ಓದುವ ಹವ್ಯಾಸ ಉಳ್ಳವರೇ ಅದೃಷ್ಟವಂತರು ! – ಮುಕ್ಕಣ್ಣ ಕರಿಗಾರ

ಪ್ರಸ್ತುತ

ಓದುವ ಹವ್ಯಾಸ ಉಳ್ಳವರೇ ಅದೃಷ್ಟವಂತರು !

ಲೇಖಕರು: ಮುಕ್ಕಣ್ಣ ಕರಿಗಾರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದಿಂದ ‘ ಸಾಗರ ಸಾಮ್ರಾಟ’ ಎನ್ನುವ ದಿನಪತ್ರಿಕೆಯನ್ನು ಹೊರತರುತ್ತಿರುವ ಮಿತ್ರ ನಾಗೇಂದ್ರ ಖಾರ್ವಿ ಅವರು ಅವರ ಪತ್ರಿಕೆಯಲ್ಲಿ ನನ್ನ ಚಿಂತನೆ,ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.ನನ್ನ ಕಾರ್ಯಬಾಹುಳ್ಯದ ನಡುವೆಯೂ ನಾನು ಶಹಾಪುರದ ಸ್ನೇಹಿತ ಶರಣು ಬಿ ಗದ್ದುಗೆ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ‘ ಶರಣಾರ್ಥಿ ಕನ್ನಡಿಗರೆ’ ಪ್ರಾದೇಶಿಕ ದಿನಪತ್ರಿಕೆಗೆ ಹಾಗೂ ನಾಗೇಂದ್ರ ಖಾರ್ವಿ ಅವರ ಸಂಪಾದಕತ್ವದ ‘ ಸಾಗರ ಸಾಮ್ರಾಟ’ ಪತ್ರಿಕೆಗಳಿಗೆ ನಿರಂತರವಾಗಿ ಲೇಖನ,ವೈಚಾರಿಕ ಲೇಖನ ಮತ್ತು ಚಿಂತನೆಗಳನ್ನು ಬರೆಯುತ್ತಿದ್ದೇನೆ.ಪ್ರತಿದಿನ ಬರೆದ ಚಿಂತನೆ- ಲೇಖನಗಳನ್ನು ‘ ಮಹಾಶೈವ ವಿಚಾರ ವೇದಿಕೆ’ , ‘ ಮಹಾಶೈವ ಸಾಹಿತ್ಯ ಮಂಟಪ’ , ‘ ಮುಕ್ಕಣ್ಣ ಕರಿಗಾರ ಅಭಿಮಾನಿ ಬಳಗ’ , ‘ ಶರಣ ಸಂಗಮ’ ವಾಟ್ಸಾಪ್ ಗ್ರೂಪ್ ಗಳಿಗೆ ಸೇರಿದಂತೆ ಹಲವಾರು ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡುತ್ತೇನೆ.ಅಲ್ಲದೆ ಶಹಾಪುರದಿಂದ ಬಸವರಾಜ ಕರೆಗಾರ ಅವರ ‘ ಕರುನಾಡ ವಾಣಿ’ ಮತ್ತು ಮಾನ್ವಿಯಿಂದ ಬಸವರಾಜ ಭೋಗಾವತಿ ಅವರ ‘ ಬಿ ಬಿ ನ್ಯೂಸ್ ಗುರು’ ವೆಬ್ ಪೋರ್ಟಲ್ ಗಳಲ್ಲಿ ನನ್ನ ಚಿಂತನೆಗಳು ಪ್ರಕಟಗೊಳ್ಳುತ್ತಿವೆ.ಸಹಸ್ರಾರು ಜನ ನನ್ನ ಚಿಂತನೆ,ಲೇಖನಗಳನ್ನು ಓದುತ್ತಿದ್ದಾರೆ.