ಆಕಾಶವಾಣಿ,ಅಶರೀರವಾಣಿ,ಅಂತರ್ವಾಣಿ
ಲೇಖಕರು: ಮುಕ್ಕಣ್ಣ ಕರಿಗಾರ
ಪುರಾಣಗಳಲ್ಲಿ ‘ ಆಕಾಶವಾಣಿ ನುಡಿಯಿತು’ ಎನ್ನುವ ಮಾತು ಮೇಲಿಂದ ಮೇಲೆ ಬರುತ್ತದೆ . ಎಲ್ಲ ಕಥೆ- ಪುರಾಣಗಳಲ್ಲಿ ಆಕಾಶವಾಣಿಯ ಪ್ರಸ್ತಾಪ ಇದ್ದೇ ಇರುತ್ತದೆ.ಆಕಾಶವಾಣಿ,ಅಶರೀರವಾಣಿ ಇಲ್ಲವೆ ನಭೋವಾಣಿ ಹಿಂದೆ ಆಳರಸರು,ಋಷಿಗಳಿಗೆ ಮಾರ್ಗದರ್ಶಿಯಾಗಿತ್ತು.ಆಕಾಶವಾಣಿಯ ಸಂದೇಶವು ಸಂದೇಶ ಮಾತ್ರವಾಗಿರದೆ ದೈವದ ಆದೇಶವೂ ಆಗಿರುತ್ತಿತ್ತು.ಹೀಗಾಗಿ ಅದನ್ನು ಉಲ್ಲಂಘಿಸುವಂತಿರಲಿಲ್ಲ.ಶರೀರವಿಲ್ಲದ ವಾಣಿ ಆದ್ದರಿಂದ ಅದು ಅಶರೀರವಾಣಿ.ದೇವರು ಶರೀರವಿಲ್ಲದೆ ಮಾತನಾಡಬಲ್ಲ ಅಥವಾ ಎಲ್ಲರಿಗೂ ದೇವರ ಸಾಕ್ಷಾತ್ ದರ್ಶನ ಸಾಧ್ಯವಿರಲಿಲ್ಲವಾದ್ದರಿಂದ ದೇವವಾಣಿಯನ್ನೇ ಕೇಳಿ ಸಂತೃಪ್ತರಾಗಬೇಕಿತ್ತು.
ವಿಜ್ಞಾನಯುಗದ ರೇಡಿಯೋದಂತೆ ನಿತ್ಯವೂ ನುಡಿಯುವ,ಹಾಡುವ ವಾಣಿ ಆಗಿರಲಿಲ್ಲ ಆಕಾಶವಾಣಿ. ಸಮಯ – ಸಂದರ್ಭ ಬಂದಾಗ,ದೈವದ ಮಾರ್ಗದರ್ಶನ ಅನಿವಾರ್ಯ ಎನ್ನಿಸಿದಾಗ ಜಗನ್ನಿಯಾಮಕನಾದ ಪರಮಾತ್ಮನು ತನ್ನ ಸಂದೇಶವನ್ನು ಅಶರೀರವಾಣಿಯ ಮೂಲಕ ರವಾನಿಸುತ್ತಿದ್ದ.ಯಾವುದಾದರೂ ಯುದ್ಧನಡೆದಿದ್ದಾಗ ‘ ಯುದ್ಧ ನಿಲ್ಲಿಸಿ’ ಎಂದು ಆಕಾಶವಾಣಿ ನುಡಿದರೆ ಯುದ್ಧ ನಿಲ್ಲಿಸುತ್ತಿದ್ದರು.ಅಶರೀರವಾಣಿಯು ‘ ಇದನ್ನು ಮಾಡಿ’ ‘ ಇದನ್ನು ಮಾಡಬೇಡಿ’ ಎಂದು ನಿರ್ದೇಶಿಸುತ್ತಿತ್ತು.ಬಹುಶಃ ಆ ಕಾಲದ ಪ್ರಪಂಚ ನಿಯಂತ್ರಣ ವ್ಯವಸ್ಥೆ ಅಶರೀರವಾಣಿ ಆಗಿರಬಹುದು.