ಏಣಿ ಒದೆಯುವ ಮಂದಿ ಅರಿಯದ ದುರ್ಗತಿ : ಮುಕ್ಕಣ್ಣ ಕರಿಗಾರ

ಏಣಿ ಒದೆಯುವ ಮಂದಿ ಅರಿಯದ ದುರ್ಗತಿ

ಲೇಖಕರು: ಮುಕ್ಕಣ್ಣ ಕರಿಗಾರ

ಇದು ಕೆಲವರ ಸ್ವಭಾವ,ತಮ್ಮ ಬೆಳವಣಿಗೆಗೆ ನೆರವಾದವರನ್ನೇ ತುಳಿದು ಬೆಳೆಯುವ ವಿಕೃತ ಪ್ರವೃತ್ತಿ.ಅಂತಹವರನ್ನು ‘ ಏಣಿ ಒದೆಯುವ ಮಂದಿ’ ಎನ್ನುತ್ತಾರೆ.ಈಗಿನ ಅತ್ಯಾಧುನಿಕ ಮನೆಗಳಲ್ಲಿ ಲಿಫ್ಟ್ ಸೇರಿದಂತೆ ಎಲ್ಲಾ ಆಧುನಿಕ ವ್ಯವಸ್ಥೆಗಳು ಇರುವುದರಿಂದ ಏಣಿಯ ಅವಶ್ಯಕತೆ ಅಷ್ಟಾಗಿ ಕಾಣಿಸಲಿಕ್ಕಿಲ್ಲ.ಆದರೆ ಹಳೆಯ ಕಾಲದ ಮನೆಗಳಿಗೆ ಏಣಿಗಳು ಅನಿವಾರ್ಯವಾಗಿದ್ದವು ಮಾಳಿಗೆ,ಮಹಡಿಗಳನ್ನು ಹತ್ತಬೇಕು ಎಂದರೆ.

ಒಬ್ಬ ಮನುಷ್ಯ ಎತ್ತರದ ಮಹಲನ್ನು ಹತ್ತಬೇಕಿತ್ತು.ಆತನಿಗೆ ಏಣಿ ನೀಡಲಾಯಿತು.ಮಹಲು ಹತ್ತಿದ ಕೂಡಲೆ ಆ ಪುಣ್ಯಾತ್ಮ ಮಹಲಿನ ಸೊಬಗು- ಸೌಂದರ್ಯಗಳಿಗೆ ಮನಸೋತು ‘ ಇನ್ನು ಈ ಏಣಿಯಿಂದ ಆಗಬೇಕಾದದ್ದು ಏನು’ ಎಂದು ಏಣಿಯನ್ನು ಒದೆದನಂತೆ.ಪಾಪ! ನೆಲಕ್ಕೆ ಬಿದ್ದಿತು ಅವನಿಗೆ ಮೇಲೆ ಹತ್ತಲು ಆಸರೆಯಾದ ಏಣಿ.ಏಣಿಯೇನೋ ಬಿದ್ದಿತು,ಆದರೆ ಮೇಲೆ ಏರಿದ ಪುಣ್ಯಾತ್ಮ ಎಷ್ಟು ಹೊತ್ತು ಇದ್ದಾನು ಮೇಲೆ? ಬರಲೇಬೇಕಲ್ಲ ಕೆಳಗೆ.ಮಹಲಿನಿಂದಲೇ ಜೀವನ ನಿರ್ವಹಣೆ ಸಾಧ್ಯವಿಲ್ಲ.ಮಹಲು ಎಷ್ಟೇ ವೈಭವಯುತವಾಗಿರಲಿ,ಎಷ್ಟೇ ಸೊಗಸಾಗಿರಲಿ ಅಲ್ಲಿಯೇ ಇರಲಾಗದು.ಕೆಳಗಿಳಿದು ಬರಬೇಕು ಜೀವನ ನಿರ್ವಹಣೆಗೆ.ಹೊಲ ಗದ್ದೆಗಳಿಗೆ,ಪಂಚಾಯತಿಗೆ,ಬಂಧು ಬಾಂಧವರ ಊರುಗಳಿಗೆ ಹೋಗಲು ಅಥವಾ ಮತ್ತಾವುದೊ ಕಾರ್ಯನಿಮಿತ್ತವಾಗಿ ಹೋಗಬೇಕಾದರೂ ಕೆಳಗಿಳಿಯಲೇಬೇಕು.ಆಗ ಏನು ಮಾಡುವುದು? ಏಣಿಯನ್ನಂತೂ ಒದ್ದಾಗಿದೆ.ನೆಲಕ್ಕೆ ಬಿದ್ದ ಏಣಿ ಗೋಡೆಗೆ ಆನಿಸಿ ನಿಲ್ಲದು.ಮೊದಲು ಏಣಿ ಕೊಟ್ಟವನಿಗೆ ಈ ಸೊಕ್ಕಿನ ಮನುಷ್ಯನ ಬಗ್ಗೆ ಬೇಸರವಿದೆ.ಆತನೂ ಬರುತ್ತಿಲ್ಲ ಏಣಿಯನ್ನಿಡಲು.ಕೂಗಿ ಅರಚಿ ಅವರಿವರ ನೆರವಿಗೆ ಅಂಗಲಾಚುವ ಅನಿವಾರ್ಯತೆ ಏಣಿಯನ್ನು ಒದ್ದವನಿಗೆ.ಆತ ಏಣಿಗೆ ಕೃತಜ್ಞನಾಗಿರುವ ಬದಲು ಕೃತಘ್ನನಾಗಿ ವರ್ತಿಸಿದ್ದರಿಂದ ಸಮಾಜದ ಎಲ್ಲರೆದುರು ತನ್ನ ಸಣ್ಣತನವನ್ನು ತೆರೆದಿಟ್ಟುಕೊಳ್ಳಬೇಕಾಯಿತು.

