‘ ಎತ್ತು’ ಇಲ್ಲದ ಎಡೆಯಲ್ಲಿ ದೇವರು ಆಗುವ ‘ಕೋಣ’ : ಮುಕ್ಕಣ್ಣ ಕರಿಗಾರ

‘ ಎತ್ತು’ ಇಲ್ಲದ ಎಡೆಯಲ್ಲಿ ದೇವರು ಆಗುವ ‘ಕೋಣ’

-ಮುಕ್ಕಣ್ಣ ಕರಿಗಾರ

‘ ಎತ್ತು ಇಲ್ಲದ ಮನೆಗೆ ಕೋಣ ದೇವರಾಗಿತ್ತು’ ಎನ್ನುತ್ತದೆ ಕನ್ನಡದ ಗಾದೆಯೊಂದು.ಅರ್ಹರು ಇಲ್ಲದೆಡೆಯಲ್ಲಿ ಅನರ್ಹರದ್ದೇ ಪಾರುಪತ್ಯ,ಕಾರುಬಾರು.ಮನುಷ್ಯ ಸಮಾಜ ಯಾವಾಗಲೂ ಹೀಗೆಯೇ.ತತ್ತ್ವನಿಷ್ಠರಿಗೆ,ಸತ್ಯವಂತರಿಗೆ,ಪ್ರತಿಭಾವಂತರಿಗೆ,ಪ್ರಾಮಾಣಿಕರಿಗೆ ಎಲ್ಲೆಡೆಯೂ ಬೆಲೆ ಇರುತ್ತದೆ ಎಂದು ಹೇಳಲಾಗದು.ಸಮರ್ಥರಿಗೆ ಸ್ಥಾನ ಮಾನ ಸಿಗುತ್ತದೆ ಎನ್ನುವ ಖಚಿತತೆ ಇಲ್ಲ.ಪ್ರತಿಭೆ,ಸಾಮರ್ಥ್ಯ,ದಕ್ಷತೆ,ನೈಪುಣ್ಯಗಳು ಅಧಿಕಾರ- ಅವಕಾಶಗಳನ್ನು ಪಡೆಯುವ ಅರ್ಹತೆಗಳಾಗಬೇಕು.ಹಾಗೆ ಆಗುವುದಿಲ್ಲ.ಬೇರೆಯದೆ ಕಾರಣಗಳು ಕೂಡ ಅರ್ಹರಲ್ಲದವರಿಗೆ ಸ್ಥಾನ- ಮಾನ,ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ.ಸಮರ್ಥರು ಇದ್ದರೆ ಅಧಿಕಾರಕ್ಕೆ,ಆ ಸ್ಥಾನಕ್ಕೆ,ಕಛೇರಿಗೆ ಒಂದು ಬೆಲೆ ಇರುತ್ತದೆ; ಅಸಮರ್ಥರು ಅಧಿಕಾರಕ್ಕೆ ಬಂದರೆ ಅಥವಾ ಕಛೇರಿಗಳನ್ನು ಆಕ್ರಮಿಸಿದರೆ ಹಾಳಾಗುತ್ತದೆ ಆಡಳಿತ ವ್ಯವಸ್ಥೆ.ಇದನ್ನೇ ಈ ಗಾದೆ ಹೇಳುತ್ತದೆ,ಸಮರ್ಥರಿಗೆ,ಯೋಗ್ಯರಿಗೆ ಸ್ಥಾನ ಮಾನ,ಮನ್ನಣೆ ಕೊಡಿ,ಅಯೋಗ್ಯರಿಗೆ ಬೇಡ ಅಂತ.

