ಪ್ರಚಲಿತ -ಹಿಂದೂ ದೇವಸ್ಥಾನಗಳ ಸ್ವಾಯತ್ತತೆ — ಕೆಲವು ಸಲಹೆಗಳು : ಮುಕ್ಕಣ್ಣ ಕರಿಗಾರ

ಹಿಂದೂ ದೇವಸ್ಥಾನಗಳ ಸ್ವಾಯತ್ತತೆ — ಕೆಲವು ಸಲಹೆಗಳು

ಲೇಖಕರು: ಮುಕ್ಕಣ್ಣ ಕರಿಗಾರ

ಹಿಂದೂ ಧರ್ಮದ ದೇವಾಲಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.ಸರಕಾರಿ ಅಧಿಕಾರಿಗಳಿಂದ ಮತ್ತು ಕಾನೂನುಗಳಿಂದ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.ಅಭಿನಂದನಾರ್ಹರು ಮುಖ್ಯಮಂತ್ರಿಗಳು.ನಿಜಕ್ಕೂ ಈ ಕಾರ್ಯ ಆಗಲೇಬೇಕಿತ್ತು.ಇತರ ಮತ ಧರ್ಮಗಳವರ ಪ್ರಾರ್ಥನಾ ಸ್ಥಳಗಳಲ್ಲಿ ಇರುವ ಸ್ವಾತಂತ್ರ್ಯ ಹಿಂದೂ ಧರ್ಮದ ದೇವಸ್ಥಾನಗಳಲ್ಲಿ ಇರಲಿಲ್ಲ.ಮುಜರಾಯಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಮರ್ಜಿ ಮುಲಾಜು ಕಾಯುವ ಅಗತ್ಯ ಹಿಂದೂ ದೇವಾಲಯಗಳಿಗೆ ಇತ್ತು.ಮುಖ್ಯಮಂತ್ರಿಯವರು ಹಿಂದೂದೇವಾಲಯಗಳನ್ನು ಸರಕಾರಿ ಕಾನೂನು ಮತ್ತು ಅಧಿಕಾರಿಗಳ ನಿಯಂತ್ರಣದಿಂದ ಮುಕ್ತಗೊಳಿಸಬಯಸಿದ್ದು ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಧಾರ.

