ಕಾವ್ಯಲೋಕ: ದ್ಯಾವಣ್ಣ ಸುಂಕೇಶ್ವರ ಅವರ ಕವನ ‘ಪರಿತಾಪ’

.            ಪರಿತಾಪ

       *ದ್ಯಾವಣ್ಣ ಸುಂಕೇಶ್ವರ

ಕನ್ನಡಾಂಬೆಯ ತನುಜ
ಕಾವ್ಯಲೋಕದ ದಿಗ್ಗಜ
ನಿನಗಿದೋ ನನ್ನ ವಂದನೆ,
ಕರುನಾಡ ಕನ್ನಡಿಗನಾಗಿ
ಮಾತೆ ಮಡಿಲಲ್ಲಿ ಜನಿಸಿ ಬಾ!

‘ಮಲೆನಾಡಿನ’ ಮಿತ್ರ
ಅಶ್ರು ಸುರಿಸಿ, ಬತ್ತಿವೆ ನೇತ್ರ
‘ವಸಂತ ಋತು’ವಿನ ಆಕಾರ,
ಕಳೆದು ಕೊಂಡಿದೆ ಶೃಂಗಾರ
ಸಂತೈಸಿ, ಸೊಬಗು ಹರಡು ಬಾ!

ಹಕ್ಕಿಗಳ ‘ಇಂಚರ’
ಮತ್ತೆಲ್ಲಿಗೋ, ಸಂಚಾರ
ಕುಸುಮಗಳು, ಸೊಂಪು,
ಹೊರ ಸೂಸಲಿಲ್ಲ ಕಂಪು
ತಣಿಸಿ, ಸವಿಯಲು ಬಾ!

ನಾದಗೈದು ಹರಿವ ತೊರೆ
ನೀರವ ಪ್ರಕೃತಿಯಲ್ಲಿ ಸೆರೆ
ಮೀಯುವ ಜಲಚರ,
ಮಿಸುಕಾಡುತ್ತಿಲ್ಲ ಚರಾಚರ
ಜೀವತುಂಬಿ, ಬಣ್ಣಿಸಲು ಬಾ!

ಮಿನುಗುವ ‘ಧೃವತಾರೆ’
ಮರಗುತಿದೆ, ಪ್ರತಿಸಾರೆ
ನೇಗಿಲ ಯೋಗಿಯ ಖುಷಿ,
ವ್ಯರ್ಥವಾಯಿತಲ್ಲ ಕೃಷಿ
ಸಾಂತ್ವಾನ, ಹೇಳಲು ಬಾ!

‘ನೇಸರ’ನ ಹೊಂಗಿರಣ
ಮಂದಗತಿಯಲಿ ಪ್ರಸರಣ
‘ತಂಗದಿರ’ನ ‘ಚಂದ್ರಿಕೆ’
ಶೋಕದಲ್ಲಿ ಮರೀಚಿಕೆ
ಕಾಣಿಸಿ ಜಗವ ಬೆಳಗಲು ಬಾ!

ಸರ್ವಜನಾಂಗದ ಶಾಂತಿ
ಜಾತಿ ಮತಗಳಿಂದ ಅಶಾಂತಿ
‘ಮನುಜ ಮತ’ವ ಸಾರಲು
ಮನುಷ್ಯತ್ವ ಕಾಣೆಯಾಗಿರಲು
‘ಐಕ್ಯತೆ ಬೀಜ’ವ ಬಿತ್ತಲು ಬಾ!

ದ್ಯಾವಣ್ಣ ಸುಂಕೇಶ್ವರ
ಮುಖ್ಯಸ್ಥರು, ಕಲಾ‌ ವಿಭಾಗ,
ಲೊಯೋಲ ಪದವಿ ಕಾಲೇಜು, ಮಾನ್ವಿ.
ಮೊ:9880123488