ಕುವೆಂಪು ಅವರ ಜನ್ಮದಿನ ‘ ವಿಶ್ವಮಾನವ ದಿನಾಚರಣೆ’ : ಮುಕ್ಕಣ್ಣ ಕರಿಗಾರ

.      ಕುವೆಂಪು ಅವರ ಜನ್ಮದಿನ ‘ ವಿಶ್ವಮಾನವ ದಿನಾಚರಣೆ’

ಲೇಖಕರು: ಮುಕ್ಕಣ್ಣ ಕರಿಗಾರ

ಡಿಸೆಂಬರ್ 29, ಮಹಾಕವಿ ಕುವೆಂಪು ಅವರ ಜನ್ಮದಿನ.ಕರ್ನಾಟಕ ಸರಕಾರವು 2015 ರಿಂದಲೂ ಕುವೆಂಪು ಅವರ ಜನ್ಮದಿನವನ್ನು ‘ ವಿಶ್ವಮಾನವ ದಿನಾಚರಣೆ’ ಎಂದು ಆಚರಿಕೊಂಡು ಬರುತ್ತಿದೆ.ಕುವೆಂಪು ಅವರ ಜನ್ಮದಿನವನ್ನು ‘ ವಿಶ್ವಮಾನವ ದಿನಾಚರಣೆ’ ಎಂದು ಘೋಷಿಸಿದ್ದು ಮತ್ತು ಅದೇ ಹೆಸರಿನಲ್ಲಿ ಆಚರಿಸುತ್ತಿರುವುದು ಮಹತ್ವದ ಸಂಗತಿ.ಕುವೆಂಪು ಅವರ ವಿಶ್ವಮಾನವ ಸಂದೇಶವು ಆಧುನಿಕ ಜಗತ್ತಿನ ಅನಿವಾರ್ಯ ಸತ್ಯ ಎನ್ನುವ ಕಾರಣದಿಂದ ವಿಶ್ವಮಾನವತ್ವವನ್ನು ಎತ್ತಿಹಿಡಿಯುವುದು ‘ ವಿಶ್ವ ಮಾನವ ದಿನಾಚರಣೆ’ ಯ ಒಂದು ಮುಖವಾದರೆ ಸ್ವತಃ ಕುವೆಂಪು ಅವರು ‘ ಎಲ್ಲ ಮತದ ಎಲ್ಲೆಗಳನ್ನು ಮೀರಿ’ ಮಹಾಮಾನವರಾಗಿದ್ದರು,ವಿಶ್ವಮಾನವರಾಗಿದ್ದರು ಎನ್ನುವ ಕಾರಣದಿಂದ ಅವರ ಮಹೋನ್ನತ ವ್ಯಕ್ತಿತ್ವದ ಅರ್ಥಪೂರ್ಣ ಸ್ಮರಣೆಯು ವಿಶ್ವಮಾನವ ದಿನಾಚರಣೆಯ ಎರಡನೆಯ ಮುಖ.ಕುವೆಂಪು ಅವರು ‘ಯುಗದ ಕವಿ,ಜಗದ ಕವಿ’ ಸಹಸ್ರಮಾನಗಳಿಗೊಮ್ಮೆ ಅವತರಿಸಬಹುದಾದ ಕವಿಪ್ರತಿಭೆ,ಸಮಷ್ಟಿಯುದ್ಧಾರದ ಶಿವಕಾರಣ ಲೀಲೆ.