ಹಿಂದೂ ದೇವಾಲಯಗಳ ವ್ತಾಪ್ತಿಯಲ್ಲಿ ಶೈವ,ಶಾಕ್ತ,ವೈಷ್ಣವ,ಗಾಣಪತೇಯ,ಸೌರ ಮತ್ತು ಸ್ಕಂದ ಮತಗಳೆಂಬ ‘ ಷಣ್ಮತಗಳ’ ಇಲ್ಲವೆ ಆರು ಮುಖ್ಯ ಮತಗಳ ದೇವಸ್ಥಾನಗಳಿವೆ.ಷಣ್ಮತಗಳಾಚೆಯ ದತ್ತಪರಂಪರೆ,ನಾಥ ಪರಂಪರೆ,ಭೈರವ ಪರಂಪರೆ ಮತ್ತು ಗ್ರಾಮದೇವತೆಗಳ ಅಸಂಖ್ಯಾತ ದೇವಸ್ಥಾನಗಳಿವೆ.ಈ ದೇವಸ್ಥಾನಗಳಲ್ಲಿ ಬಹುತೇಕ ದೇವಸ್ಥಾನಗಳು ಸರಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿವೆ.ಧಾರ್ಮಿಕ ದತ್ತಿ ಇಲಾಖೆಯು ತನ್ನ ಆಧೀನದ ದೇವಸ್ಥಾನಗಳಿಂದ ಸಂಗ್ರಹವಾಗುವ ಕಾಣಿಕೆ,ಆದಾಯದ ಆಧಾರದ ಎ ,ಬಿ ಮತ್ತು ಸಿ ಎನ್ನುವ ಮೂರು ಪ್ರವರ್ಗಗಳಲ್ಲಿ ದೇವಸ್ಥಾನಗಳನ್ನು ವಿಂಗಡಿಸಿದ್ದು ಆ ದೇವಸ್ಥಾನಗಳಿಂದ ಬರುವ ಆದಾಯವು ಸರಕಾರದ ಬೊಕ್ಕಸಕ್ಕೆ ಸೇರುತ್ತದೆ.ದೇವಸ್ಥಾನದ ಅಗತ್ಯತೆಗಳಿಗನುಗುಣವಾಗಿ ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತದೆಯಾದರೂ ಅದು ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ.ನೂರಾರು ಕೋಟಿ ರೂಪಾಯಿಗಳ ಆದಾಯ ತರುವ ದೇವಸ್ಥಾನಗಳ ಅಭಿವೃದ್ಧಿ,ಜೀರ್ಣೋದ್ಧಾರ ಮತ್ತು ಮೂಲಭೂತಸೌಕರ್ಯಗಳ ಕಾಮಗಾರಿಗಳಿಗಾಗಿ ಬೇಕಾಗುವಷ್ಟು ಅನುದಾನ ನೀಡುವುದಿಲ್ಲ.ಸರಕಾರಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ನಿಯಮಾವಳಿಗಳು,ನಿರ್ದೇಶನಗಳನ್ನು ರೂಪಿಸುತ್ತಾರೆ.ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಆದಾಯ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.ತಿರುಪತಿಯು ಅತಿಹೆಚ್ಚು ಆದಾಯ ನೀಡುವ ದೇವಳಗಳಲ್ಲಿ ಮೊದಲ ಸ್ಥಾನದಲ್ಲಿದ್ದರೆ ಕುಕ್ಕೆ ಸುಬ್ರಹ್ಮಣ್ಯವು ಎರಡನೇ ಸ್ಥಾನದಲ್ಲಿದೆ.ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣನೀಡುವ ಸಾಕಷ್ಟು ದೇವಸ್ಥಾನಗಳಿವೆ.ಅಷ್ಟು ಪ್ರಮಾಣದ ಆದಾಯ ನೀಡಿಯೂ ಆ ದೇವಸ್ಥಾನಗಳ ಅಭಿವೃದ್ಧಿ ಆಗುತ್ತಿಲ್ಲ.ಆ ದೇವಸ್ಥಾನಗಳಲ್ಲಿ ಇಂದು ಕಸಪೊರಕೆ ಕೊಳ್ಳಲು ಕೂಡ ಅಧಿಕಾರಿಗಳ ಅನುಮತಿಗೆ ಕಾಯಬೇಕು.ದೇವಸ್ಥಾನಗಳ ದುಡ್ಡನ್ನು ದೇವಸ್ಥಾನಗಳಿಗೆ ಖರ್ಚು ಮಾಡಲು ಸರಕಾರಿ ಅಧಿಕಾರಿಗಳು ಮೀನ ಮೆಷ ಎಣಿಸುತ್ತಾರೆ,ಘನಕಾರ್ಯ ಮಾಡಿದವರಂತೆ ಬೀಗುತ್ತಾರೆ.ಸರಕಾರಿ ಕಾನೂನಿನ,ಸರಕಾರಿ ಅಧಿಕಾರಿಗಳ ನಿಯಂತ್ರಣದಿಂದ ಹಿಂದೂ ದೇಗುಲಗಳನ್ನು ಮುಕ್ತಿಗೊಳಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವು ದೇವಸ್ಥಾನಗಳ ಸ್ವತಂತ್ರ ನಿರ್ವಹಣೆಗೆ,ನಿರ್ಬಂಧರಹಿತ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡುತ್ತದೆ.

