ಅಮೃತೇಶ್ವರ ಶಿವನ ದರ್ಶನ
ಲೇಖಕರು:ಮುಕ್ಕಣ್ಣ ಕರಿಗಾರ
ಮಹಾಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ರ ‘ ವಿಶ್ವಮಾನವ ದಿನಾಚರಣೆ’ ಯ ದಿನದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನನ್ನ ಕ್ಷೇತ್ರಭೇಟಿ ಪ್ರಾರಂಭಿಸಿದೆ.ಸರ್ವೋದಯ ಸಂಸ್ಕೃತಿಯ ,ಸಮಷ್ಟಿ ಕಲ್ಯಾಣದ ಪ್ರತೀಕವಾಗಿರುವ ಶಿವನ ದರ್ಶನದಿಂದಲೇ ಚಿಕ್ಕಮಗಳೂರು ಜಿಲ್ಲೆಯ ಕಾಯಕವನ್ನಾರಂಭಿಸಿದೆ.ಅಮೃತಾಪುರ ಗ್ರಾಮ ಪಂಚಾಯತಿಯ ಅಮೃತೇಶ್ವರನ ದರ್ಶನ ಪಡೆಯುವ ಮೂಲಕ ನನ್ನ ಕ್ಷೇತ್ರಭೇಟಿ ಕಾರ್ಯಕ್ರಮ ಪ್ರಾರಂಭಿಸಿದೆ.
ಅಮೃತೇಶ್ವರವು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮ ಪಂಚಾಯತಿಯ ಕೇಂದ್ರಸ್ಥಾನ ಅಮೃತಾಪುರದಲ್ಲಿದೆ.ಅಮೃತಾಪುರ ಗ್ರಾಮ ಪಂಚಾಯತಿಯು ಅಮೃತೇಶ್ವರ ದೇವಸ್ಥಾನದಿಂದಲೇ ಪ್ರಸಿದ್ಧಿಯಾಗಿದೆ.ಶ್ರೀಕ್ಷೇತ್ರ ಅಮೃತೇಶ್ವರ ಎಂದು ಗುರುತಿಸಲ್ಪಡುವ ಅಮೃತೇಶ್ವರವು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಉತ್ತರಕ್ಕೆ 57 ಕಿಲೋಮೀಟರ್ ಗಳ ದೂರದಲ್ಲಿದೆ.
ಅಮೃತೇಶ್ವರ ದೇವಸ್ಥಾನವು ಸ್ವಚ್ಛ,ಪ್ರಶಾಂತ ಪರಿಸರದಲ್ಲಿದ್ದು ತನ್ನ ಐತಿಹಾಸಿಕ ವೈಭವದಿಂದ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡುತ್ತದೆ.ಹೊಯ್ಸಳರ ಕಾಲದ ರಚನೆಯಾದ ಅಮೃತೇಶ್ವರವನ್ನು ಹೊಯ್ಸಳ ದೊರೆ ಎರಡನೇ ವೀರಬಲ್ಲಾಳನ ದಂಡನಾಯಕ ಅಮಾತಿ ನಾಯಕ 1196 ರಲ್ಲಿ ನಿರ್ಮಿಸಿದ.ಅಮಾತಿ ನಾಯಕನ ಸ್ಮರಣಾರ್ಥ ಶಿವಲಿಂಗವನ್ನು ‘ ಅಮೃತೇಶ್ವರ’ ಎಂದು ಕರೆದು,ಪೂಜಿಸಲಾಗುತ್ತಿದೆ.ಈ ದೇವಸ್ಥಾನವು ಏಕಕೂಟಗೋಪುರ ದೇವಸ್ಥಾನವಾಗಿದ್ದು ಪ್ರಖ್ಯಾತ ವಾಸ್ತುಶಿಲ್ಪ ರೂವಾರಿ ಮಲ್ಲಿತಮ್ಮ ಅಮೃತೇಶ್ವರ ದೇವಸ್ಥಾನದ ಗುಮ್ಮಟದ ಛಾವಣಿಗಳ ಮೇಲೆ ಕೆಲಸವನ್ನಾರಂಭಿಸುವ ಮೂಲಕ ತನ್ನ ಶಿಲ್ಪಿಕಾರ್ಯ ಪ್ರಾರಂಭಿಸಿದ ಎನ್ನಲಾಗಿದೆ.ನಯವಾದ ಶಿಲ್ಪ ಕಲೆಯಿಂದ ಮನಸ್ಸನ್ನಾಕರ್ಷಿಸುತ್ತದೆ ಅಮೃತೇಶ್ವರ ದೇವಸ್ಥಾನ.
