ಬಸವ ದರ್ಶನ ೦೫:ಎಲ್ಲರೂ ಅರ್ಹರಲ್ಲ ಶಿವದೀಕ್ಷೆಗೆ !-ಮುಕ್ಕಣ್ಣ ಕರಿಗಾರ

ಬಸವ ದರ್ಶನ ೦೫

ಲೇಖಕರು: ಮುಕ್ಕಣ್ಣ ಕರಿಗಾರ

ಎಲ್ಲರೂ ಅರ್ಹರಲ್ಲ ಶಿವದೀಕ್ಷೆಗೆ !

ಬಸವಣ್ಣನವರು ಶಿವನಿಷ್ಠಾಪರರಾದವರಿಗೆ ಮಾತ್ರ ಶಿವದೀಕ್ಷೆ ನೀಡಬೇಕು,ಲೋಕದ ಮಾನವರಿಗೆಲ್ಲ ಶಿವದೀಕ್ಷೆ ನೀಡಬಾರದು ಎನ್ನುತ್ತಾರೆ.ಶಿವದೀಕ್ಷೆ ಪಡೆದು ಲೋಕದ ಕಂಡಕಂಡ ದೈವಗಳಿಗೆ ನಮಸ್ಕರಿಸುತ್ತ ನಡೆಯುವ ಹೀನ ಮನಸ್ಕರಿಗೆ ನೀಡಬಾರದು ಶಿವದೀಕ್ಷೆ; ಶಿವನಲ್ಲದೆ ನಂಬಿ,ನೆಚ್ಚಲು ಮತ್ತೊಂದು ದೈವ ಇಲ್ಲ ಎನ್ನುವ ದೃಢನಿಷ್ಠೆಯುಳ್ಳವರಿಗೆ ಮಾತ್ರ ಶಿವದೀಕ್ಷೆ ನೀಡಬೇಕು ಎನ್ನುತ್ತಾರೆ.ಗುರುಬೋಧೆಯ ಹೆಸರಿನಲ್ಲಿ ಕಂಡಕಂಡವರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳುವ,ನೂರಾರು ಸಾವಿರಾರು ಜನರಿಗೆ ದೀಕ್ಷೆ ನೀಡುವುದನ್ನು ಚಪಲವಾಗುಳ್ಳ ಜನರು ಅರ್ಥಮಾಡಿಕೊಳ್ಳಬೇಕಿದೆ ಬಸವಣ್ಣನವರ ಸಂದೇಶವನ್ನು.ಹೊಟ್ಟೆಹೊರೆಯಲು ನೂರು,ಸಾವಿರ ಸಂಖ್ಯೆಯ ಶಿಷ್ಯರನ್ನು ‘ಸಂಪಾದಿಸುವ’ ಗುರುಗಳು ಯಾವ ಶಿಷ್ಯರನ್ನು ಉದ್ಧರಿಸುತ್ತಾರೆ? ಅಂತಹ ಗುರುಗಳಿಂದ ದೀಕ್ಷೆ ಪಡೆದ ಶಿಷ್ಯರುಗಳು ಏನನ್ನು ಸಾಧಿಸುತ್ತಾರೆ? ಚಪಲದ ಗುರು; ಚಪಲದ ಶಿಷ್ಯರು! ಸರ್ವರೂ ಶಿವದೀಕ್ಷೆಗೆ ಅರ್ಹರಲ್ಲ ಎನ್ನುವ ಬಸವಣ್ಣನವರ ಎರಡು ವಚನಗಳನ್ನು ಅರ್ಥೈಸೋಣ.

ಕುಂಬಳಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ
ಕೊಳೆವುದಲ್ಲದೆ ಬಲುಹಾಗಬಲ್ಲುದೆ ?
ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿ ಎಂತಹದೊ ? – ಮುನ್ನಿನಂತೆ –
ಕೂಡಲ ಸಂಗಯ್ಯಾ,ಮನಹೀನನ ಮೀಸಲ ಕಾಯ್ದಿರಿಸಿದಂತೆ !

