ಬಸವ ದರ್ಶನ ೦೧:ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ- ಮುಕ್ಕಣ್ಣ ಕರಿಗಾರ

ಬಸವ ದರ್ಶನ ೦೧: ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ

ಲೇಖಕರು: ಮುಕ್ಕಣ್ಣ ಕರಿಗಾರ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ;
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ;
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ;
ಕೂಡಲ ಸಂಗಮದೇವಾ.

ಇದು ಬಸವಣ್ಣನವರ ಅತಿ ಮಹತ್ವದ ವಚನ,ಮಹಾಮಾತು.ಬಸವಣ್ಣನವರು ಪ್ರಪಂಚವೇ ಪರಶಿವನ ನೆಲೆ ಎನ್ನುವ ಮೂಲಕ ಪ್ರಪಂಚದಲ್ಲಿಯೇ ನಾವು ಇದ್ದು ಸಾಧಿಸಬೇಕಿದೆ ಎನ್ನುವ ಬಾಳ ಸಾರ್ಥಕತೆಯ ಸೂತ್ರವನ್ನು ನೀಡಿದ್ದಾರೆ.ಪ್ರಪಂಚವನ್ನು ಬಿಟ್ಟು ಪರಶಿವನು ಇಲ್ಲ; ಪರಶಿವನನ್ನು ಬಿಟ್ಟು ಪ್ರಪಂಚವೂ ಇಲ್ಲ.ಹೀಗಿರುವಾಗ ಪ್ರಪಂಚವನ್ನು ಬಿಟ್ಟು ಇನ್ನೆಲ್ಲಿ ಅರಸುವುದು ಪರಶಿವನನ್ನು? ಪರಮಾತ್ಮನನ್ನು?

