ಬಸವ ದರ್ಶನ ೦೨: ದೇವಲೋಕವಾದಿ ಎಲ್ಲ ಲೋಕಗಳು ಇಲ್ಲಿಯೆ ! -ಮುಕ್ಕಣ್ಣ ಕರಿಗಾರ

೦೨

ಬಸವ ದರ್ಶನ

ಲೇಖಕರು: ಮುಕ್ಕಣ್ಣ ಕರಿಗಾರ

ದೇವಲೋಕವಾದಿ ಎಲ್ಲ ಲೋಕಗಳು ಇಲ್ಲಿಯೆ !

ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?

ಈ ಲೋಕದೊಳಗೇ ಮತ್ತೆ ಅನಂತ ಲೋಕ !
ಶಿವಲೋಕ ಶಿವಾಚಾರವಯ್ಯಾ ;
ಭಕ್ತನಿರ್ದ ಟಾವೇ ದೇವಲೋಕ;
ಭಕ್ತನಂಗಣವೇ ವಾರಣಾಸಿ
ಕಾಯವೇ ಕೈಲಾಸ!
ಇದು ಸತ್ಯ ; ಕೂಡಲ ಸಂಗಮದೇವಾ.

ಮರ್ತ್ಯದ ಬಾಳನ್ನು ಉತ್ತಮವಾಗಿ ಬಾಳಲರಿಯದೆ ಸತ್ತಮೇಲೆ ಸಿಗುವ ಸ್ವರ್ಗವಾದಿ ಲೋಕಗಳ ಚಿಂತೆಯಲ್ಲಿರುವ ಮನುಷ್ಯರಿಗೆ ಬಸವಣ್ಣನವರ ಮಹದುಪದೇಶ ಇದು– ದೇವಲೋಕ ಸೇರಿದಂತೆ ಎಲ್ಲ ಲೋಕಗಳು ಇಲ್ಲಿಯೇ ಇವೆ,ಮತ್ತೆಲ್ಲಿಯೂ ಹುಡುಕಬೇಕಿಲ್ಲ; ಉತ್ತಮವಾಗಿ ಬಾಳಿ ಇಹದ ಬಾಳನ್ನು.ಪರಮಾತ್ಮನು ನಮಗೆ ಬದುಕನ್ನು ನೀಡಿದ್ದಾನೆ.ಪರಮಾತ್ಮನ ಪ್ರಸಾದ ಇಲ್ಲವೆ ಕೊಡುಗೆಯಾದ ಮರ್ತ್ಯದ ಈ ಬಾಳನ್ನು ಸರಿಯಾಗಿ ಬಾಳದೆ ವ್ಯರ್ಥವಾಗಿ ಸ್ವರ್ಗ- ನರಕ,ಕೈಲಾಸ,ವೈಕುಂಠ,ಸತ್ಯಲೋಕಗಳ ಭ್ರಮೆಯಲ್ಲಿ ಮುಳುಗಿ ಬಳಲುವುದೇಕೆ? ಸ್ವರ್ಗ- ನರಕಗಳು ನಮ್ಮಿಂದ ದೂರ ಬೇರೆ ಯಾವುದೋ ಲೋಕದಲ್ಲಿ ಇಲ್ಲ.ಇಲ್ಲಿಯೇ ನಮ್ಮೊಂದಿಗೆ ಇವೆ .ನಮ್ಮ ಬಾಳ್ವೆಯು ನಾವು ಸೇರುವ ಲೋಕವನ್ನು ನಿರ್ಧರಿಸುತ್ತದೆ.ಲೋಕೋಪಕಾರಿಗಳಾಗಿ ಬದುಕಿದರೆ ಸ್ವರ್ಗ;ಲೋಕಕಂಟಕರಾಗಿ ಬದುಕಿದರೆ ನರಕ.