ಎತ್ತನ್ನು ಮೊದಲಿನಿಂದಲೂ ದೇಶದಲ್ಲಿ ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ,ಪೂಜಿಸಲಾಗುತ್ತದೆ ಕೂಡ.ಶಿವನ ವಾಹನವಾದ ನಂದಿಯ ಅವತಾರ ಎತ್ತು ಎನ್ನುವ ಭಾವನೆ ಇದೆ.ಕೃಷಿ ಕಾರ್ಯಕ್ಕೆ ಆಸರೆಯಾಗುವ ಮೂಲಕ ಎತ್ತುಗಳು ರೈತರ ಬಾಳಿಗೆ ಬೆಳಕು ನೀಡಿ ನಾಡು- ದೇಶಗಳಿಗೆ ಅನ್ನ ನೀಡುತ್ತವೆ.ಎತ್ತುಗಳು ನೊಗಕ್ಕೆ ಹೆಗಲುಕೊಟ್ಟು ಹೊಲ- ಗದ್ದೆಗಳಲ್ಲಿ ದುಡಿಯುವುದರಿಂದಲೇ ನಮಗೆಲ್ಲ ಅನ್ನ ಸಿಗುತ್ತಿದೆ.ತನ್ನ ಬದುಕಿಗೆ ಆಸರೆಯಾದ ಎತ್ತನ್ನು ಗೌರವದಿಂದ ಕಾಣುವ ರೈತ ಹಬ್ಬ ಉತ್ಸವಗಳ ಸಂದರ್ಭದಲ್ಲಿ ಎತ್ತುಗಳನ್ನು ಪೂಜಿಸುತ್ತಾನೆ.ಶಿವನ ವಾರವಾದ ಸೋಮವಾರದಂದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಾಡುವುದಿಲ್ಲ ಅಂದರೆ ಎತ್ತುಗಳ ಹೆಗಲಿಗೆ ನೊಗ ಇಡುವುದಿಲ್ಲ ಆ ದಿನ.ಅಮವಾಸೆ- ಹುಣ್ಣಿಮೆಯ ದಿನಗಳಂದೂ ಸಹ ಎತ್ತುಗಳನ್ನು ಪೂಜಿಸಲಾಗುತ್ತದೆ.ಇದು ಮೌಢ್ಯವಾಗಿ ಕಾಣಬಹುದಾದರೂ ರೈತರು ತಮಗೆ ಅನ್ನ ನೀಡುವ ಎತ್ತಿನಲ್ಲಿ ದೇವರನ್ನು ಕಂಡು ಪೂಜಿಸುತ್ತಾರೆ.ರೈತರಿಗೆ ಭೂಮಿಯು ತಾಯಿಯಾದರೆ ಎತ್ತುಗಳು ದೇವರ ಸ್ವರೂಪ.ಉಪಕಾರವನ್ನು ಸ್ಮರಿಸಲೆಂದು ಎತ್ತುಗಳನ್ನು ಪೂಜಿಸುವ ಜನಪದರ ಕ್ರಿಯೆಯಲ್ಲಿ ಹೃದಯವಂತಿಕೆ,ಸಂಸ್ಕೃತಿ ಇದೆ ಎಂದರಿಯದೆ ಮೌಢ್ಯ ಎನ್ನುವವರು ಅಲ್ಪಮತಿಗಳು.