ಮಧುರಚೆನ್ನ ಕಾವ್ಯ ಪ್ರಶಸ್ತಿಗೆ ‘ಕಾರುಣ್ಯದ ಮೋಹಕ ನವಿಲುಗಳೆ’ ಕವನ ಸಂಕಲನ ಆಯ್ಕೆ

  ವಿಜಯಪುರ ಡಿ.03: ಮಧುರಚೆನ್ನ ಪ್ರತಿಷ್ಠಾನ ಹಲಸಂಗಿಯವರು ಕೊಡಮಾಡುವ 2021ನೇ ಸಾಲಿನ ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಆರನಕಟ್ಟೆ ರಂಗನಾಥ ಅವರ *ಕಾರುಣ್ಯದ ಮೋಹಕ ನವಿಲುಗಳೆ* ಕವನ ಸಂಕಲನ ಆಯ್ಕೆಯಾಗಿದೆ. ಅಂತಿಮವಾಗಿ ಫಲಿತಾಂಶ ಪ್ರಕಟಿಸುವ ಸಂದರ್ಭದಲ್ಲಿ ಚಾಂದ್ ಪಾಷ ಎನ್ ಎಸ್ ಅವರ “ಚಿತ್ರ ಚಿಗುರುವ ಹೊತ್ತು”, ಶ್ರುತಿ ಬಿ ಆರ್ ಅವರ “ಜೀ಼ರೋ ಬ್ಯಾಲೆನ್ಸ್” ಹಾಗೂ ಆರನಕಟ್ಟೆ ರಂಗನಾಥ ಅವರ “ಕಾರುಣ್ಯದ ಮೋಹಕ ನವಿಲುಗಳೆ” ತೀವ್ರ ತರದಲ್ಲಿ ಸ್ಪರ್ಧೆ ನೀಡಿದ್ದು ಸ್ಪರ್ಧೆಯ ನಿಯಮದಂತೆ ಅಂತಿಮವಾಗಿ ಒಂದೇ ಕೃತಿ ಆಯ್ಕೆ ಮಾಡುವ ನಿಮಿತ್ಯ ಕೊನೆಯದಾಗಿ ಆರನಕಟ್ಟೆ ರಂಗನಾಥ ಅವರ “ಕಾರುಣ್ಯದ ಮೋಹಕ ನವಿಲುಗಳೆ” ಕವನ ಸಂಕಲನ ಆಯ್ಕೆ ಆಗಿರುತ್ತದೆ. ಪ್ರಶಸ್ತಿಯೂ ಹತ್ತು ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ ಎಂದು ಸಂಚಾಲಕರು ತಿಳಿಸಿದ್ದಾರೆ. ಈ ಬಾರಿ ಕೇಶವ ಮಳಗಿ ಹಾಗೂ ಗೀತಾ ವಸಂತ ಅವರು ತೀರ್ಪುಗಾರರಾಗಿದ್ದರು.

ತೀರ್ಪುಗಾರರ ಟಿಪ್ಪಣಿ:

ಮನುಷ್ಯನ, ಸಮುದಾಯವೊಂದರ ಸುಡು ಬೇಗೆಯನ್ನು ಸಂಯಮದಿಂದ ಕಾವ್ಯ ರೂಪಕವಾಗಿಸುವಲ್ಲಿ ಕವಿ ಇಲ್ಲಿ ತೋರಿರುವ ಪಕ್ವತೆ ಮತ್ತು ಸಾತತ್ಯ ಗಮನಾರ್ಹವಾದುದು. ಒಡಲ ತಳಮಳವನ್ನು ಹೊರ ಚೆಲ್ಲಲು ಕವಿ ಹೊಸ ನುಡಿಗಟ್ಟುಗಳನ್ನು ಹುಡುಕುತ್ತಿರುವುದು ಕೂಡ ಗಂಭೀರ ಕಾವ್ಯಕರ್ಮದ ಭಾಗವಾಗಿರುವುದು ಸ್ತುತ್ಯರ್ಹವಾಗಿದೆ. ಲೋಕ ಅಥವ ಓದುಗರಿಂದ ಈ ಕವಿತೆಗಳು ಬಯಸುತ್ತಿರುವುದು ಅನುಕಂಪ, ಸಹಾನುಭೂತಿಯನ್ನಲ್ಲದೆ, ಮಿಡಿವ ಕರುಳು, ಜಿನುಕುವ ಕರುಣೆ ಮತ್ತು ನೋವಿಗದ್ದಿಕೊಳ್ಳುವ ಗುಣ ತೋರಬಲ್ಲ ಸ್ವಾನುಭೂತಿಯನ್ನು. ಮತ್ತು ಆತ್ಮವಿಮರ್ಶೆಯನ್ನು.

