ವರ್ಷದ ಕೊನೆಯ ದಿನ
ಲೇಖಕರು: ಮುಕ್ಕಣ್ಣ ಕರಿಗಾರ
ಡಿಸೆಂಬರ್ 31 ರ ಮಧ್ಯರಾತ್ರಿಗೆ 2021 ರ ವರ್ಷವು ಮುಕ್ತಾಯಗೊಂಡು 2022 ರ ಹೊಸ ವರ್ಷಕ್ಕೆ ಕಾಲಿರಿಸುತ್ತೇವೆ.ಜನೆವರಿ ಭಾರತೀಯರಿಗೆ ಹೊಸವರ್ಷವಲ್ಲವಾದರೂ ವಿಶ್ವದಲ್ಲಿ ಒಂದು ದೇಶದ ಪ್ರಜೆಗಳಾಗಿ ನಾವು ನಮ್ಮ ಸಂಸ್ಕೃತಿ,ಪರಂಪರೆಗಳೊಂದಿಗೆ ವಿಶ್ವದ ನಾಗರಿಕತೆಯೊಂದಿಗೆ ಬೆರೆತು ಬಾಳಬೇಕಿದೆ.ವಿಶ್ವದಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಜನೆವರಿ ಒಂದರಂದು ಹೊಸವರ್ಷ ಪ್ರಾರಂಭವಾಗುತ್ತದೆ.ಹೊಸವರ್ಷದ ಕ್ಯಾಲೆಂಡರ್ ಪ್ರಾರಂಭ ಆಗುವುದು ಕೂಡ ಜನೆವರಿ ಒಂದರಿಂದಲೇ.ಹಾಗಾಗಿ ವಿಶ್ವದ ನಾಗರಿಕರಾಗಿ ನಾವು ಹೊಸವರ್ಷ 2022 ಅನ್ನು ಸ್ವಾಗತಿಸೋಣ.
ಹೊಸವರ್ಷದ ಸ್ವಾಗತ ಎಂದು ಮಧ್ಯರಾತ್ರಿಯವರೆಗೆ ಕುಡಿದು,ಕುಪ್ಪಳಿಸಿ,ಕೇಕೆ ಹಾಕುವುದಿಲ್ಲ.ಬದಲಿಗೆ 2021 ನೇ ವರ್ಷದ ಕೊನೆಯ ದಿನವಾದ ಡಿಸೆಂಬರ್ 31 ರಂದು ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.2021 ರ ವರ್ಷದಲ್ಲಿ ನನ್ನ ಸಾಧನೆ ಏನು,ವೈಫಲ್ಯ ಏನು,ಎಡವಿದ್ದು ಎಲ್ಲಿ,ಮುಗ್ಗರಿಸಿ ಬಿದ್ದದ್ದು ಎಲ್ಲಿ ಎನ್ನುವುದನ್ನು ಪರಾಮರ್ಶಿಸಿ 2022 ರ ವರ್ಷದಲ್ಲಿ ಆ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಬೇಕು.2021 ರಲ್ಲಿ ವೈಯಕ್ತಿಕ ದುಡುಕು ನಿರ್ಧಾರಗಳಿಂದಾಗ ಆತ್ಮೀಯರ ಸ್ನೇಹ ಕಳೆದುಕೊಂಡಿದ್ದರೆ 2022 ರಲ್ಲಿ ಅಂತಹ ದುಡುಕು ನಿರ್ಧಾರಕೈಗೊಂಡು ಅಮೂಲ್ಯ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ಸಂಕಲ್ಪಿಸಿ ಹೊಸವರ್ಷದ ಆರಂಭದ ದಿನ ಕಳೆದುಕೊಂಡ ಸ್ನೇಹಿತರಿಗೆ ಶುಭಾಶಯ ವಿನಿಮಯಮಾಡಿಕೊಂಡು ಅವರ ಸ್ನೇಹ ಸಂಪಾದಿಸಿಕೊಳ್ಳಬೇಕು.ಮನೆಯಲ್ಲಿ ತಂದೆ- ತಾಯಿ,ಹಿರಿಯರು,ಹೆಂಡಿರು- ಮಕ್ಕಳುಗಳು ಸೇರಿದಂತೆ ಕುಟುಂಬಸ್ಥರೊಡನೆ ಆತ್ಮೀಯವಾಗಿ ಕಲೆತು ಮಾತನಾಡಿ ಹೊಸವರ್ಷದ ಯೋಚನೆ,ಯೋಜನೆಗಳ ಬಗ್ಗೆ ಚರ್ಚಿಸಬೇಕು.
ಹೊಸ ವರ್ಷ 2022 ರಲ್ಲಿಯೂ ಕೊರೊನಾ ವೈರಸ್ ನ ರೂಪಾಂತರಿ ತಳಿ ಓಮೈಕ್ರಾನ್ ನ ಕಾಟ- ಉಪದ್ರವದೊಂದಿಗೆ ಬದುಕಬೇಕಾಗಿದ್ದರಿಂದ ಓಮೈಕ್ರಾನ್ ನೊಂದಿಗೆ ಜೀವನ ನಿರ್ವಹಿಸುವ ಅನಿವಾರ್ಯತೆಗೂ ಸಿದ್ಧತೆ ಮಾಡಿಕೊಳ್ಳಬೇಕು.ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನಗಳನ್ನು ಪಾಲಿಸಬೇಕು.ಮಾಸ್ಕ್ ಗಳನ್ನು ಧರಿಸಿಯೇ ಹೊರಗೆ ಹೋಗುವ ನಿರ್ಧಾರ ಮಾಡಬೇಕು.ಕೊರೊನಾ ವೈರಸ್ ನ ಹಾವಳಿಯ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಈ ಎರಡು ನಮ್ಮ ಸ್ವರಕ್ಷಣಾ ತಂತ್ರಗಳಾಗಿದ್ದು ಇವುಗಳನ್ನು ಪಾಲಿಸಲೇಬೇಕು.ಓಮೈಕ್ರಾನ್ ರೂಪಾಂತರ ತಳಿಯ ಬಗ್ಗೆ ಅನಗತ್ಯ ಭಯ- ಆತಂಕಗಳಿಗೆ ಈಡಾಗದೆ ಓಮೈಕ್ರಾನ್ ನಮ್ಮ ಬದುಕಿನ ಒಂದು ಭಾಗ ಎಂದು ತಿಳಿದುಕೊಂಡು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡು ಸಹಜವಾಗಿ ಬದುಕಬೇಕು.