ಬಸವಣ್ಣನವರು ಮುಂದುವರೆದು ಹೇಳುತ್ತಾರೆ ದೇವಲೋಕ ಮರ್ತ್ಯಲೋಕಗಳು ಎಂದು ಭಿನ್ನ ಲೋಕಗಳಿಲ್ಲ.ಮರ್ತ್ಯದೊಳಗೆ ದೇವಲೋಕ ಸೇರಿದಂತೆ ಅನಂತ ಲೋಕಗಳಿವೆ.ಪರಂಪಾರುನಗತ ನಂಬಿಗೆಯಂತೆ ಸತ್ಕಾರ್ಯಗಳನ್ನು ಮಾಡಿದವರು ಸ್ವರ್ಗಕ್ಕೆ ಹೋದರೆ ಪಾಪಾತ್ಮರು ನರಕದ ಪಾಲಾಗುತ್ತಾರೆ.ತಾವು ಪೂಜಿಸಿ,ಆರಾಧಿಸಿದ ದೇವರುಗಳ ಲೋಕಗಳನ್ನು ಸೇರುತ್ತಾರೆ ಭಕ್ತರುಗಳು,ಯೋಗಿಗಳು.ಅಂದರೆ ಶಿವಭಕ್ತರಾಗಿದ್ದರೆ ಕೈಲಾಸಕ್ಕೆ,ವಿಷ್ಣು ಭಕ್ತರಾಗಿದ್ದರೆ ವೈಕುಂಠಕ್ಕೆ,ಬ್ರಹ್ಮನನ್ನು ಪೂಜಿಸಿದವರು ಸತ್ಯಲೋಕಕ್ಕೆ ಹೋಗುವರು ಎಂದು ನಂಬಲಾಗಿದೆ.ಈ ಕೆಲವು ಲೋಕಗಳು ಮಾತ್ರವಲ್ಲ ನಿಸ್ಸೀಮ ಬಯಲ ಆಕಾಶದಲ್ಲಿ ಎಷ್ಟು ಅಗಣಿತ ಸಂಖ್ಯೆಯ ಲೋಕಗಳಿವೆ ಎಂದು ಕಲ್ಪಿಸಿದ್ದಾರೋ ಆ ಎಲ್ಲ ಲೋಕಗಳು ಇಲ್ಲಿಯೇ ಮರ್ತ್ಯದಲ್ಲಿಯೇ ಇವೆ ಎನ್ನುತ್ತಾರೆ ಬಸವಣ್ಣನವರು.ಹಿಂದಿನ ವಚನದಲ್ಲಿ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದು ಸಾರಿ ಇಹಲೋಕದ ಮಹಿಮೆಯನ್ನು ಎತ್ತಿಹಿಡಿದಿದ್ದರೆ ಈ ವಚನದಲ್ಲಿ ಸ್ವರ್ಗ,ಕೈಲಾಸವಾದಿ ಸಕಲ ಲೋಕಗಳು ಇಲ್ಲಿಯೇ,ಇಹದಲ್ಲಿಯೇ ಇವೆ ಎನ್ನುವ ಮೂಲಕ ಧರೆಗೆ ಎಲ್ಲಿಲ್ಲದ ಮಹತ್ವವನ್ನು ತಂದುಕೊಟ್ಟಿದ್ದಾರೆ ಬಸವಣ್ಣನವರು.ಕಲ್ಪನೆಯ ಶಾಸ್ತ್ರ ಪುರಾಣಗಳು ಸೃಷ್ಟಿಸಿದ ಕಾಲ್ಪನಿಕ ಸ್ವರ್ಗ- ನರಕಗಳು ಜನರಲ್ಲಿ ಭಯವನ್ನುಂಟು ಮಾಡುತ್ತವೆ.ಪಾಪ ,ಪುಣ್ಯಗಳೆಂಬ ಅರ್ಥಹೀನ ಸಂಗತಿಗಳನ್ನರುಹಿ ಸಮಾಜದ ದುರ್ಬಲ ವರ್ಗಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು ಪುರೋಹಿತಶಾಹಿ ಮತ್ತು ಪಟ್ಟಭದ್ರರು.’ಮನುಸ್ಮೃತಿ’ ಸೇರಿದಂತೆ ಎಲ್ಲ ಸ್ಮೃತಿಗಳಲ್ಲಿ ಬ್ರಾಹ್ಮಣರ ಪಾರಮ್ಯವನ್ನು ಪ್ರತಿಷ್ಠಾಪಿಸಿ ಶೂದ್ರರು ಉನ್ನತಿಹೀನರು ಎಂಬಂತೆ ಚಿತ್ರಿಸಲಾಗಿದೆ.ಶೂದ್ರರು ಬ್ರಾಹ್ಮಣ,ಕ್ಷತ್ರಿಯ ಮತ್ತು ವೈಶ್ಯರ ಸೇವೆ- ಶುಶ್ರೂಷೆಗಳಲ್ಲಿಯೇ ಜೀವನದ ಸಾರ್ಥಕತೆ ಕಾಣಬೇಕು ಎನ್ನುತ್ತವೆ ಸ್ಮೃತಿಗಳು.ಶೂದ್ರರು ಮೋಕ್ಷಕ್ಕೆ ಅರ್ಹರಲ್ಲವೆಂದೇ ಘೋಷಿಸಿದ್ದಾರೆ ಮಹಾನುಭಾವರೊಬ್ಬರು ‘ ಶೂದ್ರರು ನಿತ್ಯ ನಾರಕಿಗಳು’ ಎಂದು.ಮನುಷ್ಯತ್ವ ವಿರೋಧಿಯಾದ ಇಂತಹ ಬೊಗಳೆಗಳನ್ನು ಉಗ್ಗಡಿಸುತ್ತ,ಉದ್ಧರಿಸುತ್ತ ಕಾಲಹರಣ ಮಾಡುವ ವ್ಯರ್ಥಜೀವಿಗಳ ಮಾತುಗಳನ್ನು ಕೇಳಿ ಹಾಳಾಗಬೇಡಿ,ಹಾಳು ಮಾಡಿಕೊಳ್ಳಬೇಡಿ ನಿಮ್ಮ ಬಾಳುಗಳನ್ನು ಎನ್ನುತ್ತ ಬಸವಣ್ಣನವರು ಎಲ್ಲ ಲೋಕಗಳು ಇಲ್ಲಿಯೇ ಇವೆ,ನೀವು ಸರಿಯಾಗಿ ಬದುಕಿ ಎಂದು ಬದುಕುವ ಭರವಸೆ ನೀಡಿದ್ದಾರೆ.

