ಪೂರ್ಣಿಮೆ ಅಮವಾಸೆಗಳಂದು ಶಿವ ಶಕ್ತಿಯರ ವಿಶೇಷ ಕಳಾಪ್ರಕಟ – ಮುಕ್ಕಣ್ಣ ಕರಿಗಾರ

ಪೂರ್ಣಿಮೆ ಅಮವಾಸೆಗಳಂದು ಶಿವ ಶಕ್ತಿಯರ ವಿಶೇಷ ಕಳಾಪ್ರಕಟ

ಲೇಖಕರು: ಮುಕ್ಕಣ್ಣ ಕರಿಗಾರ

‘ಮಹಾಶೈವ ಸಾಹಿತ್ಯ ಮಂಟಪ’ ವಾಟ್ಸಾಪ್ ಗ್ರೂಪಿನ ಸದಸ್ಯರು ಮತ್ತು ನನ್ನ ನಿಕಟವರ್ತಿಗಳಲ್ಲೊಬ್ಬರಾದ ರಘುನಂದನ್ ಪೂಜಾರಿ ಅವರು ನಿನ್ನೆ ಒಂದು ಪ್ರಶ್ನೆ ಕೇಳಿದ್ದಾರೆ: ಅಮವಾಸೆ ಮತ್ತು ಹುಣ್ಣಿಮೆಯ ದಿನಗಳಂದು ಶಿವ ಶಕ್ತಿಯರ ದೇವಸ್ಥಾನಗಳಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ ಎನ್ನುತ್ತಾರೆ,ಏಕೆ ಗುರೂಜಿ?ಇದು ಅವರ ಪ್ರಶ್ನೆ.

ಅಮವಾಸೆ ಮತ್ತು ಹುಣ್ಣಿಮೆ ದಿನಗಳಲ್ಲಿ ಶಿವ ಶಕ್ತಿಯರ ದೇವಸ್ಥಾನಗಳಲ್ಲಿ ವಿಶೇಷ ಶಕ್ತಿ ಪ್ರಕಟವಾಗಿರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.ಶಿವ ದೇವಸ್ಥಾನಗಳಲ್ಲಿ ಹುಣ್ಣಿಮೆಯಂದು ವಿಶೇಷ ಶಕ್ತಿ ಪ್ರಕಟವಾಗಿದ್ದರೆ ಅಮವಾಸೆಯಂದು ದೇವಿಯ ದೇವಸ್ಥಾನಗಳಲ್ಲಿ ಹೆಚ್ಚಿನ ಶಕ್ತಿ ಪ್ರಕಟವಾಗಿರುತ್ತದೆ.ಭಕ್ತರ ಈ ನಂಬಿಕೆಯ ಹಿಂದೆ ಒಂದು ಕಥೆ ಇದೆ,ಗಣಪತಿ- ಷಣ್ಮುಖರ ನಡುವೆ ಬುದ್ಧಿವಂತರು ಯಾರೆಂಬ ಪರೀಕ್ಷೆಯ ಕಥೆ ಅದು.

