ಭೇಟಿ– ದರ್ಶನ : ಮುಕ್ಕಣ್ಣ ಕರಿಗಾರ

ಭೇಟಿ– ದರ್ಶನ

ಲೇಖಕರು: ಮುಕ್ಕಣ್ಣ ಕರಿಗಾರ

ಜನರು ಬಂಧು- ಸಂಬಂಧಿಗಳನ್ನು ಮಾತನಾಡಿಸಲು ಹೋದಾಗ ‘ ಭೇಟಿ’ ಗೆ ಹೋಗಿದ್ದೆ ಎನ್ನುತ್ತಾರೆ.ಊರಲ್ಲಿ ಯಾರನ್ನಾದರೂ ಕಂಡು ಮಾತನಾಡಿಸುವುದು ಭೇಟಿಯೆ! ಆದರೆ ಸ್ವಾಮಿ- ಸಂತರು,ಮಹಾತ್ಮರುಗಳನ್ನು ಕಂಡು’ ಸ್ವಾಮಿಗಳ ದರ್ಶನ ಪಡೆದೆ’ ‘ಪೂಜ್ಯರ ದರ್ಶನ ಪಡೆದೆ’ ಅನ್ನುತ್ತಾರೆ.ಅಲ್ಲಿ ಕಂಡವರು ವ್ಯಕ್ತಿಗಳೆ,ಇಲ್ಲಿ ಕಂಡವರು ವ್ಯಕ್ತಿಗಳೆ.ಆದರೆ ‘ಸ್ಥಾನಬಲ’ ವು ನೋಟವನ್ನು ‘ದರ್ಶನ’ ವನ್ನಾಗಿಸುತ್ತದೆ. ದೇವಸ್ಥಾನ,ಮಠ- ಪೀಠಗಳು,ಆಶ್ರಮಗಳಂತಹ ಧಾರ್ಮಿಕ, ಆಧ್ಯಾತ್ಮಿಕ ಸ್ಥಾನಗಳಲ್ಲಿನ ಭೇಟಿ,ಮಾತು- ಕಥೆ ದರ್ಶನವಾಗಿ ಮಾರ್ಪಡುತ್ತದೆ.

ಬಂಧು ಸಂಬಂಧಿಕರು,ಆಪ್ತೇಷ್ಟರುಗಳನ್ನು ಕುಶಲೋಪಚಾರ ವಿಚಾರಿಸಲು ಹೋಗುತ್ತೇವೆ.ಸಂಬಂಧಗಳನ್ನು ಹುಡುಕಲು,ಸಂಬಂಧಿಕರ ಯೋಗಕ್ಷೇಮ ವಿಚಾರಿಸಲು ,ಅನಾರೋಗ್ಯ ಪೀಡಿತರನ್ನು ಮಾತನಾಡಿಸಲು,ಮದುವೆ ಮತ್ತಿತರ ಶುಭ ಕಾರ್ಯಗಳಿಗಾಗಿ ಮಾತನಾಡಿಸಲು ಹೋಗುವುದು ‘ ಭೇಟಿ’ ಆಗುತ್ತದೆ.ಅಲ್ಲಿ ಲೌಕಿಕ ಸಂಗತಿಗಳು ಇರುತ್ತವೆ,ಲೋಕವ್ಯವಹಾರ ಇರುತ್ತದೆಯಾದ್ದರಿಂದ ಅದು ಭೇಟಿ ಎನ್ನಿಸಿಕೊಳ್ಳುತ್ತದೆ.

