ತುಂಬಿದ ಕೊಡ – ಮುಕ್ಕಣ್ಣ ಕರಿಗಾರ

ತುಂಬಿದ ಕೊಡ

‌ ಲೇಖಕರು: ಮುಕ್ಕಣ್ಣ ಕರಿಗಾರ

‘ ತುಂಬಿದ ಕೊಡ ತುಳುಕುವುದಿಲ್ಲ ‘ ಎನ್ನುತ್ತದೆ ಕನ್ನಡದ ಗಾದೆಯೊಂದು.ತುಂಬಿದ ಕೊಡದಿಂದ ನೀರು ಕೆಳಕ್ಕೆ ಚೆಲ್ಲದು.’ತುಳುಕುವುದು ‘ಎಂದರೆ ಹೊರಚೆಲ್ಲುವುದು.ಕೊಡದ ತುಂಬ ಇರುವ ನೀರು ಸಮತೋಲನ ಕಾಯ್ದುಕೊಳ್ಳುವುದರಿಂದ ಅದು ತುಳುಕುವುದಿಲ್ಲ.ಅರ್ಧಕೊಡ ನೀರು ಇದ್ದರೆ ಕೊಡದಲ್ಲಿಯೇ ಅತ್ತ ಇತ್ತ ಹೊರಳಾಡುತ್ತ ಸದ್ದು ಮಾಡುತ್ತದೆ.ಅರ್ಧಕೊಡ ನೀರು ಹೊತ್ತುತರುವವರಿಗೂ ಪ್ರಯಾಸವೆ ಕೊಡದ ನೀರು ಅತ್ತಿತ್ತ ಹೊರಳಿ ಕೊಡವನ್ನು ಅಲುಗಾಡಿಸುವದರಿಂದ.

ನೀರನ್ನು ಶೇಖರಿಸಲು ಬಳಸುವ ಕೊಡವು ಬೋಧಪ್ರದ ಸಮಾಜಕ್ಕೆ.ಖಾಲಿಕೊಡ,ಅರ್ಧಕೊಡ ಮತ್ತು ತುಂಬಿದ ಕೊಡ ಎನ್ನುವ ಕೊಡಗಳ ಮೂರು ಸ್ಥಿತಿಯು ಸಮಾಜದಲ್ಲಿ ಬದುಕುತ್ತಿರುವ ಮನುಷ್ಯರ ವ್ಯಕ್ತಿತ್ವಗಳನ್ನು ಸಂಕೇತಿಸುತ್ತದೆ.ಖಾಲಿಕೊಡ ನೀರು ಇರದೆ ಇದ್ದರೂ ಗಾಳಿಬಡಿದಾಗ ಇಲ್ಲವೆ ಯಾವುದಾದರೂ ವಸ್ತುಗಳು ತಾಗಿದಾಗ ಸದ್ದು ಮಾಡುತ್ತದೆ.ಅರ್ಧಕೊಡವು ಅದರೊಳಗೆ ಏನಾದರೂ ಬಿದ್ದರೆ ಸಪ್ಪಳ ಮಾಡುತ್ತದೆ.ಆದರೆ ತುಂಬಿದ ಕೊಡವು ಗಾಳಿಬಡಿದರೂ ಏನಾದರೂ ತಗುಲಿದರೂ ಕೂಡ ಸದ್ದು ಮಾಡದು.ಖಾಲಿ ಕೊಡವು ಬರಿ ಆಟಾಟೋಪ ಮಾಡುತ್ತದೆ.ತಾನು ಖಾಲಿ ಇದ್ದರೂ ಸದ್ದು ಮಾಡಿ ಸಂಭ್ರಮಿಸುತ್ತದೆ! ಇಂಗ್ಲೀಷಿನ ಗಾದೆ ‘ An Empty Vessal makes much sound’ ಎಂದು ಖಾಲಿಕೊಡದ ಬಡಿವಾರವನ್ನು ಚೆನ್ನಾಗಿ ಬಣ್ಣಿಸಿದೆ- ‘ ಖಾಲಿ ಕೊಡವು ಜಾಸ್ತಿ ಸದ್ದು ಮಾಡುತ್ತದೆ’ ಎಂದು.ಆದರೆ ತುಂಬಿದ ಕೊಡವು ಹಾಗಲ್ಲ,ಅದು ಪ್ರಶಾಂತವಾಗಿರುತ್ತದೆ.