ಹಿಂದೆ ಒಮ್ಮೆ ಶಿವನು ಕೈಲಾಸದಲ್ಲಿ ಪಾರ್ವತಿ ,ಗಣಪತಿ- ಷಣ್ಮುಖರ ಸಹಿತ ಕೈಲಾಸದಲ್ಲಿ ಆಸೀನನಾಗಿರುತ್ತಾನೆ.ಮುಂದೆ ಎಡ ಬಲಗಳಲ್ಲಿ ವೀರಭದ್ರ- ಭೈರವರು ಇದ್ದಾರೆ.ನಂದಿ ಭೃಂಗಿಯರು ನಾಟ್ಯ- ಗಾಯನ ಮಾಡುತ್ತಿದ್ದಾರೆ.ಶಿವಗಣರು ಸಭೆಯಲ್ಲಿ ಆಸೀನರಾಗಿದ್ದಾರೆ.ಆ ಸಭೆಗೆ ಆಗಮಿಸಿದ ಬ್ರಹ್ಮರ್ಷಿ ನಾರದರು ಕೈಯಲ್ಲಿ ಒಂದು ಹಣ್ಣನ್ನು ಹಿಡಿದು ತರುತ್ತಾರೆ.ಆ ಹಣ್ಣನ್ನು ಪರಶಿವನಿಗೆ ಸಮರ್ಪಿಸುತ್ತ ನಾರದರು;
‘ ಪರಮೇಶ್ವರ,ಇದೊಂದು ಬಹು ಅಮೂಲ್ಯವಾದ ಫಲ.ಗಣಪತಿ- ಷಣ್ಮುಖರಲ್ಲಿ ಯಾರು ಬುದ್ಧಿವಂತರೋ ಅವರಿಗೆ ಇದನ್ನು ಕೊಡು ಪ್ರಭು’ ಎಂದು ನಿವೇದಿಸುವನು.ಮೊದಲೇ ಕಲಹಪ್ರಿಯರು ಎಂದು ಹೆಸರಾಗಿದ್ದರು ನಾರದರು! ಈಗ ಶಿವನ ಕುಟುಂಬದಲ್ಲಿ ಒಂದು ಸಮಸ್ಯೆ ತಂದಿಟ್ಟರು.ತನ್ನ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಬುದ್ಧಿವಂತರು ಎಂದು ಹೇಗೆ ನಿರ್ಧರಿಸುವುದು? ಜಗನ್ಮಾತಾಪಿತರುಗಳಾದ ಶಿವ ಪಾರ್ವತಿಯರಿಗೆ ಪೀಕಲಾಟ ಶುರುವಾಯಿತು.ಯಾವ ತಂದೆ- ತಾಯಿಗಳಿಗಾದರೂ‌ ಇದು ಸಂದಿಗ್ಧದ ಪರಿಸ್ಥಿತಿಯೆ .ಪರಸ್ಪರ ಮುಖನೋಡಿಕೊಂಡ ಶಿವ ಪಾರ್ವತಿಯರು ‘ ನಾರದರೆ ನೀವೇ ನಿರ್ಣಯಿಸಿ’ ಎಂದರು.
ಜಗದ ಕರ್ತಾರ ಮತ್ತು ಜಗದಂಬೆಯವರಿಬ್ಬರು ಈ ಹೊಣೆಯನ್ನು ತನಗೆ ವಹಿಸಿದ್ದನ್ನು ಕಂಡು ನಗುತ್ತ ನಾರದರು ‘ ಆಗಲಿ ಪ್ರಭು.ಗಣಪತಿ ಷಣ್ಮುಖರಲ್ಲಿ ಯಾರು ಮೊದಲು ಭೂಮಿಯನ್ನು ಏಳುಬಾರಿ ಸುತ್ತಿ ಬರುತ್ತಾರೋ ಅವರೇ ಬುದ್ಧಿವಂತರು ಎಂದು ನಿರ್ಣಯಿಸಿ ನೀಡಬಹುದು ಈ ಅತ್ಯಮೂಲ ಫಲವನ್ನು’ ಎಂದು ಸ್ಪರ್ಧೆಯ ಸಲಹೆ ನೀಡುವನು.

