ಅಪರಿಹಾರ್ಯವಾದ ಭೋಗ ಮತ್ತು ಮರಣಗಳು
ಲೇಖಕರು: ಮುಕ್ಕಣ್ಣ ಕರಿಗಾರ
‘ ಭೋಗ ಬಿಡದು,ಮರಣ ತಪ್ಪದು’ ಎನ್ನುತ್ತಾರೆ ಅನುಭಾವಿಗಳು.ಮರ್ತ್ಯಲೋಕದಲ್ಲಿ ಹುಟ್ಟಿದ ಯಾರೇ ಆಗಿರಲಿ ಕರ್ಮಫಲವನ್ನು ಅನುಭವಿಸಲೇಬೇಕು,ಕೊನೆಗೊಂದು ದಿನ ಸಾಯಲೇಬೇಕು.ಭೂಮಿಯನ್ನು ಗೆದ್ದಾಳಿದ ಚಕ್ರವರ್ತಿಗಳೇ ಇರಲಿ,ಮಹಾನ್ ಋಷಿಗಳೇ ಆಗಿರಲಿ ಪ್ರಾರಬ್ಧ ಕರ್ಮಕ್ಕನುಗುಣವಾಗಿ ಬರುವ ಸುಖ- ದುಃಖಗಳನ್ನು ಅನುಭವಿಸಲೇಬೇಕು,ಕೊನೆಗೊಂದು ದಿನ ಸಾಯಲೇಬೇಕು.ಪ್ರಪಂಚವನ್ನೇ ಗೆದ್ದು ಆಳಿದ ಚಕ್ರವರ್ತಿ ಎಂದು ಕಾಡದೆ ಬಿಡದು ಕರ್ಮಫಲ; ಹತ್ತೆಂಟುವರ್ಷಗಳ ಕಾಲ ಉಗ್ರತಪೋನುಷ್ಠಾನ ಕೈಗೊಂಡ ಯೋಗೀಶ್ವರರು ಎಂದು ಒಯ್ಯದೆ ಬಿಡದು ಮರಣ!ಜಗದ ನಿಯಮವೇ ಹಾಗಿದೆ.ಮರ್ತ್ಯದಲ್ಲಿ ಹುಟ್ಟಿದ ಎಲ್ಲರೂ ಜಗದೀಶ್ವರನ ನಿಯತಿಯಂತೆ ಬಂದೊದಗುವ ಭೋಗ ಮತ್ತು ಮರಣಗಳನ್ನು ಅನುಭವಿಸಲೇಬೇಕು.
‘ ಭೋಗ’ ಎಂದರೆ ಕರ್ಮಫಲವಾಗಿ ಬಂದೊದಗುವ ಸುಖ- ದುಃಖಗಳು.ಬದುಕು ಅನಂತವಾದುದು,ಅಖಂಡವಾದುದು.ಈಗಿರುವ ನಮ್ಮ ಜೀವನಷ್ಟೇ ನಮ್ಮ ಬದುಕಲ್ಲ.ಪ್ರಪಂಚ ಇರುವವರೆಗೂ ಬಂದು ಹೋಗುವ ಆತ್ಮನ ಅವತರಣವೇ ಬದುಕು.ನಾವು ಈ ಹಿಂದೆಯೂ ಹುಟ್ಟಿದ್ದೇವೆ,ಮುಂದೆಯೂ ಹುಟ್ಟಲಿದ್ದೇವೆ.ಹೀಗೆ ಬದುಕೆಂಬ ಅನಂತಪಯಣದಲ್ಲಿ ಆಗಾಗ ಮಾಡಿದ ಪಾಪ- ಪುಣ್ಯಗಳ ಫಲವನ್ನು ಅನುಭವಿಸಲೇಬೇಕಾಗುತ್ತದೆ.ಸಂಚಿತ,ಆಗಾಮಿ ಮತ್ತು ಪ್ರಾರಬ್ಧ ಎನ್ನುವ ಮೂರು ಬಗೆಯ ಕರ್ಮಗಳಿದ್ದು ಅವುಗಳಲ್ಲಿ ಪ್ರಾರಬ್ಧ ಎನ್ನುವ ಹಿಂದಿನ ಜನ್ಮಗಳ ಕರ್ಮಫಲವನ್ನು ಅನುಭವಿಸಲೇಬೇಕು .