ಶಿವಲೋಕವಾದ ಕೈಲಾಸವು ಇಲ್ಲಿಯೇ ಇದೆ.ಸದಾಚಾರವೇ ಶಿವಲೋಕ ಪ್ರಾಪ್ತಿಯ ಮೂಲ.ಸರ್ವಜೀವರಿಗೂ ಒಳಿತನ್ನು ಬಯಸುವುದೆ ಶಿವಾಚಾರ.ಶಿವಭಕ್ತನಿರುವ ಸ್ಥಳವೇ ದೇವಲೋಕ.ಶಿವಭಕ್ತನ ಎಡೆಯಲ್ಲಿ ಸಕಲ ದೇವತೆಗಳು ನೆಲೆ ನಿಂತಿರುತ್ತಾರಾದ್ದರಿಂದ ಭಕ್ತರು ಶಿವಭಕ್ತಿಯನ್ನಾಚರಿಸಬೇಕು.ಶಿವಭಕ್ತನ ಅಂಗಳವೇ ವಾರಣಾಸಿ ಎನ್ನುವ ಬಸವಣ್ಣನವರ ಮಾತು ಬಹುಮಹತ್ವದ್ದು.ಕಾಶಿಕ್ಷೇತ್ರವು ಶಿವನ ಪ್ರಿಯಕ್ಷೇತ್ರವಾಗಿದ್ದು ಶಿವನು ತನ್ನ ವಿಶೇಷ ಸಾನ್ನಿಧ್ಯವನ್ನುಂಟು ಮಾಡಿದ್ದಾನೆ ಕಾಶಿಕ್ಷೇತ್ರದಲ್ಲಿ.’ಎಲ್ಲ ಕ್ಷೇತ್ರಗಳಲ್ಲಿಯೂ ನನಗೆ ಕಾಶಿಕ್ಷೇತ್ರವೇ ಪ್ರಿಯವಾದುದು’ ಎಂದಿರುವ ಶಿವನು ‘ಜಗತ್ಪ್ರಳಯದ ಕಾಲದಲ್ಲಿ ಕಾಶಿಯನ್ನು ನನ್ನ ತ್ರಿಶೂಲದಿಂದ ಎತ್ತಿಹಿಡಿದು ಕಾಶಿಯನ್ನು ಪ್ರಳಯಮುಕ್ತಕ್ಷೇತ್ರವನ್ನಾಗಿಸುತ್ತೇನೆ’ ಎಂದು ಅಭಯವನ್ನಿತ್ತಿದ್ದರಿಂದ ಕಾಶಿಗೆ ವಿಶೇಷ ಮಹಿಮೆ ಪ್ರಾಪ್ರವಾಗಿದೆ.ಕಾಶಿಯಲ್ಲಿ ಸಾಯುವ ಜೀವರುಗಳಿಗೆ ಕಾಲಭೈರವನು ಶಿವ ತಾರಕ ಮಂತ್ರವನ್ನುಪದೇಶಿಸಿ ಮೋಕ್ಷಕ್ಕೆ ಪಾತ್ರರನ್ನಾಗಿಸುವ ಕಾರಣದಿಂದಲೂ ಕಾಶಿಯ ಮಹಿಮೆಯು ಮತ್ತಷ್ಟು ಉಜ್ವಲವಾಗಿದೆ.ಇಂತಹ ಮಹಿಮಾತಿಶಯವಾದ ಕಾಶಿಕ್ಷೇತ್ರವು ಶಿವಭಕ್ತನ ಅಂಗಳದಲ್ಲಿಯೇ ಇದೆ ಎನ್ನುವ ಮೂಲಕ ಬಸವಣ್ಣನವರು ಶಿವನ ಭಕ್ತರ ಮೇಲಿನ ಪ್ರೇಮ ಮತ್ತು ಶಿವಭಕ್ತರ ಪರಿಶುದ್ಧ ಜೀವನದ ಮಹತಿಗಳೆರಡನ್ನು ವ್ಯಕ್ತಪಡಿಸಿದ್ದಾರೆ.ಇಲ್ಲಿ ಇನ್ನೊಂದು ಅಂಶವನ್ನು ಸಹ ಗಮನಿಸಬೇಕು.ಭಕ್ತರು ದೇವರ ಪೂಜೆಯನ್ನು ಅವರ ಮನೆಗಳ ಪೂಜಾಗೃಹ ಇಲ್ಲವೆ ‘ ದೇವರ ಮನೆ’ ಎನ್ನುವ ಪ್ರತ್ಯೇಕ ಸ್ಥಳಗಳಲ್ಲಿ ಮಾಡುತ್ತಾರೆ.’ಬಸವಣ್ಣನವರು ಶಿವಭಕ್ತರ ಮನೆಯ ಪೂಜಾಗೃಹವು ವಾರಣಾಸಿ’ ಎನ್ನುವ ಬದಲು ‘ಭಕ್ತನಂಗಣವೇ ವಾರಣಾಸಿ’ ಎನ್ನುವ ಮೂಲಕ ಶಿವಕಾರುಣ್ಯವನ್ನು ಸಾಮಾನ್ಯೀಕರಿಸಿದ್ದಾರೆ,ಸಾರ್ವತ್ರೀಕರಿಸಿದ್ದಾರೆ.ಪೂಜಾಗೃಹವು ಏಕಾಂತವಾಗಿದ್ದು ಅಲ್ಲಿ ಏನಾಗುವುದೋ.ಭಕ್ತ ಮತ್ತು ಭಗವಂತರಿಬ್ಬರ ನಡುವೆ ನಡೆಯುವ ಕ್ರಿಯೆ ಅದು.ಆದರೆ ಅಂಗಳವು ಮನೆಯ ಹೊರಗಣ ಬಯಲು ಆಗಿದ್ದು ಅದು ಎಲ್ಲರಿಗೂ ಗೋಚರಿಸುತ್ತದೆ.ಅಂಗಳವು ಪೂಜಾಗೃಹದಷ್ಟು ಸ್ವಚ್ಛ,ಪವಿತ್ರ ನೆಲವೂ ಅಲ್ಲ.ಆದರೆ ಶಿವನಿಗೆ ತನ್ನ ಭಕ್ತನ ಭಕ್ತಿಯ ಮೆಯ್ಮೆ ಮೆರೆಯುವುದು ಮುಖ್ಯವಾಗಿರುತ್ತದೆಯೇ ಹೊರತು ಸ್ಥಾನಶುದ್ಧಿ,ಮಡಿ ಮೈಲಿಗೆಗಳು ಮುಖ್ಯವಲ್ಲ.ಶಿವಭಕ್ತನ ಮನೆಯ ಅಂಗಳವೂ ವಾರಾಣಾಸಿಯಷ್ಟೇ ಪವಿತ್ರವಾದುದು.ವಾರುಣಿ ಮತ್ತು ಅಸಿ ಎನ್ನುವ ನದಿಗಳಿಂದ ವಾರಣಾಸಿ ಎಂದು ಹೆಸರು ಪಡೆದ ಕಾಶಿಯಲ್ಲಿ ಗಂಗಾನದಿಯು ಪ್ರವಹಿಸುವುದರಿಂದ ಅದು ನಿತ್ಯಶುದ್ಧಿಯ ತಾಣವಾಗಿದೆ.ಶಿವಭಕ್ತರ ಎಡೆಯಲ್ಲಿಯೇ ಗಂಗಾದಿ ಸಕಲ ತೀರ್ಥಗಳಿವೆ ಎಂದು ಶಿವಭಕ್ತರ ಮಹಿಮೆಯನ್ನು ಲೋಕಕ್ಕೆ ಸಾರಿದ್ದಾರೆ ಬಸವಣ್ಣನವರು.