ಷಣ್ಮುಖನು ‘ಇದೇನು ಮಹಾ’ ಎನ್ನುತ್ತ ತನ್ನ ವಾಹನವಾದ ನವಿಲನ್ನೇರಿ ಭೂಪ್ರದಕ್ಷಿಣೆಗೆ ಹಾರಿಯೇ ಬಿಡುವನು.ಆದರೆ ಪಾಪ ಗಣಪತಿ! ಏನು ಮಾಡಬೇಕು ಗಣಪತಿ? ಆತನ ವಾಹನ ಇಲಿ.ಷಣ್ಮುಖನ ವಾಹನ ನವಿಲಿನಂತೆ ಹಾರದು ಅದು.ಕ್ಷಣಹೊತ್ತು ಯೋಚಿಸಿದ ಗಣಪತಿ ಎದ್ದು ತಂದೆ ತಾಯಿಯವರಾದ ಶಿವಪಾರ್ವತಿಯರ ಸುತ್ತ ಏಳುಸುತ್ತ ಪ್ರದಕ್ಷಿಣೆ ಮಾಡಿ,ನಮಸ್ಕರಿಸಿ ಕುಳಿತುಕೊಳ್ಳುವನು.ಷಣ್ಮುಖನು ಏಳು ಸುತ್ತು ಭೂಪ್ರದಕ್ಷಿಣೆ ಮಾಡಿ ಬಂದು ನಿಲ್ಲುವನು.ಶಿವ ಸಭೆಯು ಗಣಪತಿಯೇ ಬುದ್ಧಿವಂತ ಎಂದು ನಿರ್ಣಯಿಸಿತು.ಷಣ್ಮುಖನಿಗೆ ವಿಪರೀತ ಸಿಟ್ಟು ಬಂದಿತು.ತಾನು ಏಳು ಬಾರಿ ಭೂ ಪ್ರದಕ್ಷಿಣೆ ಮಾಡಿ ಬಂದಿದ್ದೇನೆ.ಆದರೆ ಅಣ್ಣ ಗಣಪತಿಯು ಇಲ್ಲಿಯೇ ಕುಳಿತಿದ್ದಾನೆ.ಹಾಗಿದ್ದರೂ ಶಿವಸಭೆಯು ಗಣಪತಿಯು ಬುದ್ಧಿವಂತ ಎಂದು ನಿರ್ಣಯಿಸಿ ಅಸತ್ಯವನ್ನಾಡಿದ್ದಾರೆ,ನನಗೆ ಅನ್ಯಾಯ ಮಾಡಿದ್ದಾರೆ ಗಣಪತಿಯ ಪಕ್ಷ ವಹಿಸಿ ಎಂದು ಸಿಟ್ಟಾಗಿ ಆ ಕ್ಷಣವೇ ‘ನನಗೆ ಅನ್ಯಾಯ ಮಾಡಿದ ಕೈಲಾಸದಲ್ಲಿ ಇನ್ನು ನಾನಿರಲಾರೆ’ ಎನ್ನುತ್ತ ಹೊರಟೇಬಿಟ್ಟ.ಶಿವ ಪಾರ್ವತಿಯರು ಇದೇನು ಬಂದಿತು ಎಂದು ಬೆರಗಾಗಿ ‘ ನಿಲ್ಲು,ನಿಲ್ಲು ಕುಮಾರ.ದುಡುಕಬೇಡ’ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ನವಿಲನ್ನೇರಿ ಹಾರಿಯೇಬಿಟ್ಟ ಷಣ್ಮುಖ.

ಶಿವಸಭೆಯ ನಿರ್ಣಯವೂ ಸರಿಯಾಗಿಯೇ ಇತ್ತು.ಜಗನ್ಮಾತಾಪಿತರುಗಳಾದ ಶಿವ ಪಾರ್ವತಿಯರು ವಿಶ್ವದ ಕಾರಣಕರ್ತರಾಗಿದ್ದು ಅವರಿಬ್ಬರಲ್ಲಿಯೇ ಸಮಸ್ತ ವಿಶ್ವವೂ ಅಡಗಿದೆ.ಶಿವ ಪಾರ್ವತಿಯರನ್ನು ಪ್ರದಕ್ಷಿಣೆ ಮಾಡುವುದು ಎಂದರೆ ಭೂಪ್ರದಕ್ಷಿಣೆ ಮಾಡಿದಂತೆಯೇ.ಇದನ್ನು ಅರ್ಥಮಾಡಿಕೊಂಡ ಗಣಪತಿ ಬುದ್ಧಿವಂತನೆನ್ನಿಸಿಕೊಂಡ,ನಾರದರ ಅಮೂಲ್ಯ ಫಲವನ್ನು ತನ್ನದಾಗಿರಿಸಿಕೊಂಡ.ಅವಸರ ಬುದ್ಧಿಯ ಷಣ್ಮುಖ ಭೂಮಿಯನ್ನು ಪ್ರದಕ್ಷಿಣೆ ಮಾಡಿಯೂ ಸೋತ.

