ಚಾಡಿ ಮಾತಿಗೆ ಹಾಳಾಗುವ ‘ಚಾವಡಿ’ – ಮುಕ್ಕಣ್ಣ ಕರಿಗಾರ

ಚಾಡಿ ಮಾತಿಗೆ ಹಾಳಾಗುವ ‘ಚಾವಡಿ’

ಲೇಖಕರು: ಮುಕ್ಕಣ್ಣ ಕರಿಗಾರ

‘ ಚಾಡಿ ಮಾತಿಗೆ ಚಾವಡಿ ಹಾಳಾಯ್ತು’ ಎನ್ನುತ್ತದೆ ಗಾದೆಯೊಂದು.ಚಾಡಿ ಮಾತು ಏನೆಲ್ಲ ಗದ್ದಲ- ರಾದ್ಧಾಂತಗಳನ್ನು ಎಬ್ಬಿಸಬಲ್ಲದು ಅಂದಬಳಿಕ ಚಾವಡಿಯನ್ನು ಹಾಳುಮಾಡುವುದು ಏನು ಮಹಾ? ಕಟ್ಟುವ ಸಾಮರ್ಥ್ಯ ಇರದೆ ಇದ್ದರೂ ಚಾಡಿ ಮಾತಿಗೆ ಕೆಡಹುವ,ಮುರಿಯುವ ಸಾಮರ್ಥ್ಯ ವಿಶೇಷವಂತೂ ಇದೆ.ಊರ ಹಿತವನ್ನೇ ಹಾಳು ಮಾಡಿದ ಚಾಡಿ ಮಾತಿನ ಬಗ್ಗೆ ಹಿರಿಯರು ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ ಈ ಗಾದೆಯಲ್ಲಿ.

‘ಚಾವಡಿ’ ಎಂದರೆ ಹಿಂದೆ ಗ್ರಾಮಾಡಳಿತದ ಕೇಂದ್ರ.ಪಂಚಾಯತಿ ಎನ್ನುವ ಪಂಚಪ್ರಮುಖರ ವ್ಯವಸ್ಥೆ ಬರುವ ಪೂರ್ವದಲ್ಲಿ ‘ ಚಾವಡಿ ಕಟ್ಟೆ’ ಅಂತ ಊರ ಹಿರಿಯರು ನ್ಯಾಯ ನಿರ್ಣಯಿಸುತ್ತಿದ್ದ ಕಟ್ಟೆಗಳ ವ್ಯವಸ್ಥೆ ಇತ್ತು.ಪಂಚಾಯತಿ ಪರಿಕಲ್ಪನೆ ಬಂದ ಮೇಲೆಯೂ ಈ ಚಾವಡಿ ಕಟ್ಟೆಗಳೇ ಪಂಚಾಯತಿ ಕಟ್ಟೆಗಳಾಗಿದ್ದವು.ಊರ ಗ್ರಾಮದೇವರ ಮುಂದಿನ ಕಟ್ಟೆಯೇ ಚಾವಡಿ ಆಗಿರುತ್ತಿತ್ತು.ಇಲ್ಲವೆ ಊರ ಅಗಸೆ ಕಟ್ಟೆಯ ಬಳಿಯ ಕಟ್ಟೆಯೂ ಚಾವಡಿ ಆಗುತ್ತಿತ್ತು.ಬಹುಶಃ ‘ಚೌಡಿಕಟ್ಟೆ’ ಎನ್ನುವ ಮರದಚೌಡಿ ಕಟ್ಟೆಯಿಂದ ಚಾವಡಿ ಪದ ನಿಷ್ಪನ್ನವಾಗಿರಬಹುದು.ಚೌಡಿಯು ಗ್ರಾಮದೇವತೆಯಾಗಿದ್ದು ಆ ದೇವಿಗೆ ದೇವಸ್ಥಾನ ಇರದೆ ಆಲದ ಮರ,ಅರಳೆ ಮರ,ಬಸರಿಮರ ಮತ್ತಿತರ ಮರಗಳಲ್ಲಿ ಚೌಡಿಯ ಆವಾಸ ಇರುತ್ತಿತ್ತು.ಆಲವೋ ಅರಳಿಯೋ ಚೌಡೇಶ್ವರಿಯ ನೆಲೆಯಾದ ಮರಕ್ಕೆ ಕಟ್ಟೆಯನ್ನು ಕಟ್ಟಿ ಪೂಜಿಸುತ್ತಿದ್ದರು.ಅಲ್ಲಿಯೇ ನ್ಯಾಯ ಪಂಚಾಯ್ತಿಗಳು ನಡೆಯುತ್ತಿದ್ದರಿಂದ ಚೌಡಿಕಟ್ಟೆಯು ಬಳಕೆಯಲ್ಲಿ ಚಾವಡಿ ಆಗಿರಬಹುದು.ಅಥವಾ ನಾಲ್ಕುಜನರು ನೆರೆಯುವ ಸ್ಥಳವೂ ಚಾವಡಿ ಆಗಿರಬಹುದು.ಊರ ಜನರು ಪುರಪ್ರಮುಖರ ನೇತೃತ್ವದಲ್ಲಿ ಸಭೆಸೇರುತ್ತಿದ್ದ ಸ್ಥಳಗಳೇ ಚಾವಡಿ ಎಂದಿಟ್ಟುಕೊಳ್ಳೋಣ.