ಅವರಲ್ಲಿ ಕೆಲವರು ನನಗೆ ವೈಯಕ್ತಿಕವಾಗಿ ವಾಟ್ಸಾಪ್ ಮೆಸೇಜ್ ಮಾಡಿ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ನಾಗೇಂದ್ರ ಖಾರ್ವಿ ಅವರು ಮೊನ್ನೆ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತ ಅವರ ಶ್ರೀಮತಿಯವರೂ ಸೇರಿದಂತೆ ‘ ಸಾಗರ ಸಾಮ್ರಾಟ’ ಪತ್ರಿಕೆಯ ಓದುಗ ಬಳಗದಿಂದ ನನ್ನ ಚಿಂತನೆಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವುದಾಗಿಯೂ ಕೆಲವರು ‘ ಲೇಖನಗಳು ಚಿಕ್ಕವಾಗಿದ್ದರೆ ಅನುಕೂಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.’ ಸಾಗರ ಸಾಮ್ರಾಟ’ ಪತ್ರಿಕೆಯ ಓದುಗರು ಅಷ್ಟೇ ಅಲ್ಲ, ‘ ಶರಣಾರ್ಥಿ ಕನ್ನಡಿಗರೆ’ ಪತ್ರಿಕೆಯ ಓದುಗರು ಹಾಗೂ ವಿವಿಧ ವಾಟ್ಸಾಪ್ ಗುಂಪುಗಳ ಓದುಗ ಮಿತ್ರರುಗಳು ಸಹ ಲೇಖನಗಳು ಚಿಕ್ಕವಾಗಿದ್ದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕಾರಣ ಅಷ್ಟು ದೊಡ್ಡ ಲೇಖನಗಳನ್ನು ಓದಲು ಪುರಸೊತ್ತು ಇಲ್ಲ! ಇದು ನಮ್ಮ ಆಧುನಿಕ ಪ್ರಪಂಚದ ಬದುಕು.ಹತ್ತರಿಂದ ಹದಿನೈದು ನಿಮಿಷಗಳಷ್ಟು ಕಾಲವೂ ಓದಲು ಸಮಯವಿಲ್ಲ ನಮ್ಮ ಜನರಿಗೆ !

ಟಿವಿ ಮತ್ತು ಮೊಬೈಲ್ ಗಳು ನಮ್ಮ ಬದುಕನ್ನು ಆಕ್ರಮಿಸಿಕೊಂಡಿವೆ.ಯುದ್ಧವಿಲ್ಲದೆ ಶರಣಾಗತರಾದ ಮನೋಸ್ಥಿತಿ ನಮ್ಮದು ಸೊಶಿಯಲ್ ಮೀಡಿಯಾಗಳೆದುರು.ಟಿ ವಿಗಳಲ್ಲಿ ಪ್ರಸಾರವಾಗುವ ಬಗೆಬಗೆಯ ರಂಜನೆಯ ಕಾರ್ಯಕ್ರಮಗಳು,ಧಾರಾವಾಹಿಗಳನ್ನು ನೋಡುವುದರಲ್ಲಿ ಬ್ಯುಸಿಯಾಗುವ ನಮ್ಮ ಜನರಿಗೆ ಓದಲು ಪುರಸೊತ್ತು ಇಲ್ಲ! ಈಗೀಗಲಂತೂ ಎಲ್ಲರೂ ಮೊಬೈಲ್ ಗಳಲ್ಲೇ ಬ್ಯುಸಿ ಆಗಿರುತ್ತಾರೆ,ವಾಟ್ಸಾಪ್ ,ಫೇಸ್ ಬುಕ್ ,ಇನ್ಸ್ಟಾಗ್ರಾಂ,ಯು ಟ್ಯೂಬ್ ಚಾನೆಲ್ ಹೀಗೆ ಹತ್ತೆಂಟು ಆ್ಯಪ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ.ಯುವಜನತೆ ಹಾಳಾಗಬೇಕಾದ ಎಲ್ಲವನ್ನೂ ಒದಗಿಸುತ್ತಿವೆ ಸೊಶಿಯಲ್ ಮೀಡಿಯಾಗಳು.ಮನೆಗೆ ನಾಲ್ಕಾರು ಮೊಬೈಲ್ ಫೋನ್ ಗಳು ಬಂದು ಸಾಮಾಜಿಕ ಸಂಬಂಧಗಳೇ ಅರ್ಥಹೀನವಾಗಿವೆ.ಎಲ್ಲರ ಕೈಯ್ಗಳಲ್ಲೂ ಮೊಬೈಲ್ ! ಎಲ್ಲೆಲ್ಲೂ ಮೊಬೈಲ್! ಊಟದ ಟೇಬಲ್ ನಲ್ಲಿಯೂ ಒಬ್ಬರ ಮುಖವನ್ನು ಒಬ್ಬರು ನೋಡದೆ ಮೊಬೈಲ್ ನಲ್ಲಿ ಕಣ್ಣಾಡಿಸುತ್ತ ಉಣ್ಣುವುದು ಫ್ಯಾಶನ್ ಆಗಿದೆ.ದೇವರ ಪೂಜೆ ಮಾಡುತ್ತಲೇ ಮೊಬೈಲ್ ಕರೆಗಳಿಗೆ ಉತ್ತರಿಸುವ ವಿಚಿತ್ರ ಗೀಳು ಅಂಟಿಕೊಂಡಿದೆ.ಕಾರು,ಬೈಕುಗಳನ್ನು ಡ್ರೈ ವ್ ಮಾಡುತ್ತಲೇ ಮೊಬೈಲ್ ನಲ್ಲಿ ಮಾತನಾಡುವ ಹುಚ್ಚು ಹತ್ತಿದೆ ಜನರಿಗೆ.ಇಂತಹವರಿಗೆ ಓದಿ ಎಂದರೆ ಹೇಗೆ ಓದಬಲ್ಲರು?

ನಾಗೇಂದ್ರ ಖಾರ್ವಿ ಅವರಿಗೆ ಉತ್ತರಿಸುತ್ತ ನಾನು ತಮಾಷೆ ಮಾಡಿದೆ ‘ ನನ್ನ ಒಂದು ಲೇಖನವನ್ನು ಓದಲು ಪುರಸೊತ್ತು ಇಲ್ಲದವರು ಕುವೆಂಪು ಅವರ ‘ ಕಾನೂರು ಹೆಗ್ಗಡತಿ’ ಮತ್ತು ‘ ಮಲೆಗಳಲ್ಲಿ ಮದುಮಗಳು’ ಗಳಂತಹ ಬೃಹತ್ ಕಾದಂಬರಿಗಳನ್ನು ಓದಬಲ್ಲರೆ? ಈಗ ಜನಸಾಮಾನ್ಯರು ಮಾತ್ರವಲ್ಲ ಎಂ ಎ ಕನ್ನಡ ಓದಿದವರು ಕೂಡ ಕುವೆಂಪು ಅವರ ಎರಡು ಬೃಹತ್ ಕಾದಂಬರಿಗಳನ್ನು ಓದುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ.ಶೈಕ್ಷಣಿಕ ಗುಣಮಟ್ಟ ತೀರ ಕುಸಿದಿದೆ.ಎಂ ಎ ಕನ್ನಡ ಓದಿದವರಿಗೆ ಕನ್ನಡವನ್ನು ತಪ್ಪಿಲ್ಲದಂತೆ ಬರೆಯುವುದು ಸಾಧ್ಯವಾಗುತ್ತಿಲ್ಲ,ಅಲ್ಪಪ್ರಾಣ – ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸಲು ಆಗುತ್ತಿಲ್ಲ ಎನ್ನುವುದು ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿ.ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಅವರು ಶುದ್ಧ ಕನ್ನಡ ಉಚ್ಚಾರಣೆಯ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದನ್ನು ಕೆಲವರು ಆಕ್ಷೇಪಿಸಿದರು. ಜನಸಾಮಾನ್ಯರಿಂದ ಕನ್ನಡದ ಸರಿಯಾದ ಉಚ್ಚರಣೆ ನಿರೀಕ್ಷಿಸುವುದು ಸಾಧುವಲ್ಲದಿರಬಹುದು.ಆದರೆ ಕನ್ನಡದಲ್ಲಿ ಎಂ ಎ ಮಾಡಿದವರಿಗೆ ಅ ಕಾರ ಹ ಕಾರಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೆಂದರೆ? ಕನ್ನಡವನ್ನು ಬೋಧಿಸುವವರಿಗೇ ಕನ್ನಡದ ಸ್ಪಷ್ಟ ಉಚ್ಚರಣೆ ಸಾಧ್ಯವಿಲ್ಲವೆಂದರೆ? ಕನ್ನಡಿಗರ ತೆರಿಗೆಯಿಂದ ಸಂಬಳಪಡೆದು ಕನ್ನಡ ಕಲಿಸಬೇಕಾದವರು,ಕನ್ನಡದ ಹೆಸರಿನಲ್ಲಿ ಬದುಕುವವರಿಗೆ ಶುದ್ಧ ಕನ್ನಡದ ಅಗತ್ಯವಿದೆ ಎನ್ನುವುದನ್ನು ಅಲ್ಲಗಳೆಯುವುದು ಕನ್ನಡ ದ್ರೋಹ.ಶಿಕ್ಷಣದ ಗುಣಮಟ್ಟ ಕಡಿಮೆಯಾಗಲು ಶಿಕ್ಷಣ ಕ್ಷೇತ್ರದಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತಿರಾಜಕಾರಣವೇ ಬಹುಮುಖ್ಯ ಕಾರಣ.ಯಾವುದೇ ಜಾತಿಗೆ ಸೇರಿರಲಿ ಹುದ್ದೆಗೆ ನಿಗದಿಪಡಿಸಿದ ಅಂಕಗಳಲ್ಲಿ ವಿನಾಯತಿ ನೀಡಬಹುದೇ ಹೊರತು ಪ್ರತಿಭೆ,ಗುಣಮಟ್ಟ,ಕೌಶಲ್ಯಗಳಂತಹ ಅರ್ಹತೆಗಳಲ್ಲಿ ರಾಜಿ ಮಾಡಿಕೊಳ್ಳಬಾರದು.ಆದರೆ ಕರ್ನಾಟಕದ ಒಂದೊಂದು ವಿಶ್ವವಿದ್ಯಾಲಯವು ಒಂದೊಂದು ಜಾತಿಯ ಕೇಂದ್ರ ಆಗಿದ್ದು ಆಯಾ ಜಾತಿಗಳ ಹಿತಾಸಕ್ತಿಗಳನ್ನು ಪೊರೆಯುವುದೇ ವಿಶ್ವವಿದ್ಯಾಲಯಗಳ ಘನಕಾರ್ಯವಾಗಿದೆ.ವಿಶ್ವವಿದ್ಯಾಲಯಗಳಲ್ಲಿ ಆಳವಾದ ಅಧ್ಯಯನ,ಉನ್ನತ ಚಿಂತನೆಗಳು ನಡೆದು ಸ್ವತಂತ್ರ ಮತ್ತು ಚಿಂತನಶೀಲ ವ್ಯಕ್ತಿತ್ವಗಳು ಹೊರಬರಬೇಕು.ಆದರೆ ಈಗ ಏನಾಗಿದೆ? ನಮ್ಮ ವಿಶ್ವವಿದ್ಯಾಲಯಗಳಿಂದ ಎಷ್ಟುಜನ ಚಿಂತನಶೀಲ ಸ್ನಾತಕೋತ್ತರ ಮತ್ತು ಡಾಕ್ಟೋರೇಟ್ ಪದವಿ ಪಡೆದವರು ಹೊರಬರುತ್ತಿದ್ದಾರೆ? ಉತ್ತರ ನಿರಾಶಾದಾಯಕ.