ಕುಂಬಳಕಾಯಿಯ ಸುರಕ್ಷೆಗೆಂದು ಕಬ್ಬಿಣದ ಕಟ್ಟನ್ನಿಟ್ಟರೆ ಕಟ್ಟಿನೊಳಗಿನ ಕುಂಬಳಕಾಯಿಯು ಕೊಳೆಯುತ್ತದಲ್ಲದೆ ಬೆಳೆದು ದೊಡ್ಡದಾಗದು.ಹಾಗೆಯೇ ಚಂಚಲಚಿತ್ತರಾದ ಹೀನಮನಸ್ಕರಿಗೆ ಶಿವದೀಕ್ಷೆಯನ್ನು ನೀಡಿದರೆ ಸಾಧಿಸಬಲ್ಲರೆ ಅವರು ಶಿವಭಕ್ತಿಯನ್ನು? ಇಲ್ಲ.ಅವರು ತಮ್ಮ ಮುಂಚಿನ ಸ್ವಭಾವವನ್ನು ಬಿಡರು.ಶಿವನಲ್ಲಿ ಏಕೋನಿಷ್ಠೆ ಇಲ್ಲದ ಜನರಿಗೆ ಶಿವದೀಕ್ಷೆ ನೀಡುವುದು ಕಳ್ಳರನ್ನು ನಿಧಿ ಅಥವಾ ಸಂಪತ್ತನ್ನು ಕಾಯಲು ನೇಮಿಸಿದಂತೆ ಅನರ್ಥವಲ್ಲದೆ ಉಪಯೋಗವಿಲ್ಲ ಎನ್ನುತ್ತಾರೆ ಬಸವಣ್ಣನವರು.