ಸಮಾಜ ವ್ಯವಸ್ಥೆಯಲ್ಲಿ ಅಲ್ಪಜ್ಞಾನಿಗಳು,ಅರೆಜ್ಞಾನಿಗಳು ಮತ್ತು ಜ್ಞಾನಿಗಳು ಎನ್ನುವ ಮೂರು ಬಗೆಯ ಜನರಿದ್ದಾರೆ.ಹಾಗೆಯೇ ತಾಮಸ,ರಾಜಸ ಮತ್ತು ಸಾತ್ತ್ವಿಕ ಎನ್ನುವ ಮೂರು ಸ್ವಭಾವದ ಮನುಷ್ಯರಿದ್ದಾರೆ ಪ್ರಪಂಚದಲ್ಲಿ.ಜ್ಞಾನಿಗಳಾದವರು ಪ್ರಶಾಂತಚಿತ್ತದಿಂದ ಪೂರ್ಣತೆಯಿಂದ ಬದುಕುತ್ತಿದ್ದರೆ ಅಲ್ಪಜ್ಞಾನಿಗಳು, ಅರೆಜ್ಞಾನಿಗಳು ಆರ್ಭಟ,ಆಡಂಬರ ಮಾಡುತ್ತಿದ್ದಾರೆ.ಅಲ್ಪಜ್ಞಾನಿಗಳು ಹೆಚ್ಚು ಪ್ರದರ್ಶನಪ್ರಿಯರಾಗಿದ್ದಾರೆ.ತಮಗೆ ತಿಳಿದದ್ದು ಅಲ್ಪವೇ ಆಗಿದ್ದರೂ,ತಮ್ಮ ಸಾಧನೆಯು ಸ್ವಲ್ಪವೇ ಆಗಿದ್ದರೂ ಮಹಾಜ್ಞಾನಿಗಳಂತೆ , ಮಹಾನ್ ಸಾಧಕರಂತೆ ,ಎಲ್ಲ ತಿಳಿದವರಂತೆ ಸೋಗುನಟಿಸುತ್ತಾರೆ.ಮಾತಿನ ಜಾಲದಲ್ಲಿ ಜನಸಾಮಾನ್ಯರನ್ನು ಮರಳುಮಾಡುತ್ತಾರೆ.ಅರೆಜ್ಞಾನಿಗಳು ಅಲ್ಪಜ್ಞಾನಿಗಳಿಗಿಂತ ಹೆಚ್ಚಿನ ಆಡಂಬರ ಜೀವಿಗಳು.ಅಲ್ಪಜ್ಞಾನಿಗಳಿಗಿಂತ ಸ್ವಲ್ಪ ಹೆಚ್ಚಿನ ತಿಳಿವಳಿಕೆ ಇರುವ ಅರೆಜ್ಞಾನಿಗಳು ಸರ್ವಜ್ಞರಂತೆ ನಟಿಸುತ್ತಾರೆ.ಜಗತ್ತಿನಲ್ಲಿ ತಮಗೆ ತಿಳಿಯದ ವಿಷಯವೇ ಇಲ್ಲ ಎನ್ವಂತೆ ಪೋಸು ಕೊಡುತ್ತಾರೆ. ತಾವು ಸ್ವಯಂಭೂಗಳು,ಸ್ವಯಂಪರಿಪೂರ್ಣರು ಎನ್ನುವಂತೆ ನಟಿಸುತ್ತಾರೆ.ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಲ್ಪಜ್ಞಾನಿಗಳು,ಅರೆಜ್ಞಾನಿಗಳದ್ದೇ ಹಾವಳಿ,ಆರ್ಭಟ.ಜ್ಞಾನಿಗಳು,ಪೂರ್ಣಪ್ರಜ್ಞರುಗಳು ಅತಿರೇಕ,ಆಡಂಬರಗಳಿಂದ ದೂರ ಇದ್ದು ತಮ್ಮ ಪೂರ್ಣತೆಯನ್ನು,ಪಕ್ವತೆಯನ್ನು ಮೆರೆಯುತ್ತಾರೆ.