ಹಿಂದೆ ಓದುವುದು ವಿದ್ವಾಂಸರ ಲಕ್ಷಣವಾಗಿತ್ತು.ಇಂದು ಉದ್ಯೋಗಕ್ಕಾಗಿ ಓದುತ್ತಿರುವುದರಿಂದ ಪರೀಕ್ಷೆ ಪಾಸು ಮಾಡಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಓದುತ್ತಿರುವವರಿಂದ ಶಿಕ್ಷಣಾರ್ಥಿಯಲ್ಲಿ ಸಮಗ್ರವ್ಯಕ್ತಿತ್ವವನ್ನು ನಿರೀಕ್ಷಿಸಬಹುದೆ? ಅದರಲ್ಲೂ ಸೆಮಿಸ್ಟರ್ ಪದ್ಧತಿಯ ಶಿಕ್ಷಣ ವಿಧಾನವಂತೂ ವಿಧ್ಯಾರ್ಥಿಗಳ ಅಧ್ಯಯನ ಶಿಸ್ತನ್ನೇ ಕಸಿದುಕೊಂಡಿದೆ.ಪಾಶ್ಚಿಮಾತ್ಯ ಪದ್ಧತಿಯ ಶಿಕ್ಷಣ ಹೊಟ್ಟೆಪಾಡಿನ ಉದ್ಯೋಗಗಳನ್ನು ಒದಗಿಸುವ ಶಿಕ್ಷಣವಾಗಬಲ್ಲುದಲ್ಲದೆ ವ್ಯಕ್ತಿತ್ವಗಳನ್ನು ರೂಪಿಸುವ ಶಿಕ್ಷಣ ಪದ್ಧತಿಯಲ್ಲ.ಇಂತಹ ಕಾರಣಗಳಿಂದ ನಮ್ಮ ವಿದ್ಯಾವಂತರುಗಳು ಸರ್ಟಿಫಿಕೇಟ್ ಗಳನ್ನು ಪಡೆದ ಕ್ವಾಲಿಫೈಡ್ ಜನರೇ ಹೊರತು ಸೃಷ್ಟಿಶೀಲ,ಸಂಶೋಧನಾ ಪ್ರವೃತ್ತಿಯ ಜನರಲ್ಲ.

ಹಿಂದೆ ಶಾಲೆಗಳು ಇರದೆ ಇದ್ದ ಕಾಲದಲ್ಲಿ ಸಹ ಜನರಲ್ಲಿ ರಾಮಾಯಣ ಮಹಾಭಾರತ,ಜೈಮಿನಿ ಭಾರತ,ಶಿವಪುರಾಣ,ಚಾಮರಸನ ಪ್ರಭುಲಿಂಗ ಲೀಲೆ,ಶಬರಶಂಕರ ವಿಲಾಸ,ಸರ್ವಜ್ಞನ ವಚನಗಳು( ಸರ್ವಜ್ಞನು ತ್ರಿಪದಿಗಳನ್ನು ರಚಿಸಿದ್ದರೂ ಜನರು ಅವುಗಳನ್ನು ಸರ್ವಜ್ಞನ ವಚನಗಳು ಎಂದೇ ಕರೆಯುತ್ತಾರೆ) ಹರಿಶ್ಚಂದ್ರಕಾವ್ಯ ಇಂತಹ ಕಾವ್ಯಕೃತಿ,ಪುರಾಣೇತಿಹಾಸಗಳನ್ನು ಓದುವ,ಕೇಳುವ ರೂಢಿ ಇತ್ತು.ಅಷ್ಟೇನೂ ದೊಡ್ಡ ವಿದ್ವಾಂಸರಲ್ಲದಿದ್ದರೂ ಪ್ರಭುಲಿಂಗ ಲೀಲೆ,ಹರಿಶ್ಚಂದ್ರ ಕಾವ್ಯಗಳು ಶುದ್ಧವಾಗಿ ಓದಿ,ಹಾಡುತ್ತಿದ್ದರು ಗ್ರಾಮೀಣ ಜನರು.ಇದು ಅವರ ಅಧ್ಯಯನ ಆಸಕ್ತಿಯ ಫಲ.ಇಂದಿನ ನಮ್ಮ ಕನ್ನಡ ಪಂಡಿತರುಗಳಿಗೆ ಸರಳ ನಡುಗನ್ನಡದಲ್ಲಿರುವ ಹರಿಹರನ ರಗಳೆಗಳನ್ನೇ ಓದಿ,ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲದಿರುವಾಗ ಅಂತಹವರುಗಳು ಪಂಪನ ‘ವಿಕ್ರಮಾರ್ಜುನ ವಿಜಯ ‘ ವನ್ನಾಗಲಿ ರನ್ನನ ‘ ಗದಾಯುದ್ಧ’ ವನ್ನಾಗಲಿ ಓದ ಬಲ್ಲರೆ?

ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲಷ್ಟೇ ಓದುವ ಕಡ್ಡಾಯಕ್ಕೆ ಸಿಲುಕಿದ ಇಂದಿನ ಜನರು ಉದ್ಗ್ರಂಥಗಳನ್ನು,ಮಹಾನ್ ಕೃತಿಗಳನ್ನು ಓದುವುದಿಲ್ಲ.ಆಡಿಯೋ- ವಿಡಿಯೋಗಳ ಮೂಲಕ ಕಲಿಯುವ ಈಗಿನ ನೂತನ ಕಲಿಕಾ ವಿಧಾನವಂತೂ ಆಶ್ಚರ್ಯಕರವಾಗಿದೆ.ಶಿಕ್ಷಣ ಒಂದು ತಪಸ್ಸು.ಅದನ್ನು ಗುರುಮುಖೇನವೇ ಕಲಿಯಬೇಕು ಮತ್ತು ಜೀವನವಿಡೀ ವಿದ್ಯಾರ್ಥಿ ಎನ್ನುವ ಹಂಬಲದಿಂದ ಓದುತ್ತಿರಬೇಕು.ಸರ್ಟಿಫಿಕೇಟ್ ಪಡೆಯುವುದಕ್ಕಷ್ಟೇ ಓದಬಾರದು.ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಓದಬೇಕು.ವಿದ್ವಾಂಸರು,ಬುದ್ಧಿವಂತರು ಎನ್ನಿಸಿಕೊಳ್ಳಲು ಓದಬೇಕು.ಟಿ ವಿ ಯ ಮುಂದೆ ಕುಳಿತುಕೊಂಡು ವ್ಯರ್ಥಕಾಲಹರಣ ಮಾಡುವುದಕ್ಕಿಂತ ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡಿರಬೇಕು.ಕಾಡುಹರಟೆಯಲ್ಲಿ ಹೊತ್ತುಕಳೆಯುವುದಕ್ಕಿಂತ ಪುಸ್ತಕದ ಅಧ್ಯಯನದಲ್ಲಿ ಆನಂದವನ್ನು ಅನುಭವಿಸಬೇಕು.ಎಲ್ಲರೂ ಹುಟ್ಟುತ್ತಾರೆ,ಸಾಯುತ್ತಾರೆ.ಅದೇನು ದೊಡ್ಡದಲ್ಲ.ಎಲ್ಲರಂತೆ ಹುಟ್ಟಿ ಸಾಯದೆ ಏನನ್ನಾದರೂ ಮಹತ್ವವಾದದ್ದನ್ನು ಸಾಧಿಸಬೇಕು,ಸತ್ತಬಳಿಕವೂ ಹೆಸರು ಉಳಿಯಬೇಕು ಎಂದು ಅಪೇಕ್ಷಿಸುವವರು ಪುಸ್ತಕಗಳನ್ನು ಓದಬೇಕು,ಪುಸ್ತಕಗಳ ಸಹವಾಸದಲ್ಲಿರಬೇಕು.’ ವೇದವನ್ನು ಓದಿ ಬ್ರಾಹ್ಮಣರೆನ್ನಿಸಿಕೊಳ್ಳುವ ಕಾಲ ಇತ್ತು ಹಿಂದೆ.ಇಂದು ಪುಸ್ತಕಗಳನ್ನು ಓದಿ, ವಿದ್ವಾಂಸರೆನ್ನಿಸಿಕೊಳ್ಳುವ ಕಾಲ.ಓದದೆ ಯಾರೂ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯವಿಲ್ಲ.