ಬಸವ ದರ್ಶನ-೦೩: ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’-ಮುಕ್ಕಣ್ಣ ಕರಿಗಾರ

ಬಸವ ದರ್ಶನ-೦೩

ಲೇಖಕರು: ಮುಕ್ಕಣ್ಣ ಕರಿಗಾರ

‘ ಆಚಾರವೇ ಸ್ವರ್ಗ,ಅನಾಚಾರವೇ ನರಕ’

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ,ಕಾಣಿಭೋ!
ಸತ್ಯವ ನುಡಿವುದೇ ದೇವಲೋಕ; ಮಿಥ್ಯವ ನುಡಿವುದೇ ಮರ್ತ್ಯಲೋಕ !
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲ ಸಂಗಮದೇವಾ,ನೀವೇ ಪ್ರಮಾಣು.

ಬಸವಣ್ಣನವರು ಈ ವಚನದಲ್ಲಿ ಸದಾಚಾರವು ಶಿವನೊಲುಮೆಯ ಸಾಧನ ಎಂದು ನಿರೂಪಿಸಿದ್ದಾರೆ.ದೇವಲೋಕ- ಮರ್ತ್ಯಲೋಕಗಳು ನಮ್ಮಿಂದ ಭಿನ್ನವಾಗಿ ಬಹುದೂರದ ಆಕಾಶದಲ್ಲಿರದೆ ನಮ್ಮೊಳಗೆ ಇವೆ; ನಮ್ಮ ವರ್ತನೆಯಲ್ಲಿಯೇ ದೇವಲೋಕ- ಮರ್ತ್ಯಲೋಕಗಳಿವೆ.ಸತ್ಯವನ್ನು ನುಡಿಯುವುದು ದೇವಲೋಕವಾದರೆ ಸುಳ್ಳನ್ನಾಡುವುದೇ ಮರ್ತ್ಯಲೋಕ ಎನ್ನುವ ಬಸವಣ್ಣನವರು ‘ ಆಚಾರವೇ ಸ್ವರ್ಗ,ಅನಾಚಾರವೇ ನರಕ’ ಎಂದು ಸ್ವರ್ಗ ನರಕಗಳು ನಮ್ಮ ವರ್ತನೆಯಿಂದಲೇ ಪ್ರಾಪ್ತವಾಗುವ ಸ್ಥಿತಿಗಳು ಎಂದಿದ್ದಾರೆ.ಸದ್ವರ್ತನೆಯಿಂದ ಸ್ವರ್ಗಪ್ರಾಪ್ತಿಯಾದರೆ ದುರ್ವತನೆಯಿಂದ ನರಕಪ್ರಾಪ್ತಿಯಾಗುತ್ತದೆ ಎನ್ನುವ ಮೂಲಕ ಬಸವಣ್ಣನವರು ಮನುಷ್ಯರು ಸದ್ವರ್ತನೆಯಿಂದಲೇ ಬದುಕಬೇಕು,ಪ್ರಾಣಿಸಹಜವಾದ ದುರ್ವತನೆಯು ಮನುಷ್ಯರಿಗೆ ಸಲ್ಲದು ಎನ್ನುವ ಸಂದೇಶ ನೀಡಿದ್ದಾರೆ ಈ ವಚನದಲ್ಲಿ.

ಮರ್ತ್ಯಲೋಕವು ಮಹಾದೇವನ ನೆಲೆಮನೆ ಮತ್ತು ಎಲ್ಲ ಲೋಕಗಳು ಇಲ್ಲಿಯೇ ಇವೆ ಎಂದು ಹಿಂದಿನ ಎರಡು ವಚನಗಳಲ್ಲಿ ಧರೆಯ ಮಹಿಮೆಯನ್ನರುಹಿದ ಬಸವಣ್ಣನವರು ಈ ವಚನದಲ್ಲಿ ಧರೆಯಲ್ಲಿ ಹಿರಿಮೆಗೆ ಪಾತ್ರರಾಗುವ ಬಗೆಯನ್ನು ವಿವರಿಸಿದ್ದಾರೆ.ಮನುಷ್ಯ ತನ್ನ ವಿಚಾರ ಮತ್ತು ವರ್ತನೆಗಳಿಂದ ಉನ್ನತಿ- ಅವನತಿಗಳನ್ನು ಹೊಂದುತ್ತಾನೆ.ಸದ್ವಿಚಾರ ಮತ್ತು ಸದಾಚಾರಗಳಿಂದ ಸಮಾಜದ ಗೌರವಾದರಗಳಿಗೆ ಪಾತ್ರನಾದರೆ ದುರ್ವಿಚಾರ ಮತ್ತು ದುರ್ವರ್ತನೆಗಳಿಂದ ಸಮಾಜದಿಂದ ತಿರಸ್ಕರಿಸಲ್ಪಡುತ್ತಾನೆ.

