ಗಜಲ್
*ಮಂಡಲಗಿರಿ ಪ್ರಸನ್ನ
ಸುಂದರ ಮುಂಜಾವಿಗೆ ಬರೆಯಲಿಹುದು ಮುನ್ನುಡಿ
ಚೆಂಬೆಳಗಿನ ಹೊಂಗಿರಣದ ಭರವಸೆಯ ಹೊನ್ನುಡಿ
ನಮ್ಮತನವ ತಿಳಿಯಲೆಂದೆ ಮೈಯ ತುಂಬ ಕಣ್ಣು
ತಿರುತಿರುಗಿ ಆಗಾಗ ಅರಿತು ಮೂಡಲಿದೆ ಬೆನ್ನುಡಿ
ಸಂವತ್ಸರ ಹರಿದು ಸುರಿದು ಹೊಸಬೆಳಕು ಹಾಡಲಿ
ಮಿನುಗಲಿದೆ ನಾಳೆ ಹೊಸತು ನವ ನವೀನ ಚೆನ್ನುಡಿ
ಮಾಡಿದಂಥ ಹೆಮ್ಮೆ ಕೆಲಸ ನಮ್ಮೆದೆಗೆ ಉಳಿಯಲಿ
ನೋಡಿಕೊಳಲು ಮತ್ತೇತಕೆ ಬೇಕು ಬೇರೆ ಕನ್ನಡಿ
ಜಗದ ದೃಷ್ಟಿಕೋನ ಏನೆ ಇರಲಿ ನಮ್ಮ ನಡೆ ನಮಗೆ
ಪ್ರತಿಮಾತಲಿ ಇಣುಕಲಿ ಮರೆಯದಂಥ ಸೂಳ್ನುಡಿ
ಹುಟ್ಟು ಸಾವ ನಡುವೆ ಪಯಣ ನಿಲ್ಲದಂಥ ಜೀವನ
ಗಿರಿ ಕಂದರ ಸಾಗಿ ಹರಿಯಲಿ ಸವಿಜೇನಿನ ನಲ್ನುಡಿ

ಮೊ:9449140580