ಅಮೃತೇಶ್ವರವು ಹಿಂದೆ ಶೈವಧರ್ಮದ ಕೇಂದ್ರವಾಗಿದ್ದಂತೆ ಕಾಣುತ್ತದೆ.ಜೈನಮತಾವಲಂಬಿಗಳಾಗಿದ್ದರೂ ಹೊಯ್ಸಳರು ಇತರ ಮತಗಳ ಪ್ರಸಾರಕ್ಕೆ ಉತ್ತೇಜನ ನೀಡಿದ್ದರಿಂದ ಶಿವಭಕ್ತನಾದ ಅಮಾತಿ ನಾಯಕ ಇಲ್ಲಿ ತನ್ನ ಹೆಸರಿನಲ್ಲಿ ಅಮೃತೇಶ್ವರ ಶಿವಾಲಯ ಕಟ್ಟಿಸುತ್ತಾನೆ.ಸಾಲಿಗ್ರಾಮದಲ್ಲಿ ನಿರ್ಮಿಸಿದ ಶಿವಲಿಂಗವು ತ್ರಿಮೂರ್ತ್ಯಾತ್ಮಕ ಶಿವಲಿಂಗ’ ವಾಗಿದೆ.ಅಂದರೆ ಲಿಂಗವು ಮೂರುಪೀಠಗಳನ್ನು ಹೊಂದಿದ್ದು ಬ್ರಹ್ಮಪೀಠ,ವಿಷ್ಣುಪೀಠ ಮತ್ತು ರುದ್ರಪೀಠಗಳಿದ್ದು ರುದ್ರಪೀಠದಲ್ಲಿ ಲಿಂಗವಿದೆ.ಲಿಂಗವು ಆಕರ್ಷಕವಾಗಿದ್ದು ದೈವಕಳೆ ಹೊರಹೊಮ್ಮುತ್ತಿದೆ.ಅಮೃತೇಶ್ವರನ ಸನ್ನಿಧಿಯಲ್ಲಿ ಶಾಂತಿ,ನೆಮ್ಮದಿ,ಆನಂದಗಳುಂಟಾಗುತ್ತವೆ.
ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಮುಖಮಂಟಪದಲ್ಲಿ ಗಣಪತಿ,ವೀರಭದ್ರ,ಸ್ಕಂದ ( ಷಣ್ಮುಖ) ವಿಷ್ಣು ಮತ್ತು ಕಾಲಭೈರವನ ಮೂರ್ತಿಗಳಿವೆ.ಬಲಪಾರ್ಶ್ವದಲ್ಲಿ ನಾಗದಂಪತಿಗಳಿದ್ದರೆ ಗಣೇಶನ ಹತ್ತಿರ ಸಪ್ತಮಾತೃಕೆಯರ ವಿಗ್ರಹಗಳಿವೆ.ಮಧ್ಯಮಗಾತ್ರದ ನಂದಿಯೂ ಇದ್ದಾನೆ.ಈಗ ಗರ್ಭಗುಡಿಗೆ ಎದುರಾಗಿ ಬೇರೆ ಮತ್ತೊಂದು ಸಣ್ಣನಂದಿಯ ವಿಗ್ರಹವನ್ನು ಇಟ್ಟಿದ್ದಾರೆ.ಆದರೆ ಅದು ಅಭಾಸವೆನ್ನಿಸುತ್ತದೆ.ಶಿವದರ್ಶನವನ್ನು ಶಿವಲಿಂಗ ಸ್ಥಾಪನೆಯ ಸಮಯದಲ್ಲಿ ಪ್ರತಿಷ್ಠಾಪಿಸಿದ ನಂದಿಯ ಕೊಂಬುಗಳ ಮೂಲಕ ದರ್ಶಿಸಬೇಕು ಶಿವಪ್ರೀತ್ಯರ್ಥವಾಗಿ ಎನ್ನುವುದು ನಂಬಿಕೆ.ಅಮೃತೇಶ್ವರ ದೇವಸ್ಥಾನದಲ್ಲಿ ಮೂಲನಂದಿಯ ಕೊಂಬುಗಳ ಮೂಲಕ ಶಿವಲಿಂಗವನ್ನು ದರ್ಶನ ಮಾಡಹೊರಟರೆ ಈಗ ಇಟ್ಟಿರುವ ನಂದಿಯು ಅಡ್ಡಬರುತ್ತದೆ.ಅದನ್ನು ನಾನು ಅರ್ಚಕ ಗಿರೀಶ ಭಟ್ ಅವರೊಂದಿಗೆ ಪ್ರಸ್ತಾಪಿಸಿದಾಗ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಅಮೃತೇಶ್ವರ ದೇವಸ್ಥಾನದಲ್ಲಿ ಇರುವ ಗಣಪತಿ,ವೀರಭದ್ರ,ಷಣ್ಮುಖ,ವಿಷ್ಣು ಮತ್ತು ಭೈರವ ಮೂರ್ತಿಗಳು ಹಾಗೂ ಸಪ್ತಮಾತೃಕೆಯರು ಮತ್ತು ನಾಗದಂಪತಿಗಳ ಶಿಲಾ ವಿಗ್ರಹಗಳನ್ನು ಗಮನಿಸಿದಾಗ ಅಮೃತೇಶ್ವರವು ಹಿಂದೆ ಶೈವಧರ್ಮದ ಪ್ರಧಾನ ಕ್ಷೇತ್ರವಾಗಿತ್ತು ಎಂದು ಊಹಿಸಬಹುದು.