ಬಸವ ದರ್ಶನ ಮಾಲಿಕೆ ೦೪ : ನುಡಿಯೊಳಡಗಿವೆ ಸ್ವರ್ಗ- ನರಕಗಳು ! -ಮುಕ್ಕಣ್ಣ ಕರಿಗಾರ

 

ನುಡಿಯೊಳಡಗಿವೆ ಸ್ವರ್ಗ- ನರಕಗಳು !

       ಲೇಖಕರು: ಮುಕ್ಕಣ್ಣ ಕರಿಗಾರ

ಪುಣ್ಯ ಪಾಪವೆಂಬವು ತಮ್ಮಿಷ್ಟ ಕಂಡಿರೇ ;
‘ ಅಯ್ಯಾ’ ಎಂದಡೆ ಸ್ವರ್ಗ; ‘ ಎಲವೋ’ ಎಂದರೆ ನರಕ!
‘ ದೇವಾ,ಭಕ್ತ ಜಯಾ,ಜೀಯಾ’ ಎಂಬ ನುಡಿಯೊಳಗೆ
ಕೈಲಾಸವಿದ್ದುದೇ ಕೂಡಲ ಸಂಗಮದೇವಾ.

ಬಸವಣ್ಣನವರು ಸದುವಿನಯದ,ಸದ್ವರ್ತನೆಯ ಮಹಿಮಾತಿಶಯವನ್ನು ಬಣ್ಣಿಸಿದ್ದಾರೆ ಈ ವಚನದಲ್ಲಿ.ಪಾಪ – ಪುಣ್ಯಗಳು ,ಸ್ವರ್ಗ- ನರಕಗಳು ನಮ್ಮ ನಡೆ- ನುಡಿಗಳಲ್ಲಿ ಅಡಗಿವೆ.ಸದ್ಭಾಷೆಯಿಂದ ಸ್ವರ್ಗವಾದರೆ ದುರ್ಭಾಷೆಯಿಂದ ನರಕ.ನುಡಿಯಲ್ಲಿ ವಿನಯತುಂಬಿದ್ದರೆ,ನಡೆಯಲ್ಲಿ ಸೌಶೀಲ್ಯವಿದ್ದರೆ ಅದುವೆ ಕೈಲಾಸ ಎನ್ನುತ್ತಾರೆ ಬಸವಣ್ಣನವರು.

ಪುಣ್ಯ – ಪಾಪಗಳ ಚಿಂತನೆಯಲ್ಲಿ ಚಿಂತಿತವಾಗಿದೆ ಲೋಕ.ಆದರೆ ಪುಣ್ಯವಾವುದು,ಪಾಪ ಯಾವುದು ಎಂಬುದನ್ನರಿಯದಾಗಿದ್ದಾರೆ ಜನರು.ಪುರಾಣಗಳು,ಶಾಸ್ತ್ರಗಳು,ಸ್ಮೃತಿಗಳು ಸಾರುವ ಕಾಲ್ಪನಿಕ ಪುಣ್ಯ ಪಾಪಗಳ ಭೀತಿಯಲ್ಲಿ ತತ್ತರಿಸಿದೆ ಜಗತ್ತು.ಶಾಸ್ತ್ರಗಳು ಇಂತಹ ಕಾರ್ಯ ಮಾಡಿದರೆ ಪುಣ್ಯ ,ಇಂತಹ ಕಾರ್ಯ ಮಾಡಿದರೆ ಪಾಪ ಎನ್ನುವ ಕಾಲ್ಪನಿಕ ಸಂಗತಿಗಳನ್ನು ವೈಭವೀಕರಿಸಿ ಮನುಷ್ಯತ್ವವನ್ನು ಅಲ್ಲಗಳೆದಿವೆ.ವ್ಯಕ್ತಿಪೂಜೆ,ಪಟ್ಟಭದ್ರರ ಹಿತಾಸಕ್ತಿಗಳನ್ನು ಪೊರಯಲಾಗಿದೆ ಪುಣ್ಯದ ಹೆಸರಿನಲ್ಲಿ.ಮೇಲ್ವರ್ಗದವರ ಸೇವೆ- ಶುಶ್ರೂಷೆಗಳನ್ನು ಮಾಡದ ಕೆಳವರ್ಗದವರು ಪಾಪ ಪೀಡಿತರಾಗಿ ನರಕ ಸೇರುತ್ತಾರೆ,ಅದರಲ್ಲೂ ಅತಿ ಭಯಾನಕ ರೌರವ ನರಕ ಸೇರುತ್ತಾರೆ ಹಾಗೆ ಹೀಗೆ ಚಿತ್ರಿಸಲಾಗಿದೆ.ಇಂತಹ ಅತಾರ್ಕಿಕ ಸಂಗತಿಗಳನ್ನು ಅಲ್ಲಗಳೆಯುವ ಬಸವಣ್ಣನವರು ಪುಣ್ಯ ಪಾಪಗಳೆಂಬವು ನಮ್ಮ ಇಷ್ಟದಂತೆ ಅಂದರೆ ನಾವು ಹೇಗೆ ಬದುಕುತ್ತೇವೆಯೋ ಹಾಗೆ ನಿರ್ಧಾರವಾಗುತ್ತವೆ ಪುಣ್ಯ ಪಾಪಗಳು.’ ಅಯ್ಯಾ’ ಎಂದರೆ ಸ್ವರ್ಗ ಸಿಕ್ಕರೆ ‘ ಎಲವೋ’ ಎಂದರೆ ನರಕ ಎನ್ನುವ ಮೂಲಕ ಸುಸಂಸ್ಕೃತ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.ಸುಸಂಸ್ಕೃತ ವ್ಯಕ್ತಿತ್ವವು ಸ್ವರ್ಗದ ಸಾಧನವಾದರೆ ಅನಾಗರಿಕ ವರ್ತನೆಯು ನರಕದ ಹಾದಿ.