ದೇವತೆಗಳ ಆವಾಸವಾದ ಸ್ವರ್ಗಲೋಕ ನಮ್ಮಿಂದ ದೂರ ಎಲ್ಲಿಯೋ ಇಲ್ಲ.ನಾವು ಬದುಕುವ ಮರ್ತ್ಯದಲ್ಲಿಯೇ ದೇವಲೋಕವು ಇದೆ.ಸತ್ಯವನ್ನು ನುಡಿಯುವುದರಿಂದ ದೇವಲೋಕ ಪ್ರಾಪ್ತಿಯಾದರೆ ಸುಳ್ಳನ್ನಾಡುವುದರಿಂದ ಮರ್ತ್ಯಕ್ಕೆ ಸಿಲುಕುತ್ತೇವೆ ಎನ್ನುವ ಬಸವಣ್ಣನವರು ಸತ್ಯದ ಮಹತ್ವವನ್ನು ಪ್ರತಿಪಾದಿಸಿದ್ದಾರೆ.ಸತ್ಯವು ಮಹಾಮೌಲ್ಯ.ಸತ್ಯದ ಮೇಲೆಯೇ ವಿಶ್ವವು ನಿಂತಿದೆ.ಸೂರ್ಯ ಚಂದ್ರರು ಸತ್ಯದ ಬಲದಿಂದಲೇ ಜಗತ್ತಿಗೆ ಆಸರೆಯಾಗಿದ್ದಾರೆ.ಸತ್ಯದ ಸತ್ತ್ವದಿಂದಲೇ ಗಾಳಿ ಬೀಸುತ್ತಿದೆ.ಸತ್ಯದ ತತ್ತ್ವದಿಂದಲೇ ಮಳೆ ಬೀಳುತ್ತದೆ.ಸತ್ಯವೇ ಶಿವನು ಆದ್ದರಿಂದ‌ ಶಿವ ಭಕ್ತರು ಸತ್ಯಶೀಲರಾಗಿರಬೇಕು.ಹರಿಶ್ಚಂದ್ರ ರಾಜನ ಹೆಸರು ಅಜರಾಮರವಾಗಲು ಆತನ ಸತ್ಯನಿಷ್ಠೆಯೇ ಕಾರಣ.ವಿಶ್ವಾಮಿತ್ರನು ಒಡ್ಡಿದ ಎಂತೆಂತಹ ಕಷ್ಟಕರ ಪ್ರಸಂಗಗಳಲ್ಲಿಯೂ ಹರಿಶ್ಚಂದ್ರನು ತನ್ನ ಸತ್ಯನಿಷ್ಠೆಯನ್ನು ಮರೆಯಲಿಲ್ಲ.ಬಾರಿಬಾರಿಯು ವಿಶ್ವಾಮಿತ್ರನು ಅಸತ್ಯವನ್ನಾಡಿದರೆ ಮರಳಿ ಸಾಮ್ರಾಜ್ಯವನ್ನು ಕೊಡುವ ಆಮಿಷವನ್ನು ಒಡ್ಡಿದರೂ ಮಣಿಯಲಿಲ್ಲ.ಹರಿಶ್ಚಂದ್ರನ ಕಥೆ ಓದುತ್ತ ಹೋದಂತೆ ಓದುಗರೇ ಕಣ್ಣೀರಿಡುವ ಪ್ರಸಂಗಗಳು ಬರುತ್ತವೆ.ಓದುಗರಿಗೆ ಇಷ್ಟು ಕಷ್ಟ ಎನ್ನಿಸಬೇಕಾದರೆ ಓದುಗರಲ್ಲಿ ವಿಶ್ವಾಮಿತ್ರನ ಬಗ್ಗೆ ಸಿಟ್ಟು,ಆಕ್ರೋಶಗಳು ಬರುವಂತಾದರೆ ಸ್ವತಃ ಅನುಭವಿಸಿದ ಹರಿಶ್ಚಂದ್ರನ ಪಾಡು ಏನಾಗಿರಲಿಕ್ಕಿಲ್ಲ? ಹಂಸತೂಲಿಕಾತಲ್ಪದ ಮೇಲೆ ಕುಳಿತು ಆನಂದಿಸುತ್ತಿದ್ದವನು ಚಾಂಡಾಲ ವೀರಬಾಹುವಿನ ಸೇವೆಯಲ್ಲಿ ಸ್ಮಶಾನ ಕಾಯುತ್ತ ಕುಳಿತುಕೊಳ್ಳುವ ಸ್ಥಿತಿಗೆ ತಲುಪುತ್ತಾನೆ.ತನ್ನ ಹೆಂಡತಿಯನ್ನು ಬ್ರಾಹ್ಮಣನ ಮನೆಯ ಸೇವೆಗಿಡುತ್ತಾನೆ.ಸತ್ತ ಬಾಲಕ ತನ್ನ ಮಗ ಲೋಹಿತಾಶ್ವನೆಂದು ತಿಳಿದರೂ ಸ್ಮಶಾನಕಾಣಿಕೆ ಕೊಡದ ಹೊರತು ಅವನ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಚಂದ್ರಮತಿಗೆ ಹೇಳಿ ತನ್ನ ಸತ್ಯನಿಷ್ಠೆ,ಸ್ವಾಮಿನಿಷ್ಠೆಗಳನ್ನು ಮೆರೆಯುತ್ತಾನೆ.ಸತ್ಯದ ಈ ನಿಷ್ಠೆಯಿಂದಾಗಿ,ಎಂತಹದೆ ಕಷ್ಟದ ಪರಿಸ್ಥಿತಿಯಲ್ಲಿಯೂ ಸತ್ಯನಿಷ್ಠೆಗೆ ಚ್ಯುತಿ ಬಾರದಂತೆ ವರ್ತಿಸಿದ್ದರಿಂದಲೇ ಹರಿಶ್ಚಂದ್ರ ಸತ್ಯಕ್ಕೆ ಪರಮಾದರ್ಶನಾಗಿ,ಸತ್ಯದ ಪ್ರತೀಕವಾಗಿ ಅಮರನಾಗಿದ್ದಾನೆ.