ಇಲ್ಲಿ ಪ್ರತಿಮೆಗಳಾಗಿ ಹೊರ ಹೊಮ್ಮಿರುವ ‘ಅವ್ವ’, ಆಕೆ ನಡೆದಾಡುವ ಪಾದ, ಧರೆ, ‘ದಲಿತರು’, ‘ಕರಿಯಜ್ಜ’ ಬಹು ಸಮುದಾಯದ ವಿಶಿಷ್ಟ, ಆದರೆ, ಯಾತನಾಮಯ ಅನುಭವವನ್ನು ಕಥಿಸಲೆಂದೇ ಹುಟ್ಟಿಕೊಂಡವರು. ಅಲ್ಲಲ್ಲಿ, ಸಹನೆ ಕಟ್ಟೆಯೊಡೆದು ಧ್ವನಿ ಎತ್ತರಿಸಿದಂತೆ ಕಾಣುವಾಗಲೇ ಅದು ’ಸಂಭೋಳಿ’ ಪದವಾಗಿ, ಸಾಮುದಾಯಿಕ ಅನುಭವದ ಹಾಡಾಗುವ ಸಾಮರ್ಥ್ಯ ಪಡೆಯುವುದೇ ಈ ಸಂಕಲನದ ಕವಿತೆಗಳ ಸಾಧನೆಯಾಗಿದೆ. ಬಹು ಸಮುದಾಯಗಳ ‘ಅಸ್ಮಿತೆ’ಯನ್ನು ಅದರ ಘನತೆಯೊಂದಿಗೆ ಪುನಾಸ್ಥಾಪಿಸುವುದು ಈ ಕಾವ್ಯದ ನಿರಂತರ ಪ್ರಯತ್ನವಾಗಿದೆ. ಪುರಾತನ ಅನುಭವ ಲೋಕಕ್ಕೆ ಸಮಕಾಲೀನವಾದ ಹೊಸ ಪ್ರತಿಮೆ, ನುಡಿಗಟ್ಟು, ಅರ್ಥ ಸೃಷ್ಟಿಸಲು ಶ್ರಮಿಸುತ್ತಿರುವ ಕವಿ ಆ ನಿಟ್ಟಿನಲ್ಲಿ ಜಿಗಿತ ಸಾಧಿಸಿರುವುದು ಈ ಸಂಕಲನ ಋಜುಪಡಿಸುತ್ತದೆ.

-ಕೇಶವ ಮಳಗಿ.
***
ಸಮುದಾಯವೊಂದರ ನೋವಿನ ಸುಪ್ತಸ್ವರಗಳನ್ನು ಎಲ್ಲರೆದೆಯಲ್ಲಿ ಮೀಟುವಂತೆ ನುಡಿಸುವ ಶಕ್ತಿಯಿಂದಾಗಿ ಅರನಕಟ್ಟೆ ರಂಗನಾಥ ಅವರ ‘ಕಾರುಣ್ಯದ ಮೋಹಕ ನವಿಲುಗಳೆ’ ಗಮನಾರ್ಹ ಎನಿಸುತ್ತದೆ. ಜನಾಂಗದ ಸ್ಮ್ರತಿ ಗಳನ್ನು ಕಾಪಿಟ್ಟುಕೊಂಡು ಅದಕ್ಕೆ ದನಿಯಾಗುವ ಬಹುದೊಡ್ಡ ಜವಾಬ್ದಾರಿಯನ್ನು ಅವರ ಕಾವ್ಯ ನಿಭಾಯಿಸುತ್ತಿದೆ. ವರ್ತಮಾನದ ಸಂಕಟವನ್ನು ದಾಟಲು ಕಾರುಣ್ಯದ ಸೇತುವೆಯನ್ನು ಕಟ್ಟಿಕೊಳ್ಳಬಯಸುತ್ತಿವೆ. “ಕೇಡಿನ ಕಿನ್ನರಿ ನುಡಿಸುವ ಕೈಗಳಿಗೂ ಆರ್ತನಾದಕ್ಕೆ ಮಿಡಿವ ಹೃದಯವಿರಲೆಂದು” ಪ್ರಾರ್ಥಿಸುವ ಕವಿತೆಗಳು ಎಲ್ಲ ಕಾಲದ ದಮನಿತರ ಸೊಲ್ಲುಗಳಾಗಿ ಎದೆ ಸೋಕುತ್ತವೆ. ಸಮರ್ಥ ಕಾವ್ಯಭಾಷೆಯೊಂದನ್ನು ಕಟ್ಟಿಕೊಳ್ಳುವ ತಾದಾತ್ಮ್ಯ ಅವರ ಕಾವ್ಯಕ್ರಿಯೆಯನ್ನು ಸೃಜನಾತ್ಮಕವಾಗಿಸಿದೆ.ಹೊಸ ರೂಪಕಗಳಲ್ಲಿ ಮಿಂದೆದ್ದ ಅವರ ಅಭಿವ್ಯಕ್ತಿಗೆ ತೀವ್ರವಾಗಿ ಅಲುಗಾಡಿಸುವ ಕಾವ್ಯಸಿದ್ಧಿಯಿದೆ. ಒಂದು ಸಂಸ್ಕೃತಿಯ ಚರಿತ್ರೆ ಹಾಗೂ ವರ್ತಮಾನದ ಚಹರೆಗಳನ್ನು ಆತ್ಮಸಾಥ್ ಮಾಡಿಕೊಂಡು ಬರೆಯುವ ರಂಗನಾಥರ ಕಾವ್ಯ ಹೊಸದಾರಿಯ ಸಾಧ್ಯತೆಯನ್ನು ನಿಚ್ಚಳವಾಗಿ ತೋರುತ್ತಿದೆ. ಪ್ರಖರ ರಾಜಕೀಯ ಪ್ರಜ್ಞೆಯನ್ನೂ ಒಳಗಿಟ್ಟುಕೊಂಡು ಬರೆಯುತ್ತಿರುವ ಈ ಕವಿ ಅದನ್ನು ಎಲ್ಲೂ ಘೋಷಣೆಯಾಗಿಸದೇ ಧ್ವನಿಪೂರ್ಣವಾಗಿ ಮುಟ್ಟಿಸುವ ಸೂಕ್ಷ್ಮತೆಯನ್ನು ಸಿದ್ದಿಸಿಕೊಂಡಿದ್ದಾರೆ.

– ಗೀತಾ ವಸಂತ.