‘ ಅಯ್ಯಾ ‘ಎಂದರೆ ಸ್ವರ್ಗ ಎನ್ನುವ ಬಸವಣ್ಣನವರು ನಯ ವಿನಯಗುಣವು ವ್ಯಕ್ತಿಯ ಉನ್ನತಿಯ ಕಾರಣವಾಗುತ್ತದೆ ಎನ್ನುತ್ತಾರೆ.ಸ್ವರ್ಗ ನರಕಗಳಿಗೆ ಸಾಧನವಾಗುವುದು ನಮ್ಮ ನಾಲಗೆಯೆ! ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ವಿನಯಪೂರ್ವಕ ಮಾತುಗಳನ್ನಾಡಿದರೆ ಸ್ವರ್ಗ ಕರಸುಲಭ.ನಾಲಗೆಯನ್ನು ಹರಿಯಬಿಟ್ಟು,ನಿಯಂತ್ರಣ ತಪ್ಪಿದ ನಾಲಗೆಯಿಂದ ಆಡಬಾರದ್ದನ್ನೆಲ್ಲ ಆಡುವುದು ನರಕದ ಮೂಲವಾಗುತ್ತದೆ.’ಅಯ್ಯಾ’ ಎಂದು ಸಂಬೋಧಿಸುವ ಮೂಲಕ ಸರ್ವರ ಅಂತರ್ಗತ ಆತ್ಮಚೈತನ್ಯವನ್ನು ಗೌರವಿಸಿದಂತಾಗುತ್ತದೆ.’ ಎಲವೋ’ ಎನ್ನುವುದು ದುರಂಹಕಾರದ,ದರ್ಪದ ಮಾತು ಎನ್ನಿಸಿಕೊಳ್ಳುತ್ತದೆ.’ಅಯ್ಯಾ’ ಎಂದು ಸಂಬೋಧಿಸುವುದು ದೇವತೆಗಳ ಲಕ್ಷಣವಾದರೆ ‘ ಎಲವೋ’ ಎಂದು ಸಂಬೋಧಿಸುವುದು ರಾಕ್ಷಸರ ಸ್ವಭಾವ.ರಾಕ್ಷಸ ಸ್ವಭಾವದ ಜನರಿಗೆ ಶೀಲ,ಸಂಸ್ಕೃತಿ,ಸೌಜನ್ಯಗಳ ಅರಿವು ಇರುವುದಿಲ್ಲ.ಬೊಗಳುವುದೇ ದೊಡ್ಡಸ್ತಿಕೆ ಎಂದು ಭ್ರಮಿಸಿರುತ್ತಾರೆ ಕ್ಷುದ್ರಜೀವಿಗಳು.ಬೊಗಳಿ ದೊಡ್ಡವರಾಗುವುದಿಲ್ಲ ಇತರರನ್ನು ಗೌರವಿಸುವ ಮೂಲಕ ದೊಡ್ಡವರಾಗುತ್ತೇವೆ.ಆದರೆ ಅಲ್ಪಮತಿಗಳಾದ ಜನರಿಗೆ ಅಧಿಕಾರ,ಅಂತಸ್ತು- ಉನ್ನತಿಕೆಗಳು ದೊರೆತರೆ ಅವರು ತಮ್ಮ ಹುಟ್ಟುಸಹಜ ರಕ್ಕಸ ಗುಣದಿಂದ ಒರಟಾಗಿ ಮಾತನಾಡುವುದು,ಇತರರನ್ನು ಹೀಯಾಳಿಸುವುದು,ಕತ್ತೆಯಂತೆ ಅರಚುವುದು ಇವೇ ಮೊದಲಾದ ಅನಾಗರಿಕ ವರ್ತನೆ ಪ್ರದರ್ಶಿಸುತ್ತಾರೆ.ಸುಸಂಸ್ಕೃತ ಹಿನ್ನೆಲೆಯಿಂದ ಬಂದ ವ್ಯಕ್ತಿಗಳು ಎಷ್ಟೇ ಉನ್ನತಾಧಿಕಾರ ಒದಗಿ ಬಂದರೂ ನಯ ವಿನಯದಿಂದ ವರ್ತಿಸುತ್ತಾರೆ,ಇತರರನ್ನು ಗೌರವಪೂರ್ವಕವಾಗಿ ಕಾಣುತ್ತಾರೆ.