ನಮ್ಮಲ್ಲಿ ಬಹಳಷ್ಟು ಜನ ಏಣಿಯನ್ನು ಒದೆಯುವವರೆ! ಅಧಿಕಾರ ಹಣ ಬಂದೊಡನೆ ಉನ್ಮತ್ತರಾಗಿ ವರ್ತಿಸುತ್ತಾರೆ.ತಮಗೆ ಆಸರೆಯಾಗಿ ತಮ್ಮ ಅಧಿಕಾರ ಯಶಸ್ವಿಯಾಗಿ ನಡೆಯಲು ಕಾರಣರಾದವನ್ನು ಕಡೆಗಣಿಸಿ ಅವರಿಗೆ ದ್ರೋಹಬಗೆಯುವ ಎಷ್ಟೋ ಜನ ಪುಣ್ಯಾತ್ಮರು ಇದ್ದಾರೆ ನಮ್ಮ ನಡುವೆ.ತಾವು ಈ ಸ್ಥಾನದಲ್ಲಿ ಗಟ್ಟಿಯಾಗಿ,ಘನತೆಯಿಂದ ಕುಳಿತುಕೊಳ್ಳಲು ಆ ವ್ಯಕ್ತಿಯ ದೊಡ್ಡಸ್ತಿಕೆಯೇ ಕಾರಣ ಎಂದರಿಯದ ಸಣ್ಣ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ತಮಗೆ ಆಸರೆಯಾದವರಿಗೆ ದ್ರೋಹ ಬಗೆಯುತ್ತಾರೆ.ಹೀಗೆ ನಂಬಿಕೆಗೆ ದ್ರೋಹಬಗೆದು ತಮ್ಮ ಸ್ಥಾನ ಭದ್ರಪಡಿಸಿಕೊಂಡವರು ಕೆಳಗಿಳಿದು ಬರಲರಿಯದೆ ಪರಿತಪಿಸುವ ಪಾಡು ಸುನಿಶ್ಚಿತ.ಅದನ್ನು ತಪ್ಪಿಸಲಾಗದು.