ಚಾವಡಿಯು ಊರಿನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು.ಪುರಪ್ರಮುಖರು ಕಟ್ಟೆಯ ಮೇಲೆ ಕುಳಿತುಕೊಂಡರೆ ಪುರಜನರು ಕೆಳಗೆ ಕುಳಿತುಕೊಂಡು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು.ನ್ಯಾಯ ತೀರ್ಮಾನ,ಪುರೋಭಿವೃದ್ಧಿ,ಗ್ರಾಮದ ಸಮಸ್ಯೆಗಳು,ನೆರೆಹೊರೆಯ ಗ್ರಾಮಗಳೊಂದಿಗಿನ ಸಂಪರ್ಕ- ಸಂವಹನ,ದೇವತಾ ಕಾರ್ಯದ ಚರ್ಚೆ ಮೊದಲಾದವುಗಳು ಚಾವಡಿಯಲ್ಲಿ ನಿರ್ಣಯವಾಗುತ್ತಿದ್ದವು.ಚಾವಡಿಯು ಈಗಿನಂತೆ ಕಾನೂನಿನ ಮಾನ್ಯತೆ ಇರುವ ಪಂಚಾಯತಿ ಸಂಸ್ಥೆಯಾಗಿರದಿದ್ದರೂ ಸ್ಥಳೀಯಾಡಳಿತದ ಅನಧಿಕೃತ ಅಧಿಕಾರಯುತ ಸಮಿತಿಯಾಗಿತ್ತು.ಚಾವಡಿಯ ನಿರ್ಣಯಗಳನ್ನು ಊರವರೆಲ್ಲರೂ ಗೌರವಿಸಿ,ಪಾಲಿಸುತ್ತಿದ್ದರು.ತಪ್ಪು ಮಾಡಿದವರಿಗೆ ದಂಡನೆ ವಿಧಿಸುವ ನ್ಯಾಯಾಲಯಗಳೂ ಆಗಿದ್ದವು ಗ್ರಾಮ ಚಾವಡಿಗಳು.ಚಾವಡಿಯ ಬಗ್ಗೆ ಊರವರಲ್ಲಿ ನಿಷ್ಠೆ,ನಂಬಿಕೆಗಳಿದ್ದರೆ ಚಾವಡಿಯು ಊರಹಿತವನ್ನೇ ಮುಖ್ಯ ಎಂದು ಪರಿಗಣಿಸಿದ ಸ್ಥಳೀಯ ಜನರ ಪರಂಪರಾನುಗತ ಸಂಸ್ಥೆಯಾಗಿತ್ತು.ಊರ ಹಿತಸಾಧಿಸುವ,ನ್ಯಾಯ ನಿರ್ಣಯಿಸುವ ಆಡಳಿತ ಕೇಂದ್ರವಾದ ಚಾವಡಿಯೂ ಚಾಡಿ ಮಾತಿನಿಂದ ಹಾಳಾಯಿತು ಎಂದರೆ ವ್ಯವಸ್ಥೆಯನ್ನು ಹಾಳು ಮಾಡುವ ಮನೆಮುರುಕರು ಎಲ್ಲೆಡೆಯೂ ಇರುತ್ತಾರೆ ಎಂದೇ ಅರ್ಥ.

