ಲೇಸೆನ್ನಿಸಿಕೊಂಡು ಬದುಕುವುದೇ ಬಾಳ ಸಾರ್ಥಕತೆ
ಲೇಖಕರು: ಮುಕ್ಕಣ್ಣ ಕರಿಗಾರ
ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಶ್ಲೋಕ : ಜೀವಿತಂ ಶಿವಭಕ್ತಾನಾಂ / ವರಂ ಪಂಚದಿನಾನಿ ಚ/
ನಾಜಕಲ್ಪ ಸಹಸ್ರೇಭ್ಯೋ/ ಭಕ್ತಿ ಹೀನಸ್ಯ ಶಂಕರಿ //
ಎಂದುದಾಗಿ,ಕೂಡಲ ಸಂಗನ ಶರಣರ ವಚನದಲ್ಲಿ,
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನೋ ?
ಬಸವಣ್ಣನವರು ಈ ವಚನದಲ್ಲಿ ಬಾಳಿನ ಸಾರ್ಥಕತೆಯ ಲೋಕಸಂದೇಶ ನೀಡಿದ್ದಾರೆ.ನಾವು ಎಷ್ಟುದಿನ ಬದುಕುತ್ತೇವೆ ಎಂಬುದು ಮುಖ್ಯವಲ್ಲ; ಹೇಗೆ ಬದುಕುತ್ತೇವೆ ಎಂಬುದೇ ಮುಖ್ಯ.ನಮನಮಗೆ ಒದಗಿ ಬಂದ ವೃತ್ತಿ,ಕಾಯಕಗಳನ್ನು ಎಷ್ಟು ವರ್ಷಗಳಿಂದ ಮಾಡುತ್ತಿದ್ದೇವೆ ಎಂಬುದು ಮುಖ್ಯವಲ್ಲ,ನಿಷ್ಠೆ,ಶ್ರದ್ಧೆ ಮತ್ತು ಪ್ರಾಮಾಣಿಕತೆಗಳಿಂದ ಮಾಡುತ್ತಿದ್ದೇವೆಯೇ ಎಂಬುದು ಮುಖ್ಯ.ಸಮಷ್ಟಿಹಿತ ಚಿಂತಕರಾಗಿ,ಲೋಕೋಪಕಾರ ದೃಷ್ಟಿಯಿಂದ ಬದುಕುವ ಬದುಕೇ ಸಾರ್ಥಕ ಬದುಕು,ಶ್ರೇಷ್ಠ ಬದುಕು ಎನ್ನುವ ಸಂದೇಶವನ್ನು ಲೋಕಕ್ಕೆ ನೀಡಿದ್ದಾರೆ ಬಸವಣ್ಣನವರು ಈ ವಚನದಲ್ಲಿ.
ನೂರು,ಸಾವಿರ ವರ್ಷಗಳ ಕಾಲ ಬಾಳುವುದರಲ್ಲಿ ಇಲ್ಲ ಜೀವನದ ಹಿರಿಮೆ.ಜೀವನವನ್ನು ಅರ್ಥಪೂರ್ಣವಾಗಿ ಬಾಳುವುದರಲ್ಲಿದೆ ಶ್ರೇಯಸ್ಸು.ಹದ್ದಿನಂತೆ ಸಾವಿರ ವರ್ಷ ಬದುಕಿ ಫಲವೇನು ? ಹದ್ದು ಸಾಧಿಸುವ ಸಾಧನೆಯಾದರೂ ಏನು? ಆಕಾಶದಲ್ಲಿ ಎತ್ತರಕ್ಕೆ ಹಾರಿದರೂ ಅದರ ದೃಷ್ಟಿಯು ಸತ್ತ ದನಕರುಗಳ ಕೊಳೆತ ಮಾಂಸದತ್ತ,ನೆಲದಲ್ಲಿ ಹರಿದಾಡುವ ಹುಳ,ಕ್ರಿಮಿ- ಕೀಟಗಳತ್ತ! ಇದು ಒಂದು ಬಾಳ್ವೆಯೆ? ಹದ್ದಿನಂತಹ ವ್ಯರ್ಥಬದುಕು ನಮ್ಮದಾಗಬಾರದು,ಅರ್ಥಪೂರ್ಣವಾದ ಲೋಕೋತ್ತರವಾದ ಜೀವನ ನಮ್ಮದಾಗಬೇಕು.