ಈ ನಿಟ್ಟಿನಲ್ಲಿ ಆಗಬೇಕಾದ ಕೆಲವು ಅವಶ್ಯಕ ಕ್ರಮಗಳು

೧. ಧಾರ್ಮಿಕ ದತ್ತಿ ಆಯುಕ್ತಾಲಯದ ಬದಲು ನಿರ್ದೇಶನಾಲಯದ ಸ್ಥಾಪನೆ

ಹಿಂದೂ ದೇವಸ್ಥಾನಗಳು ಮುಜರಾಯಿ ಇಲ್ಲವೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದು ಧಾರ್ಮಿಕ ದತ್ತಿ ಆಯುಕ್ತಾಲವು ಅವುಗಳನ್ನು ನಿರ್ವಹಿಸುತ್ತಿದೆ,ನಿಯಂತ್ರಿಸುತ್ತಿದೆ.ಆಯುಕ್ತಾಲಯವು ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ಸಂಸ್ಥೆಯಾಗಿರುತ್ತದೆ.ಐಎಎಸ್ ಅಧಿಕಾರಿಗಳು ರಾಜ್ಯಸೇವೆಯಿಂದ ಪದೋನ್ನತಿ ಹೊಂದಿದವರಾಗಿದ್ದರೆ ಅಥವಾ ರಾಜ್ಯದಿಂದ ಐಎಎಸ್ ಗೆ ಆಯ್ಕೆ ಆಗಿದ್ದವರು ಆಗಿದ್ದರೆ ಅವರು ಸ್ವಲ್ಪ ಆಸಕ್ತಿಯಿಂದ ಕೆಲಸ ನಿರ್ವಹಿಸಬಹುದು.ಆದರೆ ಬೇರೆ ರಾಜ್ಯಗಳಿಂದ ಬಂದ ಐಎಎಸ್ ಅಧಿಕಾರಿಗಳಾಗಿದ್ದರೆ ಅವರು ದೇವಸ್ಥಾನಗಳ ನಿರ್ವಹಣೆಯ ಬಗ್ಗೆ ಆಸಕ್ತಿ ವಹಿಸುವುದಿಲ್ಲ ಮಾತ್ರವಲ್ಲ ಬರಿ ನೀತಿ,ನಿಯಮಾವಳಿಗಳನ್ನು ರೂಪಿಸುತ್ತಲೇ ಇರುತ್ತಾರೆ.ಆದ್ದರಿಂದ ಮುಜರಾಯಿ ಇಲಾಖೆಗೆ ಆಯುಕ್ತಾಲಯದ ಬದಲು ನಿರ್ದೇಶನಾಲಯ ಸ್ಥಾಪಿಸಬೇಕು.

ನಿರ್ದೇಶನಾಲಯಕ್ಕೆ ರಾಜ್ಯ ಸೇವೆಯ ಹಿರಿಯ ಅಧಿಕಾರಿಗಳನ್ನು ನಿರ್ದೇಶಕರು ಎಂದು ನೇಮಿಸಬೇಕು.ಆಯುಕ್ತರಿಗೆ ಇರುವ ಎಲ್ಲ ಅಧಿಕಾರಗಳನ್ನು ನಿರ್ದೇಶಕರಿಗೆ ನೀಡಬೇಕು ಮತ್ತು ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು.ಧಾರ್ಮಿಕ ಶಿಕ್ಷಣ,ಸಂಸ್ಕಾರಗಳ ಹಿನ್ನೆಲೆಯುಳ್ಳ ಅಧಿಕಾರಿಗಳನ್ನು ನಿರ್ದೇಶಕರನ್ನಾಗಿ ನೇಮಿಸಬೇಕು.ಭಾರತೀಯ ಸೇವೆಗಳಾದ ಐಎಎಸ್,ಐಪಿಎಸ್ ಮತ್ತಿತರ ಅಖಿಲ ಭಾರತ ಸೇವಾ ವೃಂದಗಳ ಅಧಿಕಾರಿಗಳನ್ನು ನಿರ್ದೇಶಕರ ಹುದ್ದೆಗೆ ನೇಮಿಸಬಾರದು.

೨. ದೇವಸ್ಥಾನಗಳನ್ನು ಕಂದಾಯ ಮತ್ತು ಮುಜರಾಯಿ ಇಲಾಖೆಯಿಂದ ಹೊರಗಿಟ್ಟು ಸ್ವತಂತ್ರ ನಿರ್ವಹಣೆಗೆ ಅವಕಾಶ ನೀಡಬೇಕು.