ತಾಮಸ ಸ್ವಭಾವದ ಜನರು ಹೆಚ್ಚು ಹೆಚ್ಚು ಠೇಂಕಾರ ಮಾಡುತ್ತಾರೆ.ರಾಜಸ ಸ್ವಭಾವದವರ ಠೇಂಕಾರವು ತಾಮಸಸ್ವಭಾವದವರಿಗಿಂತ ಕಡಿಮೆ ಪ್ರಮಾಣದ್ದು.ಸಾತ್ತ್ವಿಕರು ಓಂಕಾರನಾದದಲ್ಲಿ ಮಾತ್ರ ಆಸಕ್ತರು.ಅಂದರೆ ಸತ್ ಪಥದಲ್ಲಿ,ಸದ್ವರ್ತನೆಯಲ್ಲಿ,ಪರಮಾತ್ಮನ ಧ್ಯಾನ- ಚಿಂತನೆಗಳಲ್ಲಿ ಕಾಲಕಳೆಯುತ್ತ ಪೂರ್ಣತೆಯನ್ನು ಮೈಗೂಡಿಸಿಕೊಳ್ಳುತ್ತ ಪೂರ್ಣರಾಗುತ್ತಾರೆ ಸಾತ್ತ್ವಿಕ ಸ್ವಭಾವದ ಜನರು.ಸಾತ್ತ್ವಿಕರೇ ಶ್ರೇಷ್ಠರು ನಿಜ,ಆದರೆ ಸದ್ದು ಗದ್ದಲದ ಲೋಕದಲ್ಲಿ ತಾಮಸಿಗಳದ್ದೇ ಕಾರುಬಾರು,ಪಾರುಪತ್ಯ.ಸಂಖ್ಯಾದೃಷ್ಟಿಯಿಂದಲೂ ತಾಮಸಿಗಳ ಸಂಖ್ಯೆಯೇ ದೊಡ್ಡದು,ಅವರ ನಂತರದ ದೊಡ್ಡ ಸಂಖ್ಯೆಯ ಜನರು ರಾಜಸ ಪ್ರವೃತ್ತಿಯವರು.ಸತ್ತ್ವಗುಣಶೀಲರ ಸಂಖ್ಯೆ ತೀರ ಕಡಿಮೆ.ಬಹುಮತಕ್ಕೆ ಬೆಲೆ ಇರುವ ಆಧುನಿಕ ಪ್ರಪಂಚದಲ್ಲಿ ತಾಮಸ್ಸಿಗಳದ್ದೇ ಆಟ- ಮಾಟ.ಅಲ್ಪಜ್ಞಾನಿಗಳದ್ದೇ ನಡೆ- ನಿರ್ಣಯ.ಅಲ್ಪಸಂಖ್ಯಾತರಾದ ಸಾತ್ತ್ವಿಕ ವ್ಯಕ್ತಿಗಳನ್ನು ಯಾರು ಕೇಳುತ್ತಾರೆ? ಹಾಗಂತ ಸಾತ್ತ್ವಿಕ ವ್ಯಕ್ತಿಗಳು ನಗಣ್ಯರು ಎಂದಲ್ಲ.ಪರಮಾತ್ಮನ ಸೃಷ್ಟಿಯಲ್ಲಿ,ಪರಮಾತ್ಮನ ಲೆಕ್ಕದಲ್ಲಿ ಸಾತ್ತ್ವಿಕ ವ್ಯಕ್ತಿಗಳೇ ಶ್ರೇಷ್ಠರು,ಪರಮಾತ್ಮನಿಗೆ ಪ್ರಿಯರು.