ದೇವಸ್ಥಾನ,ಮಠ- ಮಂದಿರಗಳಲ್ಲಿ ದೇವರು,ಸ್ವಾಮಿಗಳು,ಪೂಜ್ಯರು ಆದವರನ್ನು ಕಾಣುವುದು ‘ ದರ್ಶನ’ ಎನ್ನಿಸಿಕೊಳ್ಳುತ್ತದೆ.ದೇವರನ್ನು ಕಾಣುವುದು ‘ ದರ್ಶನ’ ; ದೇವತಾಕಾರ್ಯಗಳನ್ನು ಮಾಡುವ ಪೂಜ್ಯರನ್ನು ಕಾಣುವುದೂ ‘ ದರ್ಶನ’ ವೆ.ಸಮಾಜ ಜೀವನದಲ್ಲಿನ ನಿತ್ಯ ಒಡನಾಟ,ಮಾತು ಕತೆ,ಸಂಪರ್ಕಗಳು ಭೇಟಿ ಆದರೆ ಆಶ್ರಮಾದಿಗಳಲ್ಲಿ ದರ್ಶನವಾಗುತ್ತದೆ.ಸಂಬಂಧಗಳಲ್ಲಿ ಬಂಧನ ಇರುತ್ತದೆ.ದರ್ಶನದಲ್ಲಿ ಆನಂದ‌ ಸಿಗುತ್ತದೆ.ಮಾತುಕತೆಗಳಲ್ಲಿ ರಾಗ- ದ್ವೇಷಗಳಿರುತ್ತವೆ,ದರ್ಶನದಲ್ಲಿ ರಾಗದ್ವೇಷಮುಕ್ತ ಪ್ರೇಮ ಇರುತ್ತದೆ.ಭೇಟಿಯಲ್ಲಿ ಲೌಕಿಕ ವ್ಯವಹಾರ ಇದ್ದರೆ ದರ್ಶನದಲ್ಲಿ ಅಲೌಕಿಕ ಆನಂದ ಇರುತ್ತದೆ.ಭೇಟಿಯಲ್ಲಿ ಜಡರು- ಜಂಜಾಟಗಳಿದ್ದರೆ ದರ್ಶನದಲ್ಲಿ ಸಮಸ್ಯೆಗಳ ಪರಿಹಾರವಿರುತ್ತದೆ.ನಮ್ಮ ಬಂಧು ಸಂಬಂಧಿಕರೊಡನೆ ಘಂಟೆಗಟ್ಟಲೆ ಮಾತನಾಡಿದ್ದು ವ್ಯರ್ಥಹರಟೆ ಆಗಬಹುದು.ಆದರೆ ಮಹಾತ್ಮರೊಡನೆ ಕಳೆಯುವ ಒಂದೆರಡು ನಿಮಿಷಗಳು ಕೂಡ ಬಾಳಿನ ಗತಿಯನ್ನೇ ಬದಲಿಸಬಲ್ಲವು,ಬಾಳಿಗೆ ನೆಮ್ಮದಿ,ಆನಂದ,ಅಭಯವನ್ನು ನೀಡಬಲ್ಲವು.ಸಂಸಾರದಲ್ಲಿ ಸಮಾಧಾನ ಹೇಳುವವರು ಇದ್ದರೆ ದೇವಸ್ಥಾನ,ಮಠ- ಪೀಠಗಳಲ್ಲಿ ‘ ಅಭಯ’ ಸಿಗುತ್ತದೆ.ಉಭಯಭಾವ ಇಲ್ಲದಲ್ಲಿ ‘ ಅಭಯ’ ಇರುತ್ತದೆ.ಬೇಕು- ಬೇಡಗಳೆಂಬವುಗಳು ಉಭಯಭಾವಗಳು.ಬೇಕಾದವರು- ಬೇಡವಾದವರು ಆಗಿ ಕಾಣಿಸುತ್ತಾರೆ ಸಮಾಜದಲ್ಲಿನ ಜನರು.ಆದರೆ ದೇವಸ್ಥಾನ,ಮಠ- ಮಂದಿರ,ಗುರುಸ್ಥಾನಗಳಲ್ಲಿ ಎಲ್ಲರೂ ಒಂದೇ! ಏಕೋಭಾವದಿಂದ ಕಾಣಲಾಗುತ್ತದೆ ಎಲ್ಲರನ್ನು.ಅಂದರೆ ಅಲ್ಲಿ ಎಲ್ಲರೂ ಭಕ್ತರೆ! ಶ್ರೀಮಂತನೂ ಭಕ್ತನೆ,ಬಡವನೂ ಭಕ್ತನೆ! ವಯಸ್ಸಾದ ಹಿರಿಯರೂ ಭಕ್ತರೆ,ತರುಣರೂ ಮಕ್ಕಳೂ ಭಕ್ತರೆ.ಮಹಿಳೆಯರು,ಪುರುಷರು ಎಲ್ಲರೂ ಭಕ್ತರೆ.ಉದ್ಯೋಗಸ್ಥರು ಭಕ್ತರೆ,ನಿರುದ್ಯೋಗಿಗಳೂ ಭಕ್ತರೇ.ಭಗವಂತನ ನೆಲೆಗಳಾದ ದೇವಸ್ಥಾನಗಳಲ್ಲಿ ಜನರಲ್ಲಿ ತರತಮ ಎಣಿಸದೆ ಎಲ್ಲರನ್ನೂ ಭಕ್ತರು ಎನ್ನುವ ಒಂದೇ ಭಾವದಿಂದ ಕಾಣಲಾಗುತ್ತದೆ;ಕಾಣಬೇಕು.ಸರ್ವಸಮತೆಯ ಈ ದೃಷ್ಟಿಯೇ ದರ್ಶನವಾಗುತ್ತದೆ.ದೇವರ ಅನುಗ್ರಹ- ಆಶೀರ್ವಾದದಲ್ಲಿ ಹೆಚ್ಚು ಕಡಿಮೆ ಎಂದು ಇರುವುದಿಲ್ಲ.ಶ್ರೀಮಂತರಿಗೆ ಪ್ರತ್ಯೇಕ ಆಶೀರ್ವಾದ ಬಡವರಿಗೆ ಪ್ರತ್ಯೇಕ ಆಶೀರ್ವಾದಗಳು ಎಂದು ಇಬ್ಬಗೆ ಇರುವುದಿಲ್ಲ,ಧನಿಕನಿರಲಿ- ಬಡವನಿರಲಿ,ಮೇಲ್ವರ್ಗದವನಿರಲಿ- ಕೆಳವರ್ಗದವನಿರಲಿ,ಮುದುಕನಿರಲಿ- ತರುಣನಿರಲಿ,ಪುರುಷರಿರಲಿ- ಮಹಿಳೆಯರಿರಲಿ ಎಲ್ಲರನ್ನೂ ಒಂದೇ ಭಾವದಿಂದ ಕಾಣುತ್ತಾನೆ ದೇವಸ್ಥಾನ,ಮಂದಿರಗಳಲ್ಲಿನ ಭಗವಂತ.ಅವರವರ ಬೇಡಿಕೆಯನ್ನು ಈಡೇರಿಸುತ್ತಾನೆ.ಹೀಗಾಗಿ ಭಗವಂತನ ನೋಟ ದರ್ಶನ.

