ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅಗತ್ಯ: ಸುಖಾಣಿ

ರಾಯಚೂರು,ಡಿ.27- ‘ಅಖಿಲ ಭಾರತೀಯ ವೈದಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ರಾಯಚೂರು ಜಿಲ್ಲೆಯ ಶಾಸಕರು, ಸಂಸದರು ಹಾಗೂ ಎಲ್ಲಾ ಪಕ್ಷಗಳ ಚುನಾಯಿತ ಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಅಗತ್ಯ’ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದರು. ಅವರು ಇಂದು ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಏಮ್ಸ್ ಪಡೆಯಲು ಪ್ರಧಾನಿ ಕಚೇರಿ ಸೇರಿದಂತೆ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದ್ದು ಇದುವರೆಗೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಏಮ್ಸ್ ಗಾಗಿ ನಾನು ನನ್ನ ಪ್ರಾಣ ತ್ಯಾಗಕ್ಕೂ ಸಿದ್ಧ’ ಎಂದು ಭಾವುಕರಾಗಿ ನುಡಿದರು. ‘ ರಾಯಚೂರು ಜಿಲ್ಲೆಗೆ ಏಮ್ಸ್ ಬಂದರೆ ಖಾಸಗಿ ಆಸ್ಪತ್ರೆಗಳಿಗೆ ಹೊಡೆತ ಬೀಳುತ್ತದೆ ಎಂಬ ಭಾವನೆ ಮೂಡಿಸುವ ಹುನ್ನಾರ ಮತ್ತು ತಪ್ಪು ಗ್ರಹಿಕೆಯಿದೆ. ಅದು ಅಸಮಂಜಸವೆಂದ ಅವರು ನಗರಕ್ಕೆ ರಿಲಯನ್ಸ್ ಮಾಲ್ ಗಳು ಬಂದವು . ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಅದರಿಂದ ಯಾವುದೇ ತೊಂದರೆಯಾಗಿಲ್ಲ’ ಎಂದರು. ‘ಈ ಹಿಂದೆ ರಾಯಚೂರು ನಗರಕ್ಕೆ ಓಪೆಕ್ ಆಸ್ಪತ್ರೆ ಮಂಜುರಾಗಿದ್ದು ಯಾವ ರಾಜಕಾರಣಿಗಳಿಂದಲ್ಲ. ಬದಲಾಗಿ ರೇಣುಕಾ ವಿಶ್ವನಾಥ ಪ್ರಯತ್ನದಿಂದ’ ಎಂದರು. ‘ಓಪೆಕ್ ಆಸ್ಪತ್ರೆ ಅಪೋಲೋ ಸಂಸ್ಥೆ ನಡೆಸುತ್ತಿದ್ದಾಗ ಉತ್ತಮವಾಗಿ ನಡೆಯಿತು ನಂತರ ಅದು ಹಳ್ಳ ಹಿಡಿಯಿತು’ಎಂದರು. ‘ಐಐಟಿ ಹೋರಾಟ ಒಂದು ಐತಿಹಾಸಿಕ ಹೋರಾಟವಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿ ನ್ಯೂನ್ಯತೆಯಿಂದ ಐಐಟಿ ಕೈ ತಪ್ಪಿತು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ಸಂಸದರಾಗಿ ಅಮರೇಶ್ವರ ನಾಯಕರನ್ನು ಗೆಲ್ಲಿಸಿದ್ದಲ್ಲಿ ಏಮ್ಸ್ ತರುವುದಾಗಿ ಹೇಳಿದ್ದರು. ಅವರು ಈಗ ಬದ್ಧತೆ ಪ್ರದರ್ಶಿಸಬೇಕು. ಶಾಸಕ ಡಾ.ಶಿವರಾಜ ಪಾಟೀಲ ಈ ಬಗ್ಗೆ ಇಚ್ಛಾಶಕ್ತಿ ತೋರಿಸಬೇಕು. ಸಂಸದ ಅಮರೇಶ್ವರ ನಾಯಕರು ಸಂಸತ್ ನಲ್ಲಿ ಧ್ವನಿ ಎತ್ತಬೇಕು’ ಎಂದು ಸುಖಾಣಿ ಒತ್ತಾಯಿಸಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ‘ಜಿಲ್ಲೆಯ ಆಡಳಿತ ಪಕ್ಷದಲ್ಲಿರುವ ಶಾಸಕರಿಗೆ ಏಮ್ಸ ತರುವ ತಾಕತ್ತು ಬೇಕು. ಏಮ್ಸ ತರದಿದ್ದರೆ ಮುಂದಿನ ಚುನಾವಣೆಯಲ್ಲಿ ಇದು ಆಡಳಿತರೂಡ ಪಕ್ಷದ ಶಾಸಕರಿಗೆ ರಾಜಕೀಯ ದೌರ್ಬಲ್ಯವಾಗಿ ಪರಿಣಮಿಸಿ ವಿರೋಧ ಪಕ್ಷಗಳಿಗೆ ಚುನಾವಣೆ ಅಸ್ತ್ರವಾಗಲಿದೆ’ ಎಂದರು. “ಮುಂದಿನ ದಿನಗಳಲ್ಲಿ ಏಮ್ಸ್ ಪಡೆಯಲು ಪಕ್ಷಾತೀತ ಹೋರಾಟ ಮಾಡಲಾಗುತ್ತದೆ’ ಎಂದು ಹೇಳಿದರು.