ಸಾಧು,ಸಂತರು,ಮಹಾತ್ಮರುಗಳುಗನೇಕರು ಪ್ರಪಂಚವನ್ನು ಕ್ಷಣಿಕ,ನೀರಮೇಲಿನ ಗುರುಳೆ,ಕನಸು ಎಂಬಿತ್ಯಾದಿಯಾಗಿ ಹೀಗಳೆದಿದ್ದಾರೆ.ಶಂಕರಾಚಾರ್ಯರ ‘ ಬ್ರಹ್ಮ ಸತ್ಯಾ,ಜಗನ್ಮಿತ್ಯಾ’ ಎನ್ನುವ ಮಾತೇ ಪ್ರಪಂಚವನ್ನು ಕಡೆಗಣಿಸುವ ಮಾತು- ಉಪದೇಶಗಳ ಮೂಲ.ಆದರೆ ಶಂಕರಾಚಾರ್ಯರು ಹೇಳಿದ್ದೇ ಬೇರೆ,ಇವರುಗಳು ಕಲ್ಪಿಸಿಕೊಂಡಿದ್ದೇ ಬೇರೆ.ಶಂಕರಾಚಾರ್ಯರು ಪರಶಿವನು ಹುಟ್ಟು- ಸಾವುಗಳಿರದ ಶಾಶ್ವತನು,ನಿತ್ಯನೂ ಆದ ಪರಬ್ರಹ್ಮನು.ಆದರೆ ಪ್ರಪಂಚವು ಮಾರ್ಪಟು,ವಿನಾಶ, ಪ್ರಳಯವಾದಿ ವಿಕೃತಿಗೆ ಒಳಗಾಗುತ್ತಿದೆ.ಪ್ರಪಂಚಕ್ಕೆ ಎಷ್ಟೇ ವರ್ಷಗಳ ಆಯುಷ್ಯವಿದ್ದರೂ ಅದು ಒಂದು ದಿನ ಪ್ರಳಯಕ್ಕೆ ಈಡಾಗಲೇಬೇಕು.ಅಳಿಯಲೇಬೇಕು ವ್ಯಕ್ತ ಪ್ರಪಂಚ.ಕೃತಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗಗಳೆಂಬ ನಾಲ್ಕುಯುಗಗಳುಂಟು.ಈ ನಾಲ್ಕುಯುಗಗಳು ಒಂದಾವರ್ತಿ ಮುಗಿದರೆ ಸೃಷ್ಟಿಯ ಒಂದು ಮಜಲು ಪೂರೈಸುತ್ತದೆ.ಚತುರ್ಯುಗಳ ಒಂದು ಪರಿಭ್ರಮಣಕ್ಕೆ ನಲವತ್ತುಮೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳು.ಇಂತಹ ಎಪ್ಪತ್ತೊಂದು ಚತುರ್ಯುಗಗಳು ಒಂದು ಮನ್ವಂತರ.ಇಂತಹ ಹದಿನಾಲ್ಕು ಮನ್ವಂತರಗಳಿವೆ.ಇದು ಪ್ರಪಂಚದ ಆಯುಷ್ಯ! ಇಷ್ಟು ದೀರ್ಘಕಾಲಬಾಳಿದರೂ ಒಂದು ದಿನ ಪ್ರಪಂಚ ಅಳಿಯುತ್ತದೆ.ತನ್ನ ಲೀಲೆಗಾಗಿ ಪ್ರಪಂಚವನ್ನು ಹುಟ್ಟಿಸುವ ಪರಮಾತ್ಮನು ಅಳಿಯಲಾರ,ಪ್ರಳಯಹೊಂದಿದ ಪ್ರಪಂಚವನ್ನು ತನ್ನಲಿರಿಸಿಕೊಳ್ಳುತ್ತಾನೆ.ಮತ್ತು ಅನಂತಕಾಲ ತನ್ನ ಸಹಜ ನಿರ್ಗುಣ,ನಿರ್ವಿಕಾರ,ನಿರಂಜನ ಸ್ವರೂಪದಲ್ಲಿ ತಲ್ಲೀನನಾಗುವನು.