ಅದರಿಂದ ಬಿಡುಗಡೆ ಇಲ್ಲ.ಸತ್ಕಾರ್ಯಗಳನ್ನು,ಪುಣ್ಯಕಾರ್ಯಗಳನ್ನು ಮಾಡಿದ್ದರೆ ಸುಖವನ್ನು ಅನುಭವಿಸುತ್ತೇವೆ; ದುಷ್ಕೃತ್ಯಗಳನ್ನು,ದುಷ್ಕಾರ್ಯಗಳನ್ನು ಎಸಗಿದ್ದರೆ ದುಃಖವನ್ನು ಅನುಭವಿಸುತ್ತೇವೆ.ಯೋಗಸಾಧನೆಯ ಬಲದಿಂದ ಪ್ರಕೃತಿಯ ಮೇಲೆ ಪ್ರಭುತ್ವಪಡೆದ ಮಹಾನ್ ಸಾಧಕರನ್ನೂ ಬಿಡದು ಪ್ರಾರಬ್ಧಕರ್ಮಫಲ.ಯೋಗಿಗಳು,ಮಹರ್ಷಿಗಳಿಗೆ ಸ್ವಲ್ಪವೇ ಆದರೂ ಪರಿಣಾಮ ಬೀರಿಯೇ ಬೀರುತ್ತದೆ ಪ್ರಾರಬ್ಧ ಕರ್ಮ!
ಪ್ರಾರಬ್ಧಕರ್ಮವನ್ನೇ ‘ ಘಟಭೋಗ’ ಎನ್ನುತ್ತಾರೆ.’ ಘಟ’ ಎಂದರೆ ಶರೀರ.ಈ ಶರೀರವು ಹಿಂದಿನ ಜನ್ಮಗಳಲ್ಲಿ ಮಾಡಿದ್ದ ಪಾಪ- ಪುಣ್ಯಗಳನ್ನು ಈ ಜನ್ಮದಲ್ಲಿ ಅನುಭವಿಸುತ್ತದೆ,ಅನುಭವಿಸಲೇಬೇಕು.ಸೃಷ್ಟಿಯಲ್ಲಿ ಎಂಬತ್ನಾಲ್ಕು ಲಕ್ಷ ಜೀವರಾಶಿಗಳಿವೆಯಾದರೂ ಪುಣ್ಯ ಪಾಪಗಳ ಫಲಲೇಪನ ಮನುಷ್ಯ ಜನ್ಮಕ್ಕೆ ಮಾತ್ರ.ಹಿಂದಿನ ಮನುಷ್ಯ ಜನ್ಮದಲ್ಲಿ ನಾವು ಏನು ಕರ್ಮವನ್ನು ಎಸಗಿದ್ದೇವೆಯೋ ಅದಕ್ಕನುಗುಣವಾದ ಫಲವನ್ನುಣ್ಣುತ್ತೇವೆ ಈ ಜನ್ಮದಲ್ಲಿ.ಶರೀರ ಬದಲಾಗಿರಬಹುದು,ಈಗ ಹುಟ್ಟಿದ ಸ್ಥಳ ಬೇರೆ ಆಗಿರಬಹುದು,ಹಿಂದೆ ಅಮೇರಿಕಾದಲ್ಲಿ ಹುಟ್ಟಿದವರು ಈಗ ಭಾರತದಲ್ಲಿ ಹುಟ್ಟಿರಬಹುದು.ದೇಶ ಬದಲಾಯಿತು ಎಂದು ಬಿಡದು ಕರ್ಮ! ಹಿಂದೆ ಸಂಸ್ಕೃತವನ್ನಾಡುತ್ತಿರಬಹುದು,ಇಂದು ಕನ್ನಡ ಮಾತೃಭಾಷೆ ಆಗಿರಬಹುದು; ಭಾಷೆಬದಲಾಯಿತು ಎಂದು ತಪ್ಪದು ಕರ್ಮಫಲ! ದೇಹ ಅಳಿದರೂ ಆತ್ಮ ಅಳಿಯದು.