ಬದುಕಿನ ಎಲ್ಲ ಕ್ರಿಯೆಗಳಲ್ಲಿ ದೈವವನ್ನು ಕಾಣುವ ಪೂರ್ಣತೆ ಎತ್ತ,ವೈಚಾರಿಕತೆ ಎಂದು ಎಲ್ಲದರಲ್ಲೂ ದೋಷಕಾಣುವ ವಿಕೃತಿ ಎತ್ತ? ನಾವು ಪೂರ್ಣರಾಗದೆ ಸೃಷ್ಟಿಯ ಪೂರ್ಣತ್ವ ಗೋಚರಿಸದು.ಒಮ್ಮೊಮ್ಮೆ ಬಾರಕೋಲಿನ ಏಟನ್ನು ತಿಂದೂ ಸಹಿಸಿಕೊಂಡು ದುಡಿಯುತ್ತವೆ ಎತ್ತುಗಳು.ತಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು? ಪಾಪ! ಮೂಕಪ್ರಾಣಿಗಳು.ರೈತ ಹೊಡೆದನೆಂದು ಎತ್ತುಗಳು ತಮ್ಮನ್ನು ಸಾಕಿದ ರೈತನ ಮನೆಯನ್ನು ಬಿಟ್ಟು ಬೇರೆಯವರ ಮನೆಗಳಿಗೆ ಹೋಗುವುದಿಲ್ಲ.ಒಡೆಯ ಬಾರುಕೋಲಿನಿಂದ ಬಾರಿಸಿದನೆಂದು ಸಿಟ್ಟಿಗೆದ್ದು ಅವನ ಮನೆಯ ಮಕ್ಕಳಿಗೆ ಕೋಡುಗಳಿಂದ ಇರಿಯುವುದಿಲ್ಲ ಎತ್ತುಗಳು.ಅಷ್ಟೊಂದು ಸ್ವಾಮಿನಿಷ್ಠೆ ಎತ್ತುಗಳದ್ದು.ಉಳುಮೆ ಮಾಡಲು,ಬಿತ್ತಲು ,ಬಿತ್ತಿದ ಬೆಳೆಯನ್ನು ಮನೆಗೆ ತರಲು ಎತ್ತುಗಳು ಬೇಕು.ಕುಂಟೆ- ರೆಂಟೆ,ಕೂರಗಿ,ಬಂಡಿಗಳಿಗೆ ಹೆಗಲು ಕೊಟ್ಟು ದುಡಿಯುತ್ತವೆ ಎತ್ತುಗಳು.ರಾಶಿ ಮಾಡುವಾಗಲೂ ಕಣದ ಮೇಟಿಗೆ ಎತ್ತುಗಳನ್ನೇ ಕಟ್ಟಿ ತುಳಿಸುತ್ತಾರೆ.ಈ ತೆರನಾಗಿ ರೈತನಿಗೆ ಬಹುವಿಧದಲ್ಲಿ ಆಸರೆ ಆಗುತ್ತದೆ ಎತ್ತು.

ಎತ್ತು ಇಲ್ಲದ ಮನೆಗೆ ಕೋಣ ದೇವರಾಗುವುದು ಎಂದರೆ ಅನರ್ಹರಿಗೆ ಮನ್ನಣೆ ಎಂದರ್ಥ.ಕೋಣವೂ ಎತ್ತಿನಂತೆ ಪ್ರಾಣಿಯೆ.ಆದರೆ ಎತ್ತಿಗೆ ಇರುವ ಸ್ಥಾನ ಕೋಣಕ್ಕೆ ಇಲ್ಲ.ಹಸುವಿಗೆ ಇರುವ ಸ್ಥಾನ ಎಮ್ಮೆಗೆ ಇಲ್ಲದ್ದನ್ನು ಆಕ್ಷೇಪಿಸುವ ಕೆಲವರು ಎತ್ತನ್ನು ಪೂಜಿಸುವ ರೈತರು ಕೋಣವನ್ನು ಕಡೆಗಣಿಸಿದ್ದನ್ನೂ ಆಕ್ಷೇಪಿಸಬಹುದು.