ಷಣ್ಮುಖನು ಸಿಟ್ಟಾಗಿ ಕೈಲಾಸವನ್ನು ತೊರೆದು ಭೂಮಿಗೆ ಬಂದಿದ್ದರಿಂದ ಆತನನ್ನು ಹುಡುಕುತ್ತ ಶಿವ ಪಾರ್ವತಿಯರು ಭೂಮಿಗೆ ಬರುತ್ತಾರೆ.ಷಣ್ಮುಖನು ಶ್ರೀಶೈಲ ಪರ್ವತಕ್ಕೆ ಬರುತ್ತಾನೆ.ಅವನನ್ನು ಹುಡುಕಿಕೊಂಡು ಶಿವ ಪಾರ್ವತಿಯರು ಶ್ರೀಶೈಲಕ್ಕೆ ಬರುತ್ತಾರೆ.ಮಗನಿಗೆ ಸಮಾಧಾನ ಹೇಳಿ ವಾಪಾಸ್ಸು ಕೈಲಾಸಕ್ಕೆ ಬರಲು ತಿಳಿಸುತ್ತಾರೆ.ಕೈಲಾಸಕ್ಕೆ ಬರಲೊಪ್ಪದ ಷಣ್ಮುಖನು ಶ್ರೀಶೈಲದಲ್ಲಿಯೇ ನೆಲೆ ನಿಲ್ಲುವನು.ಶ್ರೀಶೈಲ,ಶೇಷಾಚಲ( ತಿರುಮಲ ಬೆಟ್ಟಶ್ರೇಣಿ) ಮತ್ತು ಲೋಹಾಚಲ( ಬಳ್ಳಾರಿ ಜಿಲ್ಲೆಯ ಸೊಂಡೂರು)ಗಳ ನಡುವೆ ಸುತ್ತುತ್ತ ಕಾಲ ಕಳೆಯುವನು.ಮಗನನ್ನು ಬಿಟ್ಟಿರದ ಶಿವ ಪಾರ್ವತಿಯರು ಹುಣ್ಣಿಮೆಗೆ ಒಬ್ಬರು,ಅಮವಾಸೆಗೆ ಒಬ್ಬರು ಮಗನನ್ನು ನೋಡಲು ಭೂಮಿಗೆ ಬರತೊಡಗಿದರಂತೆ.ಹುಣ್ಣಿಮೆಯಂದು ಶಿವನು ಭೂಮಿಗೆ ಬಂದರೆ ಅಮವಾಸೆಯಂದು ಪಾರ್ವತಿಯು ಭೂಮಿಗೆ ಬರುತ್ತಿದ್ದಳಂತೆ.ಈ ಕಾರಣದಿಂದ ಹುಣ್ಣಿಮೆಯಂದು ಶಿವಲಿಂಗಗಗಳಲ್ಲಿ ವಿಶೇಷ ಕಳೆಯು ಪ್ರಕಟಗೊಂಡರೆ ಅಮವಾಸೆಯಂದು ದೇವಿಯ ಮೂರ್ತಿಗಳಲ್ಲಿ ವಿಶೇಷ ಶಕ್ತಿ ಪ್ರಕಟಗೊಳ್ಳುತ್ತದೆ.

ತ್ರಿಕಾಲ ಜ್ಞಾನಿಗಳಾದ ನಾರದರು ಲೋಕೋದ್ಧಾರಕ್ಕಾಗಿ ಶಿವ ಪಾರ್ವತಿಯರನ್ನು ಭೂಲೋಕಕ್ಕೆ ಕರೆತರಲು ಈ ನಾಟಕ ಆಡಿದರು.ಕಲಹಪ್ರಿಯ ನಾರದರ ಕಾರಣದಿಂದ ಮಗ ಷಣ್ಮುಖನ ವಾತ್ಸಲ್ಯದಿಂದ ಶಿವ ಪಾರ್ವತಿಯರು ಹುಣ್ಣಿಮೆ ಅಮವಾಸೆಗಳಂದು ಭೂಮಿಗೆ ಬರುವಂತಾಯಿತು.