ಅಶರೀರವಾಣಿಯ ಮುಂದುವರೆದ ರೂಪವೇ ದೇವ ದೇವಿಯರು ಪೂಜಾರಿಗಳು,ಅರ್ಚಕರ ಮೈಯಲ್ಲಿ ಆವೇಶಗೊಳ್ಳುವುದು.ದೇವರು ಮೈಮೇಲೆ ಬರುವುದು ಮೂಢನಂಬಿಕೆ ಆಗಿರಬಹುದು ಕೆಲವರಿಗೆ,ಆದರೆ ಅದು ಸುಳ್ಳಲ್ಲ.ದೇವರ ಹೆಸರಿನಲ್ಲಿ ಹೊಟ್ಟೆ ಹೊರೆಯುವವರು ದೇವರು ಮೈಮೇಲೆ ಬಂದಂತೆ ನಟಿಸುವುದು ಕಪಟ ಆಗಿರಬಹುದು.ಆದರೆ ದೇವರು ಆವೇಶಗೊಳ್ಳುವುದು ಸುಳ್ಳು ಎನ್ನಲಾಗದು.ನಮ್ಮ ಸುತ್ತ ಮುತ್ತ ಇರುವ ಸಾವಿರಾರು ದೇವ ದೇವಿಯರ ಗುಡಿ ಗುಂಡಾರಗಳು ಪರಮಾತ್ಮನ ಸಂಕಲ್ಪದಂತೆ ಲೋಕೋದ್ಧಾರದ ಕೇಂದ್ರಗಳು.ಶಿವಗಣರು ಇಲ್ಲವೆ ದೇವಿಗಣಗಳು ಅಲ್ಲಿ ಪೂಜೆಗೊಳ್ಳುತ್ತ ಜನರಿಗೆ ಮಾರ್ಗದರ್ಶನ ಮಾಡುತ್ತಾರೆ.ಪ್ರಪಂಚದಾದ್ಯಂತ ವ್ಯಾಪಿಸಿದೆ ಪರಮಾತ್ಮನ ಶಕ್ತಿತರಂಗಲೀಲೆ.ಶಕ್ತಿಯ ಕಣಗಳು ದೇವರ ಮೂರ್ತಿ,ವಿಗ್ರಹಗಳ ಮೂಲಕ ಲೋಕೋದ್ಧಾರದ ಕಾರ್ಯ ಮಾಡುತ್ತಿವೆ.ಈಗ ವಿಜ್ಞಾನ,ತಂತ್ರಜ್ಞಾನ,ವೈದ್ಯಕೀಯ ಕ್ಷೇತ್ರಗಳಲ್ಲಿ ಪ್ರಗತಿ ಆಗಿದ್ದರಿಂದ ಕೆಲವರಿಗೆ ದೇವರ ಅಗತ್ಯ ಇಲ್ಲದೆ ಇರಬಹುದು.ಆದರೆ ಹಿಂದೆ ಯಾವ ಸೌಲಭ್ಯ- ಸಾಧನಗಳು ಇಲ್ಲದಿದ್ದ ಕಾಲದಲ್ಲಿ ಗಿಡ ಮರಗಳಲ್ಲಿದ್ದ ದೇವರುಗಳೇ ಆಸರೆ ಆಗಿದ್ದರು.ಮೂರ್ತಿ,ವಿಗ್ರಹಗಳಲ್ಲಿನ ದೇವರುಗಳು ಪರಮಾತ್ಮ ಅಲ್ಲದಿದ್ದರೂ ಪರಮಾತ್ಮನ ವಿಭೂತಿಗಳು ಎನ್ನುವುದು ಸತ್ಯ.ಮೂರ್ತಿ,ವಿಗ್ರಹಗಳಲ್ಲಿ ಪರಮಾತ್ಮನು ಪೂರ್ಣವಾಗಿ ಪ್ರಕಟಗೊಳ್ಳದೆ ಇದ್ದರೂ ಪರಮಾತ್ಮನ ಅಂಶವಂತೂ ಇದ್ದೇ ಇರುತ್ತದೆ.