ಕುವೆಂಪು ಅವರು ಕನ್ನಡದ ಮಹಾ ಕವಿಮಾತ್ರವಲ್ಲ,ಮಹಾನ್ ಋಷಿ,ದಾರ್ಶನಿಕ.ಅವರ ಎತ್ತರದ ಮತ್ತೊಬ್ಬ ಕವಿ ಕನ್ನಡದಲ್ಲಿ,ಭಾರತೀಯ ಸಾಹಿತ್ಯ ಲೋಕದಲ್ಲಿ ಇಲ್ಲ.ಇತರ ಕವಿ- ಸಾಹಿತಿಗಳು ತಮ್ಮ ಸಾಹಿತ್ಯಲೋಕವನ್ನೇ ನೆಚ್ಚಿಕುಳಿತರೆ ಕುವೆಂಪು ಅವರು ಕವಿಯಾಗಿ ಸಾಧಿಸಿರುವುದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ದು ಮನುಷ್ಯರ ಕಲ್ಯಾಣ ಕಾರ್ಯ ಚಿಂತನೆಯಲ್ಲಿ.ಅವರ ಕಾವ್ಯ,ಕಥೆ,ಕಾದಂಬರಿಗಳಲ್ಲಿ ಮಲೆನಾಡಿನ ಸಿರಿಸೊಬಗಿನ ರಮ್ಯಾದ್ಭುತ ದರ್ಶನವಾಗುವುದರ ಜೊತೆಗೆ ಅವರ ಪ್ರತಿ ಕೃತಿಯಲ್ಲಿ ಮಾನವ ಕಲ್ಯಾಣದ ತುಡಿತ ಎದ್ದು ಕಾಣುತ್ತದೆ.ಕುವೆಂಪು ಅವರ ಕೃತಿಗಳು ಕೇವಲ ಸಾಹಿತ್ಯ ಕೃತಿಗಳಲ್ಲ,ಮನುಷ್ಯತ್ವದ ಪ್ರತಿಪಾದನೆಯ,ಸಮಷ್ಟಿ ಕಲ್ಯಾಣದ ಉದ್ದೇಶದ ರಸ ಋಷಿಯ ಅಕ್ಷರರೂಪದ ಚಿಂತನೆಗಳು.ಮನುಷ್ಯಕಲ್ಯಾಣ ಸಾಧನೆಯ ಒಂದು ಮಾಧ್ಯಮವಾಗಿತ್ತು ಸಾಹಿತ್ಯ ಕುವೆಂಪು ಅವರಿಗೆ.ಇತರ ಕವಿಗಳು ತಾವು ಮಾತ್ರ ಬೆಳೆಯಬೇಕು ಎಂದು ಹಂಬಲಿಸುತ್ತಾರೆ,ತಮ್ಮ ಬೆಳವಣಿಗೆಗೆ ತಮ್ಮದೆ ಬಳಗಕಟ್ಟಿಕೊಂಡು ದೊಡ್ಡವರಾಗುತ್ತಾರೆ.ಆದರೆ ಕುವೆಂಪು ಅವರು ಹಾಗಲ್ಲ.ಸ್ವಯಂಸಿದ್ಧ ಪ್ರತಿಭೆಯಿಂದ ಮೇಲೆದ್ದು ಬಂದ ಕನ್ನಡದ ದೈತ್ಯಪ್ರತಿಭೆ;ತಮ್ಮವ್ಯಕ್ತಿಶ್ರೀಯ ಪ್ರಭಾಸ್ಫೂರ್ತಿಯಿಂದ ನೂರಾರು ಕವಿಹೃದಯಗಳನ್ನು ಅರಳಿಸಿದ,ಸಾವಿರಾರು ಪ್ರಗತಿಪರ ಮನಸ್ಸುಗಳಿಗೆ ಪ್ರೇರಣೆಯಾದ,ಹೊಸತನದ ತುಡಿತವನ್ನು ಅಸಂಖ್ಯಾತ ಯುವತರುಣರ ಬಿಸಿರಕ್ತದ ಧಮನಿಧಮನಿಗಳಲ್ಲಿ ಪ್ರವಹಿಸುವಂತೆ ಮಾಡಿದ ಧೀಮಂತರು.ಅಷ್ಟು ಮಾತ್ರವಲ್ಲ, ಶತಮಾನಗಳು,ಸಹಸ್ರಮಾನಗಳ ಕಾಲ ಮನುಕುಲವನ್ನು ಉಚ್ಚ ಆದರ್ಶ ಪಥದನಡೆಯೆಡೆಗೆ ಸ್ಫೂರ್ತಿಗೊಳಿಸಬಲ್ಲ,ಪ್ರೇರೇಪಿಸಿಲ್ಲ ಕಾವ್ಯಭಾಸ್ಕರ ಕುವೆಂಪು ಅವರು.