ಮತ್ತೆ ಜಗತ್ತನ್ನು ಸೃಷ್ಟಿ ಮಾಡಬೇಕು ಎನ್ನಿಸಿದಾಗ ತನ್ನಾತ್ಮಯೋಗಸಮಾಧಿಯಿಂದ ಹೊರಬಂದು ಸೃಷ್ಟಿಗಾರಂಭಿಸುವನು.ಇದು ಶಂಕರಾಚಾರ್ಯರ ಮಾತಿನ ಹಿನ್ನೆಲೆ.ಆದರೆ ಇದನ್ನು ಅರ್ಥಮಾಡಿಕೊಳ್ಳದ ಜನರು ಶಂಕರಾಚಾರ್ಯರ ಈ ಮಾತಿಗೆ ವಿಪರೀತಾರ್ಥವನ್ನು ಕಲ್ಪಿಸಿ ಪ್ರಪಂಚವನ್ನು ಕಡೆಗಣಿಸಿ ಮಾತನಾಡಿದರು.ಫಲವಾಗಿ ಪ್ರಪಂಚವನ್ನು ತುಚ್ಛ ಭಾವನೆಯಿಂದ ಕಾಣುವ ಪ್ರವೃತ್ತಿ ಉಂಟಾಗಿ ಸಂಸಾರ,ಪ್ರಪಂಚ ನಿಸ್ಸಾರ,ಸ್ವರ್ಗ ಮೋಕ್ಷಗಳೇ ಜೀವನದ ಪರಮಾರ್ಥ ಎನ್ನುವಂತಹ ಭಾವನೆ ಬಲಗೊಂಡಿತು.ಇಂತಹ ಉಪದೇಶದ ಮಾತುಗಳಿಂದ ಜನರು ಪ್ರಪಂಚದ ಬಗ್ಗೆ ತಿರಸ್ಕಾರದ,ಅನಾದರಣೀಯ ಭಾವವನ್ನು ತಳೆಯತೊಡಗಿದರಲ್ಲದೆ ಪ್ರಪಂಚದಲ್ಲಿ ಅನಾಸಕ್ತರಾಗತೊಡಗಿದರು.ಸಂಸಾರ ನಿಸ್ಸಾರವೆನ್ನಿಸಿ ಸಂನ್ಯಾಸವೇ ಸರ್ವಶ್ರೇಷ್ಠ,ವೈರಾಗ್ಯವೇ ಸಾರ್ಥಕತೆ ಎನ್ನುವಂತಹ ಅರ್ಥಹೀನ ಮಾತು,ವಿಚಾರಗಳು ಮಹತ್ವ ಪಡೆದುಕೊಂಡವು.ಇದು ಪ್ರಪಂಚ ವಿರೋಧಿ ಭಾವನೆ,ಪರಮಾತ್ಮನ ಸೃಷ್ಟಿ ತತ್ತ್ವಕ್ಕೆ ವಿರುದ್ಧವಾದ ಚಿಂತನೆ.ಪರಮಾತ್ಮನು ಪ್ರಪಂಚಕ್ಕೆ ಇಷ್ಟು ದೀರ್ಘಾಯುಷ್ಯವನ್ನು ಕೊಟ್ಟಿರುವುದು ಜೀವರುಗಳು ಪರಸ್ಪರ ಬಂಧ- ಸಂಬಂಧಗಳ ಮೂಲಕ ಸೃಷ್ಟಿಕ್ರಿಯೆಯನ್ನು ಮುಂದುವರೆಸಲಿ ಎಂದು.ಪ್ರಪಂಚ ಕ್ಷಣಿಕ,ಜಗತ್ತು ನಶ್ವರ ಎನ್ನುವ ಭಾವನೆಯಿಂದ ಜನರು ಪ್ರಪಂಚವನ್ನು ಪರಿತ್ಯಜಿಸುತ್ತ,ವೈರಾಗ್ಯವನ್ನಪ್ಪಿ ಸಂನ್ಯಾಸವನ್ನೋ,ತಪಶ್ಚರ್ಯೆಯನ್ನೋ ಒಪ್ಪಿ ಹೋದರೆ ಸೃಷ್ಟಿ ನಡೆಯುವುದೆಂತು? ಪರಮಾತ್ಮನ ಇಚ್ಛೆಗೆ ವಿರುದ್ಧವಾದ ಇಂತಹ ಮಾತು- ಮತಗಳ ನಿಸ್ಸಾರತೆಯನ್ನು ತಿಳಿಸಿ,ಜನರಿಗೆ ಪ್ರಪಂಚವೇ ಪರಮಾತ್ಮನ ನೆಲೆಮನೆ ಎನ್ನುವ ಮಹದುಪದೇಶ,ಮಹಾತತ್ತ್ವವನ್ನು ಬೋಧಿಸಿದರು ಬಸವಣ್ಣನವರು.