ಸಮುದ್ರದ ಒಂದು ಹನಿಗೂ ಸಮುದ್ರಕ್ಕೂ ವ್ಯತ್ಯಾಸ ಇಲ್ಲದಂತೆ,ಸಮುದ್ರದ ತತ್ತ್ವವೇ ಸಮುದ್ರದ ಒಂದು ಜಲಬಿಂದುವಿನಲ್ಲಿ ಅಡಕಗೊಂಡಿರುವಂತೆ ಪರಮಾತ್ಮ ಮತ್ತು ಆತನ ಮೂರ್ತಿ,ವಿಗ್ರಹಗಳು.ಪರಮಾತ್ಮನು ಜಗತ್ತಿನ ವ್ಯವಹಾರದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳಲಾರ.ಹಾಗೆಂದು ತನ್ನ ಸೃಷ್ಟಿಯಾದ ವಿಶ್ವವನ್ನು ಕಡೆಗಣಿಸಲಾರನು ಪರಮಾತ್ಮ.ಆ ಕಾರಣಕ್ಕಾಗಿಯೇ ದೇವ- ದೇವಿಯರು,ಅವತಾರ ಪುರುಷರು,ಶರಣರು- ಸಂತರುಗಳನ್ನು ಹುಟ್ಟಿಸಿ ಅವರುಗಳ ಮೂಲಕ ಸಾಧಿಸುತ್ತಿದ್ದಾನೆ ತನ್ನ ಜಗತ್ ಕಲ್ಯಾಣ ಕಾರ್ಯವನ್ನು.
ದೇವ- ದೇವಿಯರು ಅರ್ಚಕ,ಆರಾಧಕರ ಮೂಲಕ ಪ್ರಕಟಗೊಂಡು ಜನರ ಸಮಸ್ಯೆ ಪರಿಹರಿಸುತ್ತಾರೆ.ರಾಮಕೃಷ್ಣ ಪರಮಹಂಸರು ಮಹಾಕಾಳಿಯ ಆವೇಶವನ್ನು ಯಾವಾಗ ಬೇಕು ಆವಾಗ ಹೊಂದುತ್ತಿದ್ದರು.ಸಮಾಧಿಯಲ್ಲಿ ತಲ್ಲೀನರಾಗಿ ಮಹಾಕಾಳಿಯ ಅನುಭೂತಿಯನ್ನನುಭವಿಸಿ ಜಗತ್ ಕಲ್ಯಾಣದ ಸಂದೇಶ ನೀಡುತ್ತಿದ್ದರು,ಬಳಿ ಬಂದವರ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಿದ್ದರು. ಕೇರಳ,ತಮಿಳು ನಾಡು ಮತ್ತು ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭೂತಾರಾಧನೆ ವ್ಯಾಪಕವಾಗಿದೆ.ಈ ಭೂತಾರಾಧನೆಯು ಸಹ ದೈವದಿಂದ ನಿರ್ದೇಶನ ಪಡೆಯುವ ಧಾರ್ಮಿಕ ಕ್ರಿಯೆಯೆ.