ಹಿಂದೂ ದೇವಸ್ಥಾನಗಳನ್ನು ಸಂಪೂರ್ಣವಾಗಿ ಕಂದಾಯ ಮತ್ತು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಡಬೇಕು ಅಥವಾ ಅವುಗಳ ನಿಯಂತ್ರಣದಿಂದ ಮುಕ್ತವಾಗಿರಿಸಬೇಕು.ರಾಜ್ಯಮಟ್ಟದ ನಿರ್ದೇಶನಾಲಯವು ಮಾತ್ರ ದೇವಸ್ಥಾನಗಳ ಮೇಲ್ವಿಚಾರಣೆ ಮಾಡಬೇಕು.

ಪ್ರತಿ ದೇವಸ್ಥಾನವು ಅದರದ್ದೇ ಆದ ಟ್ರಸ್ಟ್ ಅನ್ನು ಹೊಂದಿ ಆ ಟ್ರಸ್ಟಿನ ಮೂಲಕ ದೇವಸ್ಥಾನಗಳ ಆಡಳಿತ ನಿರ್ವಹಣೆ ಆಗಬೇಕು.ದೇವಸ್ಥಾನವು ಆಚಾರ್ಯಪರಂಪರೆ ಇಲ್ಲವೇ ಪೀಠಾಧಿಪತಿಗಳ ಪರಂಪರೆಯನ್ನು ಹೊಂದಿದ್ದರೆ ಪೀಠಾಧಿಪತಿಗಳು ಅಧ್ಯಕ್ಷರು ಆಗಿ ಆ ದೇವಸ್ಥಾನದ ಏಳ್ಗೆ ,ಅಭಿವೃದ್ಧಿಗೆ ಶ್ರಮಿಸುವ ಮತ್ತು ಆ ದೇವಸ್ಥಾನದ ಸ್ಥಳಮಹಿಮೆ,ಪರಂಪರೆಗಳಲ್ಲಿ ನಂಬಿಕೆ- ನಿಷ್ಠೆಗಳನ್ನುಳ್ಳ ಇತರ ಎಂಟು ಜನರನ್ನು ಟ್ರಸ್ಟಿಗಳನ್ನಾಗಿ ನೇಮಿಸಬೇಕು.ಟ್ರಸ್ಟಿಗಳ ನೇಮಕದಲ್ಲಿ ದೇವಸ್ಥಾನದ ಹಿತಾಭಿವೃದ್ಧಿ ಮಾತ್ರ ಮುಖ್ಯವಾಗಿರಬೇಕು.ದೇವಸ್ಥಾನದ ಟ್ರಸ್ಟ್ ವಾರ್ಷಿಕ ಉತ್ಸವಗಳ ಆಚರಣೆ,ನಿತ್ಯ ನೈಮಿತ್ತಿಕ ಪೂಜಾದಿ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಅವಕಾಶ ನೀಡಬೇಕು.ಯಾವುದೇ ಕಾರ್ಯ,ಕಾರ್ಯಕ್ರಮಕ್ಕೆ ಯಾರ ಅನುಮತಿಯನ್ನು ಪಡೆಯುವಂತಿರಬಾರದು.

ದೇವಸ್ಥಾನಗಳ ಮೇಲ್ವಿಚಾರಣೆಗೆ ಟ್ರಸ್ಟ್ ಆ ದೇವಸ್ಥಾನವು ಇರುವ ಗ್ರಾಮ ಮತ್ತು ಆ ದೇವಸ್ಥಾನದ ಭಕ್ತರುಗಳ ಒಂದು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ ಅದರಲ್ಲಿ ಸಾಧ್ಯವಾದಷ್ಟು ಬಹಳ ಸಂಖ್ಯೆಯ ಸದಸ್ಯರುಗಳು ಇರುವಂತೆ ನೋಡಿಕೊಳ್ಳಬೇಕು.ದೇವಸ್ಥಾನದ ಆದಾಯ,ಖರ್ಚು ವೆಚ್ಚಗಳನ್ನು ಈ ‘ ಮೇಲ್ವಿಚಾರಣಾ ಸಮಿತಿ’ ಯ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು.ಇಲ್ಲದಿದ್ದರೆ ಟ್ರಸ್ಟ್ ಮನಸ್ವಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.ಭಕ್ತರ ಹಣದ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅವಶ್ಯಕ.