ಶಿವ ಪಾರ್ವತಿಯರು ಪ್ರಕೃತಿ ಮತ್ತು ಪುರುಷರಾಗಿದ್ದು ಅವರಿಂದ ವಿಶ್ವದ ಸೃಷ್ಟಿ ಸ್ಥಿತಿ ಲಯಗಳು.ಬ್ರಹ್ಮ,ವಿಷ್ಣು ರುದ್ರರುಗಳು ಶಿವ ಪಾರ್ವತಿಯರ ಸಂಕಲ್ಪವನ್ನನುಸರಿಸಿ ವಿಶ್ವದ ಸೃಷ್ಟಿ,ಸ್ಥಿತಿ ಲಯಗಳ ಕಾರ್ಯವನ್ನೆಸಗುತ್ತಿದ್ದಾರೆ.ತಾವು ಸೃಷ್ಟಿಸಿದ ವಿಶ್ವದಲ್ಲಿ ಪಾರ್ವತಿಯು ಪ್ರಕೃತಿಯಾಗಿ ಶಿವನು ಪುರುಷನಾಗಿ ಪ್ರಕಟಗೊಂಡಿದ್ದಾರೆ.ಪುರುಷನು ಶ್ವೇತವರ್ಣ ಇಲ್ಲವೆ ಬಿಳಿಯ ಬಣ್ಣದವನಾಗಿದ್ದರಿಂದ ಶಿವನು ಹುಣ್ಣಿಮೆಯನ್ನು ಸಂಕೇತಿಸುತ್ತಾನೆ.ಪ್ರಕೃತಿಯು ಕೃಷ್ಣ ಇಲ್ಲವೆ ಕಪ್ಪುವರ್ಣದವಳಾಗಿದ್ದು ಅಮವಾಸೆಯನ್ನು ಸಂಕೇತಿಸುತ್ತಾಳೆ.ಶಿವ ಶಕ್ತಿಯರು ಕೂಡಿಯೇ ವಿಶ್ವ,ಕಾಲ- ಹಗಲು ರಾತ್ರಿಗಳು,ಅಮವಾಸೆ ಹುಣ್ಣಿಮೆಗಳು,ಅಯನಗಳನ್ನೊಳಗೊಂಡ ವರ್ಷದ ಲೆಕ್ಕದ ಕಾಲ ನಿರ್ಣಯವಾಗಿದೆ.ಶಿವನು ಹಗಲು ಆದರೆ ಶಕ್ತಿಯು ರಾತ್ರಿ.ಶಿವನು ಶುಕ್ಲ ಪಕ್ಷವಾದರೆ ಶಕ್ತಿಯು ಕೃಷ್ಣಪಕ್ಷ.ಶಿವನು ಉತ್ತರಾಯಣವಾದರೆ ಶಕ್ತಿಯು ದಕ್ಷಿಣಾಯನ.ಶಿವನು ಆಕಾಶವಾದರೆ ಶಕ್ತಿಯು ಭೂಮಿ.ಶಿವನು ವಾಯು ಆದರೆ ಶಕ್ತಿಯು ಜಲ.ಶಿವನು ಅಗ್ನಿಯಾದರೆ ಶಕ್ತಿಯು ಜ್ವಾಲಾಮುಖಿ.ಹೀಗೆ ಶಿವ ಶಕ್ತಿಯರು ವಿಶ್ವವನ್ನು ವ್ಯಾಪಿಸಿದ್ದಾರೆ. ಶಿವ ಶಕ್ತಿಯರ ಪ್ರಕೃತಿ ಪುರುಷ ತತ್ತ್ವವೇ ಹುಣ್ಣಿಮೆ ಅಮವಾಸೆಗಳಂದು ಶಿವ ಶಕ್ತಿಯರು ಹೆಚ್ಚು ಕಳಾಪೂರ್ಣವಾಗಿ ಪ್ರಕಟಗೊಳ್ಳುತ್ತಾರೆ ಎನ್ನುವ ನಂಬಿಕೆಯ ಹಿಂದಿನ ತತ್ತ್ವ,ದರ್ಶನ.

ಮುಕ್ಕಣ್ಣ ಕರಿಗಾರ
ಮೊ;94808 79501

20.12.2021