‘ ಕಾನೂರು ಹೆಗ್ಗಡತಿ’ ಮತ್ತು ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು ಕುವೆಂಪು ಅವರ ‘ ಗದ್ಯಮಹಾಕಾವ್ಯ’ ಗಳಾದರೆ ಅವರ ಅದ್ಭುತಸೃಷ್ಟಿ ‘ ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವು ವಿಶ್ವಮಹಾಕಾವ್ಯಗಳ ಮಾಲಿಕೆಯಲ್ಲಿ ಪೋಣಿಸಲ್ಪಟ್ಟ ಕನ್ನಡದ ಅನರ್ಘ್ಯರತ್ನ.’ ಕಾನೂರು ಹೆಗ್ಗಡತಿ’ ಮತ್ತು ‘ ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು ಕನ್ನಡದ ಕಾದಂಬರಿ ಲೋಕದ ಸೀಮಾರೇಖೆಗಳು,ಆತ್ಯಂತಿಕ ಸಾಹಿತ್ಯ ಸಿದ್ಧಿಯಕೃತಿಗಳು.ಈ ಎರಡು ಕಾದಂಬರಿಗಳಲ್ಲಿ ಕುವೆಂಪು ಅವರು ಮಲೆನಾಡಿನ ಪ್ರಕೃತಿ ರಮ್ಯತೆಯನ್ನು ತೆರೆದಿಡುತ್ತಲೇ ಮನುಷ್ಯರ ಭಾವ- ಸ್ವಭಾವಗಳನ್ನು ಸಹಜ,ಸುಂದರವಾಗಿ ತೆರೆದಿಡುತ್ತಾರೆ.ಮನುಷ್ಯರು ಎಂದರೆ ಸಹಜ ದೋಷ ದೌರ್ಬಲ್ಯಗಳ ವ್ಯಕ್ತಿತ್ವಗಳು ಎಂದು ನಂಬುತ್ತ ಮನುಷ್ಯರ ಸಹಜ ಆಸೆ,ಕಾಮ,ತುಡಿತಗಳನ್ನು ವ್ಯಕ್ತಪಡಿಸುತ್ತಲೇ ಮನುಷ್ಯ ಅಂತರ್ಗತ ಚೈತನ್ಯಾತ್ಮದ ಜಾಗೃತಿಯ ಅನಿವಾರ್ಯತೆಯನ್ನು ಪ್ರತಿಪಾದಿಸುತ್ತಾರೆ.ಕಾನೂರು ಹೆಗ್ಗಡತಿಯ ಕಾದಂಬರಿಯ ನಾಯಕ ಹೂವಯ್ಯ ಕುವೆಂಪು ಅವರ ಆಶಯ,ದರ್ಶನ,ಸಮಷ್ಟಿ ಕಲ್ಯಾಣ ಪ್ರಜ್ಞೆಯ ಪ್ರತೀಕ.ಹೂವಯ್ಯನ ಸ್ವಗತವು ಮನುಷ್ಯರ ಹೃದಯಸಾಮಾನ್ಯ ಒಳಿತು ಕೆಡುಕಿನ ಪ್ರಶ್ನೆಗಳಲ್ಲಿ ಒಳಿತೇ ಗೆಲ್ಲಬೇಕು ಎನ್ನುವ ಹಂಬಲವನ್ನು ಧ್ವನಿಸುತ್ತದೆ.

