ಮಾನ್ವಿ ಡಿ.27: ‘ವಿದ್ಯಾರ್ಥಿಗಳು ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ’ ಎಂದು ಪ್ರಾಂಶುಪಾಲ ರವೀಂದ್ರ ಎಸ್.ಬಂಡಿ ಹೇಳಿದರು.
ಸೋಮವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ‘ ವಿಶ್ವಾಸ ಕಿರಣ’ ಯೋಜನೆ ಅಡಿಯಲ್ಲಿ ‘ಇಂಗ್ಲೀಷ್ ಭಾಷಾ ವಿಶೇಷ ಬೋಧನೆ’ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 24ದಿನಗಳ ‘ವಿಶ್ವಾಸ ಕಿರಣ’ ಉಚಿತ ತರಬೇತಿ ಕಾರ್ಯಕ್ರಮ ಜಾರಿಗೊಳಿಸಿದೆ. ಈ ತರಬೇತಿ ಮೂಲಕ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರೌಢಿಮೆ ಹಾಗೂ ಸಂವಹನ ಕಲೆ ಹೆಚ್ಚಿಸಲಾಗುವುದು. ವಿದ್ಯಾರ್ಥಿಗಳು ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಹಿರಿಯ ಉಪನ್ಯಾಸಕರಾದ ಸತ್ಯನಾರಾಯಣ ಭಂಡಾರಿ, ರೇವಣಸಿದ್ದಯ್ಯ ಹಿರೇಮಠ, ಮಾರಯ್ಯ ಅರೋಲಿ, ಆಂಜನೇಯನಾಯಕ ನಸಲಾಪುರ ಹಾಗೂ ಪ್ರಗತಿ ಪಿಯು ಕಾಲೇಜು ಪ್ರಾಂಶುಪಾಲ ಬಸವರಾಜ ಭೋಗಾವತಿ ಇದ್ದರು. ಉಪನ್ಯಾಸಕ ಮಾರಯ್ಯ ಅರೋಲಿ ನಿರೂಪಿಸಿದರು.