ಇದಕ್ಕೆ ಉತ್ತರ ಇದೆ.ಎಮ್ಮೆ- ಕೋಣಗಳನ್ನು ಬಳಸಿ ಕೃಷಿ ಮಾಡುತ್ತಿರಲಿಲ್ಲ ಪೂರ್ವಿಕರು.ಹಾಗಾಗಿ ಅವುಗಳ ಬಗ್ಗೆ ತಾತ್ಸಾರ ಭಾವನೆ ಇರಬಹುದು.ಕೋಣ ಮೊದಲು ಸಾಕು ಪ್ರಾಣಿಯಾಗಿರಲಿಲ್ಲ.ನೂರಿನ್ನೂರು ವರ್ಷಗಳ ಹಿಂದಷ್ಟೇ ಕೋಣವನ್ನು ಕೃಷಿಕಾಯಕಕ್ಕೆ ಬಳಸಲಾಗುತ್ತಿದೆ.ಅದಕ್ಕೂ ಮುಂಚೆ ಕೇವಲ ಬಲಿಯ ಪ್ರಾಣಿಯನ್ನಾಗಿ ಮಾತ್ರ ಕೋಣದ ಬಳಕೆ ಆಗುತ್ತಿತ್ತು.ಮಾರಿ,ದುರ್ಗೆಯರಂತಹ ದೇವಿಯರಿಗೆ ಬಲಿ ಕೊಡಲಾಗುತ್ತಿತ್ತು ಕೋಣವನ್ನು.ಎತ್ತಿಗೆ ಹೋಲಿಸಿದರೆ ಕೋಣನಲ್ಲಿ ಸೊಕ್ಕು ಇಲ್ಲವೆ ತಾಮಸ ಪ್ರವೃತ್ತಿ ಹೆಚ್ಚು.ಹೊಲ ಗದ್ದೆಗಳನ್ನು ಹಾಳು ಮಾಡುವ ಕೋಣ ಎತ್ತಿನಷ್ಟು ಉಪಯುಕ್ತ ಪ್ರಾಣಿಯಲ್ಲ.ನಾಡಿಗೆ ಕೇಡು ಮಾಡಿದನೆಂದೇ ಅಲ್ಲವೆ ದುರ್ಗಾದೇವಿಯು ಮಹಿಷನನ್ನು ವಧಿಸಿದ್ದು? ಮಹಿಷನ ವಧೆಯಲ್ಲೂ ಕೆಲವರು ದೋಷವನ್ನು ಕಾಣುತ್ತಾರೆ.ಮಹಿಷ ದ್ರಾವಿಡ,ದುರ್ಗೆ ಆರ್ಯರ ಪ್ರತಿನಿಧಿ ಹಾಗೆ ಹೀಗೆ.ಇವೆಲ್ಲ ಅರ್ಥಹೀನ ವಾದಗಳು.ಲೋಕಕಂಟಕರಾದ ಯಾರೇ ಆಗಿರಲಿ ಅವರು ಶಿಕ್ಷಾರ್ಹರು,ದಂಡನಾರ್ಹರು.ಮನೆಯಲ್ಲಿ ತಂದೆ ತಾಯಿಗಳು ಮಕ್ಕಳನ್ನು ದಂಡಿಸಿ,ಶಿಕ್ಷಿಸಿ ಸರಿ ದಾರಿಗೆ ತರುವುದಿಲ್ಲವೆ? ಮಕ್ಕಳು ದ್ರಾವಿಡರು ತಂದೆ ತಾಯಿಗಳು ಆರ್ಯರು ಎನ್ನುವಷ್ಟೆ ಅರ್ಥಹೀನ ಮಾತು ದೇವಿಯು ಮಹಿಷನನ್ನು ಕೊಂದದ್ದರಲ್ಲಿ ದೋಷವರಸುವವರ ಬುದ್ಧಿ.ಮಹಿಷನೂ ನಮ್ಮವನೆ,ದುರ್ಗೆಯೂ ನಮ್ಮ ನಾಡದೇವಿಯೆ! ಜನಪದರ,ನೆಲಮೂಲ ದೇವಿಯೆ!

