ಆಪ್ತನೆನಿಸುವ ಅಂಚೆಮಿತ್ರ – ರವಿ ಶಿವರಾಯಗೊಳ

ಆಪ್ತನೆನಿಸುವ ಅಂಚೆಮಿತ್ರ

ಲೇಖಕ: ರವಿ ಶಿವರಾಯಗೊಳ

ಆಪ್ತಮಿತ್ರನಂತೆ ಪ್ರತಿ ಸಾರಿಯೂ ಕೈಗೊಂದು ಪುಸ್ತಕವಿಟ್ಟು ಸಣ್ಣದೊಂದು ನಗುಚೆಲ್ಲಿ ಮರೆಯಾಗುವ ಪೋಸ್ಟಮ್ಯಾನ್ ಎಂಬ ಬೆರಗುಗೊಳಿಸುವ ಮನುಷ್ಯ. ನನಗೆ ದೂರದೂರಿಂದ ಬರುವ ಪ್ರತಿಯೊಂದು ಪುಸ್ತಕವನ್ನು ಆತನೇ ಮೊದಲ ಸ್ಪರ್ಶ ಮಾಡುತ್ತಾನೆ. ಅವನಿಂದ ಬರುವ ಒಂದೊಂದು ಪೋನ್ ಕರೆಯು ಕೂಡ ನನ್ನಲ್ಲೊಂದು ಖುಷಿ ತಂದುಕೊಡುತ್ತದೆ. ಊರೂರು ತಿರುಗಾಡಿ ನಮ್ಮೂರಿಗೆ ಬಂದಾಗ ‘ನೀವು ಬಾಳ ‌ಓದ್ತೀರಿ ರವಿ, ಖುಷಿ ಆಗ್ತೈತಿ’ ಎನ್ನುತ್ತಲೇ ಬ್ಯಾಗೊಳಗಿಂದ ತೆಗೆಯುತ್ತಾನೆ ಯಾರೋ ಕಳುಹಿಸದ ‌ಚಂದದ ಪುಸ್ತಕವೊಂದನ್ನು. ಆಗೆಲ್ಲ ನನ್ನೊಲ್ಲೊಂದು ಮಂದಹಾಸ ಚಿಗುರೊಡೆಯುತ್ತದೆ.‌ ಮಹಾರಾಷ್ಟ್ರದ ಕಟ್ಟಕಡೆಗಿರುವ ಊರೊಂದರಲ್ಲಿರುವ ನನಗೆ ಬಹಳಷ್ಟು ಪುಸ್ತಕಗಳು ಅಂಚೆ ಮುಖಾಂತರವಾಗಿಯೇ‌ ತಲುಪುತ್ತವೇ. ಪುಸ್ತಕದಂಗಂಡಿಯಲ್ಲಿ ಖರೀದಿಸಿದ ಪುಸ್ತಕಗಳು ಕಡಿಮೆ.‌ ಇನ್ನೊಂದು ಆಶ್ಚರ್ಯ ಎಂಬಂತೆ ಇಲ್ಲೇ ಪಕ್ಕದ ರಾಜ್ಯ ಕರ್ನಾಟಕದ ವಿಜಯಪೂರ ಜಿಲ್ಲೆಯಲ್ಲಿನ ಪುಸ್ತಕ ಆರ್ಡರ್ ಮಾಡಿದರೂ ಅವು ಮುಂಬೈ ಮುಖಾಂತರವಾಗಿ ನನಗೆ ‌ತಲುಪುವುದು ಹದಿನೈದು ದಿನಗಳಾಚೆಗೆ; ಅಲ್ಲಿಯವರೆಗೆ ಚಾತಕಪಕ್ಷಿಯಂತೆ‌‌‌ ಕಾಯುವುದೇ ಕೆಲಸವಾಗುತ್ತದೆ.‌ ನನಗೆ ಇಷ್ಟವಾದ ಕೃತಿಯೊಂದನ್ನು ಖರೀದಿಸಿದ ನಂತರ ಹದಿನೈದು ದಿನಗಳವರೆಗೂ ಕಾದು ಓದುವುದರಲ್ಲಿ ಅದೆಂತಹದ್ದೋ ಸಂತಸ. ಅದಕ್ಕೆ ಹೆಸರಿಲ್ಲ!