ಬಸವಣ್ಣನವರು ಈ ವಚನದಲ್ಲಿ ನಾಲ್ಕು ಜನರಿಗೆ ಬೇಕಾದವರು ಆಗಿ ಬಾಳುವ ಬಾಳ್ವೆಯೇ ಶ್ರೇಷ್ಠ ಎನ್ನುತ್ತಾರೆ.ಎಲ್ಲರಿಗೂ ಬೇಕಾದವನು ಆಗಿ ಐದು ದಿನ ಬದುಕಿದರೇನು? ಪರರ ಹಿತಚಿಂತಕನಾಗಿ ನಾಲ್ಕು ದಿನ ಬದುಕಿದರೇನು?ಇತರರ ಒಳಿತನ್ನು ಬಯಸುತ್ತ ಮೂರು ದಿನ ಬದುಕಿದರೇನು? ನೆರೆಹೊರೆಯವರಿಗೆ ನೆರವಾಗುತ್ತ ಎರಡುದಿನ ಬದುಕಿದರೇನು? ಕೊನೆಗೆ ಲೋಕಕಲ್ಯಾಣ ಚಿಂತನೆಯೊಂದಿಗೆ ಒಂದು ದಿನ ಬದುಕಿದರೇನು? ಆ ಬದುಕೇ ಸಾರ್ಥಕ ಎನ್ನುತ್ತಾರೆ ಬಸವಣ್ಣನವರು.ಆಗಮೋಕ್ತಿಯನ್ನು ವಿವರಿಸುತ್ತ ಶಿವಭಕ್ತನೆನ್ನಿಸಿಕೊಂಡು ಐದು ದಿನಗಳ ಕಾಲ ಬದುಕುವುದೇ ಶ್ರೇಷ್ಠ ಬದುಕು,ಶಿವಭಕ್ತಿಯನ್ನಾಚರಿಸದೆ ಕಲ್ಪಾಂತರಗಳವರೆಗೆ ಬದುಕಿದರೂ ಅದು ಅರ್ಥಹೀನವಾದ ಕೀಳು ಬದುಕು,ಕನಿಷ್ಠ ಜೀವನ ಎನ್ನುತ್ತಾರೆ ಬಸವಣ್ಣನವರು.ಶಿವಭಕ್ತರಾಗಿ ಬದುಕುವ ಬದುಕು ಎಷ್ಟೇ ಕಡಿಮೆ ದಿನಗಳ ಬದುಕಾದರೂ ಅದು ಸಾರ್ಥಕ ಬದುಕು.ಶಿವಭಕ್ತರು ಶಿವನಂತೆಯೇ ಲೋಕಹಿತವನ್ನೇ ಬಯಸುತ್ತಾರಾದ್ದರಿಂದ ಶಿವಭಕ್ತರ ಆಯಸ್ಸು ಮುಖ್ಯವಲ್ಲ ಅವರ ಸಾಧನೆ- ಸಿದ್ಧಿಗಳು ಮುಖ್ಯ.
ನಾವು ಇಷ್ಟಪಟ್ಟಷ್ಟು ವರ್ಷಗಳ ಕಾಲ ಬದುಕುವುದು ನಮ್ಮ ಕೈಯಲ್ಲಿ ಇಲ್ಲ.ಆದರೆ ಇತರರು ನಮ್ಮನ್ನು ಇಷ್ಟಪಡುವಂತೆ ನಾವು ಸತ್ತ ಬಳಿಕವೂ ಜನರು ನಮನ್ನು ಸ್ಮರಿಸುವಂತೆ ಬದುಕುವುದು ನಮ್ಮ ಕೈಯಲ್ಲಿ ಇದೆ.ನಶ್ವರವಾದ ಈ ಶರೀರದಿಂದಲೇ ಮನುಕುಲವು ಶಾಶ್ವತವಾಗಿ ನೆನಪಿಡುವಂತಹ ಕೆಲಸ ಕಾರ್ಯಗಳನ್ನು ಮಾಡಬಹುದು.ವಾಲ್ಮೀಕಿ,ವ್ಯಾಸ ಮತ್ತು ಕಾಳಿದಾಸರು ಆಗಿ ಹೋಗಿ ಎಷ್ಟು ಸಾವಿರ ವರ್ಷಗಳಾದವು ? ಆದರೂ ಸ್ಮರಿಸುತ್ತೇವಲ್ಲ ಅವರನ್ನು? ರಾಮ,ಕೃಷ್ಣರು ಇದ್ದದ್ದು ಯಾವ ಕಾಲದಲ್ಲಿ? ಯುಗ ಯುಗಗಳು ಕಳೆದರೂ ದೇವರು ಎಂದು ಪೂಜಿಸುತ್ತಾರಲ್ಲ ಅವರನ್ನು! ಬುದ್ಧ ಬಸವ ಗಾಂಧೀಜಿಯಂತಹ ಮಹಾತ್ಮರುಗಳು ಕಾಲಾತೀತರು,ದೇಶಾತೀತರು.