ಕುಂಬಳಕಾಯಿಯ ರೂಪಕದೊಂದಿಗೆ ಬಸವಣ್ಣನವರು ಶಿವನಿಷ್ಠೆಯಿಲ್ಲದವರಿಗೆ ಶಿವದೀಕ್ಷೆ ಕೂಡದು ಎನ್ನುವುದನ್ನು ಸೊಗಸಾಗಿ ವಿವರಿಸಿದ್ದಾರೆ.ಬಳ್ಳಿಯಿಂದ ಕಿತ್ತುತಂದ ಕುಂಬಳ ಕಾಯಿಯು ಬೆಳೆದು ದೊಡ್ಡದಾಗಬಹುದು,ಬಲಿಷ್ಠವಾಗಬಹುದು ಎಂದು ಕಬ್ಬಿಣ್ಣದ ಕಟ್ಟುಗಳುಳ್ಳ ರಕ್ಷಾಕವಚದಲ್ಲಿಟ್ಟರೆ ಅದು ಕೊಳೆಯುವುದಲ್ಲದೆ ಬೆಳೆದು ದೊಡ್ಡದಾಗದು.ಕುಂಬಳಕಾಯಿಯು ಬೆಳೆಯಲೆಂದು ಕಬ್ಬಿಣ್ಣದ ಕಟ್ಟುಗಳ ರಕ್ಷಾಕವಚ ತೊಡಿಸುವುದು ಮೂರ್ಖಕ್ರಿಯೆ.ಬಳ್ಳಿಯಿಂದ ಕಿತ್ತ ಕುಂಬಳವು ಬೆಳೆದು ದೊಡ್ಡದಾಗದು.ಶಿವದೀಕ್ಷೆಯು ಮೋಕ್ಷವನ್ನು ನೀಡುತ್ತದೆ ನಿಜ,ಆದರೆ ದೃಢಭಕ್ತಿಯಿಲ್ಲದವರಿಗೆ ಶಿವದೀಕ್ಷೆ ನೀಡಿದರೆ ಅವರು ಶಿವಭಕ್ತಿ,ಶಿವಯೋಗ ಸಾಧಿಸಲಾರರು ಆದ್ದರಿಂದ ಅಂತಹ ಹೀನ ಮನಸ್ಕರಿಗೆ ನೀಡಬಾರದು ಶಿವದೀಕ್ಷೆ.ಇಲ್ಲಿ ಬಸವಣ್ಣನವರು ‘ ಅಳಿಮನದವಂಗೆ’ ಎನ್ನುವ ಪದಪ್ರಯೋಗಿಸಿರುವುದನ್ನು ಗಮನಿಸಬೇಕು.ಅಳಿ ಎಂದರೆ ದುಂಬಿ.ದುಂಬಿಯು ಮಕರಂದ ಹೀರಲು ಸಾವಿರಾರು ಹೂವುಗಳ ಮೇಲೆ ಕೂಡುತ್ತದೆ,ಆದರೆ ಯಾವ ಹೂವಿನಲ್ಲಿ ನೆಚ್ಚಿಕೆ ಇಲ್ಲ ಅದಕ್ಕೆ,ಯಾವ ಹೂವಿಗೂ ಕೃತಜ್ಞವಾಗಿಲ್ಲ ತುಂಬಿ.ಒಂದು ಹೂವಿನಿಂದ ಮತ್ತೊಂದು ಹೂವಿಗೆ ಹಾರುತ್ತಲೇ ಇರುತ್ತದೆ.ದುಂಬಿಯದು ಚಂಚಲ ಮನಸ್ಸು.ಹಾಗೆಯೇ ಶಿವನಲ್ಲಿ ಏಕೋನಿಷ್ಠೆಯಿಲ್ಲದ ಭಕ್ತರದು ಹೀನಮನಸ್ಸು.ಶಿವದೀಕ್ಷೆಯನ್ನು ಪಡೆದ ಬಳಿಕ ಶಿವನಲ್ಲಿ ಮಾತ್ರ ನಂಬಿಕೆ,ನಿಷ್ಠೆಗಳನ್ನಿಡಬೇಕು.ಆದರೆ ಹೀನಮನಸ್ಸಿನವರು ಶಿವದೀಕ್ಷೆ ಪಡೆದ ಬಳಿಕವೂ ತಮ್ಮ ಮೊದಲಿನ ಸ್ವಭಾವವನ್ನು ತೊರೆಯಲರಿಯದೆ ಕಂಡ ಕಂಡ ದೇವರುಗಳಿಗೆ ಕೈಮುಗಿಯುತ್ತಾರೆ,ನಡೆದುಕೊಳ್ಳುತ್ತಾರೆ.