ಯೋಗಿಗಳು,ಆಧ್ಯಾತ್ಮ ಸಾಧಕರು ಅಶರೀರವಾಣಿಯ ಸಂದೇಶ,ನಿರ್ದೇಶನ ಕೇಳುತ್ತಾರೆ ಅಂತರ್ವಾಣಿಯ ಮೂಲಕ.ಯೋಗಿಗಳಿಗೆ ಪರಮಾತ್ಮನು ಅಂತರ್ವಾಣಿಯ ಮೂಲಕ ಸಂದೇಶ ನೀಡಿ ಅವರನ್ನು ಯೋಗಪಥದಲ್ಲಿ ಮುನ್ನಡೆಸುತ್ತಾನೆ.ಯೋಗಿಗಳ ಆಧ್ಯಾತ್ಮಿಕ ಗುರುಗಳು ಇಲ್ಲವೆ ಯೋಗಸಾಧಕರ ಇಷ್ಟದೈವವು ಅಂತರ್ವಾಣಿಯ ರೂಪದಲ್ಲಿ ಯೋಗಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.ಆಕಾಶವಾಣಿಯು ಹೇಗೆ ಆಕಾಶದಿಂದ ಕೇಳಿಸುತ್ತದೆಯೋ ಹಾಗೆಯೇ ಯೋಗಿಗಳ ಹೃದಯದಲ್ಲಿ ಮೂಡಿ ಬರುತ್ತದೆ ಅಂತರ್ವಾಣಿಯ ಸಂದೇಶ ಇಲ್ಲವೆ ಆದೇಶ.ಹೃದಯಾಕಾಶದ ಧ್ವನಿಯನ್ನು ಸ್ಪಷ್ಟವಾಗಿ ಕೇಳುತ್ತಾನೆ ಯೋಗಿ.ಯೋಗಿಯು ವೈಯಕ್ತಿಕ ಸಾಧನಾ ಪಥದ ಮಾರ್ಗದರ್ಶನ ಮತ್ತು ಲೋಕಕಲ್ಯಾಣಕ್ಕಾಗಿಯೂ ಅಂತರಾತ್ಮನ ಸಂದೇಶ ಕೇಳುತ್ತಾನೆ.ಯೋಗಿಗಳಲ್ಲಿ ಅಂತಃಸ್ಫುರಣೆಯ ಸಾಮರ್ಥ್ಯವು ಅಧಿಕವಾಗಿರುವುದರಿಂದ ಅವರು ಅಂತರಾತ್ಮನ ಕರೆಯನ್ನು ಸುಲಭವಾಗಿ ಆಲಿಸಬಲ್ಲರು ಮತ್ತು ಪಾಲಿಸಬಲ್ಲರು.
ಅಂತರ್ವಾಣಿಯನ್ನು ಇಂಗ್ಲಿಷಿನಲ್ಲಿ initution ಎನ್ನುತ್ತಾರಾದರೂ ಅದು ಅಂತರಾತ್ಮನ ಕರೆಗೆ ಸರಿಯಾದ ಪದವಲ್ಲ.ಅಂತಃಸ್ಫೂರ್ತಿ ಎನ್ನಬಹುದು.ಅಂತರಾತ್ಮನ ಕರೆಯನ್ನು ಕೇಳಬೇಕಾದರೆ ಯೋಗಿಯಲ್ಲಿ ಸ್ಫುರಣ ಸಾಮರ್ಥ್ಯವು ಜಾಗೃತವಾಗಿರಬೇಕು.ಸ್ಫೂರ್ತಿ ಮತ್ತು ಸ್ಫುರಣಸಾಮರ್ಥ್ಯಗಳು ಬೇರೆ ಬೇರೆ.ಕವಿಗಳಿಗೆ ಬರುವ ಸ್ಫೂರ್ತಿ ಸ್ಫುರಣವಲ್ಲ.ಸ್ಫೂರ್ತಿ ಮನಸ್ಸಿನ ಕಾರ್ಯವಾದರೆ ಸ್ಫುರಣವು ಅಂತರ್ ಮನಸ್ಸಿನ ಕಾರ್ಯ.ಯೋಗಿಯು ಕಾರಣ ಮತ್ತು ಮಹಾಕಾರಣ ಶರೀರಗಳಿಂದ ಅಂತಃಸ್ಫುರಣೆ ಪಡೆಯುತ್ತಾನೆ,ಅಂತರಾತ್ಮನ ಕರೆಯನ್ನು ಆಲಿಸುತ್ತಾನೆ.
ಪರಮಾತ್ಮನು ತನ್ನ ಸೃಷ್ಟಿಯಾದ ಪ್ರಪಂಚದ ನಿಯತಿ,ನಿರ್ವಹಣೆ ಮತ್ತು ಉದ್ಧಾರಕ್ಕಾಗಿ ಕಾಲಕಾಲಕ್ಕೆ ಬೇಕಾದ ವ್ಯವಸ್ಥೆಯನ್ನು ಅನುಗ್ರಹಿಸುತ್ತಾನೆ ಎನ್ನುವುದಕ್ಕೆ ಸಾಕ್ಷಿ ಆಕಾಶವಾಣಿ ಮತ್ತು ಅಂತರ್ವಾಣಿಗಳು.

ಮೊ: 94808 79501
15.12.2021