ಶಂಕರಾಚಾರ್ಯರು ಬದುಕಿದ್ದು ಕೇವಲ ಮುವ್ವತ್ತೆರಡು ವರ್ಷ.ಆದರೆ ಅವರು ಮಾಡಿದ ಸಾಧನೆ ಮುನ್ನೂರು ವರ್ಷ,ಮೂರು ಸಾವಿರ ವರ್ಷಗಳ ಕಾಲ ಬದುಕಿದವರಿಂದಲೂ ಮಾಡಲು ಸಾಧ್ಯವಿಲ್ಲ.ಮುವ್ವತ್ತೆರಡು ವರ್ಷಗಳ ಅತ್ಯಂತ ಕಡಿಮೆ ವರ್ಷಗಳ ಕಾಲ ಬದುಕಿಯೂ ಶಂಕರರು ದೇಶದುದ್ದಗಲಕ್ಕೆ ಸಂಚರಿಸಿ,ಧರ್ಮ ಜಾಗೃತಿಯನ್ನುಂಟು ಮಾಡಿ,ಹಲವು ಹತ್ತು ಕೃತಿರತ್ನಗಳನ್ನು ರಚಿಸಿ ಭಾರತದ ಸನಾತನ ಧರ್ಮ,ಸಂಸ್ಕೃತಿಗಳ ಮೌಲ್ಯ ಎತ್ತಿಹಿಡಿದರು.ಚೆನ್ನಬಸವಣ್ಣನವರು ಬದುಕಿದ್ದು ಕೂಡ ಮುವ್ವತ್ತೆರಡು ವರ್ಷಗಳೆ.ಆದರೆ ಅವರು ಸಾಧಿಸಿದ್ದು,ಬೋಧಿಸಿದ್ದು ನೂರಾರು ವರ್ಷಗಳ ಕಾಲ ತಪಸ್ಸು ಮಾಡಿದವರಿಂದಲೂ ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಕೂಡ ಬಾಳಿದ್ದು ಕಡಿಮೆ ಕಾಲ.ಆದರೆ ಅವರ ಸಾಧನೆಯನ್ನು ಇಷ್ಟು ಎಂದು ಅಳೆಯಲಾದೀತೆ? ಭಾರತದ ಧರ್ಮ- ಸಂಸ್ಕೃತಿಗಳ ಹಿರಿಮೆ ಪಶ್ಚಿಮದ ದೇಶಗಳಲ್ಲಿ ಹರಡಿದ ಪುರುಷಸಿಂಹರವರು.ಇಂತಹ ಮಹಾತ್ಕಾರ್ಯಗಳನ್ನು ಸಾಧಿಸುವವರೇ ಮಹಾತ್ಮರು,ಪುರುಷಸಿಂಹರು,ಪುರುಷೋತ್ತಮರು.ಸಾವು ಎಂದೇ ಬರಲಿ,ಅದು ಬರುವುದಂತೂ ನಿಶ್ಚಿತ.ಸಾವು ಬರುವುದರ ಒಳಗಾಗಿ ನಾವು ಮಹೋನ್ನತ ಕೆಲಸ- ಕಾರ್ಯಗಳನ್ನು ಮಾಡಿ,ಅಮರರಾಗಬೇಕು.ದೇಹ ಅಳಿಯುತ್ತದೆ,ಕೀರ್ತಿ ಉಳಿಯುತ್ತದೆ.ಕೀರ್ತಿಶಾಲಿಗಳಾಗಿ ಬದುಕುವ ಬದುಕೇ ಶ್ರೇಷ್ಠವಾದದ್ದು.ನಾಲ್ಕು ಜನರಿಗೆ ಒಳ್ಳೆಯವರಾಗಿ,ಪರೋಪಕಾರ ಬುದ್ಧಿಯುಳ್ಳವರಾಗಿ,ಲೋಕ ಹಿತಚಿಂತಕರಾಗಿ ಬದುಕಲು ಸಂಕಲ್ಪಿಸಬಹುದಾದ ದಿನ ಜನೆವರಿ 01,2022 ರ ಹೊಸವರ್ಷದ ಮೊದಲ ದಿನ.ಸಂಕಲ್ಪಿಸೋಣವೆ ನಮ್ಮ ಬಾಳನ್ನು ಉತ್ತಮಬಾಳನ್ನಾಗಿ ಪರಿವರ್ತಿಸಿಕೊಂಡು ಬದುಕಲು?

31.12.2021