ಊರ ಹಿತವನ್ನೇ ಬಯಸುವ ಚಾವಡಿಯ ಪ್ರಮುಖರು ಒಂದು ಸಾರೆ ಯಾರಿಗೋ ಒಬ್ಬರಿಗೆ ದಂಡನೆ ವಿಧಿಸುತ್ತಾರೆ.ದಂಡನೆಗೆ ಒಳಗಾದ ವ್ಯಕ್ತಿ ಸಿರಿವಂತನಿರುತ್ತಾನೆ.ತನಗಾದ ಅಪಮಾನದ ಸೇಡನ್ನು ತೀರಿಸಿಕೊಳ್ಳಲು ಆತ ಚಾವಡಿಯ ಪ್ರಮುಖರಲ್ಲೇ ವಿಷಬೀಜ ಬಿತ್ತುತ್ತಾನೆ.ಚಾವಡಿಯ ಪ್ರಮುಖರ ವಿರುದ್ಧ ಜನರನ್ನು ಎತ್ತಿಕಟ್ಟುತ್ತಾನೆ.ಚಾವಡಿಯ ಪ್ರಮುಖರು ಪರಸ್ಪರ ದ್ವೇಷಕಾರುವಂತೆ ಮಾಡುತ್ತಾನೆ.ಚಾವಡಿಯ ಪ್ರಮುಖರಲ್ಲಿ ಅವರನ್ನು ಕಂಡರೆ ಇವರಿಗೆ ಆಗದು,ಇವರನ್ನು ಕಂಡರೆ ಅವರಿಗೆ ಆಗದು ಎನ್ನುವ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಾನೆ.ಪರಿಣಾಮ ಚಾವಡಿಯ ನ್ಯಾಯ ತೀರ್ಮಾನಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದವು.ಮೊದಲು ಚಾವಡಿಯ ಪ್ರಮುಖರು ಸೇರಿ,ಚರ್ಚಿಸಿ ಒಟ್ಟಾಭಿಪ್ರಾಯದ ಸರ್ವಸಮ್ಮತ ತೀರ್ಪು ನೀಡುತ್ತಿದ್ದರು.ಈಗ ಪರಸ್ಪರರಲ್ಲಿ ದ್ವೇಷಾಸೂಯೆಗಳು ಬೆಳೆದ ಪರಿಣಾಮ ಊರಲ್ಲಿಯೂ ಪಂಗಡಗಳುಂಟಾಗಿ ಚಾವಡಿಯ ಪ್ರಮುಖರು ಒಂದೊಂದು ಪಂಗಡದ ಪರವಹಿಸಿ ಮಾತನಾಡತೊಡಗಿದರು.ನ್ಯಾಯ ನಿರ್ಣಯ ಜಟಿಲವಾಗತೊಡಗಿತು.ಚಾವಡಿಯ ನ್ಯಾಯ ವ್ಯವಸ್ಥೆ ಕುಸಿದದ್ದು ಕಂಡು ಗ್ರಾಮಸ್ಥರಲ್ಲೂ ಬೇಸರ ಉಂಟಾಗಿ ಅವರೆಲ್ಲರೂ ಚಾವಡಿಯಿಂದ ದೂರಸರಿಯತೊಡಗಿದರು.ಇತ್ತ ಚಾವಡಿಯ ಪ್ರಮುಖರು ತಮ್ಮ ತಮ್ಮಲ್ಲಿನ ಭಿನ್ನಾಭಿಪ್ರಾಯದಿಂದ ಚಾವಡಿಗೆ ಬರುವುದನ್ನು ನಿಲ್ಲಿಸಿದರು.ಅತ್ತ ಜನರೂ ಬರುತ್ತಿಲ್ಲ; ಇತ್ತ ಪ್ರಮುಖರೂ ಬರುತ್ತಿಲ್ಲ.ಹೀಗೆ ಚಾವಡಿಯು ಹಾಳಾಗಿ ಊರಜನರ ತಿರಸ್ಕಾರಕ್ಕೆ ತುತ್ತಾಯಿತು.ಇದು ಸಿರಿವಂತನೊಬ್ಬನ‌ ನಂಜುಬುದ್ಧಿಯ ಪರಿಣಾಮ! ಸ್ವಾರ್ಥಿಗಳು,ಸಮಯಸಾಧಕರು ಹೇಗೆ ವ್ಯವಸ್ಥೆಯನ್ನು ಹಾಳುಮಾಡಬಲ್ಲರು ಎನ್ನುವುದಕ್ಕೆ ಇದು ನಿದರ್ಶನ.