ಸತ್ಯಸ್ವರೂಪನಾದ ಶಿವನು ಸತ್ಯಪ್ರಿಯನು,ಅನೃತವನ್ನೊಪ್ಪನು.’ ಸತ್ಯಂ ಶಿವಂ ಸುಂದರಂ’ ಎಂದು ಶಿವತತ್ತ್ವವನ್ನು ಸುಂದರವಾಗಿ ಸೂತ್ರೀಕರಿಸಲಾಗಿದೆ.ಸತ್ಯವೇ ಶಿವನು,ಶಿವನೇ ಸುಂದರನು.ಅಂದರೆ ಸತ್ಯವು ಶಿವಸ್ವರೂಪವಾದದ್ದು,ಆ ಸತ್ಯವೇ ಶಾಶ್ವತವಾದದ್ದು.ಶಿವನು ತನ್ನ ಭಕ್ತರ ಸತ್ಯನಿಷ್ಠೆಯನ್ನು ಪರೀಕ್ಷಿಸಿ ನೋಡುತ್ತಾನೆ.ಸತ್ಯನಿಷ್ಠೆಯನ್ನು ಬಿಡದೆ ಶಿವನಿಷ್ಠೆಯನ್ನು ಆಚರಿಸಿದ ಭಕ್ತರನ್ನು ಬಹುಬೇಗನೆ ಉದ್ಧರಿಸುತ್ತಾನೆ ಶಿವನು.

