರಗಳು ಮುಂದೆ ಬಂದು ನಿಂತು ನಮ್ಮನ್ನು ಅಣಿಕಿಸುತ್ತವೆ. ಅಷ್ಟೂ ಸಾಲದು ಎನ್ನುವಂತೆ ನಮ್ಮ ಕಣ್ಣಂಚ್ಚು ಒದ್ದೆಯಾಗಿಸುತ್ತವೆ‌.

ಅದಕ್ಕಾಗಿ ಕಥೆಗಾರ್ತಿ ಹೇಳಿದ್ದು
ಅರ್ಧ ನೆನಪು ಅರ್ಧ ಕನಸು ಎಂದು‌.

ರಾಮಕೃಷ್ಣ ಕಟ್ಕಾವಲಿ
ಸಾ: ಸುಂಕೇಶ್ವರ
ತಾ: ಮಾನ್ವಿ
ಜಿ: ರಾಯಚೂರು.
Pin- 584203.
Cell No- 9632432713.