‘ರವೀ, ನಿಮಗೊಂದು ಪುಸ್ತಕ ಬಂದಿದೆ’  ನಾನ್ಯಾವುದೋ ಕೃಷಿಯ ಕೆಲಸದಲ್ಲಿ ತೊಡಗಿಕೊಂಡ ಸಮಯದಲ್ಲಿ ಅಚಾನಕ್ಕಾಗಿ ಬಂದ ಪೋನ್ ಕರೆಯೊಂದನ್ನು ಸ್ವೀಕರಸಿದಾಗ ಅಚ್ಚ ಕನ್ನಡದಲ್ಲಿ ಕೇಳುವುದು ಈ ಧ್ವನಿ. ಅಲ್ಲಿಂದಾಚೆಗೆ ನನ್ನೊಳಗೆ ಆತ್ಮತೇಜ ಜಾಗೃತಗೊಳ್ಳುತ್ತದೆ. ವಿದೇಶದಿಂದ ಬರುವ ಮಗನಿಗಾಗಿ ಕಾಯುತ್ತ ಕುಳಿತ ಅಮ್ಮನಿಗೆ ಮಗ ಕರೆ ಮಾಡಿ ‘ಅಮ್ಮ ಈಗಷ್ಟೇ ನಾನು ತಾಯ್ನಾಡಿಗೆ ಬಂದಿಳಿದೇ’ ಅಂತ‌‌ ಹೇಳಿದಾಗ ಆ ತಾಯಿಯಲ್ಲಿ ಆಗುವಂತಹ ಹರ್ಷೋದ್ಗಾರ ಈ ನನ್ನ ಪುಸ್ತಕಗಳು ಅಂಚೆಯವನ ಕೈಯಲ್ಲಿ ಬಂದಿದೆಯೆಂದು ತಿಳಿದಾಗ ನನ್ನಲೂ ಅಂತಹದೇ ಭಾವ ಸೃಷ್ಟಿಯಾಗುತ್ತದೆ.‌ ಈಗೀಗ ಅಂಚೆಯವನು ಆಪ್ತಮಿತ್ರನಂತೆ ಅನ್ನಿಸುತ್ತಾನೆ. ಕೆಲವು ವರ್ಷಗಳ ಹಿಂದಿನಿಂದಲೂ ಆತ ನಮ್ಮೂರಿಗೆ ಬರುತ್ತಿದ್ದ. ಆದರೆ ಆಗೆಲ್ಲಾ ಆತ ಅಪರಿಚಿತ. ‌ಕೆವಲ ಭಾರತೀಯ ಅಂಚೆಯಲ್ಲಿ ಕೆಲಸ ಮಾಡುವ ಕೆಲಸಗಾರ. ಆದರೆ ಈಗ ಹಾಗಲ್ಲ; ವಾರಕ್ಕೆರಡು ಬಾರಿಯಾದರೂ ಸಿಗುವ, ಸಿಕ್ಕಾಗಲೆಲ್ಲಾ ಎಲ್ಲಿಂದಲೋ ಬಂದತಹ ಪುಸ್ತಕವೊಂದನ್ನು ಜೊತೆಗಿಟ್ಟುಕೊಂಡು ಬರುವ, ಬಂದಾಗೆಲ್ಲ ಇಂತಹ ಖುಷಿ ಹೊತ್ತು ತರುವ ಅಂಚೆಮಿತ್ರ.