ಧಾರ್ಮಿಕ ವಿಷಯಗಳಲ್ಲಿ ಅಲ್ಪಜ್ಞಾನಿಗಳು ಮತ್ತು ಅರೆಜ್ಞಾನಿಗಳೇ ಹೆಚ್ಚು ಸದ್ದುಮಾಡುತ್ತಾರೆ,ಜಾಸ್ತಿ ಸುದ್ದಿ ಮಾಡುತ್ತಾರೆ.ಜ್ಞಾನಿಗಳು ಮೌನವಾಗಿ ತಮ್ಮ ಸಾಧನೆಯಲ್ಲಿರುತ್ತಾರೆ.ಮಾತು,ರಂಜನೆ,ಚಮತ್ಕಾರಗಳಿಂದ ಜನರನ್ನು ರಂಜಿಸುತ್ತ ದಾರಿತಪ್ಪಿಸುತ್ತಾರೆ ಅಲ್ಪಜ್ಞಾನಿಗಳು ಮತ್ತು ಅರೆಜ್ಞಾನಿಗಳು.ಶಾಸ್ತ್ರ- ಪುರಾಣ,ತರ್ಕ- ಜಿಜ್ಞಾಸೆಗಳೆಂದು ವ್ಯರ್ಥ ಕಾಲಹರಣ ಮಾಡುತ್ತಾರೆ ಅಲ್ಪಜ್ಞಾನಿಗಳು ಮತ್ತು ಅರೆಜ್ಞಾನಿಗಳು.ಆದರೆ ಪ್ರಶಾಂತ ಚಿತ್ತದ,ಪರಮಾನುಭಾವಿಗಳಾಗಿರುವ ಜ್ಞಾನಿಗಳು ಹಾಗಲ್ಲ.ಅವರು ತಮ್ಮ ಪಾಡಿಗೆ ತಾವು ಇರುತ್ತಾರೆ ಲೋಕದ ಸದ್ದು- ಗದ್ದಲಗಳಿಂದ ಮುಕ್ತರಾಗಿ ದೂರದೊಂದೆಡೆಯಲ್ಲಿ.ತಮ್ಮ ಬಳಿ ಬಂದವರಿಗೆ ಸತ್ ಪಥವನ್ನು ಉಪದೇಶಿಸುತ್ತ,ತಾವು ಕಂಡ ಸತ್ಯವನ್ನು ಅರ್ಹರು ,ಆಸಕ್ತರಿಗೆ ಉಪದೇಶಿಸುತ್ತ ನಿರ್ಲಿಪ್ತರಾಗಿರುತ್ತಾರೆ. ಅಲ್ಪಜ್ಞಾನಿಗಳು,ಅರೆಜ್ಞಾನಿಗಳು ವಾದ- ವಿವಾದಗಳಲ್ಲಿಯೇ ಖುಷಿಪಟ್ಟರೆ ಜ್ಞಾನಿಗಳು ಸಾಧನೆಯ ಆನಂದ ಅನುಭವಿಸುತ್ತಾರೆ.ಅಲ್ಪಜ್ಞಾನಿಗಳು,ಅರೆಜ್ಞಾನಿಗಳು ಮಾತು,ಭಾಷಣ,ಪ್ರವಚನಗಳೆಂದು ಅಲ್ಲಿಂದ ಇಲ್ಲಿಗೆ,ಇಲ್ಲಿಂದ ಅಲ್ಲಿಗೆ ಮತ್ತೆ ಎಲ್ಲಿ ಎಲ್ಲಿಗೋ ಸುತ್ತುತ್ತಾರೆ.ಜ್ಞಾನಿಯು ತಾನು ಇದ್ದ ಎಡೆಯಲ್ಲಿಯೇ ಇದ್ದು ನಿಜವಾದ ಸಾಧಕರನ್ನು ತನ್ನ ಬಳಿ ಕರೆದು ಉದ್ಧರಿಸುತ್ತಾನೆ.