ಎತ್ತನ್ನು ಪೂಜಿಸುವುದಕ್ಕೆ ಮತ್ತು ಕೋಣನನ್ನು ಪೂಜಿಸದೆ ಇರಲು ಒಂದು ಧಾರ್ಮಿಕ ನಂಬಿಕೆಯೂ ಕಾರಣವಾಗಿದೆ.ಎತ್ತು ಲೋಕ ಪ್ರಭುವಾದ,ಲೋಕಕ್ಕೆ ಅನ್ನ ಮತ್ತು ಅಭಯವನ್ನೀಯುವ ಶಿವನ ವಾಹನ.ಆದರೆ ಕೋಣ ಸಾವಿನ ದೇವರಾದ ಯಮನ ವಾಹನ! ಸಾವನ್ನು ಯಾರಾದರೂ ಬಯಸುತ್ತಾರೆಯೆ? ಮೃತ್ಯುವನ್ನು ಯಾರಾದರೂ ಆಹ್ವಾನಿಸುತ್ತಾರೆಯೆ? ಮೃತ್ಯುದೇವನ ವಾಹನವಾದ ಕಾರಣದಿಂದ ಕೋಣನನ್ನು ಉಪೇಕ್ಷಿಸಿರಬಹುದು.ಮೃತ್ಯುಂಜಯ ಶಿವನ ಆರಾಧನೆಯಿಂದ ಭರವಸೆ,ಅಭಯಗಳಿದ್ದರೆ ಯಮನ ಪೂಜೆಯಿಂದ ಮರಣಮುಕ್ತರಾಗಲು ಸಾಧ್ಯವಿಲ್ಲ.ಮೃತ್ಯುದೇವತೆಯಾಗಿಯೂ ಯಮ ಯಾರನ್ನೂ ಚಿರಂಜೀವಿಗಳನ್ನಾಗಿಸಲಾರ,ಯಾರಿಗೂ ಅಮರತ್ವವನ್ನು ದಯಪಾಲಿಸಲಾರ.ಕಾರಣ, ಪರಮಾತ್ಮನ ಸೃಷ್ಟಿಯಲ್ಲಿ ಯಮನಿಗೆ ಅವನಿಗೆ ನಿಗದಿಯಾದ ಒಂದು ಕಾರ್ಯ ಇದೆ.ಪರಮಾತ್ಮನ ಆಣತಿಯಂತೆ ಆ ಕಾರ್ಯವನ್ನು ಮಾತ್ರ ಮಾಡಲು ಶಕ್ತನಾಗಿರುವ ಯಮನು ಅದರಾಚೆಗೆ ಬೇರೆನನ್ನೂ ಮಾಡಲಾರ,ನೀಡಲಾರ.ಮರಣದ ಭಯ ಯಾರಿಗೆ ಇಲ್ಲ? ಬಸವಣ್ಣನವರೇನೋ ಹೇಳಿದರು ‘ ಮರಣವೇ ಮಹಾನವಮಿ’ ಅಂತ.ನಮ್ಮಲ್ಲಿ ಯಾರಿದ್ದಾರೆ ಮರಣವನ್ನು ಮಹಾನವಮಿ ಹಬ್ಬದಂತೆ ಸಂತೋಷದಿಂದ ಸ್ವಾಗತಿಸಿ,ಸಂತೋಷ ಪಟ್ಟವರು? ಬಸವಣ್ಣನಂತಹವರಿಗೆ ಮಾತ್ರ ಮರಣವು ಪ್ರಕೃತಿ ಸಹಜ ಕ್ರಿಯೆಯಾಗಿ ಕಾಣಿಸಬಹುದು ;ಬಹುಪಾಲು ಜನರಿಗೆ ಮರಣ ಎಂದರೆ ಭಯವೆ! ಬೇಡದ ಸಂಗತಿಯೆ! ಮರಣವನ್ನು ಒಲ್ಲದ ಮನಸ್ಸು ಮರಣದೇವನ ವಾಹನವಾದ ಕೋಣನನ್ನು ಪೂಜಿಸಿ,ಆರಾಧಿಸಲಿಲ್ಲ.