ವಚನದ ಮುಂದಿನ ಭಾಗದಲ್ಲಿ ಬಸವಣ್ಣನವರು ಸ್ವರ್ಗ- ನರಕಗಳಿಗೆ ಬಹುಮೌಲಿಕವಾದ ವ್ಯಾಖ್ಯೆ ನೀಡಿದ್ದಾರೆ–‘ ಆಚಾರವೇ ಸ್ವರ್ಗ,ಅನಾಚಾರವೇ ನರಕ’ ಎಂದು.ಇಲ್ಲಿ ಆಚಾರ ಎಂದರೆ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಕೆಲವರು ಆಚಾರ ಎಂದು ಮುಟ್ಟು- ಮೈಲಿಗೆ,ಸೂತಕ- ಪಾತಕ,ಮೇಲು – ಕೀಳು ಎಂದು ಭ್ರಮಿಸಿದ್ದಾರೆ.ಇದು ಅವರ ಭ್ರಮೆಯೇ ಹೊರತು ಸತ್ಯವಲ್ಲ.ಸತ್ಯವಿಲ್ಲದ ಈ ಆಚರಣೆಯೂ ಅನಾಚಾರವೆ! ಆಚಾರ ಎಂದರೆ ಉನ್ನತ ತತ್ತ್ವಾದರ್ಶಗಳು,ಮಾನವೀಯ ಮೌಲ್ಯಗಳು ಎಂದರ್ಥ.ನಯ- ವಿನಯ,ಸತ್ಯಪ್ರೇಮ,ವಂಚನೆ ಮಾಡದೆ ಇರುವುದು,ಪರಸತಿಯರಿಗೆ ಎಳಸದೆ ಇರುವುದು,ಪರದ್ರವ್ಯಕ್ಕೆ ಆಶಿಸದೆ ಇರುವುದು,ಇನ್ನೊಬ್ಬರನ್ನು ತುಳಿದು ಬೆಳೆಯಲು ಬಯಸದೆ ಇರುವುದು,ದೀನ ದುರ್ಬಲರಿಗೆ ನೆರವಾಗುವುದು,ಮಕ್ಕಳು ಮುದುಕರನ್ನು ಆದರಿಸುವುದು,ಮಹಿಳೆಯರನ್ನು ಗೌರವಿಸುವುದು,ತಂದೆ- ತಾಯಿ,ಗುರು- ಹಿರಿಯರ ಹಾರೈಕೆ ಮಾಡುವುದು,ಸಮಾಜದ ಜನರೊಂದಿಗೆ ಬಂಧುಭಾವದಿಂದ ವರ್ತಿಸುವುದು ಮತ್ತು ಸಮಷ್ಟಿ ಕಲ್ಯಾಣದಲ್ಲಿ ಆಸಕ್ತನಾಗಿರುವುದು ಈ ಎಲ್ಲ ಗುಣಮೌಲ್ಯಗಳೇ ಆಚಾರ.ಇದಕ್ಕೆ ವಿರುದ್ಧವಾಗಿ ವರ್ತಿಸುವುದೇ ಅನಾಚಾರ.ಸಮಾಜಕಂಟಕನಾಗಿ,ಪರಪೀಡಕನಾಗಿ,ಲೋಕಕಂಟಕನಾಗಿ ಬಾಳುವುದೇ ಅನಾಚಾರ.ಸದ್ಗುಣಗಳಿಂದ ,ಸದ್ವರ್ತನೆಯಿಂದ ಸ್ವರ್ಗವು ಲಭಿಸಿದರೆ ದುರಾಚಾರ,ದುರ್ನಡತೆಗಳಿಂದ ನರಕಸೇರುತ್ತಾರೆ ಎನ್ನುತ್ತಾರೆ ಬಸವಣ್ಣನವರು.ಮತ್ತು ಅದಕ್ಕೆ ಅಂದರೆ ಆಚಾರದಿಂದ ಸ್ವರ್ಗ,ಅನಾಚಾರದಿಂದ ನರಕ ಎನ್ನುವ ತಮ್ಮ ನುಡಿಗೆ ಶಿವನೇ ಸಾಕ್ಷಿ ಎನ್ನುತ್ತಾರೆ.ಅಂದರೆ ಶಿವನ ಸಾಕ್ಷಿಯಾಗಿಯೂ ಇದು ಸುಳ್ಳಲ್ಲ ಎಂದು ಬಸವಣ್ಣನವರು ವ್ಯಕ್ತಿಗಳ ಉನ್ನತಿಯಲ್ಲಿ,ಸಮಾಜದ ಅಭ್ಯುದಯದಲ್ಲಿ ಸತ್ಯದ,ಸದಾಚಾರದ ಮಹತ್ವವನ್ನು ಒತ್ತಿಹೇಳುತ್ತಾ ಅಸತ್ಯ ಮತ್ತು ಅನಾಚಾರದ ಬದುಕು ಬೇಡ ಎನ್ನುವ ಉಪದೇಶನೀಡಿದ್ದಾರೆ ಲೋಕಕ್ಕೆ,ಲೋಕಜೀವರುಗಳಿಗೆ.

ಮುಕ್ಕಣ್ಣ ಕರಿಗಾರ
ಮೊ: 94808 79501

11.12.2021