ಕೊರೊನಾ ವೈರಸ್ ನ ಮೊದಲೆರಡು ಅಲೆಗಳ ಹೊಡೆತಕ್ಕೆ ಸಿಕ್ಕು ಜನಜೀವನವು ಅಸ್ತವ್ಯಸ್ತಗೊಂಡಿತು.ಓಮೈಕ್ರಾನ್ ಅಷ್ಟು ಗಂಭೀರ ಪರಿಣಾಮ ಬೀರದಾದರೂ ಕುಟುಂಬದ ಆರ್ಥಿಕ ನಿರ್ವಹಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು.ದುಂದುವೆಚ್ಚ,ಅನಗತ್ಯವೆಚ್ಚಗಳಿಗೆ ಕಡಿವಾಣ ಹಾಕಿಕೊಂಡು ಆಪದ್ಧನವೆಂದು ಒಂದಿಷ್ಟು ಹಣವನ್ನು ಸಂಗ್ರಹಿಸಡಬೇಕಾದ ಅನಿವಾರ್ಯತೆ ಇದೆ.ದವಸ ಧಾನ್ಯಗಳನ್ನು ರಾಶಿಯ ಸಂದರ್ಭದಲ್ಲಿಯೇ ವರ್ಷಕ್ಕಾಗುವಷ್ಟು ಖರೀದಿಸಿಟ್ಟುಕೊಂಡರೆ ಒಳ್ಳೆಯದು.ಕಳೆದು ಹೋಗುತ್ತಿರುವ ವರ್ಷದಲ್ಲಿ ಮಾಡಿದ ದುಂದುವೆಚ್ಚ,ಅನಗತ್ಯ ವೆಚ್ಚಗಳನ್ನು ಪಟ್ಟಿ ಮಾಡಿ,ಮುಂಬರುವ ವರ್ಷದಲ್ಲಿ ಅವುಗಳನ್ನು ಕೈಬಿಡಲು ನಿರ್ಧರಿಸಬೇಕು.
ಒಂದು ವೇಳೆ ಓಮೈಕ್ರಾನ್ ತೀವ್ರ ಸ್ವರೂಪದ ಹಾವಳಿಯನ್ನುಂಟುಮಾಡಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ಬಂದರೆ ಮಕ್ಕಳಿಗೆ ಪರ್ಯಾಯ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಮಕ್ಕಳ ಹಿತದೃಷ್ಟಿಯಿಂದ ಸರಕಾರವು ಶಾಲೆಗಳಿಗೆ ನೀಡುವ ರಜೆಯು ಮಕ್ಕಳ ಮಜಾದಿನಗಳಾಗದಂತೆ ಅವರ ಬದುಕು,ಭವಿಷ್ಯ ಹಾಳಾಗದಂತೆ ಎಚ್ಚರಿಕೆ ವಹಿಸಬೇಕು.ಕೊವಿಡ್ ಮುನ್ನೆಚ್ಚರಿಕೆಯ ಕ್ರಮಗಳ ಜೊತೆಗೆ ಮಕ್ಕಳಿಗೆ ಮನೆಯಲ್ಲಿಯೇ ಪಾಠ ಇಲ್ಲ ಟ್ಯೂಶನ್ ಗಳ ವ್ಯವಸ್ಥೆ ಮಾಡಲು ಈಗಿನಿಂದಲೇ ಆಲೋಚಿಸಬೇಕು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಕ್ಕಳಿಗೂ ಲಸಿಕೆ ಹಾಕುತ್ತಿರುವುದರಿಂದ ಓಮೈಕ್ರಾನ್ ನ ಪರಿಣಾಮ ಅಷ್ಟು ಗಂಭೀರವಾಗಿರಲಿಕ್ಕಿಲ್ಲ.ಹೊಸವರ್ಷದಲ್ಲಿ ಓಮೈಕ್ರಾನ್ ಭೀಕರ ಪರಿಣಾಮಗಳನ್ನು ಉಂಟು ಮಾಡದಿರಲಿ ಎಂದು ಆಶಿಸೋಣ.ಓಮೈಕ್ರಾನ್ ನಮ್ಮ ಮಕ್ಕಳ ಭವಿಷತ್ತು ಮತ್ತು ಆನಂದದೊಂದಿಗೆ ಚೆಲ್ಲಾಟವಾಡದೆ ಇರಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸೋಣ.
ಸಕಾರಾತ್ಮಕ ಮನೋಭಾವನೆಯನ್ನು ಮೈಗೂಡಿಸಿಕೊಂಡು ಬರುವುದೆಲ್ಲವನ್ನು ಎದುರಿಸಿ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದಿಂದ ಹೊಸವರ್ಷವನ್ನು ಸ್ವಾಗತಿಸೋಣ.

ಮೊ;94808 79501
30.12.2021