ಶಿವ ಮತ್ತು ಶಿವನ ಪರಿವಾರ ದೇವತೆಗಳು ಪೂಜಿಸಲ್ಪಡುವ ದೇವಸ್ಥಾನಗಳು ಶೈವಧರ್ಮ ಮತ್ತು ಶೈವ ಸಂಸ್ಕೃತಿಯು ಉಚ್ಛ್ರಾಯಸ್ಥಿತಿಯಲ್ಲಿದ್ದ ಕಾಲವನ್ನು ಸೂಚಿಸುತ್ತವೆ.ಅಮೃತೇಶ್ವರ ದೇವಸ್ಥಾನದ ಹೊರಪಾರ್ಶ್ವದಲ್ಲಿ ಶಾರದಾಂಬೆಯ ಮಂದಿರವಿದೆ.ಶಿವಮಂದಿರದಲ್ಲಿ ಶಾರದಾದೇವಿ ಇರುವ ಕೆಲವೇ ಕ್ಷೇತ್ರಗಳಲ್ಲಿ ಅಮೃತೇಶ್ವರವೂ ಒಂದು.ಇಲ್ಲಿಯ ಶಾರದಾಂಬೆಯ ಮೂರ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ.ಇತರ ದೇವಸ್ಥಾನಗಳಲ್ಲಿ ವೀಣಾಪಾಣಿಯಾದ ಶಾರದಾಂಬೆಯ ಮೂರ್ತಿಗಳಿದ್ದರೆ ಅಮೃತೇಶ್ವರ ದೇವಸ್ಥಾನದ ಆವರಣದ ಶಾರದಾ ದೇವಿಯು ಲೆಕ್ಕಣಿಕೆಹಿಡಿದು ತಾಳೆಯೋಲೆಗ್ರಂಥಗಳನ್ನು ಕೈಯಲ್ಲಿ ಪಿಡಿದ ಭಂಗಿಯಲ್ಲಿದೆ.ಇದು ವಿದ್ಯಾದೇವಿ ಶಾರದೆಯ ಅಪರೂಪದ ವಿಗ್ರಹ.ಇಲ್ಲಿನ ಕಾಲಭೈರವನ ವಾಹನವು ಚೇಳು ಆಗಿರುವುದು ಇಲ್ಲಿಯ ಮತ್ತೊಂದು ವಿಶೇಷ.ಸಾಮಾನ್ಯವಾಗಿ ಕಾಲಭೈರವನ ವಾಹನ ನಾಯಿ ಆಗಿದ್ದರೆ ಇಲ್ಲಿ ಕಾಲಭೈರವನ ಕೆಳಗೆ ಚೇಳನ್ನು ಕೆತ್ತುವ ಮೂಲಕ ವೈಶಿಷ್ಟ್ಯ ಮೆರೆದಿದ್ದಾನೆ ಶಿಲ್ಪಿ.ಇದು ಅಧ್ಯಯನಯೋಗ್ಯವಾದುದು.ದೇವಸ್ಥಾನದಲ್ಲಿ ಎರಡು ಶಿಲಾಶಾಸನಗಳಿಂದು ಕವಿ ಜನ್ನನ ಕಾಲದ ಹಳೆಗನ್ನಡ ಲಿಪಿಯಲ್ಲಿವೆ.ದೇವಸ್ಥಾನದ ಒಳಭಾಗದಲ್ಲಿ ಎರಡು,ಹೊರಭಾಗದಲ್ಲಿ ಎರಡು ಹೀಗೆ ಒಟ್ಟು ನಾಲ್ಕುವೀರಗಲ್ಲುಗಳಿವೆ.
ಅಮೃತಾಪುರ ಗ್ರಾಮ ಪಂಚಾಯತಿಯ ಪಿಡಿಒ ಶ್ರೀಮತಿ ಪವಿತ್ರಾ ಅವರು ದೇವರ ದರ್ಶನದ ವ್ಯವಸ್ಥೆ ಮಾಡಿಸಿದ್ದಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರು.ಅಮೃತೇಶ್ವರ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಿದ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ( ಆಡಳಿತ) ಶ್ರೀ ನಾಗರಾಜ ಅವರಿಗೂ,ಕಡೂರು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ದೇವರಾಜ ನಾಯಕ್ ಅವರಿಗೆ ಮತ್ತು ಸಹಾಯಕ ನಿರ್ದೇಶಕ ಕಲ್ಲಪ್ಪ ಅವರಿಗೆ ಹಾಗೂ ನನ್ನ ಜೊತೆಗಿದ್ದು ದೇವಸ್ಥಾನ ಭೇಟಿಯ ಫೋಟೋ ದಾಖಲೀಕರಣ ಮಾಡಿದ ಜಿಲ್ಲಾ ಪಂಚಾಯತಿಯ ಸ್ವಚ್ಛಭಾರತ್ ಮಿಶನ್ ಶಾಖೆಯ ಸಮಾಲೋಚಕರುಗಳಾದ ಸುರೇಶ ಮತ್ತು ರುದ್ರೇಶ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸುವೆ.
29.12.2021