ಪರಮಾತ್ಮನನ್ನು ಕಾಣಬೇಕಾದರೆ ಸಂಸಾರವನ್ನು ತ್ಯಜಿಸಬೇಕಿಲ್ಲ.ಪರಶಿವನಿಗಾಗಿ ಹೆಂಡಿರು ಮಕ್ಕಳನ್ನು ತೊರೆದು ಗುಡ್ಡ ಗುಹೆ ಕಾಡುಗಳಲ್ಲಿ ಸುತ್ತಬೇಕಿಲ್ಲ.ಸಂಸಾರದಲ್ಲಿದ್ದುಕೊಂಡೇ ಕಾಣಬಹುದು ಜಗದೀಶ್ವರ ಶಿವನನ್ನು.ಪ್ರಪಂಚದಲ್ಲಿಯೇ ಇದ್ದಾನೆ ಪರಮಾತ್ಮ,ಪರಬ್ರಹ್ಮ.ಪ್ರಪಂಚದಲ್ಲಿ ಇರುವ ಪರಶಿವನ ಗೂಢವನ್ನರಿತು ಆಚರಿಸುವುದೇ ಜೀವನದ ಸಾರ್ಥಕತೆ.

ಪ್ರಪಂಚವು ಪರಶಿವನ ಸಂಕಲ್ಪದಂತೆ ಸೃಷ್ಟಿಗೊಂಡಿದೆ.ಪೂರ್ಣಬ್ರಹ್ಮನಾದ,ಪರಬ್ರಹ್ಮನಾದ ಶಿವನಿಂದ ಹೊರಹೊಮ್ಮಿದ ಈ ಪ್ರಪಂಚವು ಅಸತ್ಯವಲ್ಲ,ಅಪೂರ್ಣವಲ್ಲ.ಪೂರ್ಣದಿಂದ ಅಪೂರ್ಣವು ಹೊರಬರದು.ಸತ್ಯದಿಂದ ಅಸತ್ಯವು ಉದ್ಭವಿಸದು.ಪರಶಿವನ ಲೀಲಾಭೂಮಿಯಾದ ಈ ಪ್ರಪಂಚವನ್ನು ಅರ್ಥೈಸಿಕೊಂಡು ಬಾಳಿ ಗೆಲ್ಲಬೇಕು.ಪ್ರಪಂಚವು ಪರಮಾತ್ಮನ ಟಂಕಸಾಲೆ ಇದ್ದಂತೆ.ಇಲ್ಲಿ ನಿಜವಾದ ನಾಣ್ಯಗಳು ನಡೆಯುತ್ತವೆಯೇ ಹೊರತು ಖೊಟ್ಟಿ ನಾಣ್ಯಗಳು ನಡೆಯುವುದಿಲ್ಲ. ಟಂಕಿಗನು ವಿವಿಧ ಮೌಲ್ಯದ ನಾಣ್ಯಗಳನ್ನು ಟಂಕಿಸುತ್ತಾನೆ,ಟಂಕಿಸುವಾಗ ಆಯಾ ನಾಣ್ಯದ ಮುಖಬೆಲೆಯ ಮೌಲ್ಯವನ್ನು ನಿರ್ಧರಿಸಿಯೇ ಟಂಕಿಸುತ್ತಾನೆ. ಟಂಕಸಾಲೆಯ ವಿವಿಧ ಮೌಲ್ಯಗಳ ನಾಣ್ಯಗಳ ಬಗ್ಗೆ ಟಂಕಿಗನದು ನಿರ್ಲಿಪ್ತ ಮನೋಭಾವ.ನಾಣ್ಯಗಳನ್ನು ಟಂಕಿಸುವುದು ಮಾತ್ರ ತನ್ನ ಕೆಲಸ,ಅದರ ಚಲಾವಣೆ ಬಗ್ಗೆ ಆತನಲ್ಲಿ ಆಸಕ್ತಿ ಇಲ್ಲ. ಒಂದು ನಾಣ್ಯವು ಚಲಾವಣೆಯಲ್ಲಿರಬೇಕಾದರೆ ಅದರ ಎರಡು ಮುಖಗಳು ಸುಸ್ಥಿತಿಯಲ್ಲಿರಬೇಕು,ಪ್ರಮಾಣಬದ್ಧವಾಗಿರಬೇಕು.ಒಂದೇ ಮುಖದ ನಾಣ್ಯ ನಡೆಯದು.ಬದುಕಿಗೂ ಎರಡು ಮುಖಗಳಿವೆ ಇಹಲೋಕ ಮತ್ತು ಪರಲೋಕ ಎಂದು.ಒಂದು ನಾಣ್ಯದ ಎರಡು ಮುಖಗಳು ಪರಸ್ಪರ ಪೂರಕವಾಗಿರುವಂತೆ ಇಹ- ಪರಗಳು‌ ಪರಸ್ಪರ ಪೂರಕ.ಒಂದು ಮತ್ತೊಂದಕ್ಕೆ ಪೂರಕವಾಗಿದೆಯೇ ಹೊರತು ಮಾರಕವಲ್ಲ.ಆದರೆ ಅದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಮನುಷ್ಯರು.

