ಕಾವ್ಯಲೋಕ: ಕೊಟ್ರೇಶ ಬಿ ಅವರ ಕವನ ‘ಆತ್ಮ ಸತ್ತವರು’

ಆತ್ಮ ಸತ್ತವರು

*ಕೊಟ್ರೇಶ ಬಿ
ತಿರುಗಿ‌ನೋಡು ಬಿಕ್ಕಳಿಸಲು ಯಾರಿಹರು
ನಿನ್ನ ಬಿಟ್ಟು ? ನಿನ್ನ ತಬ್ಬಿದ್ದೆ ನಾನು ತಬ್ಬಿಕೊಳ್ಳಲು
ಇಲ್ಲವೇನೋ ಎನ್ನುವಷ್ಟು
ನಿನ್ನ ನನ್ನಿಂದ ಬಿಡಿಸುವ ಹೊತ್ತು
ನನ್ನ ಶುದ್ದತೆಯ ಆತ್ಮಕೆ ಸಾವೇ ಚೆನ್ನ
ಯಾವ ಕಾಲವೂ ತುಂಡರಿಸಲಾಗದು ನಿನ್ನಿಂದ.
ಒಲವ ಬಂಧದ ಕೊಂಡಿ
ಬಹುಶ: ನಾವು ಪ್ರೀತಿಸಿದ್ದೆ ಹೀಗೆ
ಜಂಜಾಟ,ದುಗುಡಗಳ ಆಚೆ.
ನಡೆದ ಸಾವಿರ ಅಡಿಗಳ ದಾರಿಯಲಿ
ದೇವರ ಪ್ರೀತಿ ತಂಪನೀಡಿತ್ತು
ಕೆಲವೊಮ್ಮೆ ಹಾದಿ ಮರೆತ ಕತ್ತಲಲಿ
ನಿನ್ನೊಲುಮೆ ಮುಂಬೆಳಕು ಹೆಜ್ಜೆಗೆ
ಹೃದಯಗಳ ಬೆರೆಕೆಗೆ ಕಡಾಯಿಯುಂಟೆ
ಅಂಟಿಕೊಂಡಿದ್ದೇವೆ ನೆತ್ತಿಯ ಉಸಿರಾಗಿ
ಬಾಚಿದವರ ಬಿಡಿಸಬಹುದು
ಬೆರತವರನ್ನೇಗೆ?
ನಮ್ಮಿಬ್ಬರ ಆತ್ಮದ ಕಸೂತಿಗೆ
ದುಗುಡ ದುಮ್ಮಾನಗಳಿಲ್ಲ
ಒಂದಿಷ್ಟು ನಿಷ್ಕಲ್ಮಶ ನೆನಪುಗಳಿವೆ.
ಹಳಿಗಳ‌ಮೇಲೆ ನಮ್ಮಿಬ್ಬರ ಹುಚ್ಚು ಮನಸ್ಸುಗಳು
ಹೋಗುತ್ತಲೇ ಇವೆ
ನಿತ್ಯ ನೂತನ ಜಾಡು ಹಿಡಿದು
ಬೇರೆಂಬ ಭಾವ ತೊರೆದು.
ನನ್ನೆದೆಗಬ್ಬುವ ನಿನ್ನೊಲವ ಬಳ್ಳಿ
ಹೂವಾಗದಿದ್ದರೂ ತಂಪು ತಂಪು
ನಿನ್ನ‌ವಸಂತದ ಹಾಡಿಗೆ ನಾನು ಅರಳುತ್ತೇನೆ
ನೀ ನೀರಾದರೆ ಕಣ್ಣಾಗುವೆ ನಾನು,
ನೆಲಕ್ಕಳಿಯುವ ಹನಿಗಳಿಗೆ
ಮುತ್ತಿನ ಸುಯೋಗವಿದೆ
ನಿನಗಾಗಿ ಕನಲಿದ್ದೇನೆ
ಒಡಲ ಹಾಡು ಹೇಳಿ
ಆತ್ಮಸತ್ತವರಿಗಿಲ್ಲಿ ಕಾಣದು ನಿನ್ನ ಪ್ರೀತಿ
ನನ್ನ ಹೊರತು.

ಕೊಟ್ರೇಶ.ಬಿ
ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ತಿಡಿಗೋಳ
ತಾ.ಸಿಂಧನೂರು ಫೋ-8310020942