ಆತ್ಮವು ನಾವು ಹೊಸಹೊಸ ಶರೀರಧಾರಣೆ ಮಾಡಿದಂತೆ ನಮ್ಮ ಶರೀರವನ್ನು ಪ್ರವೇಶಿಸುತ್ತದೆ ಹಿಂದಣ ಜನ್ಮಗಳ ಪಾಪ- ಪುಣ್ಯಗಳ ಲೆಕ್ಕವನ್ನಿಟ್ಟುಕೊಂಡೇ! ಆತ್ಮ ಒಂದರ್ಥದಲ್ಲಿ ನಮ್ಮ ಮೊಬೈಲ್ ಗಳಲ್ಲಿ ಇರುವ ಸೆಮಿಕಂಡಕ್ಟರ್ ಚಿಪ್ ನಂತೆ.ಮೆಮರಿಕಾರ್ಡ್ ಸ್ಟೋರ್ ಮಾಡಿದಂತೆ ಆತ್ಮನು ಪಾಪ ಪುಣ್ಯಗಳ ಲೆಕ್ಕವನ್ನಿಟ್ಟುಕೊಳ್ಳುತ್ತಾನೆ ಚಿಪ್ ( chip)ಎನ್ನುವ ತನ್ನದೆ ಸ್ವರೂಪದಲ್ಲಿ.ಅವತಾರಪುರುಷರು,ಮಹಾತ್ಮರು,ಸಂತರು- ಶರಣರು ಯಾರೇ ಆಗಿರಲಿ ಅನುಭವಿಸಲೇಬೇಕು ಘಟಭೋಗವನ್ನು.ರಾಮನು ಸೀತೆ,ಲಕ್ಷ್ಮಣರೊಂದಿಗೆ ವನವಾಸ ಮಾಡಿದ್ದು,ಪಾಂಡವರು ದ್ರೌಪದಿಯೊಂದಿಗೆ ವನವಾಸ- ಅಜ್ಞಾತವಾಸಗಳನ್ನು ಅನುಭವಿಸಿದ್ದು, ರಾಜಾ ಹರಿಶ್ಚಂದ್ರನು ಸ್ಮಶಾನ ಕಾಯ್ದದ್ದು ಈ ಮುಂತಾದ ಬಹಳಷ್ಟು ನಿದರ್ಶನಗಳನ್ನು ಕೊಡಬಹುದು ಪ್ರಾರಬ್ಧವನ್ನುನುಭವಿಸಲೇಬೇಕು ಎನ್ನುವುದಕ್ಕೆ.ಕೃಷ್ಣನು ತನ್ನ ಅವಸಾನ ಕಾಲದಲ್ಲಿ ಕಾಡಿನಲ್ಲಿ ಒಬ್ಬಂಟಿಯಾಗಿ ಒಬ್ಬ ಬೇಡನ ಬಾಣಕ್ಕೆ ಗುರಿಯಾಗಿ ಸಾಯಬೇಕಾಯಿತು.ಆಧುನಿಕ ಕಾಲದ ಮಹಾನ್ ಯೋಗಿಗಳು ಎಂದು ಪ್ರಸಿದ್ಧರಾದ ರಾಮಕೃಷ್ಣ ಪರಮಹಂಸರು ಮತ್ತು ಮಹರ್ಷಿ ಅರವಿಂದರುಗಳನ್ನೂ ಕಾಡದೆ ಬಿಡಲಿಲ್ಲ ಘಟಭೋಗ.ರಾಮಕೃಷ್ಣ ಪರಮಹಂಸರಿಗೆ ಗಂಟಲು ಕ್ಯಾನ್ಸರ್ ಬಂದಿತು,ಅರವಿಂದರ ತೊಡೆಮುರಿದಿತ್ತು.ಅಂತಹ ಯೋಗಿಗಳ ಪಾಡೇ ಹಾಗಾದಾಗ ಜನಸಾಮಾನ್ಯರ ಪಾಡೇನು? ಯಾರಾದರೇನು ಅನುಭವಿಸಲೇಬೇಕು ಪ್ರಾರಬ್ಧಕರ್ಮವನ್ನು.