ಭಗವತ್ ಸ್ವರೂಪರಾದ ಶರಣರು,ಸಂತರು- ಮಹಾಂತರು- ಮಹಾನುಭಾವಿಗಳು ಕೂಡ ಜನರಲ್ಲಿ ತರತಮ ಎಣಿಸದೆ ಎಲ್ಲರನ್ನು ಸಮದೃಷ್ಟಿಯಿಂದ ಕಾಣುತ್ತಾರೆ.ಮಹಾತ್ಮರುಗಳು ಸಮಭಾವದಿಂದ ಜನರನ್ನು ಕಾಣುವುದರಿಂದ ಅವರ ನೋಟವೂ ದರ್ಶನವಾಗುತ್ತದೆ.ಎಲ್ಲಿ ಸಮತೆ ಇದೆಯೋ,ಎಲ್ಲಿ ಸಮಗ್ರತೆ ಇದೆಯೋ,ಎಲ್ಲಿ ಸಮನ್ವಯ ಇದೆಯೋ,ಎಲ್ಲಿ ಸಮಷ್ಟಿ ಕಾಳಜಿ ಇದೆಯೋ,ಎಲ್ಲಿ ಲೋಕಹಿತಚಿಂತನೆ ಇದೆಯೋ ಅಲ್ಲಿ ‘ ದರ್ಶನ’ ಇರುತ್ತದೆ.ವ್ಯಷ್ಟಿ ಅಥವಾ ವ್ಯಕ್ತಿಕೇಂದ್ರಿತ ಸಂಪರ್ಕವು ‘ ಭೇಟಿ’ ಆದರೆ ಸಮಷ್ಟಿ ಕೇಂದ್ರಿತ,ಸರ್ವೋದಯಭಾವದ,ಸರ್ವರ ಹಿತಚಿಂತನೆಯ ಲೋಕಕಲ್ಯಾಣ ಭಾವವು ‘ ದರ್ಶನ’ ವಾಗುತ್ತದೆ.ಸ್ವಾರ್ಥವು ‘ ಭೇಟಿ’ ಯಾದರೆ ಪರಾರ್ಥ ಇಲ್ಲವೆ ಲೋಕಹಿತಚಿಂತನೆಯ ‘ ದರ್ಶನ’ ವಾಗುತ್ತದೆ.ಭೇಟಿಯು ಮನಸ್ಸಿನ ಚಂಚಲತೆ,ಕೆರಳುವಿಕೆಗಳಿಗೆ ಕಾರಣವಾದರೆ ದರ್ಶನವು ಮನಸ್ಸಿನ ನಿರ್ಮಲತೆಗೆ,ಪ್ರಸನ್ನತೆಗೆ ಕಾರಣವಾಗುತ್ತದೆ.ಕೆಲವರ ಮುಖ ನೋಡುವುದು ಇಷ್ಟವಿರಲಿಕ್ಕಿಲ್ಲ.ಆದರೆ ಮಹಾತ್ಮರ ಮುಖದರ್ಶನ ಮಾತ್ರದಿಂದ ಬದುಕಿಗೆ ಸ್ಫೂರ್ತಿ,ಆನಂದ,ಭರವಸೆಗಳು ದೊರೆಯುತ್ತವೆ.ಭೇಟಿಯು ನಿಂತನೀರು ಆದರೆ ದರ್ಶನವು ಹರಿಯುವ ನೀರು.ನಿಂತನೀರು ಪಾಚುಗಟ್ಟಿ ಕ್ರಿಮಿಕೀಟಗಳ ಆವಾಸವಾದರೆ ಹರಿವ ನೀರು ತೀರ್ಥವಾಗುತ್ತದೆ.ಭೇಟಿಯು ಬಂಧನದ ಮೂಲವಾದರೆ ದರ್ಶನವು ನಿತ್ಯಾನಂದದ ಕಾರಣವಾಗುತ್ತದೆ.ನಮ್ಮ ನಿತ್ಯಜೀವನದಲ್ಲಿ ಭೇಟಿಯ ನಡುವೆಯೂ’ ದರ್ಶನ’ ಕ್ಕೆ ಅವಕಾಶ ಕಲ್ಪಿಸಿಕೊಳ್ಳಬೇಕು.

ಮುಕ್ಕಣ್ಣ ಕರಿಗಾರ
ಮೊ;94808 79501

 

17.12.2021