ಈ ವಚನದಲ್ಲಿ ಬಸವಣ್ಣನವರು ಸ್ವರ್ಗ ನರಕಗಳ ಪಾರಂಪರಿಕ ನಂಬಿಕೆಯನ್ನು ಅಲ್ಲಗಳೆದಿದ್ದಾರೆ.ಸ್ವರ್ಗವು ಪುಣ್ಯಾತ್ಮರ ಸ್ಥಾನವಾಗಿದ್ದು ಇಂದ್ರನು ಅದರ ಅಧಿಪತಿ.ಅಂತಹ ಇಂದ್ರಪದವಿಯನ್ನು ಪಡೆಯಬೇಕಾದರೆ ‘ ಶತಕ್ರತು’ ಗಳಾಗಬೇಕು ಅಂದರೆ ನೂರು ಯಜ್ಞಗಳನ್ನಾಚರಿಸಬೇಕು.ಒಂದು ಯಜ್ಞ ಮಾಡುವುದೆಂದರೆ ಯಜ್ಞಾನುಷ್ಠಾನ ಬದ್ಧ ಅರಸ ಶತ್ರುಗಳ ಮೇಲೆ ಯುದ್ಧ ಹೂಡುವುದು,ಅವರ ಸೈನಿಕರನ್ನು ಕೊಂದು ಆ ರಾಜ್ಯವನ್ನು ಲೂಟಿ ಮಾಡಿ ಅಲ್ಲಿಯ ಸಂಪತ್ತನ್ನು‌ ಕೊಳ್ಳೆ ಹೊಡೆದು ತಂದು ಅದನ್ನು ಯಜ್ಞದಲ್ಲಿ ಹವಿಸ್ಸಿನಲ್ಲಿ ರೂಪದಲ್ಲಿ ಸುರಿಯುವುದು! ಋತ್ವಿಜರು ಸೇರಿದಂತೆ ಯಜ್ಞಕಾರ್ಯ ನಿರತ ಬ್ರಾಹ್ಮಣರಿಗೆ,ಯಜ್ಞದ ಕಾರಣದಿಂದ ದೂರದೂರುಗಳಿಂದ ಬಂದ ಬ್ರಾಹ್ಮಣರಿಗೆ ಯಥೇಚ್ಛ ದಾನ ನೀಡುವುದು! ಅಲ್ಲಿ ಕೊಳ್ಳೆ ಹೊಡೆದು ತಂದುದನ್ನು ಇಲ್ಲಿ ದಾನಮಾಡಿ ಪುಣ್ಯ ಸಂಪಾದಿಸಿಕೊಳ್ಳುವುದು! ಎಂತಹ ಅವಿವೇಕ! ಎಂತಹ ಮೂರ್ಖತನ !ಯಜ್ಞಕ್ಕೋಸ್ಕರ ಯುದ್ಧಸಾರಿ ತಮ್ಮ ಸೈನ್ಯದ ಸೈನಿಕರು,ಶತ್ರುಸೇನೆಯ ಸೈನಿಕರುಗಳ ಜೀವಹರಣ ಮಾಡಿ,ಅವರ ಹೆಂಡಿರು ಮಕ್ಕಳ ದುಃಖ,ಆಕ್ರಂದನಗಳಿಗೆ ಕಾರಣರಾಗಿದ್ದಲ್ಲದೆ ಶತ್ರುರಾಜ್ಯವನ್ನು ಲೂಟಿ ಹೊಡೆದು,ಮನೆಮಾರುಗಳನ್ನು ಕೊಳ್ಳೆಹೊಡೆಯುವ ರಕ್ಕಸಿಸ್ವಭಾವದ ಅರಸುಗಳಿಗೆ ಯಜ್ಞ ಮಾಡುವುದರಿಂದ ಸ್ವರ್ಗಪ್ರಾಪ್ತಿಯಂತೆ! ಬ್ರಾಹ್ಮಣರಿಗೆ ಯಥೇಚ್ಛ ದಾನ ಮಾಡುವುದರಿಂದ ಪಾಪ ಮುಕ್ತರಾಗುತ್ತಿದ್ದರಂತೆ! ಒಂದು ಯಜ್ಞದ ಹಿಂಸೆ ಇಷ್ಟಾಗಿರಬೇಕಿದ್ದರೆ ನೂರು ಯಜ್ಞಗಳನ್ನು ಕೈಗೊಂಡ ಮಹಾಪುಣ್ಯಾತ್ಮ ಅರಸ ಎಷ್ಟು ಲಕ್ಷ ಜನರ ಆಕ್ರಂದನಕ್ಕೆ ಕಾರಣನಾಗಿರಲಿಕ್ಕಿಲ್ಲ? ಎಷ್ಟು ಸಹಸ್ರ ಸೈನಿಕರ ಕೊಲೆ ಮಾಡಿಸಿರಲಿಕ್ಕಿಲ್ಲ? ಕೊಂದ ಪಾಪ ಎಂದಿಗೂ ಅಳಿಯುವುದಿಲ್ಲ ಎಂದರಿಯದ ಮಂದಮತಿ ಅರಸರುಗಳು ಯಜ್ಞದ ಹೆಸರಿನಲ್ಲಿ ಅವಿವೇಕಪ್ರದರ್ಶಿಸುತ್ತಿದ್ದರು.ಯಜ್ಞದಿಂದ ಮೂರ್ಖ ಅರಸರ ಪ್ರತಿಷ್ಠೆ ಹೆಚ್ಚುತ್ತಿತ್ತು; ಬುದ್ಧಿವಂತ ಬ್ರಾಹ್ಮಣರ ಹೊಟ್ಟೆ ತುಂಬುತ್ತಿತ್ತು. ಇದರ ಆಚೆಗೆ ಯಾವ ಸ್ವರ್ಗವೂ ಲಭಿಸುತ್ತಿರಲಿಲ್ಲ.ಸಾವಿರಾರು ಸೈನಿಕರುಗಳನ್ನು ಕೊಂದು,ಅವರ ಕುಟುಂಬಗಳ ಆಕ್ರಂದನಕ್ಕೆ ಕಾರಣರಾದ ಪಾಪದ ಫಲವಾಗಿ ಯಜ್ಞಗಳನ್ನು ಕೈಗೊಂಡ ಅರಸರು ಶಾಶ್ವತವಾಗಿ ರೌರವ ನರಕ ಸೇರುತ್ತಿದ್ದರು!.ಯಜ್ಞದಿಂದ ಸ್ವರ್ಗ ಎನ್ನುವ ಅವಿವೇಕವನ್ನು ಅಲ್ಲಗಳೆದು ಬಸವಣ್ಣನವರು ನಮ್ಮ ಸದುವಿನಯವೇ ಸ್ವರ್ಗದ ಕಾರಣ ಎನ್ನುವುದನ್ನು ಸಾರಿದರು.

ಸರ್ವರಲ್ಲಿಯೂ ಶಿವನಿದ್ದಾನೆ ಎಂದರಿತು ಅಯ್ಯಾ,ದೇವಾ,ಜಿಯಾ ಎನ್ನುವ ವಿನಯಭಾವದಿಂದ ವರ್ತಿಸಿದರೆ ಆ ಸದುವಿನಯದ ವರ್ತನೆಯಿಂದಾಗಿ ಕೈಲಾಸ ಲಭಿಸುತ್ತದೆ ಎನ್ನುವ ಬಸವಣ್ಣನವರು ಈ ವಚನದಲ್ಲಿ ಸಂಸ್ಕೃತಿಯ,ಸಂಸ್ಕಾರದ ಮಹತ್ವವನ್ನು ಪ್ರತಿಪಾದಿಸಿದ್ದಾರೆ.

ಮುಕ್ಕಣ್ಣ ಕರಿಗಾರ
ಮೊ; 94808 79501

12.12.2021