ಓದದೆ ಯಾರೂ ಸಮಾಜದ ಮೇಲೆ ತಮ್ಮ ಪ್ರಭಾವ ಮುದ್ರೆಯನ್ನು ಒತ್ತಲಾಗದು.ರಾಜಕಾರಣದಲ್ಲೂ ಸಹ ಓದಿದ ರಾಜಕೀಯ ಪಟುಗಳೆದುರು ಓದುವ ಅಭ್ಯಾಸವಿಲ್ಲದವರು ಕೈಕಟ್ಟಿ ಕುಳಿತು ನಿಷ್ಣಾತ ರಾಜಕಾರಣಿಗಳ ಭಾಷಣ ಕೇಳುವ ಅನಿವಾರ್ಯತೆ.ರಾಜಕಾರಣಕ್ಕೆ ಶೈಕ್ಷಣಿಕ ಅರ್ಹತೆಯೇ ಇಲ್ಲ ಎನ್ನುವಾಗ ಓದುವುದು ಎಲ್ಲಿ? ಹಾಗಾಗಿಯೇ ಇಂದಿನ ಬಹುತೇಕ ರಾಜಕಾರಣಿಗಳು ಅವರ ಪಿ ಎಗಳು,ಅಧಿಕಾರಿಗಳು ಬರೆದುಕೊಟ್ಟದ್ದನ್ನು ಓದುವ,ತೋರಿಸಿದಲ್ಲಿ ಸಹಿ ಮಾಡುವ ರಾಜಕೀಯ ಪಟುಗಳಾಗಿದ್ದಾರೆ.ಪ್ರತಿಯೊಬ್ಬ ರಾಜಾರಣಿಯೂ ಭಾರತದ ಸಂವಿಧಾನವನ್ನು ಓದಬೇಕು.ಸರ್ಕಾರದ ಆಡಳಿತ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಬೇಕು.ಶಾಸನ ರೂಪಿಸುವ ವಿಧಿ- ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು.ತಮ್ಮ ಕ್ಷೇತ್ರಕ್ಕೆ ಅನುಕೂಲವಾಗುವ ಮತ್ತು ರಾಜ್ಯದ ಅಭಿವೃದ್ಧಿಗೆ ಸಹಾಯಕವಾಗುವ ಯೋಜನೆಗಳನ್ನು ರೂಪಿಸುವುದನ್ನು ರೂಢಿಸಿಕೊಳ್ಳಬೇಕು.ಪುಸ್ತಕಗಳನ್ನು ಓದುವ ಅಭ್ಯಾಸ ಇದ್ದರೆ ಇದೇನು ಕಷ್ಟದ ಕೆಲಸವಲ್ಲ.

ಓದುವುದರಲ್ಲಿ ಇರುವ ಆನಂದ ಮತ್ತಾವುದರಲ್ಲಿಯೂ ಇಲ್ಲ.ಆದರೆ ನಿಜವಾದ ಆನಂದ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳದ ಇಂದಿನ ಸಮಾಜ ಯಾವ ಯಾವುದರಲ್ಲೋ ಸಂತೋಷ ಕಾಣುತ್ತಿದೆ.ಏನಾದರಾಗಲಿ ಒಂದಂತೂ ಸತ್ಯ,ಓದುವ ಹವ್ಯಾಸ ಉಳ್ಳವರೇ ಯಶಸ್ವೀವ್ಯಕ್ತಿಗಳಾಗುತ್ತಾರೆ,ಮಹಾನ್ ಕಾರ್ಯಗಳನ್ನು ಸಾಧಿಸುತ್ತಾರೆ.

ಮುಕ್ಕಣ್ಣ ಕರಿಗಾರ
ಮೊ: 94808 79501

13.12.2021