ರಾಜಕಾರಣಿಗಳು,ಸರಕಾರಿ ಅಧಿಕಾರಿಗಳು,ವ್ಯಾಪಾರೋದ್ಯಮಿಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕಾಣಸಿಗುತ್ತಾರೆ ಏರಿದ ಮೇಲೆ ಏಣಿ ಒದೆಯುವ ಜನರು.ತಮ್ಮ ಬೆಳವಣಿಗೆಗೆ,ಉನ್ನತಿಗೆ ನೆರವಾದವರನ್ನು ಸ್ಮರಿಸಬೇಕು ಎನ್ನುವ ಕೃತಜ್ಞತಾಭಾವನೆ ಇಲ್ಲದ ದೊಡ್ಡಸ್ಥಾನಗಳಲ್ಲಿ ವಿರಾಜಮಾನರಾಗಿರುವ ಇಂತಹ ‘ ಸಣ್ಣಮನುಷ್ಯರುಗಳು’ ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಮಾಡುತ್ತಾರೆ.ತಾವು ಯಾರ ಬಲದಿಂದ ಈ ಉನ್ನತಿಗೆ ತಲುಪಿದ್ದೇನೆ,ಯಾರ ಶ್ರಮದಿಂದ ಈ ಶ್ರೇಯಸ್ಸು ದೊರೆತಿದೆ ಎನ್ನುವುದನ್ನು ಯೋಚಿಸಲೂ ಆಗದಷ್ಟು ಕುಬ್ಜರಾಗಿರುತ್ತಾರೆ ಹೃದಯಹೀನರು.ಉಪಕಾರಸ್ಮರಣೆ ಇಲ್ಲದ ವ್ಯಕ್ತಿ ಎಷ್ಟೇ ದೊಡ್ಡವನಿದ್ದರೂ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅನಾಗರಿಕನೆ,ಅನಾದರಣೀಯನೇ ಹೊರತು ಆದರಣೀಯನಲ್ಲ! ಆದರೆ ಸಮಯಸಾಧಕರು ಇಲ್ಲವೇ ಅವಕಾಶವಾದಿಗಳ ಕೂಟ ಇಂತಹ ಏಣಿ ಒದ್ದವರನ್ನೇ ಓಲೈಸುತ್ತದೆ ತಮ್ಮ ಸ್ವಾರ್ಥಸಾಧನೆಗಾಗಿ ಎನ್ನುವುದು ನಾವು ನಿತ್ಯಜೀವನದಲ್ಲಿ ಕಾಣುವ ಸತ್ಯ ಸಂಗತಿ.ರಾಜಕಾರಣ ಮತ್ತು ಸರಕಾರಿ ಸೇವೆಯಲ್ಲಂತೂ ಇದು ಇನ್ನಷ್ಟು ವಿಕೃತಾವಸ್ಥೆ ತಲುಪಿರುತ್ತದೆ.ಅರ್ಹತೆ ಇಲ್ಲದೆ ವಾಮಮಾರ್ಗಗಳಿಂದ ಮೇಲೆ ಬಂದವರು ಸರಿಯಾದ ಮಾರ್ಗದಿಂದ,ಸ್ವ ಸಾಮರ್ಥ್ಯದಿಂದ ಮೇಲೆ ಬಂದು ಬೆಳೆದುನಿಂತ ಸತ್ತ್ವಶೀಲರನ್ನು, ನಿಷ್ಠುರವಾದಿಗಳನ್ನು ಇಷ್ಟಪಡುವುದಿಲ್ಲ .ಮೇಲಿನವರು ಹಾಗೆಯೇ! ಮೇಲಿನ ಸ್ಥಾನಗಳಲ್ಲಿ ಕುಳಿತವರೆಲ್ಲ ಬುದ್ಧಿವಂತರೇ ಆಗಿರುತ್ತಾರೆ,ಸಮರ್ಥರೇ ಆಗಿರುತ್ತಾರೆ ಎಂದು ಹೇಳಲಾಗದು.ಉನ್ನತ ಸ್ಥಾನಗಳಲ್ಲಿ ಕುಳಿತವರಲ್ಲಿ ಐದರಿಂದ ಹತ್ತು ಪ್ರತಿಶತ ಜನರಲ್ಲಿ ಮಾತ್ರ ನಿಜವಾದ ಪ್ರತಿಭೆ,ಸಾಮರ್ಥ್ಯ,ನಾಯಕತ್ವದ ಗುಣಗಳಿರುತ್ತವೆ.ಉಳಿದವರು ಸ್ಥಾನಬಲದಿಂದ ದೊಡ್ಡವರಾಗಿರುತ್ತಾರಷ್ಟೆ.ಸ್ವಸಾಮರ್ಥ್ಯ ಇಲ್ಲದ ದೊಡ್ಡವರು,ಬಳಸು ಮಾರ್ಗಗಳಿಂದ ಮೇಲಕ್ಕೆ ಬಂದವರು ಒಂದಾಗುವುದು ಅನಿವಾರ್ಯವೆ ಅವರ ಅಸ್ತಿತ್ವಕ್ಕಾಗಿ.ಇವರಿಬ್ಬರ ನಡುವಿನ ಏಣಿಯಾಗಿರುವ ಸತ್ತ್ವಶೀಲರು,ತತ್ತ್ವನಿಷ್ಠರು ಈ ಇಬ್ಬರಿಗೂ ಬೇಡವಾಗುತ್ತಾರೆ. ಸಾಮರ್ಥ್ಯಹೀನ ದೊಡ್ಡವರು,ಅರ್ಹತೆ ಇಲ್ಲದೆ ಬಳಸು ಮಾರ್ಗಗಳಿಂದ ಮೇಲೆ ಬಂದವರು ಪರಸ್ಪರರಿಗೆ ‘ ಬೇಕಾದವರು’ ಆಗುತ್ತಾರೆ.ದುರ್ಬಲರಿಗೆ ದುರ್ಬಲರೇ ನೆಂಟರಾಗುತ್ತಾರಲ್ಲದೆ ಬಲವಂತರ ನೆಂಟಸ್ತಿಕೆ ರುಚಿಸದು.ಸಾರ್ವಜನಿಕ ಸೇವೆಯಲ್ಲಿ ಓಲೈಸುವಿಕೆಗೆ,ಗುಲಾಮಗಿರಿಗೆ ಇರುವ ಮಹತ್ವ ಪ್ರತಿಭೆ,ಕೌಶಲ್ಯ,ಪ್ರಾಮಾಣಿಕತೆ ಮತ್ತು ದಕ್ಷತೆಗಳಿಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಪರಸ್ಪರ ಹೊಂದಾಣಿಕೆಯೇ ಜೀವನದ ನಿಯಮವಾಗಿರುವಾಗ ಕತ್ತಲೆ ಕತ್ತಲೆಯ ಸ್ನೇಹವನ್ನಲ್ಲದೆ ಬೆಳಕಿನ ಸ್ನೇಹ ಬಯಸುತ್ತದೆಯೆ?

