ಕ್ರಾಂತಿಕಾರಿ ಶರಣರು ಭಾಗ-೦೨: ಶರಣ ಹೆಂಡದ ಮಾರಯ್ಯ-ಲೋಕೇಶ್ ಎನ್.ಮಾನ್ವಿ

ಕ್ರಾಂತಿಕಾರಿ ಶರಣರು ಭಾಗ-೦೨: ಶರಣ ಹೆಂಡದ ಮಾರಯ್ಯ

ಲೇಖಕರು: ಲೋಕೇಶ್ ಎನ್.ಮಾನ್ವಿ

೯೦೦ವರ್ಷಗಳ ಹಿಂದೆಯೇ ಮದ್ಯಪಾನ ಮುಕ್ತ ಸಮಾಜ ನಿರ್ಮಿಸಿದ್ದ ಶರಣರು.
’ಮುಳ್ಳನ್ನು ಮುಳ್ಳಿಂದಲೇ ತಗೆದು ಮದ್ಯಪಾನ ಮುಕ್ತ ಸಮಾಜ ನಿರ್ಮಿಸಿದ್ದ ಶರಣ ಹೆಂಡದ ಮಾರಯ್ಯನವರು’

ಶರಣ ಹೆಂಡದ ಮಾರಯ್ಯನವರು
ಬಸವಣ್ಣನವರ ಸಮಕಾಲೀನರು. ಇವರ ಅಂಕಿತನಾಮ *ಧರ್ಮೇಶ್ವರಲಿಂಗ’*
ಪೂರ್ವಾಶ್ರಮದ ಕಾಯಕ- ಹೆಂಡ ಮಾರುವುದು…
ಆಮೇಲೆ ಶರಣರಾಗಿ ಬದಲಾದ ನಂತರ ಹೆಂಡ (ಮದ್ಯಪಾನ) ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಪರಿವರ್ತಿಸುವುದಾಗಿತ್ತು ಇವರ ಮಹತ್ ಕಾರ್ಯಗಿತ್ತು…
ಮೂಲತ: ಪೂರ್ವಶ್ರಮದಲ್ಲಿ ಇವರು ಹೆಂಡ ಮಾರುವ ಕಾಯಕದವರಾಗಿದ್ದರು.
ಅಣ್ಣ ಬಸವಣ್ಣನವರು ಕಲ್ಯಾಣಕ್ಕೆ ಬಂದಾಗ
ಬಸವಣ್ಣನವರ ಉದಾತ್ತ ತತ್ವ ವಿಚಾರಗಳಿಗೆ ಮಾರು ಹೋಗಿ ಶರಣರಾಗಿ ಮಾರ್ಪಟ್ಟರು.
‘ಧರ್ಮೇಶ್ವರಲಿಂಗ’ ಅಂಕಿತನಾಮದಲ್ಲಿ ಇವರ ೧೨ ವಚನಗಳು ಲಭ್ಯವಿವೆ.
ಇವರು ತಮ್ಮ ವೃತ್ತಿಪರಿಭಾಷೆಯನ್ನು ಅಳವಡಿಸಿಕೊಂಡು ಅದೇ ಶೈಲಿಯಲ್ಲಿ ಅನುಭಾವವನ್ನು ಹಂಚಿದ ಹೆಂಡದ ಮಾರಯ್ಯನವರು ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳು ಮತ್ತು
ದಯೆ ಕರುಣೆ ಪ್ರೀತಿ ಮಾನವೀಯ ಗುಣಗಳನ್ನು ಒಪ್ಪಿ ಅಪ್ಪಿ ಮನಸೋತ ‘ಹೆಂಡದ ಮಾರಯ್ಯ’ ಶರಣನಾಗಿ ಬದಲಾದರು…
ಆಗ ಹೆಂಡ ಮಾರಾಟ ಮಾಡುವ ಕುಲಕಸುಬನ್ನು ಬಿಡಬೇಕೆಂದು ತೀರ್ಮಾನಿಸಿದರು. ಆದರೆ ನಾನು ಮಾರದಿದ್ದರೆ ಬೇರೆ ಕಡೆ ಹೋಗಿ ಕುಡಿಯಬಹುದು ಎಂದು ಅರಿತ ಅವರು. ಮೊದಲು ಹೆಂಡವನ್ನು ಕುಡಿಯಲು ಬರುವವರ ಮನಃ ಪರಿವರ್ತಿಸಬೇಕೆಂದು ತೀರ್ಮಾನಿಸಿ ಒಂದು ಲೋಟ ಹೆಂಡ ಕುಡಿಯುವವರಿಗೆ ಅರ್ಧ ಲೋಟ ನೀಡುವುದು.
ಅರ್ಧ ಲೋಟ ಕುಡಿಯುವವರಿಗೆ ಕಾಲು ಲೋಟ ಹೆಂಡ ನೀಡುತ್ತಾ..
ಹೆಂಡದ ಪಕ್ಕದಲ್ಲೇ ಉಚಿತವಾಗಿ ನೀರಿನ ಅರವಟ್ಟಿಗೆ ಮಜ್ಜಿಗೆ ಕಬ್ಬಿನಹಾಲನ್ನಿಟ್ಟು ಅದರೊಂದಿನ ತಮ್ಮದೇ ಶೈಲಿಯಲ್ಲಿ
’ಅರಿತುಕೊಂಡಲ್ಲಿ ಸುಧೆ ಮರೆತು ಕೊಂಡಲ್ಲಿ ಸುರೆ’ ಎಂಬುದಾಗಿ ತಮ್ಮ ವಚನದ ಸಾಲುಗಳಲ್ಲಿ ಪ್ರತಿಪಾದಿಸಿ
ಕುಡಿತದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸುತ್ತಾ .. ತಿಳಿಸುತ್ತಾ…
ಹಾಗೇ ಬಸವಣ್ಣನವರ ತತ್ವಗಳ ಬಗ್ಗೆ ಅರಿವು ಮೂಡಿಸಿದರು. ಕುಡಿಯಲು ಬರುತ್ತಿದ್ದ ವ್ಯಸನಿಗಳನ್ನೆಲ್ಲಾ ಆ ವ್ಯಸನದಿಂದ ಮುಕ್ತರನ್ನಾಗಿಸಿ ಅವರ ಮನಃ ಪರಿವರ್ತಿಸಿದರು…