ಹುಟ್ಟಿದ ಎಲ್ಲರೂ ಒಂದು ದಿನ ಸಾಯಲೇಬೇಕು.’ ಸಾವಿರ ವರ್ಷ ಬಾಳಿದರೂ ಮರಣ ಬಿಡದು’ ಎನ್ನುವ ಗಾದೆಯು ಎಷ್ಟೇ ವರ್ಷ ಬದುಕಿದ್ದರೂ ಸಾಯುವುದು ಅನಿವಾರ್ಯ ಎನ್ನುತ್ತದೆ.ಹಿಮಾಲಯದಲ್ಲಿ ಸಾವಿರಾರು ವರ್ಷಗಳಿಂದ ಇಂದಿಗೂ ತಪೋನಿರತರಾಗಿರುವ ಯೋಗಿಗಳಿದ್ದಾರೆ.ಅವರಲ್ಲಿ ಐದುನೂರುವರ್ಷಗಳ ಕೆಲವರು,ಸಾವಿರ ವರ್ಷಗಳ ಕೆಲವರು,ಹದಿನೈದು ನೂರು,ಎರಡು ಸಾವಿರ ವರ್ಷಗಳ ಕೆಲವರು ಇದ್ದಾರೆ.ನಮ್ಮ ಬರಿ ಕಣ್ಣುಗಳಿಗೆ ಕಾಣಿಸದ ಹಿಮಾಲಯದ ಯೋಗಿಗಳು ಹಿಮಾಲಯದ ಉನ್ನತ ನೆಲೆಗಳಲ್ಲಿ ತಪೋನಿರತರಾಗಿದ್ದಾರೆ ಇಂದಿಗೂ.ಅಂತಹ ಯೋಗಿಗಳೂ ಕೂಡ ತಮ್ಮ ಸಂಕಲ್ಪ ಈಡೇರಿದೊಡನೆ,ಸಿದ್ಧಿ ಪ್ರಾಪ್ತಿಯಾದೊಡನೆ ತ್ಯಜಿಸಲೇಬೇಕು ಈ ಶರೀರವನ್ನು.ಎಷ್ಟೇ ದೊಡ್ಡ ತಪಸ್ಸಾಧನೆ ಮಾಡಿದ್ದರೂ ಸಶರೀರಿಗಳಾಗಿ ಕೈಲಾಸ,ವೈಕುಂಠ,ಸತ್ಯಲೋಕಗಳಿಗೆ ಹೋಗಲಾಗದು.ಮಣ್ಣಕಾಯವಿದು ಮಣ್ಣಾಗಲೇಬೇಕು.ಮಣ್ಣಿನಿಂದ ಉಂಟಾದ ಈ ಶರೀರ ಮಣ್ಣುಗೂಡಲೇಬೇಕು.ಪಂಚಭೂತಗಳಿಂದಾದ ಈ ಶರೀರವು ಪಂಚಭೂತಗಳಲ್ಲಿ ಒಂದಾಗಲೇಬೇಕು.ಮರ್ತ್ಯದ ಮಣ್ಣಿನ ಗುಣವೇ ಅಂತಹದ್ದು.
ಮನುಷ್ಯರಾಗಿ ಹುಟ್ಟಿದ ಎಲ್ಲರಿಗೂ ಭೋಗ ಮತ್ತು ಮರಣಗಳು ಸಾಮಾನ್ಯ ಸಂಗತಿಗಳು ಎಂಬುದನ್ನರಿತು ಸಹಜವಾಗಿ ಬಾಳಬೇಕು ನಾವು.ಬಂದದ್ದನ್ನು ಅನುಭವಿಸುತ್ತ,ಬಾರದೆ ಇರುವುದರ ಬಗ್ಗೆ ಚಿಂತಿತರಾಗದೆ ಏನು ಒದಗಿ ಬಂದಿದೆಯೋ ಅದರಲ್ಲಿ ಆನಂದವನ್ನು ಕಾಣಬೇಕು.ನಾವು ಬಯಸುವ ಹಣ,ಅಧಿಕಾರ,ಅಂತಸ್ತುಗಳು ನಮ್ಮ ಭೋಗದಲ್ಲಿದ್ದರೆ ಬಂದೇ ಬರುತ್ತವೆ,ನಮ್ಮ ಭೋಗದಲ್ಲಿ ಇರದೆ ಇದ್ದರೆ ಯಾರೂ ತಂದುಕೊಡಲಾರರು ಅವುಗಳನ್ನು.ಬಸವಣ್ಣನವರು ಹೇಳಿದ ‘ ಬಾರದು ಬಪ್ಪದು,ಬಪ್ಪದು ತಪ್ಪದು’ ಎನ್ನುವ ಮಾತು ಕೂಡ ಭೋಗಫಲವನ್ನೇ ನಿರ್ದೇಶಿಸುತ್ತದೆ.ನಾವು ಬದುಕನ್ನು ಅದು ಬಂದಂತೆಯೇ ಸ್ವೀಕರಿಸಬೇಕು.ಸುಖ ಬಂದರೆ ಸಂತೋಷಪಡದೆ ದುಃಖ ಬಂದರೆ ಧೃತಿಗೆಡದೆ ಇವೆಲ್ಲ ಸಹಜ ಕ್ರಿಯೆಗಳು ಎಂದು ಸ್ವೀಕರಿಸಬೇಕು.ಗೆದ್ದಾಗ ಹರ್ಷಪಡದೆ,ಸೋತಾಗ ದುಃಖ ಪಡದೆ ಇವೆಲ್ಲ ಪ್ರಾರಬ್ಧದ ಫಲವಾಗಿ ಬಂದವುಗಳು ಎಂದು ನಿರ್ಲಿಪ್ತರಾಗಿರಬೇಕು.ನಮ್ಮ ಬದುಕಿನಲ್ಲಿ ನಿತ್ಯ ಹೊಸ ಜನರ ಪರಿಚಯ ಆಗುತ್ತಿರುತ್ತದೆ.ನೂರಾರು ಜನರು ಬರುತ್ತಾರೆ,ಹಲವರು ಹೋಗುತ್ತಾರೆ,ಕೆಲವರೇ ಇರುತ್ತಾರೆ ನಮ್ಮೊಂದಿಗೆ ಯಾವಾಗಲು.ಬರುವವರ ಬಗ್ಗೆ ಆಸಕ್ತಿಬೇಡ,ಹೋಗುವವರ ಬಗ್ಗೆ ಮಮತೆಯೂ ಬೇಡ,ಇರುವವರ ಬಗ್ಗೆ ಪ್ರೀತಿ,ಕಾಳಜಿ ಮಾಡುತ್ತ ಬದುಕಿದರೆ ಸಾಕು.ನಮ್ಮ ಕೈಯೊಳಿಲ್ಲದ ಬದುಕನ್ನು ನಮ್ಮ ಆಪ್ತೇಷ್ಟರುಗಳೊಂದಿಗೆ ನಗುನಗುತ್ತ,ಆನಂದದಿಂದ ಕಳೆಯುವುದರಲ್ಲಿಯೇ ಬಾಳಿನ ಸಾರ್ಥಕತೆ.

ಮೊ;94808 79501
20.12.2021