೩ ದೇವಸ್ಥಾನಗಳ ಹೆಸರಿನ ಸ್ಥಿರ- ಚರ ಆಸ್ತಿಗಳು ದೇವಸ್ಥಾನ ನಿರ್ವಹಣಾ ಟ್ರಸ್ಟ್ ,ಕಮಿಟಿಗಳಿಗೆ ವರ್ಗಾವಣೆ ಆಗಬೇಕು.

ದೇವಸ್ಥಾನಗಳ ಹೆಸರಿನಲ್ಲಿರುವ ಭೂಮಿ ಸೇರಿದಂತೆ ಎಲ್ಲ ಸ್ಥಿರ ಮತ್ತು ಚರ ಆಸ್ತಿಗಳು ದೇವಸ್ಥಾನವನ್ನು ನಿರ್ವಹಿಸುವ ದೇವಸ್ಥಾನಗಳ ಧಾರ್ಮಿಕ ಮುಖ್ಯಸ್ಥರುಗಳ ಅಧ್ಯಕ್ಷತೆಯಲ್ಲಿನ ಟ್ರಸ್ಟಿಗೆ ವರ್ಗಾಯಿಸಬೇಕು ಮತ್ತು ಅವುಗಳ ನಿರ್ವಹಣೆಯ ಸಂಪೂರ್ಣ ಅಧಿಕಾರವನ್ನು ಆ ಟ್ರಸ್ಟಿಗೆ ನೀಡಬೇಕು.ಆದರೆ ಟ್ರಸ್ಟ್ ಯಾವುದೇ ಆಸ್ತಿಯನ್ನು ಮಾರದಂತೆ,ಪರಭಾರೆ ಮಾಡದಂತೆ,ವರ್ಗಾಯಿಸದಂತೆ ನಿರ್ಬಂಧ ವಿಧಿಸಬೇಕು.ದೇವಸ್ಥಾನದ ಸ್ಥಿರ- ಚರ ಆಸ್ತಿಗಳನ್ನು ಸಂಪನ್ಮೂಲ ಸಂಗ್ರಹಕ್ಕಾಗಿ ಬಳಸಿಕೊಳ್ಳಬಹುದು.ಆ ಸಂಪನ್ಮೂಲವು ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಬೇಕು.

೪. ದೇವಸ್ಥಾನ ಟ್ರಸ್ಟ್ ಗಳು ಲೆಕ್ಕಪತ್ರಗಳನ್ನಿಡಬೇಕು,ಆಡಿಟ್ ಮಾಡಿಸಬೇಕು.