ಹೆಂಗ ಮನಃ ಪರಿವರ್ತಿಸಿದೆ ಎಂಬ ಕುರಿತು ಈ ವಚನದಲ್ಲಿ ಹಂಚಿಕೊಂಡಿದ್ದಾರೆ ನೋಡೋಣ ಬನ್ನಿ…

ನಾ ಮಾರ ಬಂದ ಸುರೆಯ ಕೊಂಬವರಾರೂ ಇಲ್ಲ.
ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ.
ಉಂಡು ದಣಿದು, ಕಂಡು ದಣಿದು, ಸಂದೇಹ ಬಿಟ್ಟು ದಣಿದು. ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ ಆನಂದವೆಂಬುದ ಆಲಿಂಗನವಂ ಮಾಡಿ
ಕಂಗಳಂ ಮುಚ್ಚಿ ಮತ್ತಮಾ ಕಂಗಳಂ ತೆರೆದು ನೋಡಲಾಗಿ ಧರ್ಮೇಶ್ವರ ಲಿಂಗವು ಕಾಣ ಬಂದಿತ್ತು!

ಮದ್ಯಪಾನ ಮಾಡಿದಾಗ ಆಗುವ ಅನುಭವಗಳನ್ನು
ಅವರು ಅದೇ ಶೈಲಿಯಲ್ಲಿ ತಮ್ಮ ವಚನದ ಮುಖೇನ ತಿಳಿಹೇಳಿದ್ದಾರೆ…

ಸಾಮಾನ್ಯರಿಗೂ ಅರ್ಥ ಆಗೋ ತರ ಇಲ್ಲಿ ತಿಳಿಸ್ತಾರೆ.
ವ್ಯಸನದ ಹೆಂಡ ಕುಡಿದಾಗ ಆಗುವ ಅನುಭವ ಮತ್ತು ತೃಪ್ತಿ ಸಿಗುವ ನೆಮ್ಮದಿಯು ಕ್ಷಣಿಕವಾದದ್ದು. ಆದರೆ ಅದೇ ಬಸವಾದಿ ಶರಣರ ಅನುಭಾವವೆಂಬ ಅಮೃತವನ್ನು ಸವಿದಾಗ ಆಗುವ ಆನಂದ ಇದೆಯಲ್ಲಾ ಅದು ಭಾಹ್ಯದ ಹೊಟ್ಟೆ ತುಂಬಿದಾಗ ಆಗುವ ಆನಂದವಲ್ಲ.
ಅದು ‘ಮನದುಂಬಿದಾಗ ಆಗೊ ಮಹದಾನಂದ’

ಶರಣರ ಅನುಭಾವ ಇದೆಯಲ್ಲಾ ಅದು ಕ್ಷಣಿಕವಾದದ್ದಲ್ಲ.
ಘನತರವಾದ್ದು ಅದು ಶಿವಾನುಭಾವ…

ಸಭಿಸುವ ತೃಪ್ತಿ ಇದೆಯಲ್ಲಾ ಅದು ಯಾವುದಕ್ಕೂ ನಿಲುಕದ್ದು. ಪರಿಪೂರ್ಣಗೊಂಡ ಆತ್ಮತೃಪ್ತಿ.