‘ ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವು ಬರಿಯ ಮಹಾಕಾವ್ಯ ಮಾತ್ರವಾಗಿರದೆ ಅದು ಮಹಾನ್ ದರ್ಶನವೂ ಆಗಿದೆ.ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕೃತಿಗಳಲ್ಲಿ ಮನುಷ್ಯರ ಸ್ವಭಾವದ ಮೇಲೆ ಬೆಳಕು ಚೆಲ್ಲಿದ ಕುವೆಂಪು ಅವರು ‘ ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಮನುಷ್ಯರು ಮಹಾಂತರಾಗುವ,ಆತ್ಮರು ಪರಮಾತ್ಮರಾಗುವ ದರ್ಶನವನ್ನು ತೆರೆದಿಟ್ಟಿದ್ದಾರೆ.ಕಾವ್ಯದ ಹೆಸರಿನಲ್ಲಿಯೇ ” ದರ್ಶನಂ” ಸೇರಿಸಿದ್ದರ ಉದ್ದೇಶವೇ ಅದು– ಇದು ಕೇವಲ ಕಾವ್ಯವಾಗಲಿ ಇಲ್ಲವೆ ಸಾಹಿತ್ಯ ಕೃತಿಯಾಗಲಿ ಮಾತ್ರವಲ್ಲ ಅವುಗಳನ್ನು ಮೀರಿದ ತತ್ತ್ವ,ದರ್ಶನಗಳನ್ನು ಒಳಗೊಂಡ ಋಷಿಕಾಣ್ಕೆ ಎನ್ನುವ ಅರ್ಥದಲ್ಲಿ ತಮ್ಮ ಮೇರುಕಾವ್ಯವನ್ನು ದರ್ಶನಂ ಎಂದು ಕರೆದಿದ್ದಾರೆ ಕುವೆಂಪು ಅವರು.ವಾಲ್ಮೀಕಿಯವರನ್ನು ಮೀರಿ,ಮುನ್ನಡೆದ ಅಪೂರ್ವ ತೇಜಸ್ಸು- ಓಜಸ್ಸುಗಳ ಸಹಸ್ರಮಾನಗಳ ಮಹಾಕಾವ್ಯ ‘ ಶ್ರೀರಾಮಾಯಣ ದರ್ಶನಂ’ ಕನ್ನಡದ ಹೆಮ್ಮೆ.ವಾಲ್ಮೀಕಿಯವರು ರಾಮಾಯಣವನ್ನು ಅದು ನಡೆದ ಘಟನೆಗಳ ದಾಖಲೆ ಎಂಬಂತೆ ಚಿತ್ರಿಸುತ್ತಾರೆ.ವಾಲ್ಮೀಕಿಯವರದು ರಾಮಾಯಣದ ಪಾತ್ರಗಳ ಬಗ್ಗೆ ನಿರ್ಲಿಪ್ತ ಮನೋಭಾವ.ರಾಮನ ‘ ಮರ್ಯಾದಾಪುರುಷೋತ್ತಮ ವ್ಯಕ್ತಿತ್ವ’ ವನ್ನು ಅಂದವಾಗಿ,ಸರ್ವಾಂಗ ಸುಂದರವಾಗಿ ರೂಪಿಸುವತ್ತಲೇ ವಾಲ್ಮೀಕಿಯವರ ಆಸಕ್ತಿ.