‘ ಕಾಯವೇ ಕೈಲಾಸ’ ಎನ್ನುವ ಮೂಲಕ ಬಸವಣ್ಣನವರು ಶಿವ ಭಕ್ತರ ಕಾಯವೇ ಕೈಲಾಸವಾಗಿರುವುದರಿಂದ ಅವರು ಸತ್ತಮೇಲೆ ಸಿಗುವ ಕೈಲಾಸ,ಮೋಕ್ಷಗಳ ಬಗ್ಗೆ ಚಿಂತಿತರಾಗಬೇಕಿಲ್ಲ.ಶಿವಮಂತ್ರಾನುಷ್ಠಾನ ಮಹಿಮೆಯಿಂದ ಶಿವಭಕ್ತರ ಪ್ರಾಣತನುವು ಪ್ರಣವತನುವಾಗಿ ಮಾರ್ಪಟ್ಟು ಪ್ರಣವಮೂರ್ತಿ ಪರಶಿವನು ತನ್ನ ಸದ್ಭಕ್ತರ ಕಾಯದಲ್ಲಿ ನೆಲೆಗೊಂಡಿರುತ್ತಾನೆ.’ ನನ್ನ ಭಕ್ತರ ಕಾಯವೇ ನನ್ನ ಕಾಯ’ ಎನ್ನುವ ಶಿವವಚನದಂತೆ ಶಿವಭಕ್ತರದೇಹದಲ್ಲಿ ಶಿವನು ಮೂರ್ತಗೊಳ್ಳುವುದರಿಂದ ಭಕ್ತರ ಕಾಯವೇ ಕೈಲಾಸವಾಗುತ್ತದೆ.ಶಿವಭಕ್ತರ ಕಾಯವೇ ಕೈಲಾಸ ಎನ್ನುವುದು ಸತ್ಯಸ್ಯಸತ್ಯ ಎನ್ನುವುದು ಒತ್ತಿಹೇಳುತ್ತಾರೆ.