ಅಂತರಂಗ ಶುದ್ದಿಯಿಂದ ಕಂಗಳಂ ಮುಚ್ಚಿ ಜ್ಞಾನವೆಂಬ ಕಣ್ಣನೇ ತೆರೆದು ನೋಡಲಾಗಿ
ಜೀವ ಜಗತ್ತು ಸೃಷ್ಟಿ ಸಮಷ್ಟಿಯಲ್ಲೂ ಭಗವಂತನೇ ತುಂಬಿಕೊಂಡಿದ್ದಾನೆ ಎಂಬ ಅನುಪಮ ಆನಂದದವನ್ನು ಮೇಲಿನ ವಚನದಲ್ಲಿ ಶರಣ ಮಾರಯ್ಯನವರು ಹೇಳಿದ್ದಾರೆ. ಮತ್ತೊಂದು ಪ್ರಕಾರ
ಇವರ ದೃಷ್ಟಿಯಲ್ಲಿ ಮಧ್ಯವೆಂದರೆ ಕೇವಲ ಹೆಂಡ, ವಿಸ್ಕಿ, ಸಾರಾಯಿಗಳಂತಹ ಮಾದಕ ಪದಾರ್ಥ ಮಾತ್ರವೇ ಅಲ್ಲ.
ಅತೀ ಆಸೆ,
ಅತೀ ವೈಭೋಗಗಳು, ಮನದ ಅಹಂಕಾರ,
ನನ್ನ ಜಾತಿ ಹೆಚ್ಚು-ನಿನ್ನ ಜಾತಿ ಹೆಚ್ಚು,
ನನ್ನ ಧರ್ಮ ಹೆಚ್ಚು,
ನಿನ್ನ ಧರ್ಮ ಕಡಿಮೆ, ಎಂಬ ಅಹಂ. ವಿದ್ಯೆ ಜ್ಞಾನ ರೂಪ ಲಾವಣ್ಯ ಜಾತಿ ಧರ್ಮವೆಂಬ ಅಹಂ ಮುಂತಾದವು ಕೂಡ ಹೆಚ್ಚಾದರೆ ಅಮಲುಗಳೇ ಆಗುತ್ತವೆ ಎನ್ನುತಾರೆ ಶರಣ ಮಾರಯ್ಯನವರು…

ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾಮದವಂ ಕೊಂಡು, ಅಹಂಕಾರವೆಂಬ ಮದ, ಸರ್ವಾಂಗ ವೇಧಿಸಿ ತಲೆಗೇರಿದಲ್ಲಿ, ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ,
ಆನಂದವೆಂಬ ಆಶ್ರಯವ ಭಾವಿಸಿ ನೋಡದೆ,
ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ ಕಾಣಲರಿಯದೆ, ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ, ದಿಂಡೆಯತನದಿಂದ ಕಂಡೆನೆಂದಡೆ, ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ, ಧರ್ಮೇಶ್ವರಲಿಂಗದ ಸಂಗವಲ್ಲಾಯೆಂದೆ.

ನಮ್ಮೊಳಗಿನ ಅಹಂಕಾರ, ಮದ, ಮತ್ಸರಾದಿ
ಕೆಟ್ಟ ಗುಣಗಳು ಕೂಡ ಹೆಂಡದಂತೆ ಅಮಲು ಏರಿಸುತ್ತವೆ ಎಂದು ಎಚ್ಚರಿಸುತ್ತಾ ಸಮಾಜವನ್ನು ದುಷ್ಚಟ ದುರ್ಗುಣ ದುರಾಚಾರದಿಂದ ಮುಕ್ತಗೊಳಿಸಲು ಶ್ರಮವಹಿಸಿದ ಮಾರಯ್ಯ ಶರಣರು.
‘ಒಬ್ಬ ಮಹಾನ್ ಜ್ಞಾನಿಯಾಗಿ’ ‘ಶಿವಶರಣರಾಗಿ’ ಕನ್ನಡ ನಾಡು ಕಂಡ ’ಜ್ಞಾನರತ್ನವಾಗಿ’ ಶರಣರ ಸಾಲಿನಲ್ಲಿ ಅಮರವಾಗಿ ಉಳಿದಿದ್ದಾರೆ ಶರಣ ಹೆಂಡದ ಮಾರಯ್ಯನವರು..👏🏻👏🏻

ಶರಣು ಶರಣಾರ್ಥಿಗಳೊಂದಿಗೆ,

ಲೋಕೇಶ್ ಎನ್ ಮಾನ್ವಿ
ಮೊ:9972536176