ಆದರೆ ಕುವೆಂಪು ಅವರು ವಾಲ್ಮೀಕಿ ರಾಮಾಯಣದ ನಗಣ್ಯ ಪಾತ್ರಗಳಿಗೂ ಜೀವತುಂಬಿದ್ದಾರೆ ಎನ್ನುವುದು ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ವೈಶಿಷ್ಟ್ಯ,ಯಶಸ್ಸು.ವಾಲ್ಮೀಕಿ ರಾಮಾಯಣದ ಮಂಥರೆ ಓದುಗರ ಸಿಟ್ಟು ಸೆಡವುಗಳಿಗೆ ಕಾರಣವಾಗಬಹುದಾದ ‘ ಅನಿಷ್ಟಕಾರಣಿ’ ಯಾದರೆ ಕುವೆಂಪು ಅವರ ಕಾವ್ಯದಲ್ಲಿ ಆಕೆ ಮನುಷ್ಯಸಹಜ ಬಯಕೆ,ವಾತ್ಸಲ್ಯದ ಮೂರ್ತಿಯಾಗಿ ಪ್ರಕಟಗೊಂಡಿದ್ದಾಳೆ.ಅವಳ ಗೂನು ಗೂನಲ್ಲ,ತನಗೆ ಆಶ್ರಯ ನೀಡಿದವರ ಹಿತಬಯಸುವ ಕಲ್ಯಾಣಾಕಾಂಕ್ಷೆಯ ಸಂಕೇತ.ಮಂಡೋದರಿಯ ಪಾತ್ರ ಜೀವಂತವಾಗಿ ಎದ್ದು ಬರುವಂತೆ ಚಿತ್ರಿಸಿರುವ ಕುವೆಂಪು ಅವರು ಊರ್ಮಿಳೆ,ಮಂಡೋದರಿಯರಂತಹ ನಗಣ್ಯ ಸ್ತ್ರೀ ಪಾತ್ರಗಳಿಗೂ ಜೀವತುಂಬಿ ರಾಮಾಯಣದ ಬದುಕಿನಲ್ಲಿ ಅವರ ಪಾತ್ರಮಹತಿಯನ್ನು ಎತ್ತಿತೋರಿಸಿದ್ದಾರೆ.ರಾಮಾಯಣದ ಎಲ್ಲ ಪಾತ್ರಗಳಲ್ಲಿ ಚೈತನ್ಯದ ಆಹ್ವಾಹನೆ ಮಾಡಿದ್ದು ಕುವೆಂಪುರವರ ಕಾಣ್ಕೆ,ಸಿದ್ಧಿ.ಆಧುನಿಕ ಭಾರತವು ಸೇರಿದಂತೆ ಇಪ್ಪತ್ತೊಂದನೆಯ ಶತಮಾನವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ತನ್ನದೆ ರೀತಿಯಲ್ಲಿ ಮುಖಾಮುಖಿಯಾಗುವ ರಾಮಾಯಣ ದರ್ಶನಂ ಮಹಾಕಾವ್ಯವು’ ಪರಸ್ಪರರು ಅರಿತು ಬಾಳುವುದೇ ಮಾನವರ ಕಲ್ಯಾಣ ಸಾಧನೆಗಿರುವ ಏಕೈಕ ಮಾರ್ಗ; ದ್ವೇಷವಲ್ಲ,ಪರಸ್ಪರರ ಪ್ರೀತಿಯೇ ಬದುಕಿನ ರಸಗಂಗೆ,ಒಬ್ಬನು ಎಲ್ಲರಿಗಾಗಿ; ಎಲ್ಲರೂ ಒಬ್ಬನಿಗಾಗಿ’ ಎನ್ನುವ ಸರ್ವೋದಯ ತತ್ತ್ವವೇ ಯುಗಮಂತ್ರ’ ಎನ್ನುವ ಸಂದೇಶ ಸಾರುತ್ತದೆ.

