ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ: ಅನಧಿಕೃತ ನೀರಾವರಿ ತಡೆಗೆ ವಿಫಲ-ಶಾಸಕ ರಾಜಾ ವೆಂಕಟಪ್ಪ ನಾಯಕ ಅತೃಪ್ತಿ

ಮುನಿರಾಬಾದ.ಡಿ.28: ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಅನಧಿಕೃತ ನೀರಾವರಿಗೆ ಕಡಿವಾಣ ಹಾಕಿ ಕೊನೆಭಾಗದ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಸಬೇಕು’ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ. ಇಂದು ಮುನಿರಾಬಾದಿನಲ್ಲಿ  ಸಚಿವ ಆನಂದ ಸಿಂಗ್ ನೇತೃತ್ವದಲ್ಲಿ ನಡೆದ ತುಂಗಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿಯ 116ನೇ ಸಭೆಯಲ್ಲಿ ಅವರು ಮಾತನಾಡಿದರು.

‘ತುಂಗಭದ್ರಾ ಎಡದಂಡೆ ನಾಲೆಯ ಕೊನೆಭಾಗದ(ಟೇಲೆಂಡ್ ) ವ್ಯಾಪ್ತಿಯ ಮಾನ್ವಿ ತಾಲೂಕು ಹಾಗೂ ನೂತನ ಸಿರವಾರ ತಾಲೂಕಿನ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಎಡದಂಡೆ ನಾಲೆಯ ಮೈಲ್ 69ರಲ್ಲಿ ಗೇಜ್ ನಿರ್ವಹಣೆಯ ಲೋಪ ನಿವಾರಿಸಬೇಕು. ಸಮರ್ಪಕ ಗೇಜ್ ನಿರ್ವಹಣೆಗೆ ಗಮನಹರಿಸಬೇಕು. ಉಪ ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ಹರಿಸುವ ಹೊಣೆಯನ್ನು ಸಂಬಂಧಿಸಿದ ಜಲಸಂಪನ್ಮೂಲ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ವಹಿಸಬೇಕು. ಅನಧಿಕೃತ ನೀರಾವರಿ ತಡೆಯಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮಗಳನ್ನು ಜರುಗಿಸಬೇಕು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು. ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಬಸನಗೌಡ ದದ್ದಲ, ಬಳ್ಳಾರಿ ಸಂಸದ ದೇವೇಂದ್ರಪ್ಪ ಸೇರಿದಂತೆ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಶಾಸಕರು, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.