ಆದರೆ ಕಾಲ ಅಂತ ಒಂದು ಇದೆ ಎಲ್ಲವನ್ನೂ ನಿರ್ಧರಿಸಲು.ಕಾಲರಾಯನ ಹೊಡೆತವನ್ನು ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.ಇಂದು ಏಣಿಯನ್ನು ಒದ್ದವರೇ ಮುಂದೆ ಏಣಿಯನ್ನು ಪೂಜಿಸಬೇಕಾದ ದಿನಗಳು ಬರಬಹುದು.ಏಣಿ ತಮ್ಮ ಸ್ವಾರ್ಥಸಾಧನೆಗೆ ಅಡ್ಡಿ ಎಂದವರೇ ಏಣಿಯ ಪ್ರಚಂಡ ಹೊಡೆತ ತಿನ್ನಬೇಕಾಗಬಹುದು.ಯಾರು ಬಲ್ಲರು ಕಾಲರಾಯನ ಕೈಯಲ್ಲಿ ಯಾರು,ಏನಾಗುವರೋ?ಏಣಿಯನ್ನು ಒದೆಯುವವರಿದ್ದರೂ ಚಿಂತೆಯಿಲ್ಲ ನಾವು ಮಾತ್ರ ಏಣಿಗಳಾಗಿಯೇ ಇರೋಣ ಇನ್ನೊಬ್ಬರ ಏಳಿಗೆಗೆ ಸಹಕರಿಸುತ್ತ.ಮಹಲು ಏರಿ ನಮ್ಮನ್ನು ಒದ್ದವರು ನಮ್ಮನ್ನು ಮರೆತಿರಬಹುದು ಆದರೆ ಆ ವ್ಯಕ್ತಿ ಮೇಲೇರಲು ನಾನು ಕಾರಣ ಎನ್ನುವ ಆತ್ಮತೃಪ್ತಿ ನಮಗಿರುತ್ತದೆ.ಮೇಲೇರಿದ ವ್ಯಕ್ತಿ ಏಣಿಯನ್ನು ಮರೆತರೂ ಆ ವ್ಯಕ್ತಿ ಏಣಿಯ ಸಹಾಯದಿಂದಲೇ ಮೇಲೆ ಏರಿದ್ದಾನೆ ಎನ್ನುವುದನ್ನು ನೋಡಿದ ನಾಲ್ಕಾರು ಜನ ಮತ್ತು ಸಮಾಜ ಇರುತ್ತದೆ.ದೊಡ್ಡವರು ಎಂದು ಬೀಗುವವರ ಎದುರು ಸತ್ಯ ಹೇಳುವಷ್ಟು ಶಕ್ತರಲ್ಲದಿದ್ದರೂ ಜನಸಾಮಾನ್ಯರು ಏಣಿಯನ್ನು ಒದ್ದವರ’ ನಡೆ ಸರಿಯಲ್ಲ ‘ ಎಂದು ಪಿಸುಮಾತಿನಲ್ಲಾದರೂ ಸತ್ಯಪ್ರಕಟಿಸುತ್ತಾರೆ.ತತ್ಕಾಲದಲ್ಲಿ ಅಧಿಕಾರದೆದುರು ಸೋತ ಸತ್ಯವು ಪಿಸುಮಾತುಗಳ ಮೂಲಕ ಮಾರ್ದನಿಗೊಳ್ಳುತ್ತ ಮುಂದೆ ಗುಡುಗು- ಸಿಡಿಲುಗಳಾಗಿ ಆರ್ಭಟಿಸುವ ಸಾಮರ್ಥ್ಯ ಪಡೆಯುತ್ತದೆ.

ಮುಕ್ಕಣ್ಣ ಕರಿಗಾರ
ಮೊ: 94808 79501

06.12.2021