ಎತ್ತನ್ನು ಪೂಜಿಸಿದರೆ ಅನ್ನ ಉಂಟು,ಬದುಕು ಉಂಟು,ಭರವಸೆಯೂ ಉಂಟು.ಆದರೆ ಕೋಣನನ್ನು ಪೂಜಿಸಿದರೆ? ಮೃತ್ಯುದೇವತೆಗೆ ಆಹ್ವಾನ ಇತ್ತಂತೆ!ಸಮರ್ಥರು,ಯೋಗ್ಯರು ಆದವರಿಗೆ ಸ್ಥಾನ ,ಅವಕಾಶ,ಹುದ್ದೆಗಳು ದೊರೆತರೆ ಆ ಸ್ಥಾನಕ್ಕೆ ಬೆಲೆ ಬರುತ್ತದೆ.ಯೋಗ್ಯರಾದವರು ಆ ಸ್ಥಾನದ ಬೆಲೆಯನ್ನರಿತು ಸಮಾಜೋಪಯೋಗಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ.ಅಯೋಗ್ಯರಿಗೆ,ಅನರ್ಹರಿಗೆ ಸ್ಥಾನ,ದೊಡ್ಡಸ್ತಿಕೆ ದೊರೆತರೆ ಅವರು ಸ್ಥಾನದ ಬಲ ಮತ್ತು ಬೆಲೆಯನ್ನರಿಯದೆ ಮನಸ್ಸಿಗೆ ಬಂದಂತೆ ವರ್ತಿಸಿ ಸ್ಥಾನದ ಮಾನವನ್ನು ಮೂರು ಕಾಸಿಗೂ ಕಡೆಯಾಗಿಸುತ್ತಾರೆ.

ಮನುಷ್ಯರಲ್ಲಿ ತತ್ತ್ವನಿಷ್ಠರು,ಸಾತ್ತ್ವಿಕರೇ ಇರುತ್ತಾರೆ ಎಂದು ಹೇಳಲಾಗದು.ಸ್ವಾರ್ಥಿಗಳು,ಧೂರ್ತರೂ ಸಮಯಸಾಧಕರಾದವರೂ ಇರುತ್ತಾರೆ.ಅರ್ಹರು,ಯೋಗ್ಯರು,ಸಮರ್ಥರ ಸ್ಥಾನವನ್ನು ಅಯೋಗ್ಯರು ಆಕ್ರಮಿಸಿದಾಗ ಸಮಯಸಾಧಕರು ಅವರನ್ನೂ ಪೂಜಿಸುತ್ತಾರೆ,ಗೌರವಿಸುತ್ತಾರೆ! ಸಮಯ ಸಾಧಕರಿಗೆ ತಮ್ಮ ಸ್ವಾರ್ಥ ಸಾಧನೆ ಮುಖ್ಯವಾಗಿರುತ್ತದೆಯೇ ಹೊರತು ಸಮಾಜದ ಹಿತ ಚಿಂತನೆ ಮುಖ್ಯವಾಗಿರುವುದಿಲ್ಲ.ಎತ್ತಿನ ಸ್ಥಾನಕ್ಕೆ ಕೋಣ ಏಕೆ ಕತ್ತೆ ಬಂದು ಕುಳಿತರೂ ಪೂಜಿಸುವುದನ್ನು ಮರೆಯುವುದಿಲ್ಲ ಸಮಯಸಾಧಕರು.ನಿಜವಾದ ಪ್ರತಿಭೆ,ಸಾಮರ್ಥ್ಯ,ಅರ್ಹತೆಗಳಿಗೆ ಬೆಲೆ ಇಲ್ಲದ ಕಡೆ ಅಯೋಗ್ಯರಿಗೆ ತಾನೆ ಗೌರವ ಸಿಗುವುದು? ಯೋಗ್ಯರನ್ನು ಬಿಟ್ಟು ಅಯೋಗ್ಯರನ್ನು ಆದರಿಸುವ,ಸತ್ಕರಿಸುವ ಜನರಿದ್ದಾರೆ ಎಂದರೆ ಅದು ವ್ಯವಸ್ಥೆಯ ಲೋಪವೇ ಹೊರತು ಸತ್ಪುರುಷರ ದೋಷವಲ್ಲ.ಎತ್ತನ್ನು ಪೂಜಿಸಿದವರಿಗೆ ಸದ್ಗತಿಯಾದರೆ ಕೋಣನನ್ನು ಪೂಜಿಸುವವರಿಗೆ ಮರಣ ಪಾಲಾಗುವ ದುರ್ಗತಿಯಂತೂ ಇದ್ದೇ ಇದೆ.

ಮುಕ್ಕಣ್ಣ ಕರಿಗಾರ
ಮೊ: 94808 79501

07.12.2021