ಅಧಿಕಾರಕೇಂದ್ರ ಇರುವುದೇ ಹಾಗೆ!ಪ್ರಭುತ್ವವನ್ನು ಓಲೈಸಿ ಲಾಭ ಮಾಡಿಕೊಳ್ಳುವ ಬುದ್ಧಿಯ ಜನರೇ ಅಧಿಕಾರ ಕೇಂದ್ರದ ಸುತ್ತ ಗಿರಕಿ ಹೊಡೆಯುತ್ತಿರುತ್ತಾರೆ.ಪ್ರಭುತ್ವವು ನಡೆಯಬೇಕಾದರೆ ಅದಕ್ಕೆ ಅದರದ್ದೇ ಆದ ಆಡಳಿತಾತ್ಮಕ ವ್ಯವಸ್ಥೆ ಇರುತ್ತದೆ.ಪ್ರಭುತ್ವದ ಘನತೆ- ಗೌರವವನ್ನು ಕಾಪಾಡಲು ಪ್ರಭುತ್ವ ನಿಷ್ಠರು ಪ್ರಯತ್ನಿಸುತ್ತಿದ್ದರೆ ಪ್ರಭುತ್ವದಿಂದ ತಮ್ಮ ಕಾರ್ಯಸಾಧನೆ ಹೇಗೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿರುವ ಸಮಯಸಾಧಕರ ಬಹುದೊಡ್ಡಪಡೆಯೇ ಇರುತ್ತದೆ.ಪ್ರಭುತ್ವವು ನಿಜವಾಗಿ ಜನಪರವಾಗಿರಲು ಈ ಪಟ್ಟಭದ್ರರಪಡೆಯು ಅವಕಾಶ ನೀಡುವುದಿಲ್ಲ.ಜನರು ಹೇಗಿದ್ದರೇನು ತಾವು ಮಾತ್ರ ನೆಟ್ಟಗಿರಬೇಕು ಎನ್ನುವುದೇ ವ್ಯಾಪಾರಿಗಳ ಮನೋಸ್ಥಿತಿ.ಪ್ರಭುತ್ವದಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ವ್ಯಾಪಾರೋದ್ಯಮಿಗಳು.ಅವರ ಹಣ ಮತ್ತು ವರ್ಛಸ್ಸಿನಿಂದ ಪ್ರಭುತ್ವಕ್ಕೆ ಹತ್ತಿರದವರೇ ಆಗಿರುತ್ತಾರೆ,ಪ್ರಭುತ್ವಕ್ಕೆ ಬೇಕಾದವರು ಆಗಿರುತ್ತಾರೆ.ಆಡಳಿತ ಸೂತ್ರ ಹಿಡಿದವರು ಸಮರ್ಥರು,ಮುಂದಾಲೋಚನೆಯುಳ್ಳವರು,ಸಮದರ್ಶಿಗಳು,ರಾಗದ್ವೇಷಮುಕ್ತರೂ ಆಗಿದ್ದರೆ ಯಾವುದು ಬಹುಜನರಿಗೆ ಹಿತವಾಗುತ್ತದೋ ಅಂತಹ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.ಆಡಳಿತ ಸೂತ್ರಹಿಡಿದವರು ಬಹುಜನರ ಹಿತಕ್ಕಿಂತ ತಮ್ಮಸುತ್ತಮುತ್ತಣ ವ್ಯಾಪಾರೋದ್ಯಮಿಗಳ ಹಿತವೇ ಮುಖ್ಯ ಎಂದು ಪರಿಗಣಿಸಿದಾಗ ‘ ಉಳ್ಳವರ ಪರ’ ಕಾನೂನುಗಳು ರೂಪಿಸಲ್ಪಡುತ್ತವೆ.ಜನನಿಷ್ಠರು,ಸಮಷ್ಟಿಪ್ರಜ್ಞೆಯುಳ್ಳವರು ಪ್ರಭುತ್ವದಿಂದ ದೂರವಾಗುತ್ತಾರೆ.ವ್ಯಾಪಾರಿಗಳು ,ಸ್ವಾರ್ಥಿಗಳು ಮತ್ತು ಅವಕಾಶವಾದಿಗಳು ಪ್ರಭುತ್ವಕ್ಕೆ ಹತ್ತಿರವಾಗುವುದು ಪ್ರಭುತ್ವದ ಅಪಮೌಲ್ಯ ಮತ್ತು ಅಧಃಪತನದ ಸಂಕೇತ.ಬಹುಜನರಹಿತಕ್ಕಾಗಿ ಶ್ರಮಿಸುವವರು ಆಡಳಿತ ಕೇಂದ್ರದಿಂದ ದೂರವಾಗುವ ಮೂಲಕ ಪ್ರಭುತ್ವವು ವ್ಯಾಪಾರಿಗಳ,ಅವಕಾಶವಾದಿಗಳ ಸ್ವಾರ್ಥಸಾಧನೆಯ ತಾಣವಾಗಿ ಜನರಿಂದ ದೂರವಾಗಿ ಕೊನೆಗೊಂದು ಅವನತಿಯನ್ನು ಹೊಂದುತ್ತದೆ.