ಪರಶಿವನ ಲೀಲಾಭೂಮಿ ಈ‌ ಪ್ರಪಂಚ,ಪರಮಾತ್ಮನ ಪ್ರೇರಣೆಯಂತೆ ಸೃಷ್ಟಿಗೊಂಡ ಈ ಪ್ರಪಂಚದಲ್ಲಿ ಎಲ್ಲೆಲ್ಲೂ ಪರಮಾತ್ಮನಿದ್ದಾನೆ ,ಎಲ್ಲದರ ಹಿಂದೆಯೂ ಶಿವನ ಪ್ರೇರಣೆ ಇದೆ ಎನ್ನುವ ‘ಸರ್ವ ಶಿವಮಯಂ’ ಭಾವದಿಂದ ಪ್ರಪಂಚವನ್ನು ನೋಡಿದ್ದಾದರೆ ಪೂರ್ಣವಾಗುತ್ತದೆ ಬದುಕು.ಪರಮಾತ್ಮನ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾರೂ ಕನಿಷ್ಠರಲ್ಲ,ಯಾವುದೂ ನಿರುಪಯುಕ್ತವಲ್ಲ ಎನ್ನುವ ಪ್ರಪಂಚಕಾರಣಭಾವದಿಂದ ಸರ್ವಸಮತೆಯನ್ನು ಮೈಗೂಡಿಸಿಕೊಳ್ಳಬೇಕು.ನಮ್ಮಂತೆ ಸಹಜೀವರುಗಳಾಗಿರುವ ಮನುಷ್ಯರನ್ನು ಪ್ರೀತಿ,ವಿಶ್ವಾಸದಿಂದ ಕಾಣಬೇಕು.ದ್ವೇಷಾಸೂಯೆಗಳನ್ನು ತ್ಯಜಿಸಿ ಪರಸ್ಪರ ಸಹೋದರ ಭಾವದಿಂದ,ಬಂಧು ಭಾವದಿಂದ ಬದುಕಬೇಕು.ಒಬ್ಬರು ಮತ್ತೊಬ್ಬರಿಗೆ ಆಸರೆಯಾಗಬೇಕು.ತಾನು ಬದುಕಬೇಕಲ್ಲದೆ ಇತರರು ಬದುಕಲು ಅವಕಾಶ ನೀಡಬೇಕು( Live and Let live)ಹೀಗೆ ಬದುಕಿದರೆ ಮೆಚ್ಚುತ್ತಾನೆ ಪರಮಾತ್ಮನು.ಇಂತಹ ಬಾಳ್ವೆಯೇ ಹಿರಿದಾದ,ಸಲ್ಲುವ ,ಗೆಲ್ಲುವ ಬಾಳ್ವೆ.ಸರ್ವರೇಳ್ಗೆಯ ಬಾಳ ಸೂತ್ರದೊಂದಿಗೆ ಬದುಕಿದ ಇಂತಹ ಪುಣ್ಯ ಚೇತನರುಗಳು ಇಲ್ಲಿ ಸಲ್ಲುತ್ತಾರೆ.ಈ ಲೋಕದಲ್ಲಿ ಉತ್ತಮವಾಗಿ,ಪರೋಪಕಾರಿಗಳಾಗಿ ಬಾಳಿ ,ಬದುಕಿದರವರೂ ಪರಲೋಕದಲ್ಲಿ,ಶಿವಲೋಕದಲ್ಲಿಯೂ ಸಲ್ಲುತ್ತಾರೆ.ಇಹದಲ್ಲಿ ಉತ್ತಮವಾದ ಜೀವನ ನಡೆಸದವರು ಪರಲೋಕಕ್ಕೂ ಸಲ್ಲುವುದಿಲ್ಲ.ನಾಣ್ಯವು ಉತ್ತಮವಾಗಿದ್ದರಷ್ಟೆ ಚಲಾವಣೆಯಲ್ಲಿರುವಂತೆ ಸದ್ಗುಣಿಗಳು,ಪರೋಪಕಾರಿಗಳು,ಸತ್ತ್ವಶೀಲರು ಜಯಶೀಲರಾಗುತ್ತಾರೆ ಇಹಪರಗಳೆರಡರಲ್ಲಿಯೂ.

ಮುಕ್ಕಣ್ಣ ಕರಿಗಾರ
ಮೊ: 94808 79501

08.12.2021