ದೇವಸ್ಥಾನಗಳು ಸರಕಾರಿ ಅಧಿಕಾರಿಗಳ ಹಿಡಿತದಿಂದ ಮುಕ್ತವಾದಾಕ್ಷಣ ಸಾರ್ವಜನಿಕರ ಸಾಮಾನ್ಯ ನಿಗಾದಿಂದ ಮುಕ್ತವಾದವು ಎಂದು ಭಾವಿಸಬಾರದು.ಭಕ್ತರು ದೇವರು,ದೇವಸ್ಥಾನಗಳ ಮೇಲಿನ ನಂಬಿಕೆಯಿಂದ ಸಲ್ಲಿಸುವ ಕಾಣಿಕೆ,ಕೊಡುಗೆ- ದೇಣಿಗೆಗಳು ದೇವಸ್ಥಾನದ ಕಾರ್ಯಕ್ಕಾಗಿಯೇ ವಿನಿಯೋಗವಾಗುತ್ತಿವೆ ಮತ್ತು ಸದ್ವಿನಿಯೋಗವಾಗುತ್ತಿವೆ ಎನ್ನುವ ನಂಬಿಕೆ ಭಕ್ತರಲ್ಲಿ ಮೂಡಬೇಕು.ಅದಕ್ಕಾಗಿ ಟ್ರಸ್ಟ್ ಕಮಿಟಿಯು ದೇವಸ್ಥಾನದ ಆದಾಯ, ಖರ್ಚು ವೆಚ್ಚಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸಬೇಕು ಮತ್ತು ಪ್ರತಿ ಆರ್ಥಿಕ ವರ್ಷ ಮುಗಿದ ಒಂದೆರಡು ತಿಂಗಳುಗಳ ಒಳಗಾಗಿ ಸನ್ನದು ಲೆಕ್ಕ ಪರಿಶೋಧಕರು( charterd accountant ) ಗಳಿಂದ ಆಡಿಟ್ ಮಾಡಿಸಬೇಕು.ಆಡಿಟ್ ವರದಿಯನ್ನು ಭಕ್ತರ ಮೇಲ್ವಿಚಾರಣಾ ಸಮಿತಿಯ ಮುಂದೆ ಮಂಡಿಸಬೇಕು ಹಾಗೂ ದೇವಸ್ಥಾನದ ಮುಖ್ಯದ್ವಾರ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಅದನ್ನು ಪ್ರಕಟಿಸಬೇಕು.ಇಂತಹ ಪಾರದರ್ಶಕ ಕ್ರಮಗಳಿಂದ ಭಕ್ತರಲ್ಲಿ ತಮ್ಮ ಕಾಣಿಕೆ ವ್ಯರ್ಥವಾಗುವುದಿಲ್ಲ ಎನ್ನುವ ನಂಬಿಕೆ ಉಂಟಾಗಿ ಅವರು ಧಾರಾಳವಾಗಿ ಕಾಣಿಕೆ ನೀಡಲು ಮುಂದೆ ಬರುತ್ತಾರೆ.

೫ ದೇವಸ್ಥಾನಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು

ದೇವಸ್ಥಾನಗಳು ಸರಕಾರಿ ಅಧಿಕಾರಿಗಳ ನಿಯಂತ್ರಣ,ಕಾನೂನು ಕಟ್ಟಳೆಗಳ ನಿಯಂತ್ರಣದಿಂದ ಮುಕ್ತವಾದೊಡನೆ ಅಲ್ಲಿ ಸಂವಿಧಾನದ ಮೌಲ್ಯ,ಆಶಯಗಳಿಗೆ ಧಕ್ಕೆ ಬರುವ ಸಂಭವ ಇರುತ್ತದೆ.ಆ ಬಗ್ಗೆ ಎಚ್ಚರ ವಹಿಸಬೇಕು.ದೇವಸ್ಥಾನಗಳು ನಮ್ಮ ಸನಾತನ ಪರಂಪರೆಗೆ ಸೇರಿದವು ಎನ್ನುವುದು ಸುನಿಶ್ಚಿತವಾದರೂ ನೆಲದ ಕಾನೂನು ಆದ ಸಂವಿಧಾನದ ಆಶಯಗಳಿಗೆ ಧಕ್ಕೆ ತರಬಾರದು.ದೇವಸ್ಥಾನಗಳಲ್ಲಿ ಅಸ್ಪೃಶ್ಯತೆಯ ಆಚರಣೆ ಇರಬಾರದು.ದೇವರುಗಳ ದರ್ಶನವು ಎಲ್ಲರಿಗೂ ಮುಕ್ತವಾಗಿರಬೇಕು.ಪಂಕ್ತಿಬೇಧ ಇರಬಾರದು.ಇಂತಹ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ನಿಗಾವಹಿಸಬೇಕು.

ಇವು ಕೆಲವು ಮುಖ್ಯ ಸಲಹೆಗಳಷ್ಟೆ.ಹಿಂದೂ ದೇವಸ್ಥಾನಗಳ ಸ್ವಾತಂತ್ರ್ಯ,ಸ್ವಾಯತ್ತೆಗೆ ತೆಗೆದುಕೊಳ್ಳಬೇಕಾದ ಇನ್ನಷ್ಟು ಕ್ರಮಗಳ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಬರೆಯುವೆ.

ಮುಕ್ಕಣ್ಣ ಕರಿಗಾರ
ಮೊ;94808 79501

30.12.2021