ಇದು ಶಿವಾಪಚಾರ,ಶಿವದ್ರೋಹ.ಇಂತಹವರಿಗೆ ಶಿವದೀಕ್ಷೆ ನೀಡಬಾರದು.ಒಂದು ವೇಳೆ ಇಂತಹ ಹೀನಮನಸ್ಕರಿಗೆ ಶಿವದೀಕ್ಷೆಯನ್ನು ನೀಡಿದ್ದಾದರೆ ಮನೆಯ ಸಂಪತ್ತನ್ನು ಕಾಯಲು ಕಳ್ಳರನ್ನು ನೇಮಿಸಿದಂತೆ.ಕಳ್ಳನ ಕೈಯಲ್ಲಿ ಮನೆಯ ಕೀಲಿಯನ್ನು ಕೊಟ್ಟು ಹೋದರೆ ಸುಮ್ಮನಿರುತ್ತಾನೆಯೆ ಅವನು? ಮನೆಯ ಒಡೆಯ ತನ್ನಲ್ಲಿ ನಂಬಿಕೆ ಇಟ್ಟಿದ್ದಾನೆ,ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎನ್ನುವ ಸದ್ಬುದ್ಧಿ ಅವನಲ್ಲಿ ಮೂಡುವುದೇ ಇಲ್ಲ.ಹಾಗೆಯೇ ಅಳಿಮನದವರಿಗೆ ಶಿವದೀಕ್ಷೆಯನ್ನು ಕೊಟ್ಟರೆ ಅವನು ಕಂಡಕಂಡಕಡೆಗೆಲ್ಲ ಅದನ್ನು ಕೊಚ್ಚಿಕೊಳ್ಳುತ್ತಾನೆ.’ ಮನಹೀನನ ಮೀಸಲ ಕಾಯ್ದಿರಿಸಿದಂತೆ’ ಎನ್ನುವ ವಚನವಾಕ್ಯದಲ್ಲಿ ಬಸವಣ್ಣನವರು ಗುರುವಾನುಗ್ರಹ ಪಡೆದು ಕಂಡಕಂಡವರಿಗೆ ಶಿವದೀಕ್ಷೆ ನೀಡುವ ಪ್ರಚಾರಪ್ರಿಯ,ಚಪಲಚಿತ್ತರನ್ನು ಖಂಡಿಸಿದ್ದಾರೆ,ಕೆಡೆ ನುಡಿದಿದ್ದಾರೆ.ಮನೆಯ ನಿಧಿ ಅಥವಾ ಸಂಪತ್ತು ಮನೆಯಮಕ್ಕಳಿಗೆ ಇಲ್ಲವೆ ಸತ್ಪಾತ್ರಕ್ಕೆ ಸಲ್ಲಬೇಕು.ಹಾದಿ ಬೀದಿಯ ಜನರ ಪಾಲಾಗಬಾರದು ಮನೆಯ ಅಮೂಲ್ಯ ಸಂಪತ್ತು.ಶಿವದೀಕ್ಷೆ ಎನ್ನುವ ಅಮೂಲ್ಯಸಂಪತ್ತು ಮೋಕ್ಷವನ್ನು ಕರುಣಿಸುವಂತಹ ಸಂಪತ್ತು ಆಗಿದ್ದು ಚಪಲಚಿತ್ತರು ಅದರ ಮಹತ್ವವನ್ನರಿಯದೆ ಕಂಡಕಂಡವರಿಗೆ ಉಪದೇಶಿಸುತ್ತಾರೆ.ಮೋಕ್ಷಕ್ಕೆ,ಕೈಲಾಸದ ಗಣಪದವಿಗೆ ಎಲ್ಲರೂ ಅರ್ಹರಲ್ಲವಾದ್ದರಿಂದ ಶಿವನಲ್ಲಿ ಅಚಲ ಭಕ್ತಿ,ಅಖಂಡ ನಿಷ್ಠೆಯುಳ್ಳವರಿಗೆ ಮಾತ್ರ ಶಿವಾನುಗ್ರಹವು ಪ್ರಾಪ್ತವಾಗುವುದರಿಂದ ಅರ್ಹರಿಗೆ ಮಾತ್ರ ನೀಡಬೇಕು ಶಿವದೀಕ್ಷೆ,ಎಲ್ಲರಿಗೂ ನೀಡಬಾರದು ಶಿವಮಂತ್ರೋಪದೇಶ ಎನ್ನುತ್ತಾರೆ ಬಸವಣ್ಣನವರು.

ಸಗಣೆಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದರೆ
ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ!
ಮಣ್ಣಪುತ್ತಳಿಯ ಮಾಣದೆ ಜಲದಲ್ಲಿ ತೊಳೆದರೆ
ನಿಚ್ಚನಿಚ್ಚಳಕ್ಕೆ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ!
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಕೆಟ್ಟವನೇಕೆ ಶಿವಭಕ್ತನಹನು,ಕೂಡಲ ಸಂಗಮದೇವಾ ?

ಶಿವಭಕ್ತರಲ್ಲದವರಿಗೆ ದೀಕ್ಷೆಯನ್ನು ನೀಡುವುದು ನಿಷ್ಪ್ರಯೋಜಕ ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ಮನೋಜ್ಞವಾಗಿ ಬಣ್ಣಿಸಿದ್ದಾರೆ.ಸಗಣಿಯಿಂದ ಮಾಡಿದ ಗಣಪನ ಮೂರ್ತಿಯನ್ನು ಸಂಪಗೆಯ ಹೂವುಗಳಿಂದ ಪೂಜಿಸಿದರೆ ಅದು ಚೋದ್ಯವಲ್ಲದೆ ಸಗಣಿಯ ದುರ್ವಾಸನೆ ಹೋಗದು.ಸಂಪಗೆಯ ಹೂವುಗಳು ಸುಗಂಧಯುಕ್ತ ಮನಮೋಹಕ ಹೂವುಗಳು.ಸುಗಂಧಭರಿತ ಸಂಪಗೆಯ ಹೂವನ್ನು ಹಾಕಿ ಸಿಂಗರಿಸಿದ್ದಾರೆ ಎಂದು ಸಗಣಿಯ ಗಣಪ ಸುಗಂಧ ಬೀರಲಾರನು.ಆ ಗಣಪತಿಯನ್ನು ಮಾಡಿದ್ದೇ ಸಗಣಿಯಿಂದ.ಮೂರ್ತಿ ಗಣಪತಿಯದಾದರೇನು ಅದನ್ನು ಮಾಡಿದ್ದು ಸಗಣಿಯಿಂದ ತಾನೆ? ಸಗಣಿಯು ಸಗಣಿಯೆ! ಗಣಪತಿಯು ಲೋಕಪೂಜಿತ ದೇವರಾಗಿರಬಹುದು ಆದರೆ ಸಗಣಿಯಲ್ಲಿ ಮಾಡಿದ ಗಣಪನ ಮೂರ್ತಿ ಸಗಣಿಯ ದುರ್ಗಂಧ ಬೀರಿಯೇ ಬೀರುತ್ತದೆ.ಸಂಪಗೆಯಂತಹ ಸುವಾಸನೆ ಭರಿತ,ಕೋಮಲ ಹೂವುಗಳನ್ನು,ಸಂಪಗೆಯ ಮೊಗ್ಗುಗಳಿಂದ ಸಿಂಗರಿಸಿದರೂ ಅದು ವಿನೋದವಲ್ಲದೆ ಸಗಣಿಯ ದುರ್ಗಂಧ ಅಡಗದು.ಮಣ್ಣಿನ ಗೊಂಬೆಯನ್ನು ನೀರಿನಲ್ಲಿ ತೊಳೆದರೆ ಬಾರಿಬಾರಿಗೂ ಕೆಸರಾಗುವುದಲ್ಲದೆ ಆ ಮಣ್ಣಿನ ಗೊಂಬೆ ಅಥವಾ ಮೂರ್ತಿಯು ಕಲ್ಲಿನ ಇಲ್ಲವೆ ಬೆಳ್ಳಿ ಅಥವಾ ಬಂಗಾರದ ಮೂರ್ತಿಯಾಗಿ ಪರಿವರ್ತನೆ ಹೊಂದದು.ನೀರು ತೀರ್ಥವೇ ಆಗಿರಬಹುದು.ಆದರೆ ಆ ತೀರ್ಥಕ್ಕೆ ಬೊಂಬೆಯ ಮಣ್ಣಿನ ಮೂಲಗುಣವನ್ನು ಬದಲಿಸುವ ಸಾಮರ್ಥ್ಯವಿಲ್ಲ.ಮಣ್ಣು ಎಂದರೆ ನೀರಿನ ಸಂಪರ್ಕಕ್ಕೆ ಬಂದೊಡನೆ ಕೆಸರಾಗಲೇಬೇಕು.ಮನೆಯ ನೀರಾದರೇನು ,ನದಿ ಸರೋವರಗಳ ನೀರಾದರೇನು ಅಥವಾ ಗಂಗಾನದಿಯ ನೀರಾದರೇನು ಮಣ್ಣಿನ ಮೂರ್ತಿಯು ತನ್ನ ಮೂಲಸ್ವಭಾವವಾದ ಕೆಸರುತನವನ್ನು ಬಿಡದು.ಹಾಗೆಯೇ ಲೋಕದ ಮನುಷ್ಯರಿಗೆ ಶಿವದೀಕ್ಷೆಯನ್ನು ಕೊಟ್ಟರೆ ಕೆಟ್ಟ ಮನುಷ್ಯರು ಒಳ್ಳೆಯವರಾಗರು.ಸಂಸ್ಕಾರವಿಹೀನರಿಗೆ ಶಿವದೀಕ್ಷೆಯನ್ನು ನೀಡಲಾಗದು.ಪೂರ್ವಸಂಸ್ಕಾರ ಮುಕ್ತರಾಗದ ದುರಾತ್ಮರಿಗೆ ಶಿವದೀಕ್ಷೆ ನೀಡುವುದು ರಂಜನೆ ಇಲ್ಲವೆ ವಿನೋದದ ಸಂಗತಿಯಲ್ಲದೆ ಅದರಿಂದ ಫಲವಿಲ್ಲ,ಪ್ರಯೋಜನವಿಲ್ಲ.ಲೋಕದ ಜನರೆಲ್ಲರಿಗೂ ಶಿವದೀಕ್ಷೆ ನೀಡುವುದು ಸಗಣಿಯ ಬೆನಕನನ್ನು ಸಂಪಗೆಯ ಹೂವಿನಿಂದ ಸಿಂಗರಿಸಿದಂತೆ,ಮಣ್ಣಬೊಂಬೆಯನ್ನು ನೀರಲ್ಲಿ ತೊಳೆದು ಮೈತುಂಬ ಕೆಸರು ಮಾಡಿಕೊಂಡಂತೆ.ಯೋಗ್ಯರಾದವರಿಗೆ ಮಾತ್ರ ನೀಡಬೇಕು ಶಿವದೀಕ್ಷೆ.ಅಪಾತ್ರದಾನವಾಗಬಾರದು ಶಿವದೀಕ್ಷೆ ಎನ್ನುವುದು ಬಸವಣ್ಣನವರ ಮಾತು,ಅಭಿಮತ,ಉಪದೇಶ.

ಮುಕ್ಕಣ್ಣ ಕರಿಗಾರ
ಮೊ; 94808 79501

19.12.2021