ನನ್ನ ಬದುಕಿನಲ್ಲಿ ಓದು ಕೂಡ ಒಂದು ಭಾಗವೇ ಆಗಿಹೋಗಿದೆ. ‌ಹಾಗೆ ಓದುವ ಹವ್ಯಾಸ ಯಾವಾಗಿನಿಂದ ಬೆಳೆಯಿತೆಂಬುದನ್ನು ನಿಖರವಾಗಿ ಹೇಳಲಾಗದು. ‌ನನ್ನ ಕಾಲೇಜ್ ಸಿಲೇಬಸನ್ ಯಾವದಾದರೊಂದು ಪುಸ್ತಕ ಹಿಡಿದುಕೊಂಡು ‌ಹತ್ತಿರದಲ್ಲಿದ್ದ ನಗರದ ಗ್ರಂಥಾಲಯಕ್ಕೆ ಹೋಗುವದು ರೂಢಿಯಾಗಿ ಬರುಬರುತ್ತಾ ಅದೊಂದು ಅಭ್ಯಾಸವೂ ಆಗಿಹೋಯಿತು. ಆದರೆ ಪ್ರತಿ ಬಾರಿ ಗ್ರಂಥಾಲಯದಲ್ಲಿ ಕಾಲಿಟ್ಟಾಗ ನನಗೆ ‌ಸೆಳಿಯುತಿದ್ದದ್ದು ತರಂಗ, ಸುಧಾ, ತುಷಾರ್, ಮಂಗಳ, ಮಯೂರ ಈ ತರಹದ ಮಾಸಿಕ ಮತ್ತು ವಾರ ಪತ್ರಿಕೆಗಳು. ‌ಆಗಿನ್ನೂ ಸಾಹಿತ್ಯಕ್ಕೆ ಸಂಬಂಧಿಸಿರುವ ಅದ್ಯಾವ ಪುಸ್ತಕವನ್ನು ಓದಿರದವನು ನಾನು. ಆದರೆ ಮೊಟ್ಟಮೊದಲ ಬಾರಿಗೆ ಅದ್ಯಾವ ಪತ್ರಿಕೆಯಲ್ಲಿನ ಕಥೆ, ಪ್ರಬಂಧ, ಲೇಖನ ಓದಿಕೊಂಡು ಸಾಹಿತ್ಯದ ರುಚಿ ಹತ್ತಿಸಿಕೊಂಡೇನೋ! ತಿಳಿಯದು. ಈಗ ನನ್ನದೇಯಾದ ಓದುವ ಕೋಣೆಯೊಂದರಲ್ಲಿ ಮುನ್ನೂರಕ್ಕೂ ಹೆಚ್ಚು ಪುಸ್ತಕಗಳು ತುಂಬಿವೆ. ಬಹುತೇಕ ಪುಸ್ತಕಗಳು ಓದಿದ್ದೇನೆ. ‌ಪ್ರೀತಿಯಿಂದ ಕೈ ಸವರಿದ್ದೇನೆ, ಆಗಾಗ ಕೆಲವೊಂದು ಪುಸ್ತಕಗಳನ್ನ ಮತ್ತೆ ಮತ್ತೆ ಓದುತ್ತೇನೆ. ‌ಕೆಲವೊಂದು ಪುಸ್ತಕಗಳೇ ಹಾಗೆ ಓದಿದಾಗೊಮ್ಮೆ ಹೊಸ ಬೆರಗು, ಹೊಸ ಅನುಭವ, ಒಂದಿಷ್ಟು ಖುಷಿಯನ್ನು ಕೊಟ್ಟು ಹೋಗುತ್ತವೆ.‌ ಓದುವಾಗ ಆಗುವಷ್ಟು ಸಂತಸ; ಅನೀರಿಕ್ಷಿತವಾಗಿ ಅಂಚೆಮಿತ್ರನ ಕೈಯಿಂದ ಪಡೆದುಕೊಳ್ಳುವಾಗಲೂ ಆಗುತ್ತದೆ.

ನಾನಿರುವಲ್ಲಿರುವ ಅಂಚೆಮಿತ್ರನಿಗೆ  ಕನ್ನಡ ಓದಲು, ಬರೆಯಲು,ಮಾತಾಡಲೂ‌ ಬರುತ್ತದೆ ಅವನ ಬಳಿಗೆ‌ ಯಾವುದೇ ಪತ್ರಿಕೆ,ಪುಸ್ತಕ ಬಂದರೂ ಮುಂಚಿತವಾಗಿಯೇ ಯಾರು ಕಳುಹಿಸಿದವರು, ಎಲ್ಲಿಂದ ಕಳುಹಿಸಿದ್ದಾರೆಂದು ಕರೆ ಮಾಡಿದಾಗಲೇ ತಿಳಿಸಿರುತ್ತಾನೆ. ಅಂಚೆಯವನಷ್ಟೇ ಅಲ್ಲ!  ಮಹಾರಾಷ್ಟ್ರದ ಜತ್ತ ತಾಲೂಕಿನ ಬಹುತೇಕ ‌ಹಳ್ಳಿಗಳಲ್ಲಿಯ ಜನರು ಈಗಲೂ ಕನ್ನಡ ದಿನಪತ್ರಿಕೆ, ಪುಸ್ತಕಗಳು, ಕನ್ನಡದ ಚಲನಚಿತ್ರಗಳು ನೋಡುತ್ತಾರೆ ಮತ್ತು ಓದುತ್ತಾರೆ.‌ ಖುಷಿಯ ವಿಚಾರವೆಂದರೆ ಮಹಾರಾಷ್ಟ್ರದಲ್ಲಿಯೂ ಕನ್ನಡದ‌ ಸರ್ಕಾರಿ ಶಾಲೆಗಳು ಕಾಣಬಹುದು ಮತ್ತು ಹೆಚ್ಚಾಗಿ ಅಂಚೆಯಮುಖಾಂತರ ಬರುವ ಕಾಗದ ಪತ್ರಗಳು ಮಾಸಪತ್ರಿಕೆ , ಪುಸ್ತಕಗಳು ಕನ್ನಡ ಓದುಗ ದೊರೆಗಳಿಗೆ ಚಾಕಚಕ್ಯತೆಯಿಂದ ತಲುಪಿಸುವವನು ಈ ಅಂಚೆಮಿತ್ರಃ.