ಎಲ್ಲ ರೀತಿಯ ಮೌಢ್ಯಗಳನ್ನು ಬಲವಾಗಿ ವಿರೋಧಿಸುತ್ತಿದ್ದ ಕುವೆಂಪು ವೈಚಾರಿಕತೆ,ವೈಜ್ಞಾನಿಕತೆ ಮತ್ತು ಆಧ್ಯಾತ್ಮಿಕತೆಗಳ ಸಂಗಮವಾಗಬೇಕು ನಮ್ಮ ವ್ಯಕ್ತಿತ್ವ ಎನ್ನುತ್ತಿದ್ದರು.ಪ್ರಗತಿಪರ ವಿಚಾರಗಳನ್ನು ಹೊಂದದೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ,ವೈಜ್ಞಾನಿಕ ಮನೋಭಾವವನ್ನು ತಳೆಯದೆ ಸ್ವಾಂತಂತ್ರ್ಯದ ಸವಿಯನ್ನನುಭವಿಸಲು ಸಾಧ್ಯವಿಲ್ಲ,ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳದೆ ಪೂರ್ಣತ್ವ ಸಾಧ್ಯವಿಲ್ಲ.ಪುರೋಹಿತಶಾಹಿಯ ಕಬಂಧಬಾಹುಗಳ ಬಂಧನದಿಂದ ಹೊರಬರದೆ ಸಮಾಜದ ಉದ್ಧಾರ ಸಾಧ್ಯವಿಲ್ಲ ಎಂದು ನಂಬಿದ್ದ ಕುವೆಂಪು ಅವರು ಪ್ರಗತಿಗೆ ಅಡ್ಡಿಯಾಗಿರುವ ಪ್ರಗತಿವಿರೋಧಿ ಮನಸ್ಕರುಗಳನ್ನೆಲ್ಲ ಖಂಡಿಸುತ್ತಿದ್ದರು.ಹಳೆಯ ಕಾಲದ ಶಾಸ್ತ್ರ,ಮಂತ್ರಗಳನ್ನು ಉಗ್ಗಡಿಸುತ್ತ ಜನಸಾಮಾನ್ಯರ ಶೋಷಣೆಮಾಡುತ್ತಿರುವ ಪುರೋಹಿತಶಾಹಿಯನ್ನು,ಪುರೋಹಿತಶಾಹಿಯ ಆಸರೆಯಲ್ಲಿ ಗದ್ದುಗೆಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದ ಪಟ್ಟಭದ್ರರುಗಳನ್ನು ಹರಿತವಾದ ಮಾತುಗಳಲ್ಲಿ ಖಂಡಿಸುತ್ತಿದ್ದರು ಕುವೆಂಪು.ಮದುವೆಗೆ ದುಂದುವೆಚ್ಚ. ಕೂಡದು ಎಂದು ಸರಳವಿವಾಹಗಳನ್ನು ಪ್ರೋತ್ಸಾಹಿಸುತ್ತಿದ್ದ ಅವರು ಪುರೋಹಿತರುಗಳು ಮದುವೆಯ ಕಾಲದಲ್ಲಿ ಉಗ್ಗಡಿಸುತ್ತಿರುವ ಅರ್ಥಹೀನ ಮಂತ್ರಗಳ ಬದಲು ಶುಭಕೋರುವ,ಉನ್ನತಿಯನ್ನರಸುವ’ ಮಂತ್ರಾಕ್ಷತೆ’ ಎನ್ನುವ ಮದುವೆಯ ಕನ್ನಡ ಮಂತ್ರಗಳನ್ನು ಸರಳಕನ್ನಡದಲ್ಲಿ ಬರೆದಿದ್ದರು.ನಾಡು ನುಡಿಗಳ ಹಿತ,ಉನ್ನತಿಯ ಬಗ್ಗೆ ಸದಾ ಆಸಕ್ತರಾಗಿದ್ದ ಋಷಿಕವಿ ಜನಸಾಮಾನ್ಯರ ಉದ್ಧಾರದಿಂದ ಮಾತ್ರ ನಾಡಿನ ಉದ್ಧಾರ ಎನ್ನುವುದನ್ನು ಪ್ರತಿಪಾದಿಸಿದರು.ನಡೆ- ನುಡಿ ಮತ್ತು ಬರಹಗಳಲ್ಲಿ ಜನಸಾಮಾನ್ಯರಿಗೆ ಘನತೆಯನ್ನಿತ್ತರು ‘ ಶ್ರೀಸಾಮಾನ್ಯರು’ ಎಂದು ಜನಸಾಮಾನ್ಯರನ್ನು ಸಂಬೋಧಿಸುವ ಮೂಲಕ.’ ಸಾಮಾನ್ಯರೆ ಭಗವದ್ ಮಾನ್ಯರ್’ ಎನ್ನುವುದು ಪ್ರಸಿದ್ಧ ಉಕ್ತಿಗಳಲ್ಲೊಂದು.

