ಕಾವ್ಯಲೋಕ: ದೀಪಕ್ ಶಿಂಧೆ ಅವರ ಕವನ ‘ಅವ್ವ ನೆನಪಾಗುತ್ತಾಳೆ’

ಅವ್ವ ನೆನಪಾಗುತ್ತಾಳೆ

        *ದೀಪಕ್ ಶಿಂಧೆ

ಹೀಗೆ ತುಂಬಿದ ಸಭೆಯಲ್ಲಿ ನಾನೊಬ್ಬ ಒಂಟಿ ಒಬ್ಬಂಟಿ ಅನ್ನಿಸಿದಾಗ. ತಡೆಯಲಾಗದೆ
ಜಾರಿಕೊಳ್ಳುವ ಕಣ್ಣ ಹನಿಗಳಿಗೆ ನಾನೇ ಚುಕ್ಕು ತಟ್ಟಿ ಸಮಾಧಾನಿಸಿಕೊಳ್ಳುತ್ತೇನೆ.
ಅಲ್ಲಿ ಹೋದವರು ಯಾರೂ
ಮರಳುವದಿಲ್ಲ ಅನ್ನುವ ಸತ್ಯಕ್ಕೆ ಮತ್ತದೆ ಬರುತ್ತಾಳೆಂಬ ನಿರೀಕ್ಷೆಯ ಮೊಳೆಗಳ ಹೊಡೆಯುತ್ತೇನೆ..
ಅವ್ವ ನೆನಪಾಗುತ್ತಾಳೆ ಆಗಾಗ

ಒಮ್ಮೊಮ್ಮೆ ಆಕಾಶದ ತಾರೆಗಳು ಉದುರುವದ
ನೋಡಿದಾಗೆಲ್ಲ ಅವ್ವ ಬಂದಿರಬಹುದು ಅಂದುಕೊಳ್ಳುತ್ತೇನೆ.

ಹುಟ್ಟಿದ ಮಗಳೂ ಒಮ್ಮೊಮ್ಮೆ ಅವ್ವನಂತಾಗುತ್ತಾಳೆ.ಬೇಜಾರು‌ ,ಹತಾಸೆಯಲ್ಲಿ,ನಾನು ಮೌನಕ್ಕೆ ಜಾರಿದಾಗೆಲ್ಲ
ಯಾಕಪ್ಪ ಅಂತ ಸುಮ್ಮನೆ ಸಂತೈಸುತ್ತಾಳೆ,ನನಗೆ
ಅವ್ವ ನೆನಪಾಗುತ್ತಾಳೆ ಆಗಾಗ.

ಕಟ್ಟಿಕೊಂಡ ಕನಸುಗಳು ನನಸಾಗದಿರುವಾಗ,ಮತ್ಯಾವಗಲೋ ಬದುಕು ಸೋತೆ ಅಂತ ನನ್ನಷ್ಟಕ್ಕೆ ನನಗೇ ಅನ್ನಿಸಿದಾಗ.
ಸಾಕು ಈ ನರಕದ ಬದುಕೆಂದು
ನಾನು ಒಳಗೊಳಗೆ ನಿಡುಸುಯ್ಯುವಾಗ…

ಮಡದಿ ಮಕ್ಕಳು ಪರ ಊರಿಗೆ ಹೋಗಿ ಮನೆಯೊಳಗೆ ನಾನು
ಒಬ್ಬನೇ ಅಂತ ಅನ್ನಿಸಿದಾಗ
ರಾತ್ರಿ ಯಾವಾಗಲೋ ಎದೆಯಲ್ಲಿ ಅಪರಿಮಿತ ನೋವು ಎಡೆ ಬಿಡದೆ ಕಾಣಿಸಿಕೊಂಡಾಗ ಅವ್ವ ನೆನಪಾಗುತ್ತಾಳೆ ಆಗಾಗ.