ಕೆಲವೂ ಸಾರಿ ನಮ್ಮ ನಗುವಿಗೆ‌, ನಮ್ಮೊಳಗಿನ ಆತ್ಮ ತೃಪ್ತಿಗೆ, ಅನೀರಿಕ್ಷಿತ ಸಂತೋಷಕ್ಕೆ ತೀರಾ ಒಡನಾಡಿಗಳಲ್ಲದ ಮನುಷ್ಯರೂ ಕಾರಣರಾಗುತ್ತಾರೆ ಮತ್ತು ಅವರು ನಮ್ಮಲ್ಲಿ ಸದಾ ಬೆರಗನ್ನು ಮೂಡಿಸುತ್ತಲೇ ಇರುತ್ತಾರೆ. ‌ಹಾಗೆ ನನ್ನ ಓದಿನ ಅನುಭವಕ್ಕೆ, ಖುಷಿಗೆ, ನೆಮ್ಮದಿಗೆ, ಕಾರಣರಾದವರು ಅಂಚೆಮಿತ್ರ. ಈತನಿಗೆ ನಾನೇನು ಕೊಡಲು ಸಾಧ್ಯ? ಏನು ಕೊಟ್ಟರೆ ಅವನಿಗೆ ಶಾಶ್ವತವಾಗಿ ಉಳಿಯುತ್ತದೆ? ಅಂತ ಯೋಚಿಸುತ್ತಲೇ ಇದ್ದೇನೆ.

ಆದರೆ ಮೊನ್ನೆ ಮೊನ್ನೆ ಅನ್ನಿಸಿತು; ಅವನಿಗೂಂದು ಚಂದದ ಪುಸ್ತಕ ಕಾಣಿಕೆಯಾಗಿ ಕೊಡಬೇಕು. ಅದಕ್ಕಿಂತ ಅಮೂಲ್ಯವಾದ ಮತ್ತೊಂದು ಕಾಣಿಕೆ ನನಗೆ ಹೊಳೆಯಲಿಲ್ಲ; ಹೊಳೆದರೂ ಅವುಗಳು ‌ಶಾಸ್ವತವಾಗಿ ಉಳಿಯಲು ಸಾಧ್ಯವಿಲ್ಲ ಅಂತ. ‌ಸದಾ ನನಗೆ ಬೆರಗುಗೊಳಿಸುವ ಅಂಚೆಯಮಿತ್ರನಿಗೆ ಈ ಬಾರಿ ನಾನು ಬೆರಗುಗೊಳಿಸಬೇಕು. ಮತ್ತು  ಅವನ ಕಣ್ಣಲ್ಲಿ ಮೂಡುವ ಸಂತಸದ ಮಿಂಚೊಂದು ಹತ್ತಿರದಿಂದ ಕಾಣಬೇಕು‌‌. ನನ್ನೆಲ್ಲಾ ಖುಷಿಗೆ ಕಾರಣನಾದ ಅಂಚೆ ಮಿತ್ರನಿಗೆ ಪ್ರೀತಿಯ ಧನ್ಯವಾದಗಳನ್ನು ತಿಳಿಸುವದಕ್ಕೆ ‌ಕಾಯುತ್ತಿದ್ದೇನೆ…..

ಧನ್ಯವಾದಗಳೊಂದಿಗೆ,

ವಿಳಾಸ:-
ರವಿಕುಮಾರ ಶಿವರಾಯಗೊಳ
ಭೀವರ್ಗಿ, ಮಹಾರಾಷ್ಟ್ರ-416413.
ಮೊ:9113299166