ಮಾತು ನಿಂತಲ್ಲದೆ ಮಹತ್ತುಹೊಳೆಯದು.ಭಾವಮುಕ್ತರಾಗದೆ ಭಗವಂತನ ದರ್ಶನ ಸಾಧ್ಯವಿಲ್ಲ.ಮಾತಿನ ಚಪಲ,ಪ್ರಚಾರಪ್ರಿಯತೆಗಳಿಂದ ಅಲ್ಪಜ್ಞಾನಿಗಳು,ಅರೆಜ್ಞಾನಿಗಳು ಹಾಳಾಗುತ್ತಾರೆ.ಮಾತಿನ ಚಪಲಮುಕ್ತ,ಮನಸ್ಸನ್ನು ನಿಗ್ರಹಿಸಿದ ಮಹಾಂತರುಗಳಾದ ಜ್ಞಾನಿಗಳು ಲೋಕೋತ್ತರರಾಗಿ,ಪ್ರಪಂಚ ವಿಜಯಿಗಳಾಗುತ್ತಾರೆ.ಇಂತಹ ಪೂರ್ಣರಾದ ಮಹಾತ್ಮರುಗಳನ್ನು ಸಂಕೇತಿಸುತ್ತದೆ ತುಂಬಿದ ಕೊಡ.ಎಲ್ಲ ಶುಭಕಾರ್ಯಗಳಲ್ಲಿ,ದೇವತಾಕಾರ್ಯಗಳಲ್ಲಿ ತುಂಬಿದಕೊಡದ ನೀರಿಗೆ ಪ್ರಾಶಸ್ತ್ಯವಿದೆ.ಹಾಗೆಯೇ ಪರಮಾತ್ಮನ ಸೃಷ್ಟಿಯಾದ ಈ ವಿಶ್ವದಲ್ಲಿ ಪರಿಪೂರ್ಣರಾದವರಿಗೆ ಮಾನ ಮನ್ನಣೆಗಳು.ಅಲ್ಪಜ್ಞಾನಿಗಳು,ಅರೆಜ್ಞಾನಿಗಳು ತತ್ಕಾಲದಲ್ಲಿ ಇಲ್ಲವೆ ಕೆಲವು ಕಾಲದವರೆಗೆ ಮಾತ್ರ ಜನಪ್ರಿಯರಾಗಿದ್ದರೆ ಪೂರ್ಣರಾದ ಜ್ಞಾನಿಗಳು ಎಲ್ಲ ಕಾಲಕ್ಕೂ ಸಲ್ಲುತ್ತಾರೆ,ಆಚಂದ್ರಾರ್ಕಕೀರ್ತಿಭಾಜನರಾಗುತ್ತಾರೆ.ಪೂರ್ಣಕ್ಕೆ ಇರುವ ಬೆಲೆಯು ಅಪೂರ್ಣಕ್ಕೆ ಇಲ್ಲ.ಪೂರ್ಣನಾದ ಪರಮಾತ್ಮನಿಂದ ಹೊರಹೊಮ್ಮಿದ ಈ ಪ್ರಪಂಚದಲ್ಲಿ ನಾವು ಪೂರ್ಣರಾಗಬೇಕು.ಪೂರ್ಣತೆ ಎನ್ನುವುದು ಒಮ್ಮಿಂದೊಮ್ಮೆಲೆ ಸಾಧ್ಯವಿಲ್ಲ.ಬಾವಿ,ಹಳ್ಳ,ನದಿಗಳಲ್ಲಿ ಕೊಡವು ತುಂಬಲು ಕೂಡ ಸ್ವಲ್ಪ ಸಮಯ ಬೇಕು.ಹಾಗೆಯೇ ಅನವರತ ಸಾಧನೆಯಿಂದ ಸಿದ್ಧಿ.ನಡೆಯುತ್ತ ನಡೆಯುತ್ತ ತಲುಪಬಹುದು ಪರಮಾತ್ಮನ ಎಡೆಯನ್ನು,ಪರಮಾನಂದದ ನೆಲೆಯನ್ನು.ಪೂರ್ಣರಾಗಿರುವುದೇ ಮುಕ್ತರ ಲಕ್ಷಣ.ಪ್ರಪಂಚದ ರಂಜನೆ,ಸದ್ದು- ಗದ್ದಲಗಳಲ್ಲಿ ಸಿಕ್ಕಿಬೀಳದೆ ಶಬ್ದಾತೀತರಾಗಿ,ಕ್ರಿಯಾತೀತರಾಗಿ ಎಲ್ಲದಕ್ಕೂ ಅತೀತರಾಗಿ ಹೊಂದಬೇಕು ಅನಂತವನ್ನು,ಅತೀತಶಕ್ತಿಯನ್ನು.

ಮುಕ್ಕಣ್ಣ ಕರಿಗಾರ
ಮೊ; 94808 79501

18.12.2021