ಶಿವಭಕ್ತರು,ಸದ್ಭಕ್ತರು ಸತ್ತ ಮೇಲೆ ಸಿಗುವ ,ಸ್ವರ್ಗ ,ಕೈಲಾಸ,ಮೋಕ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮರ್ತ್ಯಲೋಕವೇ ಮಹಾದೇವನ ನೆಲೆಮನೆ ಎಂದರಿತು ಶಿವನ ಲೋಕೋಪಕಾರಗುಣವನ್ನರಿತು ಸರ್ವಜೀವದಯಾಪರರಾಗಿ ಬದುಕಿದರೆ ಅವರಿದ್ದಲ್ಲಿಯೇ ಇಳಿದು ಬರುತ್ತದೆ ಕೈಲಾಸ.ಸತ್ತಮೇಲೆ ಪುಷ್ಪಕವಿಮಾನದಲ್ಲಿ ದೇವದೂತರು ಬಂದು ಶಿವಭಕ್ತರನ್ನು ಕೈಲಾಸಕ್ಕೆ ಕರೆದೊಯ್ಯುತ್ತಾರೆ ಎನ್ನುವ ನಂಬಿಕೆಗೆ ಭಿನ್ನವಾಗಿ ಶಿವಭಕ್ತನ ಕಾಯವೇ ಕೈಲಾಸವಾಗಿ ಲೋಕೋತ್ತರ ಲೀಲೆಯಾಗುತ್ತದೆ ಎನ್ನುವ ಅಪೂರ್ವ ಪ್ರಸಂಗದತ್ತ ನಮ್ಮ ಗಮನ ಸೆಳೆಯುತ್ತಾರೆ ಬಸವಣ್ಣನವರು.

ಮುಕ್ಕಣ್ಣ ಕರಿಗಾರ
ಮೊ;94808 79501

10.12.2021