ವಿಶ್ವಮಾನವ ದಿನಾಚರೆಣೆಯನ್ನು ಆಚರಿಸುವ ಸಂದರ್ಭದಲ್ಲಿ ನಾವು ಕುವೆಂಪು ಅವರ ವ್ಯಕ್ತಿತ್ವ,ಸಾಧನೆ- ಸಿದ್ಧಿಗಳನ್ನು ಸ್ಮರಿಸುವುದರ ಜೊತೆಗೆ ಅವರ ಸಮಗ್ರವ್ಯಕ್ತಿತ್ವ ಮತ್ತು ವಿಶ್ವಮಾನವ ಸಂದೇಶವನ್ನು ಸಾರಬೇಕಾದ ಅಗತ್ಯವಿದೆ.’ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎನ್ನುವ ಕುವೆಂಪುರವರ ಮಹಾವಾಕ್ಯ ನಮ್ಮ ಯುವಜನತೆಯನ್ನು ಬಡಿದೆಬ್ಬಿಸಬೇಕಿದೆ.ಕವಿ- ಸಾಹಿತಿಗಳು ಎಂದು ಹೇಳಿಕೊಳ್ಳುತ್ತ ರಾಜಕೀಯ ಪಕ್ಷಗಳ ಮುಖವಾಣಿಯೋ ಬಾಲಬಡುಕರೋ ಆಗಿರುವವರಿಗೆ ಎತ್ತಿ ಸಾರಬೇಕಿದೆ — ‘ಕವಿಗಳಿಗೆ ಅರಸುಗಳಂಕೆಯಿಲ್ಲ’ ಎನ್ನುವ ಕವಿಧ್ಯೇಯವಾಕ್ಯವನ್ನು.ಕುವೆಂಪು ಅವರು ನಡೆ- ನುಡಿಗಳಲ್ಲಿ ಒಂದಾಗಿದ್ದರು ಎನ್ನುವ ಕಾರಣದಿಂದ ಸಾಧ್ಯವಾಗಿತ್ತು ಅವರಿಂದ ಇಂತಹ ನಿರ್ಭೀತ ನಿಲುವಿನ ಅಭಿಪ್ರಾಯ ಮಂಡನೆ.ಆದರೆ ನಮ್ಮ ಕವಿ ಸಾಹಿತಿಗಳು ಯಾವ ಯಾವದೋ ಆಸೆ,ಆಮಿಷ,ಪ್ರಲೋಭನೆಗೆ ಒಳಗಾಗಿದ್ದರಿಂದ ಬತ್ತಿಹೋಗಿವೆ ಅವರ ಗಂಟಲುಗಳು.ಕುವೆಂಪು ಅವರ ಮಹೋನ್ನತ ಜೀವನವು ನಮ್ಮೆಲ್ಲರ ಆದರ್ಶವಾಗಬೇಕು.ಕುವೆಂಪು ಅವರಂತೆಯೇ ಸಿಂಹಗಾಂಭಿರ್ಯದಿಂದ ನಡೆಯುವುದನ್ನು ರೂಢಿಸಿಕೊಳ್ಳಬೇಕು.

ಮುಕ್ಕಣ್ಣ ಕರಿಗಾರ
ಮೊ; 94808 79501

29.12.2021