ಹೌದು ಅವ್ವ ನೆನಪಾಗುತ್ತಾಳೆ
ಸುಕ್ಕುಗಟ್ಟಿದ ಮೈಯ್ಯ ದುಡಿವ ಹೆಂಗಸೊಬ್ಬಳು ಯಾರೋ ಉಂಡ ಎಲೆಗಳ ಎತ್ತಿ ಉಳಿದ ಪಾತ್ರೆಗಳ ಮುಸುರೆ ತಿಕ್ಕುವಾಗ, ಮತ್ಯಾರದೋ ಮನೆಯ ಎದುರು ಇನ್ಯಾರೋ ಮಧ್ಯಮವರ್ಗದ ಹೆಂಗಸು ನಿಷ್ಠೆಯಿಂದ ಕಸ ಗುಡಿಸುವಾಗ
ನನಗೆ ಅವ್ವ ನೆನಪಾಗುತ್ತಾಳೆ ಆಗಾಗ.

ಮತ್ಯಾರದೋ ಮಕ್ಕಳ ಹೊಲೆದ ಬಟ್ಟೆಯ ತೇಪೆಗಳ ನೋಡಿದಾಗ..ಜೇಬಿನಲ್ಲಿ ನೋಟುಗಳಿಲ್ಲದ ವೇಳೆ ನನ್ನ ಮಕ್ಕಳು ಏನಾದರೂ ಬೇಕೆಂದು ಬೇಡಿ ಹಠ ಮಾಡಿ ಅಳುವಾಗ ನನಗೆ ಅವ್ವ ನೆನಪಾಗುತ್ತಾಳೆ ಆಗಾಗ.

ದುಡಿವ ಹೆಂಗಸರ ಹರಿದ ರವಿಕೆ,ಮಾಸಿದ ಸೆರಗಿನ ಅಂಚು,ಓಲೆಗಳಿಲ್ಲದ ಕಿವಿಗಳ ನೋಡಿದಾಗ,ಖಾಲಿಯಾದ ಕೊರಳು,ಹಸಿರ ಬಳೆಯಿಲ್ಲದ ಕೈ,ಖಾಲಿ ಹಣೆಯ ವೈಧವ್ಯಗಳ ನೋಡಿದಾಗ…ಅವ್ವ ನೆನಪಾಗುತ್ತಾಳೆ ಆಗಾಗ.

ಮಾಡಿದ ಒಂದಷ್ಟು ಉಪಕಾರಕ್ಕೆ ಅಪರಿಚಿತ ಹೆಂಗಸರು ಮನಸು ಪೂರ್ತಿ ಹರಸಿ ಈ ಪಾಪಿಯ ಸುಖ-ಸಮೃದ್ದಿಗೆ ನಿಷ್ಕಲ್ಮಷವಾಗಿ ಹರಸಿ ಹಾರೈಸುವಾಗ ಅವ್ವ ನೆನಪಾಗುತ್ತಾಳೆ ಆಗಾಗ

ಅವ್ವನ ಬಗ್ಗೆ
ಕವಿತೆಗಳ ಬರೆಯುತ್ತೇನೆಂದು
ಬಹಳ ಜನ ಮೆಚ್ಚುತ್ತಾರೆ.ನನ್ನದು ತಾಯಿ ಹೃದಯ ಅನ್ನುತ್ತಾರೆ.
ಅವ್ವನ ನೆನಪುಗಳೇ ಆವರಿಸಿದ ಅವಳ ಕೊಡುಗೆಯ ಜೀವವಿದು.
ನಾನಿರುವವರೆಗೆ ಅವ್ವನ ಧ್ಯಾನಿಸುತ್ತ ಹೀಗೆ ಬರೆಯುತ್ತಲೇ ಇರುತ್ತೇನೆ.
ಯಾಕೆಂದರೆ ನನಗೆ ಅವ್ವ ನೆನಪಾಗುತ್ತಾಳೆ ಆಗಾಗ

ದೀಪಕ್ ಶಿಂಧೆ
ಮೊ:9482766018