ಪ್ರಭುತ್ವದಲ್ಲಿರುವವರು ವಿವೇಕಿಗಳಾಗಿರಬೇಕು,ದೂರದೃಷ್ಟಿ ಉಳ್ಳವರು ಆಗಿರಬೇಕು,ಸ್ವಾರ್ಥ- ದುರಾಸೆ ಮುಕ್ತರಾಗಿ ನಿಸ್ವಾರ್ಥ ಬುದ್ಧಿಯ ಜನಸೇವಕರಾಗಿರಬೇಕು.ಇಂತಹ ಜನಪರ ಪ್ರಭುತ್ವದಿಂದ ಸಮಷ್ಟಿಕಲ್ಯಾಣ ಸಾಧ್ಯ.ಆದರೆ ಪ್ರಭುತ್ವವು ಆಸೆ -ಆಮಿಷಗಳಿಗೆ ಒಳಗಾದರೆ,ಬಣ್ಣದ ಮಾತುಗಳಿಗೆ ಮರುಳಾದರೆ ಅದು ಜನರಿಂದ ದೂರವಾಗುತ್ತದೆ.ಪ್ರಭುತ್ವದ ಗುರಿ ಬಹುಸಂಖ್ಯಾತ ಪ್ರಜಾವರ್ಗದ ಕಲ್ಯಾಣವು ಆಗಿರಬೇಕೇ ಹೊರತು ಕೆಲವೇ ಜನ ವ್ಯಾಪಾರಿಗಳ ಹಿಡಿತದ ಲಾಭಕೋರರ ಅಡ್ಡೆ ಆಗಬಾರದು.ಜನಹಿತವೇ ಮುಖ್ಯ ಎನ್ನುವ ಪ್ರಭುತ್ವವು ಸರ್ವಶ್ರೇಷ್ಠ ಪ್ರಭುತ್ವವಾದರೆ ತನ್ನ ಸ್ಥಾನಭದ್ರತೆಗಾಗಿ ವ್ಯಾಪಾರೋದ್ಯಮಿಗಳನ್ನು ಪೊರೆಯುವ ಪ್ರಭುತ್ವವು ಕನಿಷ್ಠ ಪ್ರಭುತ್ವವಾಗಿ ಜನದೂರಪ್ರಭುತ್ವವಾಗಿ ಅಂತ್ಯಕಾಣುತ್ತದೆ.

ಕೆಲವೇ ಜನ ವ್ಯಾಪಾರಿಗಳ ಮಾತುಗಳನ್ನು ಕೇಳಿ ಚಾವಡಿಯು ಹಾಳಾಗದಿರಲಿ; ಬದಲಿಗೆ ವ್ಯಾಪಾರೋದ್ಯಮಿಗಳನ್ನು ನಿರ್ಲಕ್ಷಿಸಿಯಾದರೂ ಸರಿಯೆ ಬಹುಸಂಖ್ಯಾತರಾದ ರೈತರು,ಶ್ರಮಿಕರು,ಕುಶಲಕರ್ಮಿಗಳು,ಬಡವರ ಹಿತ ಕಾಪಾಡುವ ಸಮಷ್ಟಿಕಲ್ಯಾಣವನ್ನು ಸಾಧಿಸಲಿ.

ಮುಕ್ಕಣ್